ಗೀತಗೋವಿಂದ11
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 10
*ಸಂಕ್ಷಿಪ್ತ ಭಾವ*
ಈ ಭಾಗದಲ್ಲಿ ಮಾಧವನು ರಾಧೆಯ ಸಖಿಯ ಬಳಿ ತನ್ನ ಸ್ಥಿತಿಯನ್ನು ರಾಧೆಗೆ ತಿಳಿಸಲು ಹೇಳಿದಾಗ ಸಖಿಯು ಬಂದು ರಾಧೆಗೆ ಹೇಳುವ ಮಾತುಗಳು ಇಡೀ ದೃಶ್ಯವನ್ನು ಕಣ್ಣ ಮುಂದೆ ತರುತ್ತವೆ.
ಗೆಳತಿ, ನಿನ್ನ ವಿರಹದಲ್ಲಿ ವನಮಾಲಿಯು ತೊಳಲುತ್ತಿರುವನು. ಮಲಯದ ತಂಗಾಳಿಯಾಗಲೀ, ಮೊಗ್ಗುಗಳು ಅರಳುವ ಸುಗಂಧವಾಗಲೀ ಅವನ ವಿರಹವನ್ನು ಹೆಚ್ಚು ಮಾಡುತ್ತಿವೆ. ಶಿಶಿರದ ಚಂದ್ರನಾಗಲೀ, ಕುಸುಮಬಾಣನಾಗಲೀ ನೆನಪಾದರೆ ವಿಹ್ವಲದಿಂದ ಅಳುವನು. ದುಂಬಿಗಳು ಮಧುರವಾಗಿ ಗಾನಗೈಯುತ್ತಿದ್ದರೆ ಸಹಿಸದೆ ಕಿವಿಯನ್ನು ಮುಚ್ಚುವನು. ವಿರಹತಾಪದಲ್ಲಿ ಇಡೀ ಇರುಳು ನರಳುತ್ತಲಿರುವನು.
ಕೋಗಿಲೆಯು ಕುಕಿಲಿದರೆ ನೀನೇ ಎಂದು ಭ್ರಮಿಸಿ ದಿಕ್ಕುದಿಕ್ಕಿಗೂ ನೋಡುವನು. ಜನರು ಇವನ ಸ್ಥಿತಿಯನ್ನು ಕಂಡು ನಕ್ಕರೆ ತನಗೇನೂ ಆಗಿಲ್ಲವೆಂದು ಪ್ರಲಾಪಿಸುವನು.
ಹಕ್ಕಿಗಳ ಕಲರವವನ್ನು ಆಲಿಸಿ ರತಿ ಸಮಯದ ಧ್ವನಿಯನ್ನು ನೆನೆಯುವನು. ನಿನ್ನೊಡನೆ ಕಳೆದ ಸುಖಸಮಯಗಳನ್ನು ಗೌರವಿಸಿ ಸ್ಮರಿಸುವನು. ನಿನ್ನ ಶುಭ ನಾಮವನ್ನು ಹೇಳಿದರೆ ಆಸಕ್ತಿಯಿಂದ ಆಲಿಸುವನು. ಸರಸಿಜವದನೆಯಾದ ನಿನ್ನನ್ನಲ್ಲದೆ ಅನ್ಯರನ್ನು ಒಲಿಯನು.
ಹೀಗೆ ಮಾಧವನ ವಿರಹತಾಪವನ್ನು ಮನಮುಟ್ಟುವಂತೆ ಹೇಳಿದ ಸಖಿಯ ಮಾತುಗಳನ್ನು ಜಯದೇವ ಕವಿಯು ಬರೆದಿರುವನು. ಇದನ್ನು ಆಲಿಸಿದ ಪುಣ್ಯವಂತರ ಹೃದಯಮಂದಿರದಲ್ಲಿ ಮಾಧವನು ನೆಲೆಸಲಿ.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟ ಪದಿ 10
ನವೆಯುತಲಿರುವನು ಅಹ ತವವಿರಹದೊಳಾ ವನಮಾಲಿ ಸಖಿ
ಕಾಮನ ಕೆಳೆಗೊಳುತೊಯ್ಯನೆ ಮಲಯ ಸಮೀರನು ಸುಳಿಯುತಿರೆ ವಿರಹಿಗಳೆದೆಯನು ಸೀಳುವ ತೆರದವೊಲರಳುಗಳರಳುತಿರೆ. 1
ಶಿಶಿರಮಯೂಖನು ದಹಿಸುತಲಿರೆಯಿರೆ ಸತ್ತವೊಲಾಗವನು ಕುಸುಮಶಿಲೀಮುಖನೆಚ್ಚು ತಲಿರೆಯಿರೆ ಅಳುವನು ವಿಹ್ವಲನು. 2
ಮಧುಪ ಸಮೂಹವು ದನಿಗೈಯುತಲಿರೆ ತಾ ಕಿವಿ ಮುಚ್ಚುವನು ವಿರಹದೊಳಿರುಳಿರುಳಾತನು ರುಜೆಯೊಳು ನರಳುತಲಿರ್ದಪನು. 3
ಲಲಿತನಿವಾಸವನುಳಿದನು ವಿಪಿನವಿತಾನವನೈದಿದನು
ನೆಲದೊಳು ಹೊರಳುತ ನಿನ್ನನು ಹೆಸರಿಸಿ ಕೂಗುತಲವನಿಹನು. 4
ಕೋಗಿಲೆ ಕುಕಿಲುತಲಿರೆಯಿರೆ ದೆಸೆದೆಸೆಗಳ ತಾ ನೋಡುವನು
ಜನ ಮಿಗೆ ನಕ್ಕರೆ ವಿರಹವು ತನಗಿರದೆಂದಪಲಪಿಸುವನು. 5
ಕಲರವರಾವವನಾಲಿಸಿ ರತಿಕೂಜಿತವನೆ ನೆನೆದಪನು
ತವರತಿಸುಖವಿಭವಂಗಳ ಸದ್ಗುಣ ಗಣವನೆ ಗಣಿಸುವನು. 6
ನಿನ್ನಭಿಧಾನದ ಶುಭವೈಶಾಖದ ಹೆಸರನು ಹೇಳಿದರಾಲಿಪನು ಸರಸದಿನದನೆಯೆ ಜಪಿಪನು ಒಲಿಯನು ಅನ್ಯಾಂಗನೆಯರನು. 7
ಶ್ರೀ ಜಯದೇವನು ಹರಿವಿರಹವಿಲಾಸವನಿದನೊರೆದಿಹನು ಸುಕೃತಾತ್ಮರ ವರ ಹೃನ್ಮಂದಿರದೊಳು ನೆಲಸಲಿ ಮಾಧವನು. 8
*ಮೂಲಭಾಗ*
ಗೀತಂ-ಅಷ್ಟಪದೀ-10-ಹರಿ ಸಮುದಯ ಗರುಡಪದಮ್
ದೇಶೀವರಾಡೀರಾಗ, ರೂಪಕತಾಲ
ವಹತಿ ಮಲಯಸಮೀರೆ ಮದನಮುಪನಿಧಾಯ
ಸ್ಪುಟತಿ ಕುಸುಮನಿಕರೇ ವಿರಹಿಹೃದಯದಲನಾಯ
ತವ ವಿರಹೇ ವನಮಾಲೀ ಸಖಿ ಸೀದತಿ ರಾಧೇ ||ಧ್ರುವಮ್|| ||೧||
ದಹತಿ ಶಿಶಿರಮಯೂಖೇ ಮರಣಮನುಕರೋತಿ
ಪತತಿ ಮದನವಿಶಿಖೇ ವಿಲಪತಿ ವಿಕಲತರೋSತಿ ||೨||
ಧ್ವನತಿ ಮಧುಪಸಮೂಹೇ ಶ್ರವಣಮಪಿ ದಧಾತಿ
ಮನಸಿ ಕಲಿತವಿರಹೇ ನಿಶಿ ನಿಶಿ ರುಜಮುಪಯಾತಿ ||೩||
ವಸತಿ ವಿಪಿನವಿತಾನೇ ತ್ಯಜತಿ ಲಲಿತಧಾಮ
ಲುಠತಿ ಧರಣಿಶಯನೇ ಬಹು ವಿಲಪತಿ ತವ ನಾಮ||೪||
ಭಣತಿ ಕವಿ ಜಯದೇವೇ ವಿರಹವಿಲಸಿತೇನ
ಮನಸಿ ರಭಸವಿಭವೇ ಹರಿರುದಯತು ಸುಕೃತೇನ ||೫||
ಪೂರ್ವಂ ಯತ್ರ ಸಮಂ ತ್ವಯಾ ರತಿಪತೇರಾಸಾದಿತಾಃ ಸಿದ್ಧಯ_ ಸ್ತಸ್ಮಿನ್ನೇವ ನಿಕುಂಜಮನ್ಮಥಮಹಾತೀರ್ಥೇ ಪುನರ್ಮಾಧವಃ||೬||
ಧ್ಯಾಯಂಸ್ತ್ವಾಮನಿಶಂ ಜಪನ್ನಪಿ ತವೈವಾಲಾಪಮಂತ್ರಾವಲೀಂ ಭೂಯಸ್ಮೃತ್ಕುಚಕುಂಭನಿರ್ಭರಪರೀರಂಭಾಮೃತಂ ವಾಂಛತಿ ||೭||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು