ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓಂ ಗಣೇಶ್ ಉಪ್ಪುಂದ


 ಓಂ ಗಣೇಶ್ ಉಪ್ಪುಂದ


ಓಂ ಗಣೇಶ್ ಉಪ್ಪುಂದ ವಿಶ್ವಪ್ರಸಿದ್ಧಿಯ ಪ್ರಖ್ಯಾತ ಜಾದೂ ಕಲಾವಿದರು. ಅವರು ಸಿನಿಮಾ ಮತ್ತು ಕಿರುತೆರೆಯಲ್ಲೂ  ಗಮನ ಸೆಳೆದಿದ್ದವರು.  ಅವರೊಬ್ಬ ಗಾಯಕ ಮತ್ತು ವಾದ್ಯಗಾರ. ಬರಹಗಳಲ್ಲೂ ಸಾಧನೆ ಮಾಡಿರುವ ಅವರು ಹಲವು ಕೃತಿ ಪ್ರಕಟಿಸಿರುವುದಲ್ಲದೆ ಮುನ್ನೂರು ವಾರ ಅಂಕಣ ಬರೆದಿದ್ದಾರೆ. 

ಜನವರಿ 20,  ಓಂ ಗಣೇಶ್ ಉಪ್ಪುಂದ ಅವರ ಜನ್ಮದಿನ.  ಹುಟ್ಟಿದ್ದು ಬೆಳೆದದ್ದು ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ. ತಾಯಿ ಮನೋರಮಾ. ತಂದೆ ನಾರಾಯಣ ಕಾಮತ್‌.  ಓಂ ಗಣೇಶ್ ಅವರು ತಂದೆಯವರಿಗಿದ್ದ  ನಾಟಕ ಮತ್ತು
ಸಂಗೀತದಲ್ಲಿದ್ದ ಅಪಾರ ಆಸಕ್ತಿಯಿಂದ ಚಿಕ್ಕಂದಿನಲ್ಲೇ ಪ್ರಭಾವಿತರಾದರು. ಬಿ.ಕಾಮ್ ಪದವಿ ಪಡೆದ ಓಂ ಗಣೇಶ್ ಮುಂದೆ ಸ್ವಪ್ರಯತ್ನದಿಂದ ಕಲಾಲೋಕದಲ್ಲಿ ದೊಡ್ಡ ಹೆಸರಾದರು. 

ಓಂ ಗಣೇಶ್ ಅವರು ನಾಲ್ಕನೇ ತರಗತಿಯಲ್ಲಿರುವಾಗ ಮನೆಯ ಮುಂದೆ ದೊಂಬರಾಟ  ನಡೆಸುವವರು ಢಮ ಢಮ ಶಬ್ದದೊಂದಿಗೆ ಎರಡು ಹಗ್ಗ ಮೂರು ಗುಂಡು
ಕಲ್ಲು ಇಟ್ಟುಕೊಂಡು ಕಸರತ್ತು ಮಾಡುತ್ತಿದ್ದದ್ದನ್ನು ನೋಡಿ ಎಷ್ಟು ಪ್ರಭಾವಿತರಾದರೆಂದರೆ, ಇದಾಗಿ ಆರು ವರ್ಷಗಳ ಬಳಿಕ ಇವರೊಳಗೊಬ್ಬ ಜಾದೂಗಾರ ನೆಲೆ ನಿಲ್ಲಲ್ಲು ಹವಣಿಸತೊಡಗಿದ್ದ. ಜೊತೆಯಲ್ಲಿಯೇ ತಬಲಾ ಕಲಿಕೆ, ಹಾಡುಗಾರಿಕೆಯೂ ನಡೆದಿತ್ತು.  ನಟನೆಯ ಸೆಳೆತವಿತ್ತು. ಐದನೇ ವಯಸ್ಸಿಗೆ ಶಾಲೆಯಲ್ಲಿ 'ಧ್ರುವ ಚರಿತ್ರ'ದಲ್ಲಿ  ಅಭಿನಯಿಸಿದ್ದರು. ಜಾದೂ ಕ್ಷೇತ್ರ ಆಕರ್ಷಣೀಯವಾಗಿ ಕಾಣಿಸಿತು. ಹತ್ತನೇ ತರಗತಿಯ ಸುಮಾರಿಗೆ ಈ ಜಾದೂವಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸಿ, ಯಶಸ್ವಿಯಾದರು.

ಓಂ ಗಣೇಶ್ ಅವರಿಗೆ ಖ್ಯಾತ ಜಾದೂಗಾರ ಪಿ. ಸಿ. ಸರ್ಕಾರ್ ಅವರ ಪ್ರದರ್ಶನ ನೋಡಿದ
ಮೇಲಂತೂ ಏನೇ ಆಗಲಿ ಜಾದೂಗಾರನಾಗಿ ಸೈ ಎನಿಸಿಕೊಳ್ಳಬೇಕೆನಿಸಿತು.  ಗಾಯನ ಒಲಿದಿದ್ದರಿಂದ ಆರ್ಕೆಸ್ಟ್ರಾದ ವೇದಿಕೆಯಲ್ಲೂ ಜಾದೂ ಪ್ರದರ್ಶನ  ನೀಡಿದರೆ ಹೇಗೆ ಎಂಬ ಉಪಾಯ ಹೊಳೆಯಿತು. ಹಾಗಾಗಿ ಹಿರಿಯ ಜಾದೂಗಾರ ಪ್ರೊ. ಶಂಕರ್ ಅವರ ಸಹಕಾರದೊಂದಿಗೆ ದೂರಶಿಕ್ಷಣದಲ್ಲಿ
ಜಾದೂವಿಗೆ ಸಂಬಂಧಪಟ್ಟ ಕೋರ್ಸುಗಳನ್ನು ಪೂರೈಸಿದರು. ಗಾಯನದೊಂದಿಗೆ ಅವರೊಬ್ಬ ಜಾದೂಗಾರರಾದರು. ಜೊತೆಗಿದ್ದ ಸಂಗೀತ, ಮತ್ತು ಸಾಹಿತ್ಯದ ಜ್ಞಾನ ಅವರ ಬೆಳವಣಿಗೆಗೆ ಸಹಾಯಕವಾಗತೊಡಗಿತು.

ಓಂ ಗಣೇಶ್ ಅವರು ಅನಾಮಿಕ, ಮನ್ಮಥರಾಜ, ಸ್ವಾತಿ, ಅನಂತನ ಅವಾಂತರ, ಸೇರಿದಂತೆ ಕನ್ನಡದಲ್ಲಿ ಹದಿನೈದು ಚಲನಚಿತ್ರಗಳಲ್ಲಿ ಮತ್ತು ಕೊಂಕಣಿಯ 'ಉಜುದಾಡು' ಚಿತ್ರದಲ್ಲಿ ನಟಿಸಿದರು. 1991ರಲ್ಲಿ ನೆರಳಾಟದ ಕಲೆಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಿದರು. ಅವರು 'ಸಬೀನಾ' ಎಂಬ ದೂರದರ್ಶನದ ಆಕರ್ಶಕ ಧಾರಾವಾಹಿಯಲ್ಲೂ ಮೂಡಿದ್ದರು.

ಓಂ ಗಣೇಶ್ ಉಪ್ಪುಂದ ಅವರು 45 ದೇಶಗಳಲ್ಲಿ ತಮ್ಮ ಜಾದೂ ಪ್ರದರ್ಶನದಿಂದ ಜನರನ್ನು ಸಮ್ಮೋಹನಗೊಳಿಸಿದ್ದಾರೆ. ಅವರು ನೀಡಿರುವ ರಂಗ ಪ್ರದರ್ಶನಗಳ ಸಂಖ್ಯೆ 3000 ಮೀರಿದ್ದು.   ಅವರು 'ರಂಗ ತರಂಗ' ಸಾಂಸ್ಕೃತಿಕ ಸಂಸ್ಥೆಯೊಂದಿಗೆ  ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಊರಿಂದೂರಿಗೆ ಹೋಗಿ ಮಕ್ಕಳಿಗೆ ಜಾದೂ ಕಲೆ ಕಲಿಸಿದ್ದಾರೆ. ಬುದ್ಧಿಮಾಂದ್ಯ
ಮಕ್ಕಳಲ್ಲಿ ಅಡಗಿರುವ ಜಾದೂಗಾರನನ್ನು ಹೊರತೆಗೆಯುವ ಪ್ರಯತ್ನದಲ್ಲೂ ಶ್ರಮ ನೀಡಿದ್ದಾರೆ.

ಓಂ ಗಣೇಶ್ ಉಪ್ಪುಂದ ಅವರು ಉತ್ತಮ ಬರಹಗಾರರಾಗಿಯೂ ಹೊರಹೊಮ್ಮಿದ್ದಾರೆ. ಆರು ಪುಸ್ತಕ ಪ್ರಕಟಿಸಿದ್ದಾರೆ. 300 ವಾರಗಳ ಕಾಲ ಅಂಕಣ ಬರೆದಿದ್ದಾರೆ.  24 ಓಂಕಾರ ನುಡಿಧ್ವನಿ ಮಾಡಿದ್ದಾರೆ. ಅವರ ಉಪನ್ಯಾಸಗಳು ಮತ್ತು ಬರಹಗಳು ಪ್ರೇರಣಾತ್ಮಕವಾಗಿ ಹೆಸರು ಪಡೆದಿವೆ.

ಮಹತ್ವದ ಸಾಧಕರಾದ ಓಂ ಗಣೇಶ್ ಉಪ್ಪುಂದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Omganesh Kamath, Om Ganesh Uppunda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ