ಬಿ. ಸುರೇಶ
ನಮ್ಮ ಬಿ. ಸುರೇಶ ಬಹುಮುಖಿ ಸಾಧಕರು. ಮೊದಲಿಗೆ ಅವರ ಫೇಸ್ಬುಕ್ ಖಾತೆ ಹೇಳುವಂತೆ ಅವರೊಬ್ಬ "ಬರಹಗಾರ at ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾ". ಅವರೊಬ್ಬ ರಂಗಭೂಮಿ ನಿರ್ದೇಶಕ/ನಟ/ನಾಟಕಕಾರ. ಕಿರುತೆರೆ ಮತ್ತು ಚಿತ್ರರಂಗದಲ್ಲಿಯೂ ಬರಹಗಾರ, ನಿರ್ದೇಶಕ. ಪತ್ನಿ ಶೈಲಜಾ ನಾಗ್ ಅವರೊಂದಿಗೆ ಕಿರುತೆರೆ ಮತ್ತು ಸಿನಿಮಾ ನಿರ್ಮಾಪಕ. ಅವರೊಬ್ಬ ಅಸಾಮಾನ್ಯ ಓದುಗ. ಎಷ್ಟೇ ಕೆಲಸ ಮಾಡಿ ಎಷ್ಟೇ ಸುಸ್ತಾಗಿದ್ದರೂ ಒಂದಷ್ಟಾದರೂ ಓದದೆ ಅವರು ಮಲಗುವುದಿಲ್ಲವಂತೆ. ಅವರನ್ನು ನೋಡಿದ ಸಂದರ್ಭಗಳಲೆಲ್ಲ, ಇವರೆಷ್ಟು ಸರಳತನದಲ್ಲಿ ಬದುಕನ್ನು ಇದ್ದ ಹಾಗೆ ಕಾಣುವ ಹಸನ್ಮುಖಿ ಅನಿಸುತ್ತದೆ.
ಆಗಸ್ಟ್ 28 ಸುರೇಶರ ಹುಟ್ಟುಹಬ್ಬ. ಅವರು ಜನಿಸಿದ್ದು ದಾವಣಗೆರೆಯಲ್ಲಿ. ತಾಯಿ ಕನ್ನಡ ಪತ್ರಿಕಾಲೋಕದಲ್ಲಿ ಮಹಾನ್ ಹೆಸರಾದ ವಿಜಯಾ ಅವರು. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ. ಎ. ಪದವಿ ಪಡೆದವರು. ಅವರ ಪತ್ನಿ ಶೈಲಜಾ ನಾಗ್ ಸುರೇಶರ ಸಹಪಾಠಿಯಾಗಿದ್ದು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಮುಂದೆ ಕಿರು ತೆರೆ ಮತ್ತು ಚಲನಚಿತ್ರಗಳ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ.
ಸುರೇಶ ಕೆಲ ಕಾಲ ಬಿಎಚ್ಇಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು.
ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಇಂದಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಂಡರು. ಶಂಕರನಾಗ್ ಅವರ ಆಕ್ಸಿಡೆಂಟ್, ಮಾಲ್ಗುಡಿ ಡೇಸ್ ಸೇರಿದಂತೆ ಹಲವು ಚಿತ್ರಗಳಿಗೆ ಸಹನಿರ್ದೇಶಕರಾಗಿದ್ದರು. ಕೆ. ಎಸ್. ಎಲ್. ಸ್ವಾಮಿ ನಿರ್ದೇಶನದ ಪ್ರಸಿದ್ಧ ಚಿತ್ರಗಳಾದ ಮಿಥಿಲೆಯ ಸೀತೆಯರು, ಹರಕೆಯ ಕುರಿ ಹಾಗೂ ಕನಸುಗಾರ ವಿ. ರವಿಚಂದ್ರನ್ ಅವರ ತಾಯವ್ವ ಮುಂತಾದ ಚಿತ್ರಗಳಿಂದ ಮೊದಲ್ಲೊಂಡು ಸುಮಾರು 25 ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಸುರೇಶ ಈ ವರೆಗೆ ಐದು ಚಿತ್ರ ನಿರ್ದೇಶಿಸಿದ್ದಾರೆ. ನಾಲ್ಕು ಸಿನಿಮಾಗಳಿಗೆ ನಿರ್ಮಾಪಕರಾಗಿದ್ದಾರೆ. ಅಭಯಸಿಂಹ, ಪ್ರಕಾಶ್ ರೈ, ಹರಿಕೃಷ್ಣ ಮುಂತಾದವರಿಗೆ ಮೊದಲ ಚಿತ್ರ ನಿರ್ದೇಶನದ ಅವಕಾಶ ನೀಡಿದ್ದಾರೆ. ‘ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-03 ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. 2010ರಲ್ಲಿ ‘ಪುಟ್ಟಕ್ಕನ ಹೈವೇ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ (ರಜತ ಕಮಲ) ಪ್ರಶಸ್ತಿಯು 58ನೇ ರಾಷ್ಟ್ರೀಯ ಪ್ರಶಸ್ತಿಯ ಸಾಲಿನಲ್ಲಿ ದೊರೆತಿದೆ. ಇದೇ ಚಿತ್ರಕ್ಕೆ 2012ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯತ್ತಮ ಕನ್ನಡ ಚಿತ್ರ ಪ್ರಶಸ್ತಿಯು ದೊರೆತಿದೆ. ಇವರು ನಿರ್ಮಿಸಿದ “ಗುಬ್ಬಚ್ಚಿಗಳು” ಚಿತ್ರಕ್ಕೆ 2007ರ ಅತ್ಯುತ್ತಮ ಮಕ್ಕಳ ಚಿತ್ರ (ಸ್ವರ್ಣ ಕಮಲ) ಪ್ರಶಸ್ತಿ ದೊರಕಿದೆ. “ಉಪ್ಪಿನ ಕಾಗದ” ಚಿತ್ರಕ್ಕೆ 2017ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೆಟ್‍ಪ್ಯಾಕ್ ಅಂತಾರಾಷ್ಟ್ರೀಯ ಜ್ಯೂರಿಯ ಪ್ರಶಸ್ತಿ ದೊರೆತಿದೆ. ಇವರು ನಿರ್ಮಿಸಿದ ದರ್ಶನ್ ಅಭಿನಯದ 'ಯಜಮಾನ' ಚಿತ್ರಕ್ಕೆ 2020ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಲಭಿಸಿದೆ.
ಸುರೇಶ ಅವರು ಕೋತಿಕತೆ, ವರದಿಯಾಗದ ಕಥೆ, ಅಪ್ಪಾಲೆ ತಿಪ್ಪಾಲೆ, ಹಸಿರೇ ಉಸಿರು, ಅಹಲ್ಯೆ ನನ್ನ ತಾಯಿ, ಅಯ್ಯೋ ಅಪ್ಪಾ!, ಕಾಡುಮಲ್ಲಿಗೆ, ಕುಣಿಯೋಣು ಬಾರಾ, ಯವನ ಯಾಮಿನಿ, ಅರ್ಥ, ಕತೆ ಕಟ್ಟೋ ಆಟ, ಷಾಪುರದ ಸೀನಿಂಗಿ ಸತ್ಯ, ರೆಕ್ಕೆ ಕಟ್ಟುವಿರಾ?, ಚಂದಿರನ ನೆರಳಲ್ಲಿ, ಕುರುಡಜ್ಜನ ಪೂರ್ಣಚಂದ್ರ, ಗಿರಿಜಾಕಲ್ಯಾಣ, ಬಾಳೂರ ಗುಡಿಕಾರ, ಹಜಾಮ ಹೆಂಡತಿಯನ್ನು, ಮಹಮೂದ್ ಗಾವಾನ್, ಲೋಕದ ಒಳಹೊರಗೆ ಕೊಂದದ್ದು, ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.
'ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಾ ಇರುವ ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಸುರೇಶ ಅವರು ಬರೆದಿರುವ ದೃಶ್ಯ ಮಾಧ್ಯಮ ಕುರಿತ ಅನೇಕ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತ ಬಂದಿವೆ. ಅವರ ಲೇಖನಗಳ ಸಂಗ್ರಹ ಬೆಳ್ಳಿಅಂಕ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಬುಗಳನ್ನು ಆರಂಭಿಸಿರುವ ಸುರೇಶ ಅವರಿಂದಾಗಿ ಗುಲ್ಬರ್ಗಾ, ಮೈಸೂರು, ಮಂಡ್ಯ, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿಯೂ ಚಲನಚಿತ್ರ ಕ್ಲಬ್ಬುಗಳು ಆರಂಭವಾಗಿವೆ.
ಸುರೇಶ್ ಅವರು ಬರೆದ ‘ಗಿರಿಜಾ ಕಲ್ಯಾಣ’ ನಾಟಕ ರೈತರ ಆತ್ಮಹತ್ಯೆ ಕುರಿತಾಗಿದ್ದು ಅದನ್ನು ಕನ್ನಡದಲ್ಲಿ ಬಿ.ಜಯಶ್ರೀ ಅವರು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಮುಂಬಯಿಯಲ್ಲಿ ಎಂ.ಎಸ್. ಸತ್ಯು ಅವರು 'ಗಿರಿಜಾ ಕಿ ಸಪ್ನೆ' ಎಂಬ ಹೆಸರಿನಲ್ಲಿ ರಂಗಭೂಮಿಯ ಮೇಲೆ ತಂದಿದ್ದಾರೆ. ಮರಾಠಿಯಲ್ಲಿ ಅಮೋಲ್ ಪಾಲೇಕರ್ ಅವರ ತಂಡದವರು ಇದನ್ನು 'ಗಿರಿಜಾ ಕಲ್ಯಾಣ್' ಎಂಬ ಹೆಸರಿನಲ್ಲಿ ಅಭಿನಯಿಸಿದ್ದಾರೆ.
ಇದು ಜೀವದ ಜಾತ್ರೆ
ಇದು ಮುಗಿಯದ ಯಾತ್ರೆ
ಕನಸಿನಂಗಳ ಸೇರಿ ತೇಲೋಣ
ಬೆಳದಿಂಗಳ ಬೋನ ತಿನ್ನೋಣ
ಒಸ ಕನಸಿನ ಕತೆಯ ಹೇಳೋಣ
ಕಣ್ಣಗಲದ ಆಗಸವ ಬರೆಯೋಣ
ಎನ್ನುತ್ತಾನೆ ಬಿ. ಸುರೇಶರಲ್ಲಿರುವ ಕವಿ.
ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿದಿರುವ ಬಿ.ಸುರೇಶ ಅವರ ದೈನಿಕ ಧಾರಾವಾಹಿ 'ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. 2001ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಧಾರವಾಹಿಯು ಪಡೆದುಕೊಂಡಿತ್ತು. ಕಿರುತೆರೆಯಲ್ಲಿ ಇವರು ರಚಿಸಿ/ನಿರ್ದೇಶಿಸಿದ ಧಾರಾವಾಹಿಗಳಲ್ಲಿ ಕಂದನಕಾವ್ಯ, ಹೊಸಹೆಜ್ಜೆ, ಕನಸುಗಿತ್ತಿ, ಅನ್ನಪೂರ್ಣ, ಮುಸ್ಸಂಜೆ, ಚಿಗುರು, ಸಾಧನೆ, ಪ್ರೀತಿಯ ಹೂಗಳು (ನಿರ್ದೇಶನ: ಸಕ್ರೆಬೈಲು ಶ್ರೀನಿವಾಸ), ಚಕ್ರ (ನಿರ್ದೇಶನ: ಯೋಗರಾಜ್ ಭಟ್/ಅಶೋಕ್ ಕಶ್ಯಪ್), ಕನ್ನಡ-ಕನ್ನಡಿ, ಅಕ್ಷರದೀಪ, ಹತ್ತುಹೆಜ್ಜೆಗಳು, ಮಗು ನೀ ನಗು, ನಾಕುತಂತಿ, ತಕಧಿಮಿತಾ, ಅಳಗುಳಿಮನೆ, ಮದರಂಗಿ, ಪ್ರೀತಿ-ಪ್ರೇಮ (ವಾರಾಂತ್ಯದ ಟೆಲಿಚಿತ್ರಗಳು), ಗುಪ್ತಗಾಮಿನಿ (ಮೊದಲ ನೂರು ಕಂತುಗಳಿಗೆ ಚಿತ್ರಕತೆ/ಸಂಭಾಷಣೆ), ಭೃಂಗದ ಬೆನ್ನೇರಿ ಬಂತು (ಚಿತ್ರಕತೆ/ಸಂಭಾಷಣೆ), 'ಮಿಸ್ ಮಾಲಾ'ದ ಮೊದಲ ಎಂಟು ಪ್ರಕರಣಗಳು ಮುಂತಾದವು ಸೇರಿವೆ.
ಸುರೇಶ ಅವರ ‘ಷಾಪುರದ ಸೀನಿಂಗಿ ಸತ್ಯ’ ನಾಟಕವು 1997ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು. 2012ರಲ್ಲಿ “ಒಂಬತ್ತು ನಾಟಕಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿತ್ತು.
ಅಸಾಮಾನ್ಯ ಪ್ರತಿಭಾವಂತ, ಸಾಧಕ, ಹಸನ್ಮುಖಿ, ಹೃದಯವಂತ ಬಿ. ಸುರೇಶರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ಬಗ್ಗೆ ಬರೆದಿರುವುದರಲ್ಲಿ ನಾನು ಬಿಟ್ಟಿರುವುದು ಬಹಳಷ್ಟಿರುತ್ತದೆ. Catching such kind of an amazing talent is not an easy task. ನನ್ನ ಮಟ್ಟಿಗಾದರೂ 'ನನಗಿರುವ ಬರಹ ಸಾಮರ್ಥ್ಯಕ್ಕೆ ಖಂಡಿತವಾಗಿ ಎಟುಕದ್ದು'. ಹೀಗೆಯೇ ಸುರೇಶರ ಪ್ರತಿಭೆಯ 'ಬೀಸು' ಎತ್ತರೆತ್ತರಕ್ಕೇರುತ್ತಿರಲಿ. ಅವರ ಮತ್ತು ಅವರ ಕುಟುಂಬದವರ ಬದುಕಿನ ಸುಖ ಶಾಂತಿ ಸಂತಸ ಕೂಡ.
ಥ್ಯಾಂಕ್ಸು @Tiru Sridhar...
ಪ್ರತ್ಯುತ್ತರಅಳಿಸಿನಿಮ್ಮ ಪ್ರೀತಿ ದೊಡ್ದದು...
ನನ್ನ ಬದುಕಿನ ಹಾದಿಯೇ ಆ ಪ್ರೀತಿಯ ಎದುರು ಕಿರಿದು...
ನಿಮ್ಮಂತಹವರ ಪ್ರೀತಿಯನ್ನು ಉಳಿಸಿಕೊಳ್ಳಲು ಕಡೆಯವರೆಗೂ ಪ್ರಾಮಾಣಿಕವಾಗಿ ಪ್ರಯತ್ನಿಸುವೆ.