ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೈಲೇಂದ್ರ


 ಶೈಲೇಂದ್ರ


ಶೈಲೇಂದ್ರ  ಚಲನಚಿತ್ರರಂಗದ ಶ್ರೇಷ್ಠ ಗೀತರಚನೆಕಾರರಾಗಿ ಪ್ರಸಿದ್ಧರು. ರಾಜ್ ಕಪೂರ್, ಮುಖೇಶ್ ಮತ್ತು ಶಂಕರ್-ಜೈಕಿಶನ್ ಅವರೊಂದಿಗಿನ ಒಡನಾಟಕ್ಕೆ ಹೆಸರುವಾಸಿಯಾದ ಅವರು 1950 ಮತ್ತು 1960ರ ದಶಕಗಳಲ್ಲಿನ ಚಿತ್ರಗಳಿಗೆ  ಅದ್ಭುತ ಗೀತಸಾಹಿತ್ಯವನ್ನು ಬರೆದಿದ್ದರು. ಅವರ ಬರೆದ ಹಾಡಿನ ಸಾಹಿತ್ಯದಲ್ಲಿ  ಸರಳ ಪದಲಾಲಿತ್ಯದ ಸೊಬಗಿತ್ತು.

ಶೈಲೇಂದ್ರ ಅವರ ಮೂಲ ಹೆಸರು ಶಂಕರದಾಸ್ ಕೇಸರಿಲಾಲ್.  ಅವರು ಪಂಜಾಬ್‌ನ ರಾವಲ್ಪಿಂಡಿಯಲ್ಲಿ 1923ರ ಆಗಸ್ಟ್ 30ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡರು. ಶೈಲೇಂದ್ರ ಅವರ ತಂದೆ ಮಿಲಿಟರಿ ಆಸ್ಪತ್ರೆಯಲ್ಲಿ ಕೆಲಸ ಹುಡುಕಲು ಬಿಹಾರದ ರಾವಲ್ಪಿಂಡಿಗೆ ಬಂದವರು. ಶೈಲೇಂದ್ರ ಅವರು ಮಥುರಾ ಕಿಶೋರಿ ರಾಮನ್ ವಿದ್ಯಾಲಯದಲ್ಲಿ ಇಂದ್ರ ಬಹದ್ದೂರ್ ಖಾರೆಯವರ ಸಂಪರ್ಕಕ್ಕೆ ಬಂದರು. ಇಬ್ಬರೂ ಕವಿತೆಗಳನ್ನು ರಚಿಸತೊಡಗಿದರು. ಮುಂದೆ ಶೈಲೇಂದ್ರ ಅವರು ಚಲನಚಿತ್ರಗಳಿಗಾಗಿ ಮುಂಬೈಗೆ ಬಂದರೆ   ಇಂದ್ರ ಬಹದ್ದೂರ್ ಖಾರೆ ಅವರು ಕವಿಯಾಗಿ ಖ್ಯಾತರಾದರು.

ಶೈಲೇಂದ್ರ 1947 ರಲ್ಲಿ ಮುಂಬೈನ ಮಾಟುಂಗಾ ವರ್ಕ್‌ಶಾಪ್‌ನಲ್ಲಿ ಭಾರತೀಯ ರೈಲ್ವೇಸ್‌ನಲ್ಲಿ ಅಪ್ರೆಂಟಿಸ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಜ್ ಕಪೂರ್ ಅವರು  ಶೈಲೇಂದ್ರರು ತಮ್ಮ ಕವಿತೆ "ಜಲತಾ ಹೈ ಪಂಜಾಬ್" ಅನ್ನು ಮುಷೈರಾದಲ್ಲಿ (ಕವಿಗೋಷ್ಠಿ) ಓದುತ್ತಿದ್ದಾಗ ಗಮನಿಸಿ ಅದನ್ನು ತಮ್ಮ 'ಆಗ್' (1948) ಚಿತ್ರಕ್ಕಾಗಿ ಖರೀದಿಸಲು ಮುಂದಾದರು. ಎಡಪಂಥೀಯ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ​​(ಇಪ್ಟಾ) ಸದಸ್ಯರಾಗಿದ್ದ ಶೈಲೇಂದ್ರರಿಗೆ ಮುಖ್ಯವಾಹಿನಿಯ ಭಾರತೀಯ ಚಿತ್ರರಂಗದದವರಿಗೆ ಹಾಡು ಬರೆಯಲು ಇಷ್ಟವಿಲ್ಲದೆ ನಿರಾಕರಿಸಿದರು. ಆದರೆ, ಪತ್ನಿ ಗರ್ಭಿಣಿಯಾದ ಬಳಿಕ ಶೈಲೇಂದ್ರ ಅವರೇ ಹಣದ ಅವಶ್ಯಕತೆಯಿಂದಾಗಿ ರಾಜ್ ಕಪೂರ್ ಅವರನ್ನು ಸಂಪರ್ಕಿಸಿದರು. ಈ ಸಮಯದಲ್ಲಿ, ರಾಜ್‍ ಕಪೂರ್ ಬರ್ಸಾತ್ (1949) ಚಿತ್ರದ ನಿರ್ಮಾಣ ಮಾಡುತ್ತಿದ್ದು, ಆ ಚಿತ್ರಕ್ಕೆ ಎರಡು ಹಾಡುಗಳನ್ನು ಬರೆಸಿರಲಿಲ್ಲ. 500 ರೂಪಾಯಿಗೆ ಶೈಲೇಂದ್ರ ಈ ಎರಡು ಹಾಡುಗಳನ್ನು ಬರೆದರು. ಹೀಗೆ ಪತ್ ಲಿ ಕಮರ್ ಹೈ ಮತ್ತು ಬರ್ಸಾತ್ ಮೇ ಗೀತೆಗಳು ಶಂಕರ್-ಜೈಕಿಶನ್ ಸಂಯೋಜನೆಯಲ್ಲಿ ಮಿನುಗಿದವು. 

ರಾಜ್ ಕಪೂರ್, ಶೈಲೇಂದ್ರ ಮತ್ತು ಶಂಕರ್-ಜೈಕಿಶನ್ ತಂಡವು ಅನೇಕ ಹಿಟ್ ಹಾಡುಗಳನ್ನು ನೀಡಿತು. ಶೈಲೇಂದ್ರ ಬರೆದ 1951ರ ಆವಾರ ಚಲನಚಿತ್ರದ "ಆವಾರಾ ಹೂ" ಆ ಸಮಯದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಚಲನಚಿತ್ರ ಗೀತೆಯಾಯಿತು. 1955ರಲ್ಲಿ ಬಿಡುಗಡೆಯಾದ ಶ್ರೀ 420 ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು. "ಪ್ಯಾರ್ ಹುವಾ ಇಕಾರಾರ್ ಹುವಾ ಹೈ, ಪ್ಯಾರ್ ಸೆ ಫಿರ್ ಕ್ಯೋ ಡರ್ ತಾ ಹೈ ದಿಲ್" ಗೀತೆ ಇಂದಿಗೂ ಜನಪ್ರಿಯ.

ಸಂಗೀತ ಸಂಯೋಜಕರು ಗೀತರಚನೆಕಾರರನ್ನು ನಿರ್ಮಾಪಕರಿಗೆ ಶಿಫಾರಸು ಮಾಡುವ ಅಂದಿನ ದಿನಗಳಲ್ಲಿ, ಶಂಕರ್-ಜೈಕಿಶನ್ ಒಮ್ಮೆ ಶೈಲೇಂದ್ರ ಅವರನ್ನು ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದರಾದರೂ, ತಮ್ಮ  ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಶೈಲೇಂದ್ರ ಈ ಜೋಡಿಗೆ "ಛೋಟಿ ಸಿ ಯೇ ದುನಿಯಾ, ಪೆಹಚಾನೆ ರಾಸ್ತೇ ಹೇ ... ಕಹಿನ್ ತೊ ಮಿಲೋಗೆ, ತೋ ಪೂಚೆಂಗೆ ಹಾಲ್” ಎಂಬ ಟಿಪ್ಪಣಿಯನ್ನು ಕಳುಹಿಸಿದರು. ("ಜಗತ್ತು ಚಿಕ್ಕದಾಗಿದೆ, ರಸ್ತೆಗಳು ಪರಿಚಿತವಾಗಿವೆ. ನಾವು ಯಾವಾಗಲಾದರೂ ಭೇಟಿಯಾಗುತ್ತೇವೆ ಮತ್ತು ನೀವು ಹೇಗಿದ್ದೀರಿ? ಎಂದು ಕೇಳೇ ಕೇಳುತ್ತೇವೆ"). ಶಂಕರ್-ಜೈಕಿಶನ್ ಅವರು ಈ ಸಂದೇಶದ ಅರ್ಥವನ್ನು ಅರಿತುಕೊಂಡು  ಕ್ಷಮೆ ಕೋರಿದರಲ್ಲದೆ ಈ ಸಾಲುಗಳನ್ನೇ ಜನಪ್ರಿಯ ಹಾಡಾಗಿ ಪರಿವರ್ತಿಸಿದರು. ಕಿಶೋರ್ ಕುಮಾರ್ ಹಾಡಿದ ಈ ಹಾಡು ರಂಗೋಲಿ (1962) ಚಿತ್ರದಲ್ಲಿ ಮೂಡಿಬಂತು. 

ಶಂಕರ್-ಜೈಕಿಶನ್ ಅವರಲ್ಲದೆ, ಶೈಲೇಂದ್ರರು ಸಲೀಲ್ ಚೌಧರಿ (ಮಧುಮತಿ), ಸಚಿನ್ ದೇವ್ ಬರ್ಮನ್ (ಗೈಡ್, ಬಂಧಿನಿ, ಕಾಲಾ ಬಜಾರ್), ಮತ್ತು ರವಿ ಶಂಕರ್ (ಅನುರಾಧ) ಅವರಂತಹ ಇತರ ಸಂಯೋಜಕರಿಗೆ ಸಹ ಗೀತೆ ಬರೆದರು. ರಾಜ್ ಕಪೂರ್ ಹೊರತಾಗಿ, ಅವರು ಬಿಮಲ್ ರಾಯ್ (ದೋ ಬೀಘ ಜಮೀನ್, ಮಧುಮತಿ, ಬಾಂದಿನಿ) ಮತ್ತು ದೇವಾನಂದ್ (ಗೈಡ್ ಮತ್ತು ಕಾಲಾಬಜಾರ್) ಅಂತಹ ಪ್ರತಿಭಾವಂತರೊಂದಿಗೆ ಸಹಾ ಬಾಂಧವ್ಯವನ್ನು ಬೆಸೆದುಕೊಂಡರು. ಶೈಲೇಂದ್ರ ಹಲವಾರು ಭೋಜ್‌ಪುರಿ ಚಲನಚಿತ್ರಗಳಿಗೆ ಸಾಹಿತ್ಯ ಬರೆದರು.

ಸುಹಾನಾ ಸಫರ್ ಔರ್ ಯೇ; ಚಲಾತ್ ಮುಸಾಫಿರ್ ಮೋಹ್ ಲಿಯಾ ರೇ; ಯೇ ಮೇರಾ ದಿವಾನಪನ್ ಹೈ; ದಿಲ್ ಕಾ ಹಾಲ್ ಸುನೆ ದಿಲ್ವಾಲಾ; ತೂ ಪ್ಯಾರ್ ಕಾ ಸಾಗರ್ ಹೈ; 
ಯೇ ರಾತ್ ಭಿಗಿ ಭೀಗಿ; ಪಾನ್ ಖಾಯೇ ಸೈಯಾ ಹಮಾರೋ; ಓ ಸಜನಾ ಬರ್ಖಾ ಬಹಾರ್ ಆಯಿ, ಆಜಾ ಆಯಿ ಬಹಾರ್; ರುಕ್ ಜಾ ರಾತ್, ಥಹರ್ ಜಾ ರೇ ಚಂದಾ; ಯಾದ್ ನ ಜಾಯೇ ಬೈತೇ ದಿನೋ ಕಿ; ಚದ್ ಗಯೋ ಪಾಪಿ ಬಿಚುವಾ; ಆವಾರಾ ಹೂ; ರಾಮಯ್ಯ ವಸ್ತಾವಯ್ಯ; ಮಡ್ ಮಡ್ ಕೆ ನಾ ದೇಖ್, ಮೇರಾ ಜೂತಾ ಹೈ ಜಪಾನಿ; ಆಜ್ ಫಿರ್ ಜೀನೆ ಕಿ; ಗಾತಾ ರಹೇ ಮೇರಾ ದಿಲ್; ಪಿಯಾ ತೋಸೆ ನೈನಾ ಲಾಗೇ ರೇ; ಹರ್ ದಿಲ್ ಜೋ ಪ್ಯಾರ್ ಕರೇಗಾ; ದೋಸ್ತ್ ದೋಸ್ತ್ ನಾ ರಹಾ; ದಿಲ್ ಕಿ ನಜರ್ ಸೆ; ಖೋಯಾ ಖೋಯಾ ಚಾಂದ್; ಜೀನಾ ಯಹಾ ಮರನಾ ಯಹಾ; ನಾಚೆ ಮನ್ ಮೋರಾ ಮಗನ್; ಸಜನ್ ರೇ ಜೂಟ್ ಮತ್ ಬೋಲೋ; ರಾತ್ ಕೆ ಹಂಸಫರ್ ಹೀಗೆ ಶೈಲೇಂದ್ರರ ಹಾಡುಗಳೆಲ್ಲ ಒಂದಕ್ಕಿಂತ ಒಂದು ಭವ್ಯವೆನಿಸಿದವು.

1961ರಲ್ಲಿ ಶೈಲೇಂದ್ರ ಅವರು ಬಸು ಭಟ್ಟಾಚಾರ್ಯ ನಿರ್ದೇಶಿಸಿ ರಾಜ್ ಕಪೂರ್ ಮತ್ತು ವಹೀದಾ ರೆಹಮಾನ್ ನಟಿಸಿದ ತೀಸ್ರಿ ಕಸಮ್ (1966) ಚಲನಚಿತ್ರದ ನಿರ್ಮಾಣದಲ್ಲಿ ಭಾರಿ ಹೂಡಿಕೆ ಮಾಡಿದರು. ಈ ಚಿತ್ರವು ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದಾಗ್ಯೂ, ಚಲನಚಿತ್ರವು ವಾಣಿಜ್ಯಿಕವಾಗಿ ವಿಫಲವಾಯಿತು. ವೈಫಲ್ಯದಿಂದ ಉಂಟಾದ ಆಘಾತವು ಅವರ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಿತು.  ಅವರು 1966ರ ಡಿಸೆಂಬರ್ 14ರಂದು ಕೇವಲ 43 ನೇ ವಯಸ್ಸಿನಲ್ಲಿ ನಿಧನರಾದರು.

On the birthday anniversary of great lyricist Shailendra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ