ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮರಳು ಮ್ಯೂಸಿಯಂ


 ಮೋಡಿ ಮಾಡುವ ಮರಳು ಮ್ಯೂಸಿಯಂ

ಲೇಖನ:. ಭಾರತಿ ಸುಧೀಂದ್ರ 

ನೀವು ನಮ್ಮ ಡೊಳ್ಳುಹೊಟ್ಟೆ ಗಣಪನನ್ನು ಬೆಳ್ಳಿ ವಿಗ್ರಹರೂಪದಲ್ಲಿ ನೋಡಿರಬಹುದು, ಜೇಡಿಮಣ್ಣಿನಲ್ಲಿ ಮಾಡಿದ ಗಣಪನನ್ನು ಪೂಜಿಸಿರಲೂ ಬಹುದು, ಕಲ್ಲಿನಲ್ಲಿ ಕೆತ್ತಿದ ವಿಗ್ರಹಕ್ಕೆ ಕೈ ಮುಗಿದಿರಲೂ ಬಹುದು, ಆದರೆ ಮುಷ್ಟಿಯಲ್ಲಿ ಹಿಡಿದರೆ ಜಾರಿಕೊಳ್ಳುವ, ನೀರಿನಲ್ಲೂ   ಬೆರೆಯದೆ  ಕಣ ಕಣವೂ ಸ್ವತಂತ್ರವಾಗಿರುವ, ಇತ್ತ ಘನವಸ್ತುವೂ ಅಲ್ಲದ, ದ್ರವರೂಪವೂ ಅಲ್ಲದ ಒಂದು ವಿಶೇಷವಾದ ವಸ್ತು  ""ಮರಳು"" ಇದರಲ್ಲಿ  ರೂಪಿಸಿದ ಗಣಪನನ್ನ ಎಲ್ಲಾದರೂ ಕಂಡಿದ್ದೀರ??  ಇಲ್ಲ ಎಂದಾದರೆ ,   ಈ ಲೇಖನ ಅವಶ್ಯ ಓದಿ. ಭಾರತದಲ್ಲೇ     ಪ್ರಪ್ರಥಮವಾದ "ಮರಳು ಶಿಲ್ಪ ವಸ್ತುಸಂಗ್ರಹಾಲಯ" ಪರಿಚಯ ಇಲ್ಲಿದೆ.

 ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಎಲ್ಲಾ ಲಲಿತ ಕಲೆಗಳ  ತವರೂರು. ಇದರ ಕಲಾ ಲೋಕಕ್ಕೆ ಹೊಸ ಸೇರ್ಪಡೆ " ಮರಳು ಶಿಲ್ಪಕಲಾ ವಸ್ತುಸಂಗ್ರಹಾಲಯ" ಅರ್ಥಾತ್ sand museum. ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯ ಬದಿಯಲ್ಲೇ ಇದರ ವಾಸ್ತವ್ಯ. ಸುಮಾರು 13500 ಚದರಡಿ ವಿಸ್ತೀರ್ಣ ದಲ್ಲಿ , 115 ಟ್ರಕ್ ತೂಕದ ಮರಳನ್ನು ಉಪಯೋಗಿಸಿ, ನಮ್ಮ ನಾಡಿನ ಸಂಸ್ಕೃತಿ ,ಇತಿಹಾಸ, ಧರ್ಮ, ಕಾವ್ಯ, ಕಥೆ ಹೀಗೆ ಸುಮಾರು 16 ವೈವಿಧ್ಯಮಯ ವಿಷಯಗಳ 150 ಮರಳು ಶಿಲ್ಪವನ್ನು ನಿರ್ಮಿಸಲಾಗಿದೆ.

ಕೇವಲ 40 ರೂಪಾಯಿ ಪ್ರವೇಶ ಶುಲ್ಕ ಪಾವತಿಸಿ  ಒಳ ಪ್ರವೇಶ ಮಾಡಿದರೆ, ನಮ್ಮನ್ನು ಮೊದಲು ಸ್ವಾಗತಿಸುವುದೇ ನಮ್ಮ ಡೊಳ್ಳುಹೊಟ್ಟೆ ಗಣಪ. 15 ಅಡಿ ಎತ್ತರದ ಈ ಶಿಲ್ವ, ಬಲಗೈಯಲ್ಲಿ ಅಭಯ ತೋರುತ, ಎಡಗೈಯಲ್ಲಿ ತಟ್ಟೆ ತುಂಬಾ ಗುಂಡಾದ ಮರಳು ಲಾಡು ಉಂಡೆಗಳಿಂದ  ಆಕರ್ಷಿಸುತ್ತಾನೆ. ದಿವ್ಯವಾದ ಮರಳಾಭರಣ ವನ್ನು ಧರಿಸಿ  ಕಂಗೊಳಿಸುವಗಣಪನನ್ನು ಸೃಷ್ಟಿಸಿದ ಶಿಲ್ಪಿಗೆ ಕೈಯೆತ್ತಿ ಮುಗಿಯಬೇಕೆನಿಸುತ್ತದೆ. ಮುಂದೆ ಸಾಗುತ್ತಿದ್ದಂತೆ ನಾಡ ದೇವತೆ ಚಾಮುಂಡೇಶ್ವರಿ ದೇವಿ, ಕೃಷ್ಣಾರ್ಜುನರು (ಕುದುರೆರಥದ ಸಮೇತ ), ನಾಡ ಪ್ರಭು ಶ್ರೀಕಂಠ ದತ್ತ ಒಡೆಯರ್, ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿದೆ. ಇಷ್ಟೇ ಅಲ್ಲದೆ ಜಲಚರಗಳಾದ ದೊಡ್ಡ ಮೀನು, ಪುಟ್ಟಪುಟ್ಟ ಮೀನು, ಆಮೆ, ಆಕ್ಟೋಪುಸ್... ಅಬ್ಬಬ್ಬಾ ಒಂದಾ ಎರಡಾ...

ಮಕ್ಕಳ ಮನಸೂರೆ ಗೊಳ್ಳುವ ಡಿಸ್ನಿ ಲ್ಯಾಂಡ್,  ನಗುವಬುದ್ದ, .... ಮರಳಿನಲ್ಲಿ ಹೀಗೂ   ರಚಿಸಬಹುದೇ ಎಂದು ಆಶ್ಚರ್ಯ ಉಂಟುಮಾಡುವಂತೆ  ಮಾಡುವ   ಹಲವಾರು ಕಲಾಕೃತಿಗಳು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡುತ್ತದೆ.

ಇಂಥ ಒಂದು ಅತ್ಯದ್ಭುತವಾದ, ಭಾರತದಲ್ಲೇ  ಪ್ರಥಮ ಪ್ರಯತ್ನವಾದ ಈ ಮರಳು ಮ್ಯೂಸಿಯಂ ನ  ಕಾರಣಕರ್ತೃ   ಒಬ್ಬ ಮಹಿಳೆ ಎಂದರೆ ನಿಮಗೆ ಅಚ್ಚರಿ ಆಗದೆ ಇರದು. 

ಹೌದು ನಮ್ಮ ಮೈಸೂರಿನವರೇ ಆದ ಶ್ರೀಮತಿ ಎಂ. ಎನ್. ಗೌರಿಯವರು ಈ ಅದ್ಭುತ ಕಲೆಯ ಒಡತಿ.   ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರ ಕನಸಿನಕೂಸು ಈ ಮ್ಯೂಸಿಯಂ. ಕೇವಲ 29 ವಯಸ್ಸಿನ  ಈ ಯುವತಿ  “ಭಾರತದ  ಪ್ರಪ್ರಥಮ ಮಹಿಳಾ ಮರಳುಶಿಲ್ಪ ಕಲಾವಿದೆ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಯನ್ನು ಇಂದು ಇಡೀ ವಿಶ್ವವೇ ಕೊಂಡಾಡುತ್ತಿದೆ.

ಮುಂದಿನ ಬಾರಿ ಮೈಸೂರಿಗೆ ಹೋದಾಗ (ಇದನ್ನು ನೋಡಲೆಂದೇ ಹೋಗಿ)

ತಪ್ಪದೆ ಇಲ್ಲಿಗೆ ಭೇಟಿ ನೀಡಿ. ನಮ್ಮ ಹೆಮ್ಮೆಯ ಕನ್ನಡತಿಯ  ವಿಶೇಷ ಕಲೆಯನ್ನು ಕಣ್ಣುತುಂಬಿಕೊಳ್ಳಿ. ಕಲಾವಿದೆಯನ್ನು ಪ್ರೋತ್ಸಾಹಿಸಿ.

 ಲೇಖನ ಕೃಪೆ: Bharti Bettadapura

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ