ಗೀತಗೋವಿಂದ5
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 4
*ಸಂಕ್ಷಿಪ್ತ ಭಾವ*
ಇಲ್ಲಿ ಶ್ರೀಹರಿಯು ಅನೇಕ ಕಾಮಿನಿಯರೊಂದಿಗೆ ಏಕಕಾಲದಲ್ಲಿ ರಮಿಸುವ, ಆ ಗೋಪಿಕೆಯರು ಅವನನ್ನು ಒಲಿಸುವ ಪ್ರಯತ್ನದಲ್ಲಿರುವ ದೃಶ್ಯವಿದೆ.
ಚಂದನದ ಗಂಧದಿಂದ ಕೂಡಿದ, ಸುಂದರನಾದ ನೀಲಮೇಘಶ್ಯಾಮನು ಆ ಮುಗ್ಧ ವಧೂವೃಂದದವರೊಂದಿಗೆ ಸರಸವನ್ನು ಆಡುತ್ತಿರುವನು. ಭಾರಿ ಗಾತ್ರದ ಸ್ತನಗಳನ್ನು ಹೊಂದಿದವಳೊಬ್ಬಳು ಹಾಡುತ್ತ ನಲಿಯುತ್ತ ಹರಿಯನ್ನು ಅಪ್ಪುವಳು. ಒಲವಿನಿಂದ ಅವನನ್ನೇ ಧ್ಯಾನಿಸುತ್ತ ಚಿಂತಿಸುವವಳು ಇನ್ನೊಬ್ಬಳು. ಬಳಿ ಬಂದು ಸಮಯ ಸಾಧಿಸಿ ಹರಿಯ ಕಿವಿಯಲ್ಲಿ ಏನನ್ನೋ ಪಿಸುಗುಟ್ಟುವಳೊಬ್ಬಳು. ಇನ್ನೊಬ್ಬಳು ಇದೇ ಸಮಯದಲ್ಲಿ ಹರಿಯ ಕೆನ್ನೆಯನ್ನು ಮುದ್ದಿಸುವಳು. ಆ ಸುಂದರನ ದುಕೂಲವನ್ನು ಕುತೂಹಲದಿಂದ, ಅನುರಾಗದಿಂದ ಎಳೆದಳು ಒಬ್ಬಳು.
ತಮ್ಮ ಬಳೆಗಳ ನಾದದಿಂದ, ಗೆಜ್ಜೆಗಳ ಸದ್ದಿನಿಂದ, ಮುರಳಿಯ ನಾದಕ್ಕೆ ಜೊತೆಯಾಗಿರುವರು ಆ ಗೋಪಿಯರು. ಸರಸದ ಉತ್ಕಟವಾದ ಸಮಯದಲ್ಲಿ ಜೊತೆಗೆ ನೃತ್ಯವನ್ನು ಮಾಡುತ್ತಿರುವವಳನ್ನು ಇತರರು ಮೆಚ್ಚಿ ಹೊಗಳಿದರು.
ಒಬ್ಬಳನ್ನು ಚುಂಬಿಸುವನು, ಇನ್ನೊಬ್ಬಳನ್ನು ಆಲಂಗಿಸುವನು. ಒಬ್ಬಳನ್ನು ಕಂಡು ನಗುವನು, ಮತ್ತೊಬ್ಬಳೊಂದಿಗೆ ನಲಿಯುವನು. ಇನ್ನೊಬ್ಬಳನ್ನು ಅನುಕರಿಸುವನು, ಅವಳಂತೆಯೇ ಕುಣಿಯುವನು.
ಶ್ರೀ ಹರಿಯ ಈ ವಿಲಾಸದ ಸುಂದರ ರಚನೆಯನ್ನು ಜಯದೇವ ಕವಿಯು ಅದ್ಭುತವಾದ ರೀತಿಯಲ್ಲಿ ಲೋಕದ ಜನರ ಸೌಖ್ಯಕ್ಕಾಗಿ ರಚಿಸಿರುವನು. ಈ ಯಶಸ್ಕರ ಹರಿಕೀರ್ತನೆಯು ಸರ್ವರಿಗೂ ಮಂಗಳವನ್ನು ನೀಡಲಿ. ಇಲ್ಲಿಗೆ ಮೊದಲನೆಯ ಸರ್ಗ ಮುಗಿಯುತ್ತದೆ.
ಪ್ರಥಮ ಸರ್ಗ: ಭಾವಾನುವಾದ
ಈ ಮಹಾಕಾವ್ಕದ ಮೊದಲ ಶ್ಲೋಕ ಪ್ರಕೃತಿಯ ರಮ್ಯ ಚಿತ್ರಣವಾಗಿದೆ.
ಕರಿಮೋಡಗಳು ತುಂಬಿದ ಆಗಸ ; ಎತ್ತರದ ತಾಳೆಮರದ ಕಪ್ಪುನೆರಳು. ಬಾಲಕ ಎಂದರೆ ಹದಿವಯಸ್ಸಿನ ಕೃಷ್ಣನಿಗೆ ರಾತ್ರಿಯೆಂದರೆ ಹೆದರಿಕೆ. ಆದ್ದರಿಂದ ಕೃಷ್ಣನ ಸಾಕು ತಂದೆ ನಂದರಾಜ, ರಾಧೆಗೆ ಅಪ್ಪಣೆ ನೀಡಿದ: 'ನೀನು ಇವನನ್ನು ಜೋಪಾನವಾಗಿ ಮನೆಗೆ ತಲುಪಿಸು.' ಕೂಡಲೇ ರಾಧಾ - ಮಾಧವರು ಅಲ್ಲಿಂದ ಹೊರಟರು. ಆದರೆ ದಾರಿಯಲ್ಲಿ ಅವರು ತಮ್ಮ ಒಲವಿನಾಟವನ್ನು ನಡೆಸಿದ್ದರು.
ಇದು ಮಾಧವನ ರತಿಕೇಲಿಯ ಕಥೆಯಾಗಿದೆ. ಓದುಗರಿಗೆ ಇದನ್ನು
ಆಲಿಸಲು ಶ್ರೀಹರಿಭಕ್ತಿ ಹಾಗೂ ವಿಲಾಸ ಕಲೆಗಳಲ್ಲಿ ಕುತೂಹಲವಿರಬೇಕು.
ಅಂತಹವರಿಗೆ ಮಾತ್ರ ಈ ರೋಚಕಕಾವ್ಮ ರುಚಿಸಬಲ್ಲದು. ಜಯದೇವನ ಸಮಕಾಲೀನ ಕವಿಗಳು ಒಬ್ಬೊಬ್ಬರೂ ಒಂದೊಂದು ಕವಿತಾ ಸಾಮರ್ಥ್ಯದಲ್ಲಿ ಶಕ್ತರು. ಆದರೆ ಸಂದರ್ಭಕ್ಕೆ ಹೊಂದುವ ಶುದ್ಧವಾದ ನುಡಿಯನ್ನು ಜಯದೇವನೊಬ್ಬನೇ ಬಲ್ಲನು.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ 4
ಹರಿಯಿದೊ ರಮಿಪನು ಕೇಳೀ ಲೋಲರೊಳು
ಸುವಿಲಾಸದೊಳಿಹ ಮುಗ್ಧವಧೂಜನ ನಿಕರದೊಳು
ಚಂದನ ಪೂಸಿದ ನೀಲ ಶರೀರದೊಳೊಪ್ಪುವ ಸುಂದರ ಪೀತಾಂಬರಧಾರಿ ಕೇಳಿಚಲನ್ಮಣಿಕುಂಡಲಮೆಸೆದಿರೆ ಕದಪಿನೊಳಿದೊ ವನಮಾಲಿಯು ನಗೆಬೀರಿ 1
ಪೀನಪಯೋಧರಭಾರದ ಭರದೊಳು ಹರಿಯನದೊರ್ವಳು ರಾಗದಿನಪ್ಪುವಳು ಪಂಚಮರಾಗದೊಳಿಂಚರಗೈಯುತೆ ಕುಣಿಯುತೆ ಗೋಪಿಯದೊರ್ವಳು ನಲಿಯುವಳು. 2
ಕುಣಿಯುವ ಹರಿಯ ವಿಲಾಸ ವಿಲೋಲ ವಿಲೋಚನ ಖೇಲನ
ಮೂಡಿಸಿದೊಲವಿನೊಳು
ಧ್ಯಾನಿಸುತಾ ಮಧುಸೂದನ ವದನ ಸರೋಜವನೊರ್ವಳು ಮುಗ್ಧಳು ಚಿಂತಿಪಳು. 3
ಕಿವಿಯೊಳದಾವುದೊ ಕಜ್ಜವನೊರೆವುಜ್ಜುಗದೊಳು ಮತ್ತೋರ್ವಳು ಬಳಿ ಬಂದಂದು
ಸಮಯವ ಸಾಧಿಸಿ ಹೊಂಪುಳಿವೋದ ಮುರಾರಿಯ ಕೆನ್ನೆಯ ಮುದ್ದಿಸಿದಳು
ನಲಿದು. 4
ಯಮುನಾತೀರದ ಮಂಜುಲವಂಜುಲಕುಂಜವನೈದಿದ ಹರಿಯ ದುಕೂಲವನು
ಕೇಳಿಯ ಕಲೆಯ ಕುತೂಹಲದಿಂ ಪೆರತೊರ್ವಳು ಕಾಮಿನಿ ಕೈಗಳಿನೆಳೆದಿಹಳು. 5
ಕರತಲ ತಾಳಕೆ ಬಳೆ ಘಲಿಘಲಿರೆನಲಾ ದನಿಯೊಡವೆರೆದುಣ್ಮವ ವೇಣುವೊಳು ರಾಸದ ರಸದೊಳು ಸಹನೃತ್ಯದೊಳಿರಲೊರ್ವಳು ಹೊಗಳಿದರವಳನು ಮಿಕ್ಕವರು. 6
ಚುಂಬಿಪನೊರುವಳನಪ್ಪುವ ನೊರುವಳನೊಲಿದಪನೊರುವಳನಂದ ಭಿರಾಮೆಯನು
ನಗುವಿನ್ನೊಬ್ಬಳ ನೋಡುತ ನಲಿವನು ಪೆರತೊರುವಳನನುಕರಿಪನು ವಾಮೆಯನು. 7
ಶ್ರೀ ಜಯದೇವರ ನುಡಿಯಿದು ಹೇಳುವುದದ್ಭುತ ಕೇಶವ ಕೇಳಿ ರಹಸ್ಯವನು
ಬೃಂದಾವನ ಚರಲಲಿತ ಯಶಸ್ಕರ ಹರಿಕೀರ್ತನವಿದು ಲೋಗರಿಗೀಯಲಿ
ಸೌಖ್ಯವನು. 8
*ಮೂಲಭಾಗ*
ಅಷ್ಟಪದೀ 4 ಸಾಮೋದ ದಾಮೋದರ ರಾಮಕರೀರಾಗ, ಯತಿತಾಲ
ಚಂದನಚರ್ಚಿತ ನೀಲಕಲೇವರಪೀತವಸನವನಮಾಲೀ
ಕೇಲಿಚಲನ್ಮಣಿಕುಂಡಲಮಂಡಿತಗಂಡಯುಗಃ ಸ್ಮಿತಶಾಲೀ
ಹರಿರಿಹ ಮುಗ್ಧವಧೂನಿಕರೇ ವಿಲಾಸಿನಿ ವಿಲಸತಿ ಕೇಲಿಪರೇ ||ಧ್ರುವಮ್|| ||೧||
ಪೀನಪಯೋಧರಭಾರಭರೇಣ ಹರಿಂ ಪರಿರಭ್ಯ ಸರಾಗಂ
ಗೋಪವಧೂರನುಗಾಯತಿ ಕಾಚಿದುದಂಚಿತ ಪಂಚಮರಾಗಂ ||೨||
ಕಾಪಿ ವಿಲಾಸವಿಲೋಲವಿಲೋಚನಖೇಲನಜನಿತಮನೋಜಂ
ಧ್ಯಾಯತಿ ಮುಗ್ಧವಧೂರಧಿಕಂ ಮಧುಸೂದನವದನಸರೋಜಂ ||೩||
ಕಾಪಿ ಕವೋಲತಲೇ ಮಿಲಿತಾ ಲಪಿತುಂ ಕಿಮಪಿ ಶ್ರುತಿಮೂಲೇ
ಕಾಪಿ ಚುಚುಂಬ ನಿತಂಬವತೀ ದಯಿತಂ ಪುಲಕ್ಕೆರನುಕೂಲೇ ||೪||
ಕೇಲಿಕಲಾಕುತುಕೇನ ಚ ಕಾಚಿದಮುಂ ಯಮುನಾವನಕೂಲೇ ಮಂಜುಲವಂಜುಲಕುಂಜಗತಂ ವಿಚಕರ್ಷ ಕರೇಣ ದುಕೂಲೇ ||೫||
ಕರತಲತಾಲತರಲವಲಯಾವಲಿಕಲಿತಕಲಸ್ವನವಂಶೇ
ರಾಸರಸೇ ಸಹ ನೃತ್ಯಪರಾ ಹರಿಣೌ ಯುವತಿಃ ಪ್ರಶಶಂಸೇ ||೬||
ಶ್ಲಿಷ್ಯತಿ ಕಾಮಪಿ ಚುಂಬತಿ ಕಾಮಪಿ ಕಾಮಪಿರಮಯತಿ ರಾಮಾಂ
ಪಶ್ಯತಿ ಸಸ್ಮಿತಚಾರುತರಾಮಪರಾಮನುಗಚ್ಛತಿ ವಾಮಾಂ ||೭||
ಶ್ರೀಜಯದೇವಭಣಿತಮಿದಮದ್ಭುತ ಕೇಶವಕೇಲಿರಹಸ್ಕಂ
ವೃಂದಾವನವಿಪಿನೇ ಲಲಿತಂ ವಿತನೋತು ಶುಭಾನಿ ಯಶಸ್ಯಂ ||೮||
ವಿಶ್ವೇಷಾಮನುರಂಜನೇನ ಜನಯನ್ನಾನಂದಮಿಂದೀವರ_ ಶ್ರೇಣಿಶ್ಯಾಮಲಕೋಮಲೈರುಪನಯನ್ನಂಗೈರನಂಗೋತ್ಸವಂ
ಸ್ವಚ್ಛಂದಂ ವ್ರಜಸುಂದರೀಭಿರಭಿತಃ ಪ್ರತ್ಯಂಗಮಾಲಿಂಗಿತಃ
ಶೃಂಗಾರಃ ಸಖಿ ಮೂರ್ತಿಮಾನಿವ ಮಧೌ ಮುಗ್ಧೋ ಹರಿಃ ಕ್ರೀಡತಿ ||೯||
ನಿತ್ಯೋತ್ಸಂಗವಸದ್ಭುಜಂ ಗಕವಲಕ್ಲೇಶಾದಿವೇಶಾಚಲಂ ಪ್ರಾಲೇಯಪ್ಲವನೇಚ್ಛಯಾನುಸರತಿ ಶ್ರೀಖಂಡಶೈಲಾನಿಲಃ
ಕಿಂಚ ಸ್ನಿಗ್ಧರಸಾಲಮೌಲಿಮುಕುಲಾನ್ಯಾಲೋಕ್ಯ ಹರ್ಷೋದಯಾ_
ದುನ್ಮೀಲಂತಿ ಕುಹೂಃಕುಹೂರಿತಿ ಕಲೋತ್ತಾಲಾಃ ಪಿಕಾನಾಂ ಗಿರಃ ||೧೦||
ರಾಸೋಲ್ಲಾಸಭರೇಣ ವಿಭ್ರಮವತಾಮಾಭೀರವಾಮಭ್ರುವಾ_ ಮಭ್ಯರ್ಣೇ ಪರಿರಭ್ಯ ನಿರ್ಭರಮುರಃ ಪ್ರೇಮಾಂಧಯಾ ರಾಧಯಾ
ಸಾಧು ತ್ವದ್ವದನಂ ಸುಧಾಮಯಮಿತಿ ವ್ಯಾಹೃತ್ಯ ಗೀತಸ್ತುತಿ_ ವ್ಯಾಜಾದುದ್ಭಟಚುಂಬಿತಸ್ಮಿತಮನೋಹಾರೀ ಹರಿಃ ಪಾತು ವಃ || ೧೧||
||ಇತಿ ಶ್ರೀ ಗೀತಗೋವಿಂದ ಮಹಾಕಾವ್ಯ ಸಾಮೋದ ದಾಮೋದರೋ ನಾಮ ಪ್ರಥಮ ಸರ್ಗಃ ||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು