ಅಕ್ಕಿನೇನಿ
ಅಕ್ಕಿನೇನಿ ನಾಗೇಶ್ವರರಾವ್
ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಚಿತ್ರರಂಗದ ಮಹಾನ್ ನಟ.
ಆಂಧ್ರಪ್ರದೇಶದ ರಾಮಾಪುರಂ ಎಂಬಲ್ಲಿ 1924ರ ಸೆಪ್ಟೆಂಬರ್ 20ರಂದು ಬಡ ರೈತ ಕುಟುಂಬವೊಂದರಲ್ಲಿ ಜನಿಸಿದ ನಾಗೇಶ್ವರರಾವ್, ತಮ್ಮ ಕುಟುಂಬದ ಬಡತನದ ದೆಸೆಯಿಂದಾಗಿ ಪ್ರೈಮರಿ ಶಾಲೆಯ ನಂತರದಲ್ಲಿ ಓದು ಮುಂದುವರೆಸಲಾಗಲಿಲ್ಲ. ತಂದೆ ಅಕ್ಕಿನೇನಿ ವೆಂಕಟರತ್ನಂ. ಅಂದಿನ ದಿನಗಳಲ್ಲಿ ನಾಟಕಗಳಲ್ಲಿ ಹೆಣ್ಣುಪಾತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದ ನಾಗೇಶ್ವರಾವ್ ಅವರು 1941ರ ವರ್ಷದಲ್ಲಿ ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಸಿ ಪುಲ್ಲಯ್ಯ ನಿರ್ಮಿಸಿದ ‘ಧರ್ಮಪತ್ನಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದರು. ಅನಂತರ ಸೀತಾರಾಮ ಜನನಂ ಚಿತ್ರದಲ್ಲಿ ರಾಮನಾಗಿ ಮೊದಲ ಪ್ರೌಢ ಪಾತ್ರ ದೊರೆಯಿತು. ಘಂಟಸಾಲ ಬಾಲ ರಾಮಯ್ಯ ನಿರ್ಮಿಸಿದ ಬಾಲರಾಜು (1948) ಚಿತ್ರದಲ್ಲಿ ಎಸ್. ವರಲಕ್ಷ್ಮಿಯೊಂದಿಗೆ ಅಭಿನಯಿಸಿದರು. ಈ ಚಿತ್ರ ಜನಪದ ಶೈಲಿಯ ಚಿತ್ರ ಪರಂಪರೆಗೆ ನಾಂದಿಯಾಯಿತು. ಇವರ ನಾಟಕ ಪ್ರತಿಭೆಯನ್ನು ಪ್ರಕಟಪಡಿಸಿದ ಚಿತ್ರಗಳೆಂದರೆ ದೇವದಾಸ್ (1953), ಲೈಲಾಮಜ್ನು, ಬಾಟಸಾರಿ.
ತಮ್ಮ ಚಲನಚಿತ್ರ ಜೀವನದ 75 ವರ್ಷಗಳ ಸುದೀರ್ಘ ಅವಧಿಯಲ್ಲಿ ಒಟ್ಟು 256 ಚಿತ್ರಗಳಲ್ಲಿ ನಟಿಸಿದ ಅಕ್ಕಿನೇನಿ ನಾಗೇಶ್ವರರಾವ್ ಅವರ ಪ್ರಸಿದ್ಧ ಚಿತ್ರಗಳಲ್ಲಿ ಮಾಯಾಬಜಾರ್, ಚೆಂಚು ಲಕ್ಷ್ಮಿ, ಶ್ರೀ ಕೃಷ್ಣ ಯುದ್ಧಂ, ಬಾಲರಾಜು, ರೋಜುಲು ಮಾರಾಯಿ, ಮಿಸ್ಸಮ್ಮ, ಚಕ್ರಪಾಣಿ, ಪ್ರೆಮಿಂಚಿ ಚೂಡು, ಲೈಲಾ ಮಜ್ನು, ಅನಾರ್ಕಲಿ, ದೇವದಾಸು, ಬಟಸಾರಿ, ಪ್ರೇಂ ನಗರ್, ಪ್ರೇಮಾಭಿಷೇಕಂ, ಮೇಘ ಸಂದೇಶಂ, ನವರಾತ್ರಿ, ಸಂಸಾರಂ, ಬ್ರತುಕು ತೆರುವು, ಆರಾಧನಾ, ದೊಂಗ ರಾಮುಡು, ಡಾ. ಚಕ್ರವರ್ತಿ, ಅರ್ಧಾಂಗಿ, ಮಾಂಗಲ್ಯ ಬಲಂ, ಇಲ್ಲಾರಿಕಂ, ಶಾಂತಿನಿವಾಸಂ, ವೆಲುಗು ನೀಡಲು, ದಸರಾ ಬುಲ್ಲೋಡು, ಭಾರ್ಯಾ ಭರ್ತುಲು, ಧರ್ಮಧಾತ, ಸೀತಾರಾಮಯ್ಯಗಾರಿ ಮನವರಾಲು ಮುಂತಾದ ಅನೇಕ ಪ್ರಸಿದ್ಧ ಯಶಸ್ವೀ ಚಿತ್ರಗಳು ಸೇರಿವೆ. ಕಾಳಿದಾಸ, ಜಯದೇವ, ಜಕ್ಕಣಾಚಾರಿ, ವಿಪ್ರನಾರಾಯಣ, ತುಕಾರಾಂ ಮುಂತಾದ ಭಾರತದ ವಿಭಿನ್ನ ಪ್ರಾದೇಶಿಕ ಸಾಂಸ್ಕೃತಿಕ ಪಾತ್ರಗಳನ್ನು ಸಮರ್ಥವಾಗಿ ಬಿಂಬಿಸಿದ ಕೀರ್ತಿಗೂ ಸಹಾ ಅಕ್ಕಿನೇನಿ ಪಾತ್ರರಾಗಿದ್ದಾರೆ.
ನಿರ್ಮಾಪಕರಾಗಿ, ಸ್ಟುಡಿಯೋ ಸ್ಥಾಪಕರಾಗಿ ಸಹಾ ಅವರ ಕೊಡುಗೆ ದೊಡ್ಡದು. ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಅಪಾರ ಕಾಳಜಿ ಹೊಂದಿದ್ದ ಅವರು ಆಂಧ್ರ, ಮದರಾಸು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ಬಹಳಷ್ಟು ಹಣವನ್ನು ದತ್ತು ನೀಡಿದ್ದರು.
ಪದ್ಮಶ್ರೀ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮ್ಮಾನಿತ, ಕಳೆದ ಶತಮಾನದ ಮಹಾನ್ ಚಲನಚಿತ್ರ ನಟರಲ್ಲಿ ಒಬ್ಬರಾದ ಅಕ್ಕಿನೇನಿ ನಾಗೇಶ್ವರರಾವ್ ಅವರು 2014ರ ಜನವರಿ 22ರಂದು ನಿಧನರಾದರು.
On the birth anniversary of great actor Akkineni Nageshwara Rao
ಕಾಮೆಂಟ್‌ಗಳು