ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ6


 

ರಾಸೇ ಹರಿಮಿವ ವಿಹಿತವಿಲಾಸಂ

ಜಯದೇವಕವಿಯ ಗೀತಗೋವಿಂದ


ಅಷ್ಟಪದಿ 5


* ಸಂಕ್ಷಿಪ್ತ ಭಾವ*


ಈ ಭಾಗದಲ್ಲಿ ಹರಿಯು ಇತರ ಗೋಪಿಕೆಯರೊಡನೆ ಸರಸದಲ್ಲಿ ತೊಡಗಿರುವುದನ್ನು ಕಂಡು ಮತ್ಸರ ಪಡುತ್ತ ರಾಧೆಯು ತನ್ನ ಸಖಿಯೊಡನೆ ನುಡಿಯುವ ಮಾತುಗಳಿವೆ.


ರಾಸಲೀಲೆಯಲ್ಲಿ ಮಾಧವನು ತೋರುವ ವಿಲಾಸವನ್ನು, ಸೊಗಸನ್ನು ನೆನಪು ಮಾಡಿಕೊಳ್ಳುತ್ತಿದೆ ನನ್ನ ಮನಸ್ಸು. ತುಟಿಗಳು ಅದುರುವಂತೆ ಇನಿದನಿಯಲ್ಲಿ ನುಡಿಯುವ ಮೋಹನನವನು. ಕೆನ್ನೆಯ ಬಳಿ ಮುಖವನ್ನು ತಂದು ವಸಂತನನ್ನು, ಬಣ್ಣದ ಸುಂದರವಾದ ನವಿಲಿನ ಗರಿಯನ್ನು ಸಿಕ್ಕಿಸಿದ ಕೇಶವನನ್ನು ನನ್ನಮನ ನೆನೆಯುತ್ತದೆ. ಕಾಮನಬಿಲ್ಲಿನ ಬೆಡಗಿನಲ್ಲಿ ನಲಿಯುವ ಸುವೇಶನನ್ನು, ಸುಂದರ ಗೋಪಿಕೆಯರೊಂದಿಗೆ ಚುಂಬನದ ಸವಿಯಲ್ಲಿ ನಲಿಯುವ ಶೋಭಿತನನ್ನು ನನ್ನ ಮನ ನೆನಪಿಸಿಕೊಳ್ಳುತ್ತಿದೆ.


ಬಲ್ಲವ ಸತಿಯರನ್ನು ಬಿಗಿದಪ್ಪುವ, ಅವರ ಸ್ತನಗಳನ್ನು ನಿರ್ದಯದಿಂದ ಮರ್ದಿಸುವ, ಮಣಿಮಯ ಕುಂಡಲದಿಂದ ಶೋಭಿಸುವ, ಮುನಿಜನರ ಪರಿವಾರದಿಂದ ಒಪ್ಪುವ ಮುರಾರಿಯನ್ನು ನನ್ನ ಮನಸ್ಸು ನೆನಪಿಸಿಕೊಳ್ಳುತ್ತಿದೆ.


ಒಲವೆರೆಯುವ ನೋಟದಿಂದ ಮುದಗೊಳಿಸುವ, ಕಲುಷಗಳನ್ನು ತೊಡೆಯುವ ಉದಾರನಾದ, ಮೋಹಕ ರೂಪವನ್ನು ಬಣ್ಣಿಸುವ ಈ ಜಯದೇವನ ಕೃತಿಯಿದು. ಹರಿಯ ಪದಕಮಲಗಳನ್ನು ಸ್ಮರಿಸುವ ಪುಣ್ಯಾತ್ಮರಿಗೆಂದು ಅಣಿಯಾಗಿರುವುದು.


* ಪರಮೇಶ್ವರಭಟ್ಟರ ಕನ್ನಡ ರೂಪ*

ಅಷ್ಟಪದಿ ೫


ರಾಸದೊಳಾ ಹರಿ ಮೆರೆವ ವಿಲಾಸವನು

ನೆನೆವುದು ಮನವಿದು ಆ ಪರಿಹಾಸವನು 1


ಅದುರುವ ತುಟಿಯಿಂದೊಸರುವುದೆನೆ ಸೊದೆ ನುಣ್ದನಿ ಜಿನುಗುವ ಮೋಹನ ವಂಶನನು.

ಸುಳಿಯಿಸಿ ಕಂಗಳ ಕೊನೆಯನು ತಾನಹ ತಲೆದೂಗುವನೆನೆ ಕದಪಿನೊಳಲೆವ ವಸಂತನನು. 2


ಬಣ್ಣದ ಸುಂದರ ಕಣ್ಣುಗಳೊಪ್ಪುವ ನವಿಲಿನ ಗರಿಯನು ಮುಡಿದಿಹ ಕೇಶನನು

ಕಾಮನ ಬಿಲ್ಲಿನ ಬೆಡಗಿನೊಳೊಪ್ಪುವ ಮುಗಿಲನು ಹೋಲುವ ಚಾರು ಸುವೇಶನನು. 3


ಸುಂದರ ಗೋಪಕದಂಬ ನಿತಂಬಿನಿಯರ ಮುಖ ಚುಂಬನಲಂಬಿತ ಲೋಭನನು ಬಂದುಗೆಹೂವೆನಲಂದದೊಳೊಪ್ಪುವ ತುಟಿಯೊಳು ಕಿರುನಗೆ ಮಿನುಗುವ ಶೋಭನನು. 4


ಪೊಂಪುಳಿವೋಗಿಹ ತೋಳಿನ ಬಳಸಿನೊಳಪ್ಪಿದ ಬಲ್ಲವ ಯುವತಿ ಸಹಸ್ರನನು 

ಉರಕರಚರಣದೊಳೊಪ್ಪುವ ಮಣಿಗಣ ಭೂಷಣ ಕಿರಣದೊಳಳಿದ ತಮಿಸ್ರನನು. 5


ಜಲಧರ ಪಟಲದೊಳೊಪ್ಪಿರುವಿಂದುವನೇಳಿಪ ಚಂದನ ತಿಲಕ ಲಲಾಟನನು

ಬಲ್ಲವ ಸತಿಯರ ಪೀನ ಕುಚಂಗಳ ಮರ್ದಿಪ ನಿರ್ದಯ ಹೃದಯ ಕವಾಟನನು. 6


ಮಣಿಮಯ ಮಕರ ಮನೋಹರ ಕುಂಡಲ ಚಾರು ಕಪೋಲದೊಳೆಸೆವ ಉದಾರನನು

ಬಳಿವಿಡಿದೈತಹ ಮುನಿಜನ ಮನುಜ ಸುರಾಸುರ ವರ ಪರಿವಾರನನು. 7


ವಿಶದ ಕದಂಬದ ತಲದೊಳು ನೆಲಸುತೆ ಕಲಿಕಲುಷವನುರೆ ತೊಡೆವಮುರಾರಿಯನು

ಒಲವರದೊಡವೆರೆದೊಳ್ಬಗೆಯೊಳು ಮಿಗೆ ನೋಟದೊಳೆನ್ನನು ಮುದಗೊಳಿಪಾತನನು. 8


ಸುಂದರ ಮೋಹನ ಮಧುರಿಪು ರೂಪನ ವರ್ಣಿಸುವೀ ಜಯದೇವನ ಗಾನವಿದು 

ಶ್ರೀ ಹರಿ ಚರಣಸರೋಜವನನುದಿನ ನೆನೆಯುವ ಪುಣ್ಯಾತ್ಮರಿಗಣಿಯಾಗಿಹುದು. 9


*ಮೂಲಭಾಗ*

ದ್ವಿತೀಯ ಸರ್ಗಃ - ಅಕ್ಲೇಶ ಕೇಶವಮ್


ವಿಹರತಿ ವನೇ ರಾಧಾ ಸಾಧಾರಣಪ್ರಣಯೇ ಹರೌ ಎಗಲಿತನಿಜೋತ್ಕರ್ಷಾದೀರ್ಷ್ಯಾವಶೇನ ಗತಾsನ್ಯತಃ 

ಕ್ವಚಿದಪಿ ಲತಾಕುಂಜೇ ಗುಂಜನ್ಮಧುವ್ರತಮಂಡಲೀ_ ಮುಖರಶಿಖರೇ ಲೀನಾ ದೀನಾಪ್ಪುವಾಚ ರಹಃ ಸಖೀಂ ||


ಗೀತಂ-ಅಷ್ಟಪದೀ-5-

ಮಧುರಿಪು ರತ್ನ ಕಂಠಿಕಮ್

ಗುರ್ಜರೀ ರಾಗ, ರೂಪಕತಾಲ


ಸಂಚರದಧರಸುಧಾಮಧುರಧ್ವನಿಮುಖರಿತಮೋಹನವಂಶಂ

ಚಲಿತದೃಗಂಚಲಚಂಚಲಮೌಲಿಕಪೋಲವಿಲೋಲವತಂಸಂ

ರಾಸೇ ಹರಿಮಿಹ ವಿಹಿತವಿಲಾಸಂ ಸ್ಮರತಿ ಮನೋ ಮಮ ಕೃತಪರಿಹಾಸಂ

||ಧ್ರುವಮ್|| ||೧||


ಚಂದ್ರಕಚಾರುಮಯೂರಶಿಖಂಡಕಮಂಡಲವಲಯಿತಕೇಶಂ | ಪ್ರಚುರಪುರಂದರಧನುರನುರಂಜಿತಮೇದುರಮುದಿರಸುವೇಶಂ|||


ಗೋಪಕದಂಬನಿತಂಬವತೀಮುಖಚುಂಬನಲಂಭಿತಲೋಭಂ

ಬಂಧುಜೀವಮಧುರಾಧರಪಲ್ಲವಮುಲ್ಲಸಿತಸ್ಮಿತಶೋಭಂ ||೩||


ವಿಪುಲಪುಲಕಭುಜಪಲ್ಲವವಲಯಿತಬಲ್ಲವಯುವತಿಸಹಸ್ರಂ

ಕರಚರಣೋರಸಿ ಮಣಿಗಣಭೂಷಣಕಿರಣವಿಭಿನ್ನತಮಿಸ್ರಂ ||೪||


ಜಲದಪಟಲಚಲದಿಂದುವಿನಿಂದಕಚಂದನತಿಲಕಲಲಾಟಂ ಪೀನಪಯೋಧರಪರಿಸರಮರ್ದನನಿರ್ದಯ ಹೃದಯಕಪಾಟಂ ||೫||


ಮಣಿಮಯಮಕರಮನೋಹರಕುಂಡಲಮಂಡಿತಗಂಡಮುದಾರಂ ಪೀತವಸನಮನುಗತಮುನಿಮನುಜಸುರಾಸುರವರಪರಿವಾರಂ ||೬||


ವಿಶದಕದಂಬತಲೇ ಮಿಲಿತಂ ಕಲಿಕಲುಷಭಯಂ ಶಮಯಂತಂ ಮಾಮಪಿ ಕಿಮಪಿ ತರಲತರಂಗದನಂಗದೃಶಾ ಮನಸಾ ರಮಯತಂ ||೭||


ಶ್ರೀ ಜಯದೇವಭಣಿತಮಿದಮತಿಸುಂದರಮೋಹನಮಧುರಿಪುರೂಪಂ

ಹರಿಚರಣಸ್ಮರಣಂ ಪ್ರತಿ ಸಂಪ್ರತಿ ಪುಣ್ಯವತಾಮನುರೂಪಂ||೮||


ಗಣಯತಿ ಗುಣಗ್ರಾಮಂ ಭಾಮಂ ಭ್ರಮಾದಪಿ ನೇಹತೇ 

ವಹತಿ  ಚ ಪರೀತೋಷಂ ದೋಷಂ ವಿಮುಂಚತಿ ದೂರತಃ ||೯||


ಯುವತಿಷು ಚಲತ್ಮಷ್ಟೇ ಕೃಷ್ಣೇ ವಿಹಾರಿಣಿ ಮಾಂ ವಿನಾ

ಪುನರಪಿ ಮನೋ ವಾಮಂ ಕಾಮಂ ಕರೋತಿ ಕರೋಮಿ ಕಿಂ||೧೦||


ಕೃತಜ್ಣತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ