ಮೈ.ವಿ. ಸುಬ್ರಹ್ಮಣ್ಯ
ಮೈಸೂರು ವಿ. ಸುಬ್ರಹ್ಮಣ್ಯ
ಮೈಸೂರು ವಿ. ಸುಬ್ರಹ್ಮಣ್ಯ ಮಹಾನ್ ಕಲಾ ಸಂರಕ್ಷರೆಂದು ಹೆಸರಾಗಿದ್ದವರು. 'ವೀಣೆಯೆಂದರೆ ಶೇಷಣ್ಣ, ಶೇಷಣ್ಣ ಎಂದರೆ ವೀಣೆ’ ಎಂಬುದು ಪ್ರಸಿದ್ಧ ಉಕ್ತಿ. ಇಂತಹ ಶ್ರೇಷ್ಠ ವಂಶದಲ್ಲಿ ಜನಿಸಿದವರು ಮೈಸೂರು ವಿ. ಸುಬ್ರಹ್ಮಣ್ಯ ಅವರು.
ಮೈಸೂರು ವಿ. ಸುಬ್ರಹ್ಮಣ್ಯ ಅವರ ತಂದೆ ವೆಂಕಟನಾರಾಯಣರಾಯರು ಶೇಷಣ್ಣನವರ ಮೊಮ್ಮಕ್ಕಳಾಗಿದ್ದು, ಶ್ರೇಷ್ಠ ವೈಣಿಕರೂ, ಬೋಧಕರೂ, ಬರಹಗಾರರೂ, ವಾಗ್ಮಿಯೂ ಆಗಿದ್ದರು. ಅಪಾರ ಸಂಗೀತಜ್ಞಾನದಿಂದಾಗಿ ಅವರಿಗೆ ಬಾಲ್ಯದಲ್ಲೇ ‘ಸ್ವರಮೂರ್ತಿ’ ಎಂಬ ಬಿರುದು ದೊರಕಿತ್ತು.
ಹೀಗೆ ಪಂಡಿತ ವಂಶಿಕರಾದ ವಿ. ಸುಬ್ರಹ್ಮಣ್ಯ ಅವರು ಗಾಯನ ಮತ್ತು ವೀಣಾವಾದನವನ್ನು ತಂದೆಯವರಿಂದ ಕಲಿಯುವುದರೊಟ್ಟಿಗೆ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ತಂದೆಯವರು ಆರಂಭಿಸಿದ ‘ವೀಣಾಗಾನ ಮಂದಿರ’ವನ್ನು ನಡೆಸುತ್ತಿದ್ದರು. ಸುಬ್ರಹ್ಮಣ್ಯ ಅವರು ಖ್ಯಾತ ವಿಮರ್ಶಕರಾಗಿದ್ದ ಬಿ.ವಿ.ಕೆ. ಶಾಸ್ತ್ರಿಗಳ ಮಾರ್ಗದರ್ಶನವನ್ನೂ ಕೂಡ ಪಡೆದಿದ್ದರು.
ಸುಬ್ರಹ್ಮಣ್ಯ ಅವರು ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲಿ ಕಲಾವಿಮರ್ಶಕರಾಗಿ ಸುಪರಿಚಿತರಾಗಿದ್ದರು.ಅರ್ಹ ಯುವಕಲಾವಿದರ ಬೆನ್ನುತಟ್ಟುತ್ತಾ, ಅವರಿಗೆ ವೇದಿಕೆಗಳನಿತ್ತು ಕಲಾಭಿವೃದ್ಧಿಗೆ ಕಾರಣರಾಗಿದ್ದರು. ಸರಸ-ಸಂಭಾಷಿಗರಾಗಿದ್ದ ಅವರು ಉತ್ತಮ ವಾಗ್ಮಿಗಳೂ ಆಗಿದ್ದರು.
ಸುಬ್ರಹ್ಮಣ್ಯ ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಲಾವಿದರ ಆಯ್ಕೆಯ ಸಮಿತಿಯಲ್ಲಿ, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಅನೇಕ ಪ್ರಶಸ್ತಿಗಳ ಆಯ್ಕೆ ಸಮಿತಿಗಳಲ್ಲಿದ್ದು ಸೇವೆ ಸಲ್ಲಿಸಿದ್ದರು. ಸಂಘಟಕರಾಗಿ ಮಲ್ಲೇಶ್ವರಂ ಸಂಗೀತಸಭೆ, ಕರ್ನಾಟಕ ಗಾನಕಲಾ ಪರಿಷತ್ತಿನಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದ್ದರು. ಸಂಗೀತ ಸಂಬಂಧವಾದ ರೂಪಕಗಳನ್ನು, ಪ್ರಾತ್ಯಕ್ಷಿಕೆಗಳನ್ನು ದೇಶದ ವಿವಿಧೆಡೆಗಳಲ್ಲಿ ವಿ. ಸುಬ್ರಹ್ಮಣ್ಯ ನೀಡಿದ್ದರು. ಮೈಸೂರಿನ ಅರಮನೆ ಟ್ರಸ್ಟಿನ ಟ್ರಸ್ಟಿಯಾಗಿ ಮೈಸೂರು ವಿಶ್ವವಿದ್ಯಾಲಯ ತಂದಿರುವ ‘ಕನ್ನಡ ವಿಶ್ವಕೋಶ – ಲಲಿತ ಕಲೆ’ಯ ಸಂಪಾದಕಮಂಡಳಿಯ ಸದಸ್ಯರೂ ಆಗಿದ್ದರು.
ಉತ್ತಮ ಬರಹಗಾರರಾದ ವಿ. ಸುಬ್ರಹ್ಮಣ್ಯ ಅವರು ಅನೇಕ ಕೃತಿಗಳನ್ನೂ ಹೊರತಂದಿದ್ದರು. ಕೇಂದ್ರಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಫೆಲೋಶಿಪ್ ಪಡೆದಿದ್ದರು. ಸಂಗೀತ ಇತಿಹಾಸಕಾರರಾಗಿ ಅನೇಕ ಕಲಾವಿದರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳನ್ನು ದೇಶಾದ್ಯಂತ ನಡೆಯುವ ಸಮ್ಮೇಳನಗಳಲ್ಲಿ ಪ್ರದರ್ಶಿಸಿದ ಕೀರ್ತಿ ಇವರದಾಗಿತ್ತು. ವಿಶೇಷವಾಗಿ ಕರ್ನಾಟಕದ ಅಂಧ ಕಲಾವಿದರ ಏಳಿಗೆಗೂ ಶ್ರಮಿಸಿದ್ದರು.
ಮೈಸೂರು ವಿ ಸುಬ್ರಹ್ಮಣ್ಯ ಅವರ ಕಲಾಸೇವೆಗಾಗಿ ಸಂದ ಬಿರುದು ಸಮ್ಮಾನಗಳು ಅನೇಕ. ಅವುಗಳಲ್ಲಿ ‘ಸಂಗೀತ ಕಲಾರತ್ನ’, ‘ಸಂಗೀತ ಕಲಾಭೂಷಣ’, ‘ಸಾಹಿತ್ಯ ಕಲಾಶ್ರೀ’, ‘ಆರ್ಯಭಟ-ಕೆಂಪೇಗೌಡ’ ಪ್ರಶಸ್ತಿ, ‘ಅತ್ಯುತ್ತಮ ಆಯೋಜಕ’ ಪ್ರಶಸ್ತಿ, ‘ಜ್ಞಾನ ಸರಸ್ವತೀ ಪೀಠ’ ಪ್ರಶಸ್ತಿ, ಉಡುಪಿ ಶ್ರೀಕೃಷ್ಣ ಮಠದ ‘ಆಸ್ಥಾನ ವಿದ್ವಾನ್’ ಮನ್ನಣೆ, ರಾಜ್ಯ ಮತ್ತು ಕೇಂದ್ರ ಸಂಗೀತ ಅಕಾಡೆಮಿಗಳ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ ‘ಗೌರವ ಪ್ರೊಫೆಸರ್’ ಸಂಮಾನ ಇತ್ಯಾದಿಗಳು ಸೇರಿದ್ದವು.
ಸುಬ್ರಹ್ಮಣ್ಯ ಅವರು ತಮ್ಮ ಮುತ್ತಾತ ವೀಣೆ ಶೇಷಣ್ಣನವರು ನುಡಿಸುತ್ತಿದ್ದ ಪವಿತ್ರವಾದ ವೀಣೆಯು ಅಪಾತ್ರರ ಪಾಲಾಗುವ ಮುಂಚೆ ಮುಂದಾಲೋಚನೆಯಿಂದ ಅದನ್ನು ಧರ್ಮಸ್ಥಳದ ‘ಮಂಜೂಷಾ’ ವಸ್ತು- ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ಕೃತಾರ್ಥರಾದವರು. ಇದಲ್ಲದೆ ಪ್ರತಿ ವರ್ಷ ಮುತ್ತಾತ ಶೇಷಣ್ಣ ಮತ್ತು ತಂದೆ ಸ್ವರಮೂರ್ತಿ ವಿ.ಎನ್. ರಾಯರ ಹೆಸರುಗಳಲ್ಲಿ ಕ್ರಮವಾಗಿ ರಾಷ್ಟರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕಲಾವಿದರಿಗೆ ದೊಡ್ಡ ಮೊತ್ತದೊಂದಿಗೆ ನೀಡಿ ಗೌರವಿಸುವ ವ್ಯವಸ್ಥೆ ಮಾಡುತ್ತಾ ಬಂದಿದ್ದರು.
ಇಂತಹ ಅಪೂರ್ವ ಸಾಧಕರಾದ ಮೈಸೂರು ವಿ. ಸುಬ್ರಹ್ಮಣ್ಯ ಅವರು 2022ರ ಸೆಪ್ಟೆಂಬರ್ 30ರ ದಿನದಂದು ನಿಧನರಾಗಿದ್ದು ತುಂಬಲಾರದ ನಷ್ಟ ಎಂದರೆ ಅದು ಕೇವಲ ಮಾತಾಗುವುದಿಲ್ಲ. ದೇಹಕ್ಕೆ ಅಂತ್ಯವಿದೆ. ಹೀಗೆ ಸಾಧನೆ ಮಾಡಿದ ಆತ್ಮಗಳಿಗೆ ಸಾವಿಲ್ಲ.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಈ ಮಹಾನ್ ಚೇತನಕ್ಕೆ ನಮನ.
Respects to departed soul great music scholar Mysore V. Subrahmanya
ಕಾಮೆಂಟ್‌ಗಳು