ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ7


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 6

*ಸಂಕ್ಷಿಪ್ತ ರೂಪ*

ಅತ್ಯಂತ ಸುಂದರವಾದ ರಚನೆಗಳಲ್ಲಿ ಒಂದಾಗಿರುವ ಈ ಅಷ್ಟಪದಿಯಲ್ಲಿ ರಾಧೆಯು ತನ್ನ ಸಖಿಗೆ ಈ ಹಿಂದೆ ಮಾಧವನು ತನ್ನೊಂದಿಗೆ ರಮಿಸಿದ ಕ್ಷಣಗಳನ್ನು ಕುರಿತು ಹೇಳುತ್ತಾಳೆ. ಮತ್ತೆ ಆ ರೀತಿಯಲ್ಲಿ ರಮಿಸುವಂತೆ ಆಗಲಿ ಎಂದು ಬಯಸುತ್ತಾಳೆ.

ಏಕಾಂತವಾದ ಜಾಗದಲ್ಲಿ ಲತಾಕುಂಜದಲ್ಲಿ ನಾನಿದ್ದಾಗ ಅಲ್ಲಿಯೇ ಬಚ್ಚಿಟ್ಟುಕೊಂಡಿದ್ದ ಮಾಧವ ರತಿಸುಖದ ರಭಸದಲ್ಲಿ ನನ್ನನ್ನು ಬರಸೆಳೆದನು. ಮೊದಲ ಸಮಾಗಮದ ಲಜ್ಜೆಯಲ್ಲಿ ನಾನಿದ್ದರೆ ನೂರಾರು ಅನುನಯದ ನುಡಿಗಳನ್ನು ಹೇಳಿ ರಮಿಸಿದನು. ನಗುನಗುತ್ತಲೇ ನನ್ನ ಸೆರಗನ್ನು ಹಿಡಿದು ಎಳೆದವನು. ಚಿಗುರಿನ ಹಾಸಿಗೆಯಲ್ಲಿ  ನಾನಿದ್ದರೆ ನನ್ನೆದೆಗೊರಗಿ ಮುದ್ದಿಸಿ ಚೆಂದುಟಿಗಳ ಸವಿಯನ್ನು ಸೆಳೆದವನು.

ಸುಖದ ಸೊಗಸಿನಲ್ಲಿ ನಾನು ಕಣ್ಣುಗಳನ್ನು ಮುಚ್ಚಿದ್ದರೆ ಕಪೋಲಗಳನ್ನು ಚುಂಬಿಸಿ ಪುಳಕ ತಂದವನು. ಅಡಿಯಿಂದ ಮುಡಿವರೆಗೆ ಈ ದೇಹ ಬೆವರಿರಲು ಮದನನ ಮದದಿಂದ ಮೆರೆದವನು.

ಕೋಗಿಲೆಯ ಧ್ವನಿಯಲ್ಲಿ ಕೂಗುತ್ತ ಮನ್ಮಥನ ಲೀಲೆಯಲ್ಲಿ ಮೆರೆದವನು. ಸಡಿಲಿದ ಮುಡಿಯಿಂದ ಹೂಗಳು ಉದುರಲು ನನ್ನ ಸ್ತನಗಳ ಮೇಲೆ ತನ್ನ ಉಗುರುಗಳಿಂದ ಚಿತ್ರ ಬರೆಯುತ್ತ ನಲಿದವನು.

ನೂಪುರಗಳು ಘಲ್ ಘಲ್ ಎಂದಾಗ ಮುದ್ದಿಸಿದವನು, ಮಣಿಮೇಖಲೆಯು ಕಡಿದು ಬಿದ್ದಾಗ ಕೂದಲುಗಳನ್ನು ಹಿಡಿದು ಮುತ್ತನಿಟ್ಟವನು. ರತಿಸುಖದ ಉತ್ಕಟತೆಯಲ್ಲಿ ನಾನಿದ್ದರೆ ಕಣ್ಗಳನ್ನು ಮುಚ್ಚಿ ಸುಖವನ್ನು ಮೊಗೆಮೊಗೆದು ಸವಿದವನು.

ರಾಧೆಯ ಈ ಅತ್ಯಂತ ಉತ್ಕಟವಾದ ನುಡಿಗಳನ್ನು, ಮಾಧವನ ಅತಿಶಯವಾದ ಲೀಲೆಗಳನ್ನು ಬಣ್ಣಿಸುವ ಜಯದೇವನ ಈ ನುಡಿಗಳು ಸುಖ ಸಂತೋಷವನ್ನು ನೀಡಲಿ.
( ಇಲ್ಲಿಗೆ ಅಕ್ಲೇಶ ಕೇಶವ ಎಂಬ ಎರಡನೆಯ ಸರ್ಗ ಮುಗಿಯಿತು. ಇದರಲ್ಲಿ ಒಂದೇ ಅಷ್ಟಪದಿ ಇರುವುದು )

*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ 6

ಮದನ ಮನೋರಥಮೂಡಿರುವೆನ್ನೊಳು
ರಮಿಸುವೊಲೆಸಗೆಲೆ ಸಖಿ ನೀ ಹರಿಯನನಂಗ ವಿಕಾರನನು. 1

ನಿಶಿಯೊಳು ನೀರವ ಕುಂಜನಿಕೇತನಕೈದಿರೆ ಮರೆಯೊಳು ಅವಿತಿರ್ದಾತನನು 
ಬೆದರುತೆ ಬೆಚ್ಚುತೆ ದೆಸೆದೆಸೆಗೀಕ್ಷಿಸೆ ರತಿರಭಸದೊಳಹ ನಗುತೈತಂದನನು. 2

ಪ್ರಥಮ ಸಮಾಗಮದೊಳು ಮಿಗೆ ನಾಚುತ ನಾನಿರೆ ನೂರನುನಯಗಳ ನುಡಿದನನು ನಗುನಗುತಿನಿದನಿಗೂಡಿಸಿದೆನ್ನನು ಸಾರುತೆ ಜಘನ ದುಕೂಲವನೆಳೆದನನು 3

ಕಿಸಲಯ ಶಯನದೊಳೊರಗಿರುವೆನ್ನುರದೆಡೆಯೊಳು ಸೊಗದಿಂ ಚಿರಮಿರ್ದಾತನನು
ಬರಸೆಳೆದಪ್ಪುತೆ ಮುದ್ದಿಸಿ ನಲಿಯುತೆ ಚೆಂದುಟಿ ಸೊದೆಯನು ಸವಿದ
ಮುರಾರಿಯನು 4

ಅಲಸಿಕೆಯೊಳು ನಾ ಕಂಗಳ ಮುಚ್ಚಿರೆ ಪುಳಕಾವಳಿಯೊಳು ಮೆರೆದ ಕಪೋಲನನು
ಅಡಿಯಿಂ ಮುಡಿವರಮೀ ಮೈ ಬೆಮರಿರೆ ಮದನನ ಮದದೊಳು ಮೆರೆದತಿಲೋಲನನು 5

ಕೋಗಿಲೆ ದನಿವೊಲು ಕೂಜನವೆಸಗಿರೆ ಜಿತಮನ್ಮಥ ವರ ತಂತ್ರ ವಿಚಾರನನು 
ಸಡಿಲಿದ ಮುಡಿಯಿಂದುದುರಿರೆ ಹೂಗಳು ನನ್ನ ಉರೋಜದೊಳುಗುರೊಳು ಬರೆವನನು 6

ಅಡಿಯೊಳು ನೇವುರ ಘಲಿಘಲಿರೆನುತಿರೆ ಸುಸಿಲಿನ ಸೊಗವನು ಸಲೆ ಸವಿದಿದ್ದನನು ಮೇಖಲೆ ಸಲೆ ಸಂಕಲೆ ಕಡಿದಿರೆಯಿರೆ ಕಚವಿಡಿದೆನ್ನನು ಮುದ್ದಿಸಿದಾತನನು 7

ರತಿಸುಖ ಸಮಯ ರಸಾಲಸದೊಳು ನಾನಿರೆಯಿರೆ ಮುಚ್ಚಿದ ನಯನ ಸರೋಜನನು
ನಿಸ್ಸಹಳೆನೆ ನಾ ಬಳಲುತಲೊರಗಿರೆ ಮತ್ತೆ ಮನೋಜನ ಸುಖಮೊಗೆದಾತನನು 8

ಶ್ರೀ ಜಯದೇವನ ನುಡಿಯಿದು ಬಣ್ಣಿಪುದತಿಶಯ ಮಧುರಿಪು ನಿಧುವನ
ಶೀಲವನು
ಅತ್ಯುತ್ಕಂಠಿತ ರಾಧಿಕೆಯಾಡಿದ ನುಡಿಯಿದು ನೀಡಲಿ ಸುಖ ಸಂತೋಷವನು.

*ಮೂಲಭಾಗ*
ಗೀತಂ ಅಷ್ಟಪದೀ – 6 ಅಕ್ಷೇಶ ಕೇಶವ ಮಂಜರೀ ಮಾಲವರಾಗ, ಏಕತಾಲೀ

ನಿಭೃತನಿಕುಂಜಗೃಹಂ ಗತಯಾ ನಿಶಿ ರಹಸಿ ನಿಲೀಯ ವಸಂತಂ
ಚಕಿತವಿಲೋಕಿತಸಕಲದಿಶಾ ರತಿರಭಸಭರೇಣಹಸಂತಂ
ಸಖಿ ಹೇ ಕೇಶಿಮಥನಮದಾರಂ ರಮಯ ಮಯಾ ಸಹ
ಮದನಮನೋರಥಭಾವಿತಯಾ ಸವಿಕಾರಂ ||ಧ್ರುವಮ್|| ||೧||

ಪ್ರಥಮಸಮಾಗಮಲಜ್ಜಿತಯಾ ಪಟುಚಾಟು ಶತೈರನುಕೂಲಂ ಮೃದುಮಧುರಸ್ಮಿತಭಾಷಿತಯಾ ಶಿಥಿಲೀಕೃತಜಘನದುಕೂಲಂ ||೨||

ಕಿಸಲಯಶಯನನಿವೇಶಿತಯಾ ಚಿರಮುರಸಿ ಮಮೈವ ಶಯಾನಂ ಕೃತಪರಿರಂಭಣಚುಂಬನಯಾ ಪರಿರಭ್ಯಕೃತಾಧರಪಾನಂ ||೩||

ಅಲಸನಿಮೀಲಿತಲೋಚನಯಾ ಪುಲಕಾವಲಿಲಲಿತಕಪೋಲಂ ಶ್ರಮಜಲಸಕಲಕಲೇವರಯಾ ವರಮದನದಾದತಿಲೋಲಂ ||೪||

ಕೋಕಿಲಕಲರವಕೂಜಿತಯಾ ಜಿತಮನಸಿಜತಂತ್ರವಿಚಾರಂ ಶ್ಲಥಕುಸುಮಾಕುಲಕುಂತಲಯಾ ನಖಲಿಖಿತಘನಸ್ತನಭಾರಂ||೫||

ಚರಣರಣಿತಮಣಿನೂಪುರಯಾ ಪರಿಪೂರಿತಸುರತವಿತಾನಂ ಮುಖವಿಶೃಂಖಲಮೇಖಲಯಾ ಸಕಚಗ್ರಹಚುಂಬನದಾನಂ ||೬||

ರತಿಸುಖಸಮಯರಸಾಲಸಯಾ ದರಮುಕುಲಿತ ನಯನಸರೋಜಂ ನಿಸ್ಸಹನಿಪತಿತ ತನುಲತಯಾ ಮಧುಸೂದನಮುದಿತಮನೋಜಂ ||೭||

ಶ್ರೀಜಯದೇವಭಣಿತಮಿದಮತಿಶಯಮಧುರಿಪುನಿಧುವನಶೀಲಂ ಸುಖಮುತ್ಕಂಠಿತಗೋಪವಧೂಕಥಿತಂ ವಿತನೋತು ಸಲೀಲಂ ||೮||

ಹಸ್ತವಿಲಾಸವಂಶಮನೃಜುಭೂವಲ್ಲಿ ಮದ್ದಲ್ಲವೀ ಬೃಂದೋತ್ಸಾರಿದೃಗಂತವೀಕ್ಷಿತಮತಿಸ್ವೇದಾರ್ದ್ರಗಂಡಸ್ಥಲಂ 
ಮಾಮುದ್ವೀಕ್ಷ್ಯ ವಿಲಜ್ಜಿತಂ ಸ್ಥಿತಸುಧಾಮುಗ್ಗಾನನಂ ಕಾನನೇ ಗೋವಿಂದಂ ವ್ರಜಸುಂದರೀಗಣವೃತಂ ಪಶ್ಯಾಮಿ ಹೃಷ್ಯಾಮಿ ಚ ||೯||

ದುರಾಲೋಕಸ್ತೋಕಸ್ತಬಕನವಕಾಶೋಕಲತಿಕಾ
ವಿಕಾಸಃ ಕಾಸಾರೋಪವನಪವನೋsಪಿ ವ್ಯಥಯತಿ
ಅಪಿ ಭ್ರಾಮ್ಯದ್ಭೃಂಗೀರಣಿತರಮಣೀಯಾ ನ ಮುಕುಲ_
ಪ್ರಸೂತಿಶ್ಚೂತಾನಾಂ ಶಖಿ ಶಿಖರಿಣೀಯಂ ಸುಖಯತಿ ||೧೦||

ಸಾಕೂತಸ್ಮಿತಮಾಕುಲಾಕುಲಗಲದ್ಧಮ್ಮಲ್ಲಮುಲ್ಲಾಸಿತ_
ಭ್ರೂವಲ್ಲೀಕಮಲೀಕದರ್ಶಿತಭುಜಾಮೂಲೋರ್ಧ್ವಹಸ್ತಸ್ತನಂ
ಗೋಪೀನಾಂ ನಿಭೃತಂ ನಿರೀಕ್ಷ್ಯ ಗಮಿತಾಕಾಂಕ್ಷಶ್ಚಿರಂ ಚಿಂತಯ_
ನ್ವಂತರ್ಮುಗ್ಧಮನೋಹರಂ ಹರತು ವಃ ಕ್ಲೇಶಂ ನವಃ ಕೇಶವಃ ||೧೧||

|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಆಕ್ಲೇಶಕೇಶವೋ ನಾಮ ದ್ವಿತೀಯ ಸರ್ಗಃ ||

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ