ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ4


 

ಜಯದೇವಕವಿಯ 'ಗೀತಗೋವಿಂದ'

ಅಷ್ಟಪದಿ 3

*ಸಂಕ್ಷಿಪ್ತ ಭಾವ*

ಈ ಅಷ್ಟಪದಿಯು ಸುಂದರವಾದ ವನವರ್ಣನೆಯನ್ನು, ಅದರಲ್ಲಿಯೂ ವಸಂತಕಾಲದ ಸಮಯವನ್ನು ವರ್ಣಿಸುತ್ತದೆ.

ಇಲ್ಲಿ ಅನೇಕ ಬಗೆಯ ಗಿಡ, ಮರ, ಬಳ್ಳಿಗಳಿವೆ. ಸುಗಂಧವನ್ನು ಬೀರುತ್ತ ಅವು ಬಳುಕುತ್ತಿವೆ. ಅವುಗಳ ಸುತ್ತ ದುಂಬಿಗಳು, ಕೋಗಿಲೆಗಳು ಗಾನ ಮಾಡುತ್ತಿವೆ. ಹೂವುಗಳ ಮಕರಂದವನ್ನು ಹೀರಲು ಬಂದಿರುವ ದುಂಬಿಗಳ ಜೊತೆಗೆ ಮದನರಾಗದಿಂದ ಮದವೇರಿದ ಹೆಣ್ಣುಗಳ ಸ್ವರವೂ ಇದೆ.

ಹೊಂಗೆಯ ನೆರಳಿನಲ್ಲಿ, ಆ ಹೂವುಗಳ ಕಂಪಿನಲ್ಲಿ, ಯುವಜನರ ಎದೆಯನ್ನು ಸೀಳುವ ಕಾಮನ ಉಗುರುಗಳಂತೆ ಮುತ್ತುಗದ ಹೂಗಳು ಕಂಗೊಳಿಸುತ್ತಿವೆ.

ಚಿನ್ನದ ಕೋಲಿನಂತೆ ಕಾಣುವ ಕೇಶರ ಕುಸುಮಗಳಲ್ಲಿ ಹಿಂಡು ಹಿಂಡಾಗಿ ಕಾಮನ ಬಾಣದಂತೆ ಎರಗುವ ದುಂಬಿಗಳ ವಿಲಾಸವಿದೆ. ನಾಚಿಕೆಯನ್ನು ತೊರೆದು ಕಾಮಜ್ವರದಲ್ಲಿ ವಿಲಪಿಸುವ, ನಗುವ ಜನರಂತೆ ಕೇದಗೆ ತೆನೆಗಳು ಸಾಲುಗಟ್ಟಿವೆ.

ಮಲ್ಲಿಗೆ, ಜಾಜಿ ಮುಂತಾದ ಸುಗಂಧ ಬೀರುವ ಪುಷ್ಪಗಳ ಸೌಂದರ್ಯಕ್ಕೆ ಮುನಿಜನಗಳೂ ಮಾರುಹೋಗುವಂತೆ ಇಲ್ಲಿನ ದೃಶ್ಯವಿದೆ. ಬಿರಿದು ಅರಳಿದ ಸೇವಂತಿಗೆಯಂತೆ ಮಾವಿನಮರದಲ್ಲಿ ಮೊಗ್ಗುಗಳು ನಿಮಿರಿವೆ.

ಹತ್ತಿರದಲ್ಲಿಯೇ ಹರಿಯುತ್ತಿರುವ ಯಮುನಾ ನದಿಯ ಸದ್ದಿನೊಂದಿಗೆ ಬೃಂದಾವನದ ಈ ವನವು ಸೊಗಸಾಗಿದೆ.

ಜಯದೇವಕವಿಯು ವರ್ಣಿಸಿರುವ ಈ ವಸಂತಕಾಲದ ವನವರ್ಣನೆಯು ಹರಿಚರಣಸ್ಮೃತಿಯಾಗಿದೆ. ಮದನ  ವಿಕಾರದ ಸುಂದರ ವರ್ಣನೆಯೂ ಇಲ್ಲಿ ಸೇರಿದ್ದು ಮನಸೆಳೆಯುತ್ತದೆ.

*ಪರಮೇಶ್ವರ ಭಟ್ಟರ ಕನ್ನಡದ ರೂಪ*

ಅಷ್ಟಪದಿ ೩

ವಿಹರಿಸುತಿರುವನು ಹರಿಯಿದೊ ಸರಸ ವಸಂತದೊಳು ಕುಣಿಯುತಲಿಹನೆಳೆವೆಣ್ಗಳೊಳಹ ಸಖಿ ಬಿರಯಿಗಳೆದೆ ಬಿರಿಯಿಸುವ ಬಸಂತದೊಳು 1

ಲಲಿತ ಲವಂಗದ ಲತೆಗಳ ತೊನೆತೊನೆದಾಡುವ ಕೋಮಲ ಮಲಯ ಸಮೀರನೊಳು

ಬಂಡುಣಿವಿಂಡು ನಿರಂತರ ಮೊರೆದಿದೆ ಕುಕಿಲುತಲಿರೆ ಪಿಕ ಕುಂಜ ಕುಟೀರದೊಳು  2

ಮದನ ಮನೋರಥದೊಳು ಮದವೇರಿದ ಪಥಿಕವಧೂಜನರಳುವ  ವಿಲಾಪದೊಳು

ಆಳಿಕುಲ ಸಂಕುಲಮೆರಗುವ ಕುಸುಮ ಸಮೂಹದಿನೊಪ್ಪುವ ಬಕುಳ ಕಲಾಪದೊಳು 3

ಮೃಗಮದ ಸುರಭಿ ಸಮೀರನ ಕತದೊಳು ಕಂಪಿಡಿದೊಪ್ಪುವ ತಳಿರ ತಮಾಲದೊಳು

ಯುವಜನರೆದೆಯನು ಸೀಳುವ ಕಾಮನ ಸೆಳ್ಳುಗುರೆನಲಿಹ ಕಿಂಶುಕಜಾಲದೊಳು 4

ನನೆವಿಲ್ಲರಸನ ಚಿನ್ನದ ಕೋಲೆನೆ ಮಿರುಗುವ ಕೇಶರ ಕುಸುಮ ವಿಕಾಸದೊಳು 

ಕಾಮನ ದೊಣೆಯೆನಲೊಪ್ಪಿರುವಳಿ ಕುಲಮಿಳಿತಸುಪಾಟಲ ಪಟಲವಿಲಾಸದೊಳು 5

ನಾಣನು ತೊರೆದಿಹ ಜಗವನು ನೋಡುತ ನಗುವೊಲು ಮೆರೆಯುವ ಕರುಣದ ಹಾಸದೊಳು

ವಿರಹಿಗಳೆದೆಯನು ಇರಿಯುವ ಕುಂತದ ಮೊನೆವೊಲು ತೋರುವ ಕೇದಗೆ ತೆನೆಗಳೊಳು. 6

ಮಾಧವಿಯರಳಿನ ನಸುನರುಗಂಪೊಳು ಮತ್ತಿನ ನವಮಲ್ಲಿಗೆಯ ಸುಗಂಧದೊಳು ಮುನಿಮನಮನುಸಹ ಮೋಹಿಪುದೆನಲೆಸೆವೀನವ ತರುಣಾಕಾರಣ ಬಂಧುವೊಳು 7

ಬಿರಿದಿರುವಂತಿಗೆಯಪ್ಪಿದ ಕತದೊಳು ನಿಮಿರಿದುವೆನೆ ನನೆವಿಡಿದಿರುವಾಮ್ರದೊಳು

ಬಳಿಯೊಳೆ ಬಳಸಿಹ ಯಮುನೆಯಿನಮಳತೆವಡೆದಿಹ ಬೃಂದಾವನದೀ ವಿಪಿನದೊಳು. 8


ಸರಸ ವಸಂತದ ಸಮಯದ ವನವರ್ಣನೆಯಿದು ಹರಿಚರಣಸ್ಮೃತಿಸಾರವಿದು

ಶ್ರೀಜಯದೇವನು ಹಾಡಿದ ಮತ್ತಿನ ಮದನ ವಿಕಾರದ ಸುಂದರ ಗೀತವಿದು. 9

*ಮೂಲ ಭಾಗ*

ಗೀತಂ-ಅಷ್ಟಪದೀ-3-ಮಾಧವೋತ್ಸವ ಕಮಲಾಕರಮ್

ವಸಂತರಾಗ, ರೂಪಕತಾಲ

ಲಲಿತಲವಂಗಲತಾಪರಿಶೀಲನಕೋಮಲಮಲಯಸಮೀರೇ ಮಧುಕರನಿಕರಕರಂಬಿತಕೋಕಿಲಕೂಜಿತಕುಂಜಕುಟೀರೇ

ಹರತಿ ಹರಿರಿಹ ಸರಸವಸಂತೇನೃತ್ಯತಿ

ಯುವತಿಜನೇನ ಸಮಂ ಸಖಿ ವಿರಹಿಜನಸ್ಯ ದುರಂತೇ ||ಧ್ರುವಮ್|| ||೧||

ಉನ್ಮದಮದನಮನೋರಥಪಥಿಕವಧೂಜನಜನಿತವಿಲಾಪೇ

ಅಲಿಕುಲಸಂಕುಲಕುಸುಮಸಮೂಹನಿರಾಕುಲಬಕುಲಕಲಾಪೇ ||೨||

ಮೃಗಮದಸೌರಭರಭಸವಶಂವದನವದಲಮಾಲತಮಾಲೇ

ಯುವಜನಹೃದಯ ವಿದಾರಣ ಮನಸಿಜನಖರುಚಿಕಿಂಶುಕಜಾಲೇ ||೩||

ಮದನಮಹೀಪತಿಕನಕದಂಡರುಚಿಕೇಶರಕುಸುಮವಿಕಾಸೇ ಮಿಲಿತಶಿಲೀಮುಖಪಾಟಲಪಟಲಕೃತಸ್ಮರತೂಣವಿಲಾಸೇ ||೪||


ವಿಗಲಿತಲಜ್ಜಿತಜಗದವಲೋಕನತರುಣಕರುಣಕೃತಹಾಸೇ

ವಿರಹಿನಿಕೃಂತನಕುಂತಮುಖಾಕೃತಿಕೇತಕದಂತುರಿತಾಶೇ ||೫||

ಮಾಧವಿಕಾಪರಿಮಲಲಲಿತೇ ನವಮಾಲತಿಜಾತಿಸುಗಂಧೌ

ಮುನಿಮನಸಾಮಪಿ ಮೋಹನಕಾರಿಣಿ ತರುಣಾಕಾರಣಬಂಧೌ ||೬||

ಸ್ಪುರದತಿಮುಕ್ತಲತಾಪರಿರಂಭಣಮುಕುಲಿತಪುಲಕಿತಚೂತೇ ವೃಂದಾವನವಿಪಿನೇ ಪರಿಸರಪರಿಗತಯಮುನಾಜಲಪೂತೇ ||೭||

ಶ್ರೀಜಯದೇವಭಣಿತಮಿದಮುದಯತು ಹರಿಚರಣಸ್ಕೃತಿಸಾರಂ ಸರಸವಸಂತಸಮಯವನವರ್ಣನಮನುಗತಮದನವಿಕಾರಂ ||೮||

ದರವಿದಲಿತವಲ್ಲೀಮಲ್ಲಿ ಚಂಚತ್ಪರಾಗ ಪ್ರಕಟಿತ ಪಟವಾಸ್ಯೆರ್ವಾಸಯನ್ ಕಾನನಾನಿ 

ಇಹ ಹಿ ದಹತಿ ಚೇತಃ ಕೇತಕೀಗಂಧಬಂಧುಃ ಪ್ರಸರದಸಮಬಾಣಪ್ರಾಣವದ್ಗಂಧವಾಹಃ ||೯||


ಉಶ್ಮೀಲನ್ಮಧುಗಂಧಲುಬ್ದ ಮಧುಪವ್ಯಾಧೂತಚೂತಾಂಕುರ_ ಕ್ರೀಡತ್ಕೋಕಿಲಕಾಕಲೀಕಲಕಲೈರುದ್ಗೀರ್ಣಕರ್ಣಜ್ವರಾಃ

ನೀಯಂತೇ ಪಥಿಕೈಃ ಕಥಂ ಕಥಮಪಿ ಧ್ಯಾನಾವಧಾನಕ್ಷಣ_ ಪ್ರಾಪ್ತಪ್ರಾಣಸಮಾಸಮಾಗಮರಸೋಲ್ಲಾಸೈರಮೀ ವಾಸರಾಃ ||೧೦||

ಅನೇಕನಾರೀಪರಿರಂಭಸಂಭ್ರಮ ಸುರನ್ಮನೋಹಾರಿವಿಲಾಸಲಾಲಸಂ ಮುರಾರಿಮಾರಾದುಪದರ್ಶಯಂತ್ಯಸೌ ಸಖೀ ಸಮಕ್ಷಂ ಪುನರಾಹ ರಾಧಿಕಾಂ||೧೨||


ಕೃತಜ್ಣತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ