ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ.ಎಸ್. ಚನ್ನೇಶ್


 ಟಿ.ಎಸ್. ಚನ್ನೇಶ್ 

ಡಾ. ಟಿ. ಎಸ್. ಚನ್ನೇಶ್ ಕೃಷಿ ವಿಜ್ಞಾನಿಗಳಾಗಿ ಬರಹಗಾರರಾಗಿ ಹೆಸರಾಗಿದ್ದಾರೆ.  ಇವರು ಗಿಡಮರ ಹೂವು ಹಣ್ಣು ಧಾನ್ಯ ಕಾಳುಗಳಾಗಿ ಪ್ರಾಣಿವರ್ಗವನ್ನು ಪೊರೆಯುತ್ತಿರುವ ಸಸ್ಯಸಂಕುಲದ ಮಾಹಿತಿಯನ್ನು  'ಸಸ್ಯಯಾನ'ದ ಸರಣಿ ಬರಹಗಳ ಮೂಲಕ ಅರ್ಥಪೂರ್ಣವಾಗಿ ಅಭಿವ್ಯಕ್ತಿಸುತ್ತ ಬಂದಿದ್ದಾರೆ. 

ಚನ್ನೇಶ್ ಅವರು ಮಲೆನಾಡಿನ ಶಿವಮೊಗ್ಗ ಸಮೀಪದ ನ್ಯಾಮತಿಯವರು. ಸೆಪ್ಟೆಂಬರ್ 29 ಅವರ ಜನ್ಮದಿನ.  ಮೂಲತಃ ಕೃಷಿ ವಿಜ್ಞಾನದ ವಿದ್ಯಾರ್ಥಿ. ಮಣ್ಣು ವಿಜ್ಞಾನದಲ್ಲಿ ಅವರದು ವಿಶೇಷ ಪರಿಣಿತಿ. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಕೃಷಿವಿಶ್ವವಿದ್ಯಾನಿಲಯ ಬೆಂಗಳೂರು, ಕನ್ನಡ ವಿಶ್ವವಿದ್ಯಾಲಯ ಹಂಪಿ, ಜನಪದ ವಿಶ್ವವಿದ್ಯಾಲಯ ಶಿಗ್ಗಾವ್, ಎನ್‌ವಿಪ್ರೊ ಲ್ಯಾಬೋರೇಟರೀಸ್ ಬೆಂಗಳೂರು ಮುಂತಾದ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿದ್ದರು. 2012-2013ರಲ್ಲಿ ಕರ್ನಾಟಕ ರಾಜ್ಯ ಜ್ಞಾನ ಆಯೋಗದ, ಕೃಷಿ ಉಪ ಸಮಿತಿಯ ಸದಸ್ಯರಾಗಿದ್ದರು. ಪ್ರಸಕ್ತದಲ್ಲಿ ವಿಜ್ಞಾನದ ಸಂವಹನ ಮತ್ತು ಸಾಮಾಜೀಕರಣದ ಸಂಶೋಧನೆ ಹಾಗೂ ಅಧ್ಯಯನದಲ್ಲಿ ನಿರತರು.

ಟಿ.ಎಸ್.ಚನ್ನೇಶ್ ಅವರ 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ' 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್‌ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಅನುವಾದಗಳು ಗಮನಾರ್ಹವಾದುದು.

ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನ ವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳುವಳಿ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಚನ್ನೇಶ್ ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. ಚನ್ನೇಶ್ ಅವರು ಡಾ.ಬಿ. ಜಿ. ಎಲ್ ಸ್ವಾಮಿ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ "ಸಸ್ಯಯಾನ"ದ ಹೆಸರಿನಲ್ಲಿ ಒಂದೂವರೆ ವರ್ಷಗಳ ಕಾಲ ಪ್ರತಿ ವಾರಕ್ಕೊಂದು ವಿಶಿಷ್ಠವಾದ ಗಿಡ, ಬಳ್ಳಿ, ಮರ,ತರಕಾರಿ ಗಳ ಬಗ್ಗೆ ಸುಧೀರ್ಘವಾದ ಲೇಖನಗಳನ್ನು ಬರೆದರು.

ಚನ್ನೇಶ್ ಅವರು 2010ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕೃಷಿವಿಜ್ಞಾನ ಲೇಖಕರ ಪುರಸ್ಕಾರ ಪಡೆದಿದ್ದಾರೆ. “ಉಳುವವರ ಪರ ವಕಾಲತ್ತು” ಕೃತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು “ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ -2016" ನೀಡಿ ಗೌರವಿಸಿದೆ. ಇದೇ ಕೃತಿಗೆ ರಾಯಚೂರು ಜಿಲ್ಲೆಯ ಬೆಟ್ಟದೂರು ಪ್ರತಿಷ್ಠಾನದ 2016ರ "ವಚನ ಸಾಹಿತ್ಯ ಹಾಗೂ ವೈಚಾರಿಕ ಸಾಹಿತ್ಯ" ಪ್ರಶಸ್ತಿ ಕೂಡ ಲಭಿಸಿದೆ. 2018ರಲ್ಲಿ "ಡಿವಿಜಿ ಬಳಗ ಪ್ರತಿಷ್ಠಾನ"ವು ಡಾ.ಬಿಜಿಎಲ್ ಸ್ವಾಮಿ ಯವರ ಹೆಸರಿನಲ್ಲಿ ಸ್ಥಾಪಿಸಿದ ಮೊದಲ ಪ್ರಶಸ್ತಿಯೂ ಇವರಿಗೆ ಸಂದಿದೆ.

ಮಾಹಿತಿ ಸಹಾಯ: ಆಕಾಶ್ ಬಾಲಕೃಷ್ಣ, 
ಪ್ರಶಾಂತ ಸಾಗರ್ ಮತ್ತು ರಾಜ್‍ಕುಮಾರ್ ಹೊಳೆ ಆಲೂರು. 

T. S. Channesh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ