ಗೀತಗೋವಿಂದ10
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 9
*ಸಂಕ್ಷಿಪ್ತ ಭಾವ*
ರಾಧೆಯ ವಿರಹವೇದನೆಯ ವರ್ಣನೆ ಇಲ್ಲಿ ಮುಂದುವರೆದಿದೆ. ಸಖಿಯು ಹರಿಗೆ ಮನಮುಟ್ಟುವಂತೆ ಹೇಳುತ್ತಿರುವಳು.
ಹೇ, ಕೇಶವ, ನಿನ್ನ ವಿರಹದಿಂದ ಬಳಲಿ ಬೆಂಡಾಗಿರುವ ರಾಧೆಯು ತನ್ನ ಮೈಮೇಲಿನ ಸರವನ್ನೂ ಹೊರೆಯೆಂದು ಭಾವಿಸಿದ್ದಾಳೆ. ಸೊರಗಿಹೋಗಿರುವ ಅವಳಿಗೆ ಅವು ಭಾರವಾಗಿವೆ.
ತಂಪಾದ ಚಂದಿರನ ರಸವನ್ನು ಅವಳು ವಿಷವೆಂದೇ ಭಾವಿಸಿರುವಳು. ಸತತವಾಗಿ ನಿಟ್ಟುಸಿರು ಬಿಡುತ್ತ ಉರಿಯುವ ಕಾಮನ ಬೆಂಕಿಯಲ್ಲಿ ಬೇಯುತ್ತಿರುವಳು.
ದಿಕ್ಕುದಿಕ್ಕುಗಳಲ್ಲಿಯೂ ನಿನ್ನನ್ನು ನೋಡಲು ತಿರುಗುವಳು. ದಂಟು ಕಳಚಿದ ತಾವರೆಯು ಬಾಡುವಂತೆ ಅವಳ ಬಾಡಿರುವಳು.
ಕೈಯನ್ನು ಕೆನ್ನೆಗಾನಿಸಿ ಹಿಡಿದು ಅಲ್ಲಾಡದೆ ನಿನ್ನ ನಿರೀಕ್ಷೆಯಲ್ಲಿ ನಿಲ್ಲುವಳು. ಎದುರಿಗೆ ಇರುವ ಹೊಸ ಚಿಗುರಿನ ಹಾಸಿಗೆಯನ್ನು ಬೆಂಕಿಯೆಂದೇ ಭಾವಿಸುವಳು.
ಮರಣಕಾಲದಲ್ಲಿ ನಾಮಜಪ ಮಾಡುವಂತೆ ಹರಿ, ಹರಿ, ಹರಿಯೆಂದು ಅಳುವಳು. ಇಂತಹಾ ಪರಿತಾಪದ ಸ್ಥಿತಿಯಲ್ಲಿರುವ ರಾಧೆಯ ಬಗೆಯನ್ನು ಜಯದೇವ ಕವಿಯು ರಚಿಸಿರುವನು. ಇದು ಶ್ರೀ ಹರಿಯ ಅಡಿಗಳಿಗೆ ಅರ್ಪಿತವಾಗಲಿ.
( ನಾಲ್ಕನೆಯ ಸರ್ಗ ಮುಗಿಯಿತು. ಇಲ್ಲಿ ಎರಡು ಅಷ್ಟಪದಿಗಳಿವೆ )
*ಚತುರ್ಥ ಸರ್ಗ ಸ್ನಿಗ್ಧ ಮಧುಸೂದನ
ಒಟ್ಟು ಸಾರಾಂಶ*
ಯಮುನೆಯ ತೀರದ ದಟ್ಟವಾದ ಬಿದಿರುಮೆಳೆ ಕೃಷ್ಣನ ಪ್ರೇಮಕೇಲಿಯ ಸುಂದರ ತಾಣವಾಗಿತ್ತು. ರಾಧೆಯ ವಿರಹದಿಂದ ಬೇಸತ್ತ ಮಾಧವನು ಆ ತಂಪನೆಯ ಜಾಗದಲ್ಲಿ ಕಳೆಗುಂದಿ ಕುಳಿತಿದ್ದನು. ಅಷ್ಟರಲ್ಲಿ ರಾಧೆಯ ಗೆಳತಿಯೊಬ್ಬಳು ಅಲ್ಲಿಗೆ ಬಂದು, ರಾಧೆಯ ವಿರಹ ಬಾಧೆಯನ್ನು ಬಣ್ಣಿಸುವಳು.
“ಹೇ ಮಾಧವ ನಿನ್ನ ವಿರಹದ ಬೇಗೆಯಿಂದ ರಾಧೆಗೆ ಈಗ ಚಂದನವೂ ಬೇಡವಾಗಿದೆ. ಚಂದ್ರಕಿರಣಗಳೂ ನೋವನ್ನು ಹೆಚ್ಚಿಸುತ್ತಿವೆ. ತಂಪುಗಾಳಿ ಸೋಂಕಿದರೆ ಸರ್ಪ ಸ್ಪರ್ಶವಾದಂತೆ ಆಕೆ ಹೆದರಿದ್ದಾಳೆ. ನಿನ್ನ ಅಪ್ಪುಗೆಯ ನಿರೀಕ್ಷೆಯಿಂದ ಕಂಗೆಟ್ಟಿದ್ದಾಳೆ' ಎಂದಳು.
ಇನ್ನು ರಾಧೆಯ ಅವಸ್ಥೆ ಹೇಳತೀರದಾಗಿದೆ. ಕಾಮಬಾಣಕ್ಕೆ ತುತ್ತಾದ ಅವಳು ರಹಸ್ಯವಾಗಿ ಮಾಧವನ ಚಿತ್ರವನ್ನು ಎಲ್ಲೆಂದರಲ್ಲಿ ಬರೆಯುತ್ತಾಳೆ. ಒಮ್ಮೆ ಗೋಳಾಡಿದರೆ, ಮತ್ತೊಮ್ಮೆ ನಗುತ್ತಾಳೆ. ಮಗದೊಮ್ಮೆ ಚಂಚಲೆಯಾಗಿ ತಾಪಪಡುವಳು. ಅವಳಿಗೆ ಮನೆಯೇ ಕಾಡೆನಿಸಿದೆ. ಸಖಿಯರ ಗುಂಪೇ ಬಂಧನದಂತಿದೆ. ಪ್ರೇಮಾಗ್ನಿಯಲ್ಲಿ ಆಕೆಯು ಬೆಂದು ಬಸವಳಿದಿದ್ದಾಳೆ. ಮೈಗೆ ಲೇಪಿಸಿದ ಚಂದನವನ್ನು ವಿಷವೇನೋ ಎಂಬ ಸಂದೇಹದಿಂದ ಮತ್ತೆ ಮತ್ತೆ ನೋಡಿಕೊಳ್ಳುತ್ತಾಳೆ. ಕೆನ್ನೆಗೆ ಕೈ ಹೊತ್ತು, ಎಷ್ಟೋ ಹೊತ್ತು ನಿಷ್ಕ್ರಿಯವಾಗಿ ಕುಳಿತಲ್ಲೇ ಕುಳಿತಿರುತ್ತಾಳೆ. ಈ ವಿರಹಕ್ಕೆ ಕೊನೆಯೇ ಇಲ್ಲದಂತಾಗಿದೆ.
ಬಹಳ ಕಾಲದಿಂದ ಕಾಮಜ್ವರದಿಂದ ತಪ್ತಳಾದ ಆಕೆಯ ಮನಸ್ಸು ಚಂದ್ರ, ತಾವರೆ, ತಂಗಾಳಿ ಇವುಗಳ ನೆನಪು ಬಂದರೆ ಸಾಕು, ಮೈಯುರಿ ಹತ್ತಿದವಳಂತೆ ಕಂಗೆಡುತ್ತಾಳೆ. ಹಿಂದೆ ರಾಧೆಯು ಅರೆಕ್ಷಣವೂ ಮಾಧವನನ್ನು ಆಗಲುತ್ತಿರಲಿಲ್ಲ. ಈಗ ಚಿರವಿರಹಿಯಾಗಿ ಬಳಲಿದ್ದಾಳೆ.
ಇಂತಿರುವಾಗ ಮಳೆಗಾಲ ತನ್ನ ಆಗಮನವನ್ನು ರಭಸವಾಗಿಯೇ ತೋರಿಸಿತು. ಮಳೆಯ ಜೋರು ಇಂದ್ರನು ನೇರವಾಗಿ ಬಾಣಬಿಟ್ಟನೋ ಎಂಬಂತಿತ್ತು. ಗೋಕುಲವೆಲ್ಲ ಮಳೆಯಿಂದ ಚಿಂತೆಗೀಡಾದಾಗ ಕೃಷ್ಣನು ಗೋವರ್ಧನ ಗಿರಿಯನ್ನು ಹೊತ್ತು ಗೊಲ್ಲರನ್ನೂ, ಗೋಪಿಯರನ್ನೂ ರಕ್ಷಿಸಿದ ಮಾಧವನ ನೆನಪು ಬಂದಿದೆ. ತಮ್ಮನ್ನು ರಕ್ಷಿಸಿದ ಮಾಧವನ ತೋಳುಗಳಿಗೆ ಆನಂದ ತುಂದಿಲೆಯರಾದ ಗೋಪಿಯರು ಚುಂಬಿಸಿದ್ದರು. ಅವನ ತೋಳುಗಳಿಗೆ ಅವರ ಸಿಂಧೂರವು ಹತ್ತಿ ಕೆಂಪಾಗಿದ್ದವು. ಈ ಮಾಧವನ ನಳಿತೋಳುಗಳು ನಮಗೆ ಶ್ರೇಯಸ್ಸನ್ನುಂಟುಮಾಡಲಿ ಎಂಬಲ್ಲಿಗೆ ಸ್ನಿಗ್ಧ ಮಧುಸೂದನನೆಂಬ ಗೀತ ಗೋವಿಂದದ ನಾಲ್ಕನೆಯ ಸರ್ಗ ಮುಗಿಯಿತು.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ 9
ರಾಧಿಕೆ, ಕೇಶವ ತವ ವಿರಹದೊಳು
ಉರದೊಳು ತೊನೆಯುವ ಸರವನುಮಿಂದವಳು
ಹೊರೆಯೆಂದೆಣಿಪಳು ಸೊರಗಿದ ಮೈಯವಳು. 1
ತಣ್ಣನೆ ಚಂದನ ರಸದಣ್ಪನುಮವಳು ವಪುವೊಳು ವಿಷವೆನೆ ಶಂಕಿಸಿ ನಿರುಕಿಪಳು. 2
ಸಂತತ ಬಿಡುತಿರುವುಸಿರನುಮಿಂದವಳು ಉರಿಯುವ ಕಾಮನ ಬೆಂಕಿವೊಲೆಣಿಸುವಳು. 3
ದೆಸೆದೆಸೆಗೆಸೆವಳು ಕಣ್ಣಿನ ನೋಟವನು. ನಾಳವು ಕಳಚಿದ ತಾವರೆವೋಲದನು. 4
ಎಳವೆರೆಯಂದದ ಕದಪನು ಬೈಗಿನೊಳು
ಕೈಯೊಳಗಿರಿಸುತೆ ನಿಲುವಳು ಮಿಸುಕದೊಲು. 5
ಕಣ್ಣೆದುರಿನ ಹೊಸತಳಿರಿನ ತಲ್ಪವನೆ ಬಗೆವಳು ವಿರಹ ಹುತಾಶನ ಕಲ್ಪವೆನೆ. 6
ವಿರಹದ ಭರದೊಳು ಹರಿಹರಿಹರಿಯೆಂದು ಮರಣದೊಳೆಂತಂತೆಣ್ಣುತಲಿಹಳಿಂದು. 7
ಶ್ರೀ ಜಯದೇವನು ಹಾಡಿದ ಗೀತವಿದು ನೆಲಸಲಿ ಹರಿಯಡಿಗಂಕಿತವೆನಿಸಿದಿದು. 8
*ಮೂಲಭಾಗ*
ಗೀತಂ-ಅಷ್ಟಪದೀ- 9 ಸ್ನಿಗ್ಧಮಧುಸೂದನ ರಾಸಾವಲಯಮ್ ದೇಶಾಖ್ಯರಾಗ, ಏಕತಾಲೀತಾಲ
ಸ್ತನವಿನಿಹಿತಮಪಿ ಹಾರಮುದಾರಂ
ಸಾ ಮನುತೇ ಕೃಶತನುರಿವ ಭಾರಂ ರಾಧಿಕಾ ತವ ವಿರಹೇ ಕೇಶವ ||ಧ್ರುವಮ್|| ೧
ಸರಸಮಸೃಣಮಪಿ ಮಲಯಜಪಂಕಂ ಪಶ್ಯತಿ ವಿಷಮಿವ ವಪುಷಿ ಸಶಂಕಂ ೨
ಶ್ವಸಿತಪವನಮನುಪಮಪರಿಣಾಹಂ ಮದನದಹನಮಿವ ವಹತಿ ಸದಾಹಂ ೩
ದಿಶಿ ದಿಶಿ ಕಿರತಿ ಸಜಲಕಣಜಾಲಂ
ನಯನನಲಿನಮಿವ ವಿಗಲಿತನಾಲಂ ೪
ತ್ಯಜತಿ ನ ಪಾಣಿತಲೇನ ಕಪೋಲಂ
ಬಾಲಶಶಿನಮಿವ ಸಾಯಮಲೋಲಂ ೫
ನಯನವಿಷಯಮಪಿ ಕಿಸಲಯತಲ್ಪಂ ವಿಹಿತಹುತಾಶವಿಕಲ್ಪಂ ೬
ಹರಿರಿತಿ ಹರಿರಿತಿ ಜಪತಿ ಸಕಾಮಂ ವಿರಹ ವಿಹಿತ ಮರಣೇನ ನಿಕಾಮಂ ೭
ಶ್ರೀಜಯದೇವಭಣಿತಮಿತಿ ಗೀತಂ ಸುಖಯತು ಕೇಶವಪದಮುಪನೀತಂ ೮
ಸಾ ರೋಮಾಂಚತಿ ಸೀತ್ಕರೋತಿ ವಿಲಪತ್ಯುತ್ಕಂಪತೇ ತಾಮೃತಿ ಧ್ಯಾಯತ್ಯುದ್ಭ್ರಮತಿ ಪ್ರಮೀಲತಿ ಪತತ್ಯುದ್ಯಾತಿ ಮೂರ್ಚ್ಛತ್ಯಪಿ ಏತಾವತ್ಯತನುಜ್ವರೇ ರತನುರ್ಜೀವೇನ್ನ ಕಿಂ ತೇ ರಸಾ_
ತ್ಸ್ವರ್ವೇದ್ಯಪ್ರತಿಮ ಪ್ರಸೀದಸಿ ಯದಿ ತ್ಯಕ್ತೋsನ್ಯಥಾ ಹಸ್ತಕಃ ೯
ಸ್ಮರಾತುರಾಂ ದೈವತವೈದ್ಯ ಹೃದ್ಯತ್ವದಂಗಸಂಗಾಮೃತಮಾತ್ರ ಸಾಧ್ಯಾಂ
ನಿವೃತ್ತ ಬಾಧಾಂ ಕುರುಷೇ ನ ರಾಧಾಮುಪೇಂದ್ರ ವಜ್ರಾದಪಿ ದಾರುಣೋsಸಿ ೧೦
ಕಂದರ್ಪಜ್ವರಸಂಜ್ವರಾತುರತನೋರಾಶ್ಚರ್ಯಮಸ್ಯಾಶ್ಚಿರಂ
ಚೇತಶ್ಚಂದನಚಂದ್ರಮಃಕಮಲಿನೀ ಚಿಂತಾಸು ಸಂತಾಮ್ಮತಿ
ಕಿಂತು ಕ್ಲಾ೦ತಿವಶೇನ ಶೀತಲತನುಂ ತ್ವಾಮೇಕಮೇವ ಪ್ರಿಯಂ
ಧ್ಯಾಯಂತೀ ರಹಸಿ ಸ್ಥಿತಾ ಕಥಮಪಿ ಕ್ಷೀಣಾಕ್ಷಣಂ ಪ್ರಾಣಿತಿ ೧೧
ಕ್ಷಣಮಪಿ ವಿರಹಃ ಪುರಾ ಸೇಹೇ ನಯನನಿಮೀಲನಖಿನ್ನಯಾ ಯಯಾ ತೇ
ಕಥಮಸೌ ರಸಾಲಶಾಖಾಂ
ಚಿರವಿರಹೇಣ ವಿಲೋಕ್ಯ ಪುಷ್ಪಿತಾಗ್ರಾಂ ೧೨
ವೃಷ್ಟಿವ್ಯಾಕುಲಗೋಕುಲಾವನರಸಾದುದ್ಧೃತ್ಯಗೋವರ್ಧನಂ ಬಿಭ್ರದ್ಪಲ್ಲವವಲ್ಲಭಾಭಿರಧಿಕಾನಂದಾಚ್ಚಿರಂ ಚುಂಬಿತಃ
ದರ್ಪೇಣೈವ ತದರ್ಪಿತಾಧರತಟೀಸಿಂಧೂರಮುದ್ರಾಂಕಿತೋ
ಬಾಹುರ್ಗೋಪತನೋಸ್ತ ನೋತು ಭವತಾಂ
ಶ್ರೇಯಾಂಸಿ ಕಂಸದ್ವಿಷಃ ೧೩
|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಸ್ನಿಗ್ಧ ಮಧುಸೂದನೋನಾಮ ಚತುರ್ಥ ಸರ್ಗಃ ||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು