ಗೊತ್ತಿರೋದು ಕನ್ನಡವೊಂದೇ
ನಮಗೆ ನಮ್ಮದು ಎಂಬ ಭಾವ ಹುಟ್ಟೋದು, ಅದೊಂದರ ಬಗ್ಗೆ; ಈ ಮುಂಡೇದಕ್ಕೆ ಅದೊಂದುಬಿಟ್ಟು ಏನೂ ಬರಲ್ಲ ಅಂತ ಎಲ್ಲರೂ ಮೂಗು ಮುರಿತಾರಲ್ಲ ಅದರ ಬಗ್ಗೆ; ನನಗೆ ಅದೊಂದುಬಿಟ್ಟು ಇಂದೂ ಬೇರೆ ಏನೂ ಬರುತ್ತೆ ಅನಿಸಲ್ಲ; ಅದೂ ಸರಿಯಾಗಿ ಬರಲ್ಲ ಅನ್ನೋದು ಸತ್ಯ; ಆದರೂ ಅದೇ ನನ್ನ ಜೀವಾಳ; ಅದೇ ನನ್ನ ಕನ್ನಡ.
ಅಯ್ಯಂಗಾರಿ ಆಗಿ ಹುಟ್ಟಿದ್ದಕ್ಕೆ ಮಾತೃಭಾಷೆ ತಮಿಳು ಅಂತ ದಾಖಲಾಗಿದೆ. ಅದರಕ್ಷರ ಬರೆಯೋಕೆಗೊತ್ತಿಲ್ಲ, ಸರಿಯಾಗಿ ಉಚ್ಚಾರ ಗೊತ್ತಿಲ್ಲ, ಯಾವನಾದರೂ ತಮಿಳಿಗ ಸಿಕ್ಕ ಅಂತ, ನನ್ನ ಭಾಷೆಪ್ರಯೋಗ ಏನಾದ್ರೂ ಮಾಡಿದ್ದೇ ಆದ್ರೆ 'ಪೋಡ್ರಾ ನಾಲ್' (ಈ ನನ್ಮಗನಿಗೆ ಇಕ್ಕೋ ನಾಲ್ಕು) ಅಂತಾನೆ. ತಪ್ಪು ತಪ್ಪು ತಮಿಳೇನಿದ್ರೂ ನಮ್ಮ ಸಂಸ್ಕಾರ ಮನೇಲಿ ಬಿಡಬಾರದು ಎಂಬ ಹಿರಿಯರನಿಷ್ಠೆಯ ಮೇಲಿನ ನಿಷ್ಠೆ ಅಷ್ಟೇ. ನಮ್ಮ ಅಪ್ಪ ತಾತ ಎಲ್ಲರೂ ಕನ್ನಡ ಪಂಡಿತರಾಗಿ ಜೀವನ
ನಡೆಸಿದವರು. ಮನೆಯೊಳಗಿನ ಸಂಸ್ಕೃತಿ ವೃತ್ತಿ, ಕಲಿಕೆ, ಹೊರ ಪ್ರಪಂಚದೊಂದಿಗೆ ಯಾವುದೇಭಿನ್ನಭಾವ ಇಲ್ಲದ ಹಿಂದಿನವರ ರೀತಿ ಎಷ್ಟು ಚೆನ್ನಾಗಿತ್ತು. ಅವರುಗಳು ಇಂಗ್ಲೀಷನ್ನೂ, ಸಂಸ್ಕೃತವನ್ನೂ ಶಾಸ್ತ್ರೀಯವಾಗಿ ವಿದ್ವತ್ತತೆಯಿಂದಲೇ ಅಭ್ಯಾಸ ಮಾಡಿದ್ರು.
ನಮ್ಮ ಕಾಲದಲ್ಲಿ ಎಷ್ಟೊಂದು ವೈರುಧ್ಯಗಳು. ಕನ್ನಡ ಮೀಡಿಯಂ - ಇಂಗ್ಲಿಷ್ ಮೀಡಿಯಂ, ಖಾಸಗಿ- ಸರ್ಕಾರಿ, ಆ ಜಾತಿಯವರದ್ದು - ಮತ್ತೊಂದು ಜಾತಿಯವರದ್ದು, ಅಲ್ಪ ಸಂಖ್ಯಾತರದ್ದು - ಬಹುಸಂಖ್ಯಾತರದ್ದು, ಹಿಂದುಳಿದವರದ್ದು - ಮುಂದುವರೆದ ಗತಿಯಿಲ್ಲದವರದ್ದು ಹೀಗೆ ಎಷ್ಟುತುಂಡು ತುಂಡು ಭೇದಭಾವ.
ಇವೆಲ್ಲಕ್ಕೂ ಮಿಗಿಲಾಗಿ ರಾಷ್ಟ್ರೀಯತೆ ಹೆಸರಲ್ಲಿ ಕನ್ನಡ ನಾಡಿನ ಸಂಸ್ಥೆಗಳಿಗೆ ಮತ್ತು ಉದ್ಯಮಗಳಿಗೆಹೊರರಾಜ್ಯದಿಂದ ಇಲ್ಲಿನ ಸಂಸ್ಕೃತಿ ಬಗ್ಗೆ ಕಿಂಚಿತ್ತು ಕವಡೆ ಕಾಸು ಗೌರವ ಇಲ್ಲದವರನ್ನು ತಂದಾಗ, ಅವರ ಮುಂದೆ ಕನ್ನಡದ ನಾಲ್ಕಕ್ಷರ ಬಿಟ್ಟು ಬೇರೇನೂ ಬರದವರಂತೆ, ಅವಮಾನದಂತೆಬಾಳುವುದು ನಮ್ಮ ಕಾಲದ ಜೀವನ ಆಗಿಹೋಯ್ತು. ಅದಕ್ಕಾಗಿ ನಮ್ಮ ಮಕ್ಕಳಿಗೆಲ್ಲ ಅಮೆರಿಕದಲ್ಲಿಬದುಕಲಿಕ್ಕೆ ಹುಟ್ಟಿನಿಂದಲೇ ತರಬೇತಿ ಕೊಟ್ವಿ. ಈಗ ಆ ಮಕ್ಕಳಿಂದ ನಿಮಗೇನು ಗೊತ್ತಿದೆ ತೆಪ್ಪಗೆಬಿದ್ದಿರಿ ಅಂತ ಕೇಳೋ ಬದುಕಲ್ಲಿದೀವಿ.
ಕನ್ನಡದಲ್ಲಿ ಅರ್ಥ ಆಗುವಂತಿದ್ದ ಪದ್ಯಗಳು,
ಸಿನಿಮಾ, ನಾಟಕ, ರೇಡಿಯೋದಲ್ಲಿ ಬರುತ್ತಿದ್ದ ವಾರ್ತೆ - ಹಾಡು - ಮಾತು - ಜಾಹೀರಾತು ಇತ್ಯಾದಿ, ಚಂದಮಾಮ, ಸುಧಾ -ತರಂಗ - ಕಸ್ತೂರಿ, ಪತ್ರಿಕೆಗಳ ಸಿನಿಮಾ ಪುಟ ಹಾಗೂ ಪಾಠ ಓದೋಬದಲು ಯಾವುದೋ ಹೆಸರೂ ನೆನಪಿಲ್ಲದ ಕಥೆ - ಕಾದಂಬರಿ, ಕಿವಿಗೆ ಬಿದ್ದ ಶ್ರೇಷ್ಠ ಮಹಾನುಭಾವರಹೆಸರುಗಳು, ಆಡುವಾಗ ಗೆಳೆಯರೊಡನೆ ಆಡಿದ್ದು, ಕಲ್ಪಿಸಿದ ಪ್ರೇಮ ಕನಸು, ಇಂತದ್ದೇ ನಮಗೆಭಾಷೆಯಾಗಿ ಒಲಿದದ್ದು. ತಂತ್ರಜ್ಞರಿಗೆ ಮತ್ತು ವೈದ್ಯರಿಗೆ ಬಂದ ವಿಜ್ಞಾನ, ವಿದ್ವಾಂಸರಿಗೊಲಿದಭಾಷಾ ಪ್ರೌಡಿಮೆ ಇವೆಲ್ಲ ನನ್ನ ಬಳಿ ಬರೋಕೆ ಒಂಚೂರೂ ಧೈರ್ಯ ಮಾಡ್ಲಿಲ್ಲ. ಪಾಸಾಗಬೇಕು, ಎಲ್ಲೋ ಒಂದು ಕಡೆ ಗುಮಾಸ್ತ ಆಗಿ ಸಂಭಳ ಪಡಕೊಂಡು ಬದುಕಬೇಕು ಎಂಬ ಕನಸು ಬಿಟ್ಟುಬೇರೆ ದೂರಾಲೋಚನೆ - ದುರಾಲೋಚನೆ - ನೀಲಲೋಚನೆ ಇವ್ಯಾವುಗಳೂ ಮನದಲ್ಲಿಮೂಡಲಿಲ್ಲ. ಬದುಕೊಂತರಾ ಸೀದಾ ಸಾದಾ.
ಕಚೇರಿಗಳಲ್ಲಿ ಕನ್ನಡ ಕೆಲಸ ಮಾಡುವಾಗ ಅಲ್ಲಿರದಿದ್ದ ಕನ್ನಡದ ವಾತಾವರಣದಲ್ಲಿ ಒಂದುಅಸ್ಮಿತೆಗಾಗಿ ಹೋರಾಡಬೇಕು ಅಂತ ಕಿಚ್ಚು ಹೊತ್ತಿಸಿತ್ತು. ಆದರೆ ನಮ್ಮ ನಡೆ ಸಾಂಸ್ಕೃತಿಕರೂಪದಲ್ಲಿ ಹೊರಟಾಗ ಅಚ್ಚರಿ ಎಂಬಂತೆ ಜನ ಭಾಷಾಭೇದವಿಲ್ಲದೆ ಕನ್ನಡ ಸಂಸ್ಕೃತಿಯಭಾಗವಾಗುವುದಕ್ಕೆ ಧಾವಿಸಿಬಂದ್ರು. ಹೀಗಾಗಿ ನನಗೆ ಕನ್ನಡೇತರರ ಮೇಲೆ ರೋಷ ದ್ವೇಷ ಇತ್ಯಾದಿಮೂಡಲಿಲ್ಲ. ಎಲ್ಲೋ ಕನ್ನಡಿಗರಲ್ಲೇ ಹೆಚ್ಚು ಬೇರೆ ಭಾಷೆಗಳ ಕಡೆ ವಾಲುವ ಧಾವಂತವಿದ್ದ ಭಾವಮೂಡಿತು. ಕನ್ನಡವನ್ನು ಭಾಷೆ ಎಂಬುದಕ್ಕಿಂತ ಒಂದು ಸಂಸ್ಕೃತಿಯಾಗಿ ತೆಗೆದುಕೊಂಡಾಗ, ನಾನುನನ್ನ ಹಲವಾರು ಗೆಳೆಯರ ಕೂಡಾ 1980 - 2000 ಕಾಲಾವಧಿಯ ಎರಡು ದಶಕಗಳ ಕಾಲಅದ್ಭುತವಾದ ಬದುಕು ಸವಿದೆ ಅನಿಸುತ್ತೆ. ನಾನು ಇಲ್ಲಿ ಹಣ ಮಾಡಲಿಲ್ಲ. ನನ್ನಲ್ಲಿದ್ದ ಪುಡಿಗಾಸನ್ನೂಅದಕ್ಕೆ ಹಿಂದೆ ಮುಂದೆ ನೋಡದೆ ವ್ಯಯಿಸುತ್ತಿದ್ದೆ. ಎಚ್ ಎಮ್ ಟಿ ಕನ್ನಡ ಸಂಪದಲ್ಲಿ ನಾಕಾರ್ಯಕರ್ತನಾಗಿದ್ದ ಸಂದರ್ಭದಲ್ಲಿ ಎಂದೂ ಹಾರ ಬಹುಮಾನವನ್ನ ಅಲ್ಲಿ ಕೆಲಸ ಬಿಡುವವರೆಗೆನನ್ನ ಮೇಲೆ ಮುಟ್ಟಿಸಿಕೊಳ್ಳದೆ ಸಂತೃಪ್ತನಾಗಿದ್ದೆ - ಸಂತುಷ್ಟನಾಗಿದ್ದೆ.
ಬದುಕಿಗಾಗಿ ಕಲಿಕೆ, ಕುಟುಂಬ ನಿರ್ವಹಣೆ, ಮಾನಸಿಕ ಚಂಚಲತೆ, ವೃತ್ತಿ ನಿರ್ವಹಣೆ ಇತ್ಯಾದಿಗಳಮಧ್ಯೆ ಎಲ್ಲೋ ಏನೋ ನನ್ನಿಂದ ಕಳೆದುಹೋಗಿದೆ ಎಂದೆನಿಸಿದಾಗ ನನಗೆ ಬೆಂಬಲವಾಗಿಮೂಡಿದ್ದು ನಾ ಹೀಗೆ ಮಾಡುತ್ತಿರುವ ಅಂತರಜಾಲದಲ್ಲಿನ ಕನ್ನಡದ ಕೆಲಸ. ಈ ಹುಚ್ಚು ನನ್ನನ್ನುನನ್ನ ವೃತ್ತಿ ಬದುಕನ್ನು ಬಿಟ್ಟು ಕನ್ನಡ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಹುಚ್ಚುನಿರ್ಮಿಸಿತ್ತು. ಕನ್ನಡವನ್ನು ವ್ಯವಸ್ಥಾತ್ಮಕವಾಗಿ ನಡೆಸುತ್ತಿರುವ ಕನ್ನಡ ಸಂಸ್ಥೆಗಳ ಮೂಲಕಏನಾದರೂ ಮಾಡೋಣ ಎಂದು ಹೊರಟಾಗ ... ಓಹ್ ಅಲ್ಲಿರುವುದು ವೈಯಕ್ತಿಕ ಪ್ರತಿಷ್ಟೆಗಳು, ಸನ್ಮಾನ ಹಾರ ತುರಾಯಿ ಪ್ರಶಸ್ತಿ ಪದವಿಗಳ ಭ್ರಮೆ, ಜನ ಒಟ್ಟುಗೂಡಿದ್ದಾರೆ ಎಂದರೆ ಟೀಕೆ, ಅಸಮಾಧಾನ, ಸಂದೇಹ, ಇವನ್ಯಾವನೋ ಬಂದ ಎಂಬ ಅಸಮಾಧಾನ ಇಂತದ್ದೇ ವ್ಯಾಪಕವಾಗಿದೆಅನಿಸಿತು. ಅಲ್ಲೆಲ್ಲ ಏನೂ ಆಗುತ್ತದೆ ಎಂಬ ನಂಬಿಕೆ ಮೂಡಲಿಲ್ಲ. ಎಂಥಹ ಭವ್ಯ ಉದ್ದೇಶಗಳಿಂದ, ನಿಷ್ಠೆ ಪರಿಶ್ರಮಗಳಿಂದ ಮೂಡಿದ ಶ್ರೇಷ್ಠ ಕನ್ನಡ ಭಾವ ಎಂಥಾ ಹೃದಯವಂತಿಕೆಗಳ ಅಭಾವಕ್ಕೆಸಿಲುಕಿ ನಲುಗುತ್ತಿದೆ ಎಂಬ ಭಾವ ಕಾಡಿತು. ಹೀಗಾಗಿ ನನ್ನ ಸಹಜ ವೃತ್ತಿಯೊಂದಿಗೆ ನನಗಿಷ್ಟಯಾವುದೊ ಅದನ್ನು ಆಪ್ತ ಹವ್ಯಾಸವಾಗಿ ಮಾಡಿಕೊಂಡು ಮುಂದುವರೆಯುವುದೇ ಸರಿ, ಅಪ್ಪಿತಪ್ಪಿ ಕೂಡಾ ಇಲ್ಲಿ ವ್ಯವಹಾರ ನುಸುಳಬಾರದು ಎಂಬ ಅನಿಸಿಕೆ ಮೂಡಿತು.
ಒಂದು ಹದಿನೈದು ಇಪ್ಪತ್ತು ವರ್ಷದ ಹಿಂದೆ ಕನ್ನಡ ಎಂಬುದು ಉಳಿಯತ್ತಾ ಎಂಬ ಭಾವ ಇತ್ತು. ಎಲ್ಲೋ. ಕನ್ನಡದ ಜನಸಾಮಾನ್ಯ ಮನಗಳಿಗೆ ನಾವು ಕನ್ನಡವನ್ನು ಉಸಿರಾಡಲು ಸಾಧ್ಯವೆ ಎಂಬಬಗ್ಗೆ ಅಳುಕಿತ್ತು. ಈ ಸಮೂಹ ಮಾಧ್ಯಮಗಳಾದ ಬ್ಲಾಗ್, ಫೇಸ್ಬುಕ್, ಗೂಗಲ್, ವಾಟ್ಸಾಪ್ಇತ್ಯಾದಿ ಕನ್ನಡದ ಮನಗಳಿಗೆ ಉತ್ಸಾಹವನ್ನು ಖಂಡಿತವಾಗಿ ಮರಳಿ ತಂದುಕೊಟ್ಟಿವೆ. ಕನ್ನಡದವಾತಾವರಣದಲ್ಲಿ ಬದುಕಿದವರಿಗಂತೂ ಅವರ ಜೀವನ ಕಾಲದ ಅಂತ್ಯದವರೆಗೂ ಅದು ಖಂಡಿತಉಳಿದಿರುತ್ತದೆ ಎಂಬ ವಿಶ್ವಾಸ ಹೆಚ್ಚಿದೆ. ಕನ್ನಡ ಉಳಿಯಬೇಕೆಂದರೆ ಜನಮನದಲ್ಲಿ ಅದುಉಸುರುತ್ತಿರಬೇಕು. ಅದು ಇಲ್ಲಿ ಕಾಣುತ್ತಿದೆ.
ಕನ್ನಡದ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ನನ್ನಲ್ಲಿ ಅಗೌರವವಿಲ್ಲ. ಆದರೆ ವಿಶ್ವಾಸ ಇಲ್ಲ. ಅದು ಕೇವಲರಾಜಕೀಯ ಹೋರಾಟದ ಒಂದು ಅಂಗಣಕ್ಕಿಂತ ಬೇರೆ ಅಲ್ಲ. ಸಾಂಸ್ಕೃತಿಕ ಚಿಂತನೆಯಆಳಗಳಿಲ್ಲದ ಯಾವ ವ್ಯವಸ್ಥೆಯೂ ಸಂಪನ್ಮೂಲ ಬಳಕೆಯಿಂದ ಅಥವಾ ಸೃಷ್ಟಿಯಿಂದ ಏನನ್ನೂಸಾಧಿಸುವುದು ಸಾಧ್ಯವಿಲ್ಲ.
ನಾನು ಸುಮಾರು ಎರಡು ದಶಕಗಳ ಹಿಂದೆ ಮಧ್ಯಪ್ರಾಚ್ಯ ಮರುಭೂಮಿಗಳಿಲ್ಲ ಹಸುರಿಲ್ಲ, ಹೂವಿಲ್ಲ, ಹಕ್ಕಿಯಿಲ್ಲ, ಚಿಟ್ಟೆಯಿಲ್ಲ ಅಂದು ಅತೃಪ್ತ ನಿಟ್ಟುಸಿರು ಬಿಡುತ್ತಿದ್ದೆ. ಒಮ್ಮೆ ಬೆಳಗಿನವಾತಾವರಣದಲ್ಲಿ ಹೂಗಳ ಕಾಣುತ್ತಿದ್ದಾಗ ಹಲವು ಚಿಟ್ಟೆಗಳು ಕಂಡವು. ಆಗ ಅನ್ನಿಸಿತು. "ಚಿಟ್ಟೆಗಳಿಲ್ಲ ಎಂದು ಅವುಗಳನ್ನು ಹಿಡಿದು ತಂದು ಇಲ್ಲಿ ಬಿಡುವುದು ಅರ್ಥಹೀನ. ನೀರು ಹನಿಸಿಹುಲ್ಲು ಹಾಕಿದರೆ ಅದರ ಮಧ್ಯೆ ಕೆಲವು ಗಿಡಗಳು ಬರುತ್ತವೆ. ಕೆಲವು ದಿನಗಳಲ್ಲಿ ಮರ, ಮುಂದೆಉದ್ಯಾನವನ, ಅಲ್ಲಿ ಹೂವು, ಹಕ್ಕಿ, ಚಿಟ್ಟೆ ಎಲ್ಲಾ ಸೇರ್ಪಡೆ ಆಗುತ್ತಾ ಹೋಗುತ್ತವೆ." ಇದುಭಾಷೆಯಾಗಲಿ, ಸಂಸ್ಕೃತಿಯಾಗಲಿ, ಸೌಂದರ್ಯವಾಗಲಿ ಬೆಳೆಯುವ ರೀತಿ.
ನಮ್ಮ ಬದುಕಿಗೆ ಸಂತಸ ಕೊಟ್ಟ ಕನ್ನಡ ಭಾಷಾ ಸಂಸ್ಕೃತಿಯೂ ಮುಂದೆಯೂ ಬಹುತಲೆಮಾರುಗಳಿಗೆ ಸಂತಸವಾಗಿ ಮುಂದುವರೆಯಲಿ. ಕನ್ನಡವೇ ಆಗಲಿ ಮತ್ತೊಂದಾಗಲಿ, ಏನಿರುತ್ತದೊ ಇಲ್ಲವೊ ಜನ ಮನದಲ್ಲಿ ಶಾಂತಿ ಸಂತಸವಾದರೂ ಉಳಿಯಲಿ. ಇದೇ ನನ್ನ ಕನ್ನಡದಮನ.
ಕಾಮೆಂಟ್‌ಗಳು