ಸೋಮೇಶ್ವರಶತಕ11
ಸೋಮೇಶ್ವರ ಶತಕ 11ನೇ ದಿನ
ಪದ್ಯ 51
*ಕಳವಂ ಪೋದುದ ಪೋಗಿ ಹೆಜ್ಜೆವಿಡಿದಾ ಮರ್ಮಂಗಳಂ ಕಾಣದೇ , ಪೊಳಲೋಳ್ಪೊಕ್ಕರ, ಪೋದರಂ ನುಡಿದರಂ, ಮತ್ತಾರನಂ ನೋಡದೇ , ಅಳಿವನ್ಯಾಯವ ನೋಡಿ ಎಲ್ಲರಹರೆಂದುಂ ಅನ್ಯಥಾ ಬಾಧಿಪಾ, ತಳವಾರಂ ಬೆಳವಾರನೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಕಳ್ಳತನವಾಗಿದ್ದರೂ ಅದನ್ನು ಸರಿಯಾಗಿ ಪ್ರಯತ್ನಿಸಿ ಪತ್ತೆಹಚ್ಚದೆ, ಪುರದಲ್ಲಿ ಹೊಕ್ಕವರು ಯಾರು, ಹೊರಹೊರಟವರು ಯಾರೆಂದು ಗಮನಿಸದೆ, ಅನ್ಯಾಯವಾಗಿ ಎಲ್ಲರನ್ನೂ ಸಂದೇಹಿಸುವ, ತೊಂದರೆ ಕೊಡುವ ತಳವಾರನು ಸರಿಯಾದ ಕಾವಲುಗಾರನಲ್ಲ. ಅವನು ನೀಚನೇ ಸರಿ.
ಪದ್ಯ 52
*ಬಹುಳೋಪಾಯದೊಳಾರ್ಜಿಸುತ್ತ ಧನಮಂ ತನ್ನಾಳ್ದನಂ ದೈವವೆಂ_, ದಹಿತರ್ತನ್ನವರನ್ಯರೆನ್ನದಣುಮಾತ್ರಂ ಪೋಗದೊಲ್ ತ್ರಾಸಿನಂ, ತಿಹ ಸೊಕ್ಕಲ್ಗತಿ ಪ್ರೀತಿಪಾತ್ರನಿಳೆಮೆಚ್ಚಲ್ ಶಾನುಭಾಗಾಖ್ಯನೀ , ಮಹಿವಾರಣಾಸಿಯಪ್ಪನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಬಹಳ ಉಪಾಯಗಳಿಂದ ಧನವನ್ನು ರಾಜ್ಯಕ್ಕೆ ಬರುವಂತೆ ಮಾಡಿ, ಒಡೆಯನನ್ನು ದೈವವೆಂದು ಭಾವಿಸಿ, ಹಿತರನ್ನೂ ಅಹಿತರನ್ನೂ ಬೇಧವೆಣಿಸದೆ ಸಮಾನವಾಗಿ ಭಾವಿಸುತ್ತ ಲೋಕದಲ್ಲಿ ತಕ್ಕಡಿಯಂತೆ ಸಮನಾಗಿರುತ್ತ ಇರುವ ಶಾನುಭೋಗನಿರುವ ಭೂಮಿಯು ಪವಿತ್ರವಾದ ಕಾಶೀಕ್ಷೇತ್ರಕ್ಕೆ ಸಮವೆಂದು ಹೇಳಬಹುದು.
ಪದ್ಯ 53
*ಅತಿ ಗಂಭೀರನುದಾರ ಧೀರನುರಧೀ ಸಂಪನ್ನ ಸತ್ಯಾತ್ಮನೂ _, ರ್ಜಿತ ನಾನಾಲಿಪಿ ಬಾಷೆಯೊಳ್ ಪರಿಚಿತಂ ಲಂಚಕ್ಕೆ ಕೊಟ್ಟಾಡದಾ , ಪತಿ ಸದ್ಧರ್ಮನು ಯುಕ್ತಿಶಾಲಿ ಚತುರೋಪಾಯಂಗಳಂ ಬಲ್ಲವಂ , ಪ್ರತಿಕಾರ್ಯಂ ಹಿತಮಂತ್ರಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಅತ್ಯಂತ ಗಂಭೀರನೂ, ಧೀರನೂ, ಸಂಪನ್ನನೂ, ಸತ್ಯವಂತನೂ, ಅನೇಕ ಭಾಷೆಗಳನ್ನು ಮತ್ತು ಲಿಪಿಗಳನ್ನು ಬಲ್ಲವನೂ, ಲಂಚಕ್ಕೆ ಒಳಗಾಗದವನೂ, ಸದ್ಧರ್ಮನೂ, ಯುಕ್ತಿಶಾಲಿಯೂ, ಚತುರೋಪಾಯಗಳನ್ನು ಬಲ್ಲವನೂ, ಪ್ರತಿಕಾರ್ಯದಲ್ಲಿಯೂ ಒಡೆಯನ ಅಭ್ಯುದಯವನ್ನು ಬಯಸುವವನೇ ನಿಜವಾದ ಮಂತ್ರಿಯು.
ಪದ್ಯ 54
*ಒಡೆಯಂಗುತ್ಸವಮಾಗೆ ಸರ್ವಜನವಾನಂದಂ ಪಡಲ್ರಾಜ್ಯ ಜೇಂ_, ಗೊಡದೋಲ್ತುಂಬಿ ತುಳುಂಕಿ ನಿಚ್ಚ ಫಲ ಪೈರಿಂದುರ್ವಿಯಂ ಬೆಳ್ಸಿ ಬ, ಲ್ಗುಡಿ ದುರ್ಗಂಗಳ ಭದ್ರಮಾಡಿ ಧನಧಾನ್ಯಂ ತೀವಿ ಭಂಡಾರದೋ, ಳ್ನಡೆವಂ ಭಾಗ್ಯದ ಕರ್ತನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ*.
ಒಡೆಯನಿಗೆ ಉತ್ಸವಗಳುಂಟಾಗಿ ಸರ್ವಜನರೂ ಆನಂದವನ್ನು ಪಡುವಂತೆ ಮಾಡುವ, ರಾಜ್ಯವು ಜೇನಿನ ಕೊಡದಂತೆ ತುಂಬಿ ತುಳುಕುವಂತೆ ನೋಡಿಕೊಳ್ಳುವ, ಭೂಮಿಯಲ್ಲಿ ಸಕಾಲದಲ್ಲಿ ಬೆಳೆ ಬರುವಂತೆ ಗಮನ ಕೊಡುವ, ಗುಡಿ, ಕೋಟೆಗಳನ್ನು ಭದ್ರ ಮಾಡಿ ರಕ್ಷಿಸುವ, ಭಂಡಾರದಲ್ಲಿ ಧನಧಾನ್ಯಗಳು ಸದಾಕಾಲವೂ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವ ಮಂತ್ರಿಯೇ ಪುಣ್ಯಶಾಲಿಯು.
ಪದ್ಯ 55
*ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಶೆಗೈವಲ್ಲಿ ಬ_, ಲ್ಪುಲಿಗಳ್ಸಿಸಿಂಗಗಳಿಕ್ಕೆಯಲ್ಲಿ, ಪರವೆಣ್ಣಿರ್ದಲ್ಲಿ, ಕುಗ್ರಾಮದೋ_, ಳ್ಗೆಲವಂ ತೋರದೆ ದುಃಖಮಪ್ಪಯೆಡೆಯೋಳ್ಭೂತಂಗಳಾವಾಸದೋ_, ಳ್ಸಲೆ ಬಲ್ಲರ್ನಿಲಬಾರದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಫಲವತ್ತಿಲ್ಲದ ರಾಜ್ಯದಲ್ಲಿ, ರಾಜನು ಶಿಕ್ಷಿಸುವುದನ್ನೇ ಆಸೆಯಾಗಿಟ್ಟುಕೊಂಡ ಸ್ಥಳದಲ್ಲಿ, ಹುಲಿಗಳು ಸಿಂಹಗಳಿರುವಲ್ಲಿ, ಪರಸ್ತ್ರೀಯಿದ್ದಲ್ಲಿ, ಕುಗ್ರಾಮದಲ್ಲಿ , ನಲಿವಿಲ್ಲದೆ ಸದಾ ದುಃಖದ ವಾತಾವರಣ ಇರುವಲ್ಲಿ, ಭೂತಗಳ ವಾಸಸ್ಥಾನಗಳಲ್ಲಿ ಬಲ್ಲವರು ನಿಲ್ಲಬಾರದು
ವಿವರಣೆ:. ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು