ದ್ವಾರಕಿ ಕೃಷ್ಣಸ್ವಾಮಿ
'ಮಿನುಗುತಿರಲಿ ನಾದ ನಕ್ಷತ್ರ'
ಕಲಾಶ್ರೀ ದ್ವಾರಕಿ ಕೃಷ್ಣಸ್ವಾಮಿ ಅವರ 91ನೇ ಜನ್ಮದಿನದಂದು
ಲೇಖನ: ಸಾಯಿಲಕ್ಷ್ಮೀ ಅಯ್ಯರ್
On 91st birthday of Kalashri Dwaraki Krishnaswamy
ಅಮಿತೋತ್ಸಾಹದ ಸಂಗೀತ ಸಾಮ್ರಾಜ್ಞಿ ಕಲಾಶ್ರೀ ದ್ವಾರಕಿ ಕೃಷ್ಣಸ್ವಾಮಿಯವರದು ಆಯಸ್ಕಾಂತದಂತಹ ವ್ಯಕ್ತಿತ್ವ. ಇವರು ನಮ್ಮೆಲ್ಲರ ಪಾಲಿಗೆ ಅತಿ ಪ್ರೀತಿಯ 'ಮಾಮಿ'. ಇವರ ಸುತ್ತಲೂ ಮಕ್ಕಳ ಝೇಂಕಾರ, ಹೆಂಗಳೆಯರ ಕಲರವ ಮತ್ತು ಕಲಾವಿದರ ನಿನಾದ. ಇದೇ ಇವರ ಪ್ರಭಾವಳಿ. ತವರಿನ ತಂಪಲ್ಲಿ ತೇಲಾಡಿಸುವ ಮಾತೃ ಹೃದಯಿ. ಮಾಮಿಯ ಸರಳತೆ, ಸನ್ನಡತೆ, ಪ್ರಸನ್ನ ಭಾವ ಅವರ ಸಂತೃಪ್ತಿಯ ಜೀವನಕ್ಕೆ ಮೂಲ ಗುಣಗಳು. ಒಟ್ಟಿನಲ್ಲಿ ಸದಾ ಸಂತೋಷಿ ಈ ನಮ್ಮ ಹಿರಿಯ ಲಾವಣ್ಯವತಿ ಗೆಳತಿ.
ಸುಸಂಸ್ಕೃತ ಮಾತಾಪಿತರಾದ ಎಂ ಜಿ ನರಸಿಂಹ ಅಯ್ಯಂಗಾರ್ ಹಾಗು ಯದುಗಿರಿ ಅಮ್ಮಾಳ್ ಅವರ ವರಪುತ್ರಿಯಾಗಿ ಜನಿಸಿದ ದ್ವಾರಕಿಗೆ ಬಾಲ್ಯದಿಂದಲೂ ಸಂಗೀತದೆಡೆಗೆ ಅತೀವ ಸೆಳೆತ. ಮೊದಲ ಗುರುವಾಗಿ ದೊರೆತವರು ಸಂಗೀತಜ್ಞೆ ಪುಷ್ಪಾ ಶ್ರೀನಿವಾಸನ್ ಇವರು ಆ ಕಾಲದ ಶ್ರೇಷ್ಠ ವಿದ್ವಾಂಸರು ಹಾಗು ಗುರುಗಳಾದ ಬಾನುಲಿಯ ಖ್ಯಾತಿಯ ಎಂ ಎಸ್ ಶೆಲ್ಲುಪಿಳ್ಳೆ ಅಯ್ಯಂಗಾರ್ ಅವರ ಪ್ರಿಯಶಿಷ್ಯೆ. ಮುಂದೆ ಪುಷ್ಪಾ ಮತ್ತು ದ್ವಾರಕಿ ಅತ್ತಿಗೆ ನಾದಿನಿಯರಾಗಿ ಸಂಗೀತಾಭ್ಯಾಸವನ್ನು ದಿನನಿತ್ಯದ ಎಲ್ಲ ಕೆಲಸಗಳ ನಡುವೆಯು ಮುಂದುವರೆಸಿದ್ದು ಮತ್ತೂ ವಿಶೇಷ. ಈಗ ಈ ವಿದ್ವನ್ಮಣಿಗಳು ಸಂಗೀತ ಲೋಕದಲ್ಲಿ ಅಪಾರ ಶಿಷ್ಯವೃಂದವನ್ನು ತಯಾರು ಮಾಡಿ ಆದರ, ಅಭಿಮಾನ ಗಳಿಸಿದ್ದಾರೆ. ಇವರ ಸಾಂಗತ್ಯಕ್ಕೆ ಎಪ್ಪತ್ತು ವರುಷ ಮೀರಿದೆ.
ನಮ್ಮ ದೇಶದ ಮೊದಲ ಸ್ವಾತಂತ್ರ್ಯೋತ್ಸವದ ಪ್ರತ್ಯಕ್ಷದರ್ಶಿ. ಹಾಗು ಅದಕ್ಕಾಗಿ ಹೋರಾಟ ನಡೆಸಿದ ಯುವತಿ. ಕಂಚಿನಕಂಠದ ಜಿ ಪಿ ರಾಜರತ್ನಂ ಅವರ ಶಿಷ್ಯೆ. ಬಹುಶ: ಆಗ ಚಿಗುರೊಡೆದಿದ್ದ ಕನ್ನಡ ಪ್ರೇಮ ಹೆಮ್ಮರವಾದದ್ದು ಈ ಪುರುಷ ಸರಸ್ವತಿಯ ಪ್ರಭಾವದಿಂದಲೇ ಇರಬೇಕು. ಕವಿ ಸುಬ್ರಮಣ್ಯ ಭಾರತಿಯವರ ಮನೆತನದೊಡನೆ ಇವರ ಮನೆಯವರ ನಿಕಟ ಬಾಂಧವ್ಯ ಉದ್ದೀಪನಗೊಳಿಸಿದ ದೇಶಭಕ್ತಿಯ ಪ್ರೇರಣೆ ಇವರ ಸಾಹಿತ್ಯ ಶಕ್ತಿಯನ್ನು ಶ್ರೀಮಂತಗೊಳಿಸಿತು.
ಮಾಮಿ ಆಕಾಶವಾಣಿಯ ಮಕ್ಕಳ ಹಾಗು ಮಹಿಳೆಯರ ಕಾರ್ಯಕ್ರಮಗಳಿಗಾಗಿ ತಮ್ಮ 'ನಾದಬಿಂದು' ಮತ್ತು 'ಶ್ರೀ ವಿದ್ಯಾಸುಧಾ' ಎಂಬ ಕಲಾ ಬಳಗದ ಮೂಲಕ ರಚಿಸಿ ಪ್ರಸ್ತುತಪಡಿಸಿರುವ ಸಂಗೀತ ರೂಪಕಗಳು ಅಸಂಖ್ಯ. ಇವರ ಕಣಕಣದಲ್ಲೂ ಸಂಗೀತ ಪ್ರವಹಿಸುವ ಪರಿ ಅನನ್ಯ. ಕೊಳಲು ವಾದಕಿಯಾಗಿ ನೃತ್ಯಬಂಧಗಳ ಸಂಯೋಜಕಿಯಾಗಿ ನಾದ ಲೀನ ಮನ.
ಅಕಾಶವಾಣಿಯ ಧ್ವನಿಮುದ್ರಣ ಭಂಡಾರದಲ್ಲಿ 'ಸಂಪಥ' ಮಾಲಿಕೆಯಲ್ಲಿ ದ್ವಾರಕಿಯವರ ಸಂಗೀತ ಯಾತ್ರೆ ಕುರಿತಂತೆ ಸಂದರ್ಶನವಿದೆ. ಹಾಗೆಯೇ ಆಕಾಶವಾಣಿಯ ಅಮೃತವರ್ಷಿಣಿ ಸಂಗೀತ ವಾಹಿನಿಯ ಮೂಲಕ ಪ್ರಸಾರ ಕಂಡ ದ್ವಾರಕಿಯವರ 'ಕ್ಷೇತ್ರಜ್ಞನ ಪದಗಳು' ಮಾಲಿಕೆ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು. ಹಲವು ಬಾರಿ ಮರುಪ್ರಸಾರವಾಯಿತು. ತೆಲುಗು ಸಂಸ್ಕೃತಿಯ ನೆಲಮೂಲದ ಅಧಾರ ಹೊಂದಿದ ಈ ಪದಗಳು ಕೃಷ್ಣನನ್ನು ಕುರಿತಾದದ್ದು. ಇಲ್ಲಿ ಶೃಂಗಾರ, ಭಕ್ತಿರಸಗಳ ಭಾವ ಹೊನಲಿದೆ. ಈ ವಸ್ತುವಿನ ತಿರುಳಿನ ಸಾರವನ್ನು ಭಾವಾರ್ಥವಾಗಿ ಮೊದಲು ರೇಡಿಯೋಗೆ ಅರ್ಪಣೆ ಮಾಡಿ ಆನಂತರ ಅನನ್ಯ ಸಂಗೀತ ಸಂಸ್ಥೆಯ ವೇದಿಕೆಯ ಮೇಲೆ ಪ್ರಾತ್ಯಕ್ಷಿಕೆ ನೀಡಿದರು ದ್ವಾರಕಿ. ಮುಂದೆ ಅನನ್ಯ ಸಂಗೀತ ಮಾಸಪತ್ರಿಕೆಯಲ್ಲಿ ಹಲವು ಕಂತುಗಳಲ್ಲಿ ಈ 'ಕ್ಷೇತ್ರಜ್ಞನ ಪದಗಳು' ಪ್ರಕಟಗೊಂಡಿತು.
ದ್ವಾರಕಿಯವರು ನೃತ್ಯಲೋಕಕ್ಕೆ ತೆರೆದುಕೊಂಡಿದ್ದು ಮಗಳು ಮೈಥಿಲಿಯ ನೃತ್ಯ ಕಾರ್ಯಕ್ರಮಗಳಿಗೆ ಕೊಳಲು ನುಡಿಸುವುದರ ಮೂಲಕ. ಕೊಳಲು ವಾದನಕ್ಕೆ ಗುರುವಾಗಿ ಬಂದವರು ವೇಣು ವಿದ್ವಾಂಸರಾದ ಎಂ ಎಸ್ ಶ್ರೀನಿವಾಸಮೂರ್ತಿ. ಮಾಮಿಯವರ ಕಲಾಯಾತ್ರೆಯಲ್ಲಿ ಇದು ಅವರ ಬದುಕಿನ ಬಹು ದೊಡ್ಡ ತಿರುವು. ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ ಮಾಮಿಗೆ ಪತಿ ಅರ್ ಎ ಕೆ ಸ್ವಾಮಿಯವರ ಪ್ರೋತ್ಸಾಹ ಬೆನ್ನಿಗಿತ್ತು. ಭದ್ರ ಕವಚದಂತೆ ಕಾಪಾಡಿತು.
ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ನೃತ್ಯ ಕಲಾವಿದರಾದ ಪದ್ಮಿನಿ ರವಿ, ವೈಜಯಂತಿ ಮಾಲಾ ಬಾಲಿ, ಭಾನುಮತಿ, ಪ್ರತಿಭಾ ಪ್ರಹ್ಲಾದ, ಶ್ರೀದೇವಿ ಉನ್ನಿ, ವಾಣಿ ಗಣಪತಿ, ಸುಂದರಿ ಸಂತಾನಂ, ಲಲಿತಾ ಶ್ರೀನಿವಾಸನ್, ಉಷಾ ದಾತಾರ್, ರಾಧಾ ಶ್ರೀಧರ, ಪದ್ಮಿನಿ ರಾಮಚಂದ್ರನ್ ಮುಂತಾದವರ ಕಾರ್ಯಕ್ರಮಗಳಿಗೆ ಕೊಳಲು ವಾದನದ ಸಹಕಾರ ನೀಡಿದ ವಿದ್ವತ್ ದ್ವಾರಕಿಯದು.
1970ರಲ್ಲಿ 'ಕಣಿಯೂರು ಸುಪ್ರಭಾತ' ಹಾಗು 'ಶ್ರೀ ರಾಮಾನುಜ ವೈಭವಂ' ಎಂಬ ಭಕ್ತಿ ರಚನೆಗಳು ದ್ವಾರಕಿಯವರ ಸಂಗೀತ ಸಂಯೋಜನೆಯಲ್ಲಿ ಮತ್ತು ಕೊಳಲು ವಾದನ ಸಹಕಾರದಲ್ಲಿ ಕ್ಯಾಸೆಟ್ ಆಗಿ ಧ್ವನಿಮುದ್ರಣಗೊಂಡು ಜನಪ್ರಿಯತೆ ಗಳಿಸಿವೆ.
ನೃತ್ಯಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪುಷ್ಪಾಂಜಲಿ, ಸುಂದರ ಪದವರ್ಣಗಳು, ಕೋತ್ವಂ, ಜಾವಳಿ, ಶಬ್ದಂ, ಕೃತಿ, ತಿಲ್ಲಾನ ರಚಿಸಿ ರಾಗ ಸಂಯೋಜಿಸಿರುವ ಕೀರ್ತಿ ಮಾಮಿಯದು. ಹಾಗೆಯೇ ದ್ವಾರಕಿಯವರ ಹಲವಾರು ಗೀತ ನೃತ್ಯ ರೂಪಕಗಳು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಖ್ಯಾತ ನಾಟ್ಯ ಮಯೂರಿಗಳ ತಂಡದಿಂದ ಕಿಕ್ಕಿರಿದ ಸಭಾಂಗಣದಲ್ಲಿ ಭರ್ಜರಿ ಪ್ರದರ್ಶನಗಳನ್ನು ಕಂಡಿವೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ದ್ವಾರಕಿಯವರ ಕೃತಿಗಳನ್ನು ‘ನೃತ್ಯಕ್ಕೆ ಕನ್ನಡ ಕೃತಿಗಳು-ಭಾಗ-1' (1998)ಈ ಶೀರ್ಷಿಕೆಯಡಿ ಗ್ರಂಥರೂಪದಲ್ಲಿ ಪ್ರಕಟಿಸಿದೆ. ಇತ್ತೀಚೆಗೆ ಇದರ ಎರಡನೆಯ ಭಾಗ 'ಕನ್ನಡದ ನೃತ್ಯ ನಾಟಕಗಳು' (2010)ಮೂರು ಸಿ ಡಿ ಗಳೊಂದಿಗೆ ನಮ್ಮ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಹೊರತಂದಿದೆ. ಇದು ಪುಸ್ತಕ ರೂಪದಲ್ಲೂ ಲೋಕಾರ್ಪಣೆ ಕಂಡಿದೆ. ವಾಗ್ಗೇಯಕಾರರಾಗಿ ದ್ವಾರಕಿ ಅವರಿಗೆ ಇದೊಂದು ದೊಡ್ಡ ಪುರಸ್ಕಾರ.
ಒಂದು ಕಾಲದ ಪ್ರಸಿದ್ಧ Orkay ಜಾಮೂನು ಸಂಸ್ಥೆಯನ್ನು ಪತಿ ಕೃಷ್ಣಸ್ವಾಮಿಯವರೊಡನೆ ಹೆಗಲಿಗೆ ಹೆಗಲಾಗಿ ಕಟ್ಟಿ ಬೆಳೆಸಿದ ಸಂಸ್ಥಾಪಕಿ ನಮ್ಮ ಮಾಮಿ ದ್ವಾರಕಿ. ಹಲವಾರು ಕುಟುಂಬಗಳಿಗೆ ಅನ್ನದಾತೆ.
ಈಗ ಮಾಮಿಗೆ ತೊಂಬತ್ತರ ಇಳಿವಯಸ್ಸು. ಮಗಳು ಮೈಥಿಲಿ ಕೃಷ್ಣಸ್ವಾಮಿ ಹಾಗು ಅಳಿಯ ರಮೇಶ ದ್ವಾರಕಿಯಂತಹ ಅಪರೂಪ ಜೀವಕುಸುಮವನ್ನು ನಾಜೂಕಾಗಿ ಜೋಪಾನ ಮಾಡುತ್ತಿದ್ದಾರೆ.
ಮಾಮಿಯದು ಪ್ರತಿದಿನ ಅರು ಗಂಟೆಗಳ ಕಾಲ Skype ಮೂಲಕ ಸಂಗೀತ ಬೋಧನೆಯ ಕಾಯಕ. ಆಯಾಸವರಿಯದ ಜೀವ. ಮೊನ್ನೆ ಮೊನ್ನೆಯವರೆಗೂ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಸಂಗೀತ ಕಲಿಸುವ ಗುರುವಾಗಿ ವಿದ್ಯಾದಾನ ಮಾಡಿರುವ ಪುಣ್ಯಜೀವಿ. ರಾಜ್ಯೋತ್ಸವ ಪ್ರಶಸ್ತಿಭೂಷಿತೆ. ಬೆಂಗಳೂರು ಗಾಯನ ಸಮಾಜದಿಂದ 'ವರ್ಷದ ಕಲಾವಿದೆ' ಈ ಗೌರವ ಸಂದಿದೆ. ಚೆನ್ನೈ ಶಾಪ್ರೆ ಸಂಗೀತ ಸಂಸ್ಥೆಯಿಂದ 'ರಸಿಕ' ಪುರಸ್ಕಾರ.
2022 ವರ್ಷದ ಡಿಸೆಂಬರ್ ತಿಂಗಳ 14 ನೆಯ ತಾರೀಖು ನೃತ್ಯ ಕಲಾವಿದೆ ಗುರು ಡಾ. ಪದ್ಮಿನಿ ರವಿ ತಮ್ಮ ತಂಡದೊಡನೆ 'ಭಕ್ತಿ' ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ದ್ವಾರಕಿಯವರ ಹುಟ್ಟುಹಬ್ಬದ ಗೌರವಾರ್ಥ ಅವರ ಸಮ್ಮುಖದಲ್ಲಿ ತುಂಬಿದ ಸಭಾಂಗಣದಲ್ಲಿ ಅರ್ಪಿಸಿದರು. ಮಾಮಿಯ ಮನ ಹರ್ಷದ ಹೊನಲಾಯಿತಂದು. ನೃತ್ಯಲೋಕದ ನಕ್ಷತ್ರಗಳೊಂದಿಗೆ ದ್ವಾರಕಿಯವರು ಪಳಗುಟ್ಟಿ ಸಂಭ್ರಮಿಸಿದರು.
ಇಂದಿನ ಅನೇಕ ಸಂಗೀತ, ನೃತ್ಯಲೋಕದ ಮೇರು ಕಲಾವಿದರಿಗೆ ಮಾರ್ಗದರ್ಶಕಿಯಾಗಿ ಗೌರವಕ್ಕೆ ಪಾತ್ರರಾದ ನಮ್ಮ ದ್ವಾರಕಿ ಮಾಮಿಗೆ ಈ ದಿನ ಡಿಸೆಂಬರ್ 20 ಇಂದಿಗೆ 91 ವರ್ಷ ಪೂರ್ಣಗೊಳ್ಳಲಿದೆ.
ದ್ವಾರಕಿಯವರ ಮನ ಹೀಗೆ ನಾದಮಯವಾಗಿ ಆನಂದ ತೃಪ್ತಿಯ ನಂದನವನವಾಗಿರಲೆಂದು ಪ್ರಾರ್ಥಿಸೋಣ.
ಲೇಖನ ಕೃಪೆ: ಸಾಯಿಲಕ್ಷ್ಮೀ ಅಯ್ಯರ್ Sayilakshmi S Iyer
ಕಾಮೆಂಟ್‌ಗಳು