ಗೀತಗೋವಿಂದ9
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 8
*ಸಂಕ್ಷಿಪ್ತ ಭಾವ*
ಸ್ನಿಗ್ಧ ಮಧುಸೂದನ ನಾಲ್ಕನೆಯ ಸರ್ಗ
ಈ ಭಾಗದಲ್ಲಿ ರಾಧೆಯ ವಿರಹವನ್ನು ಹಾಗೂ ಅವಳು ಹರಿಯ ಮೇಲೆ ಇಟ್ಟಿರುವ ಅನನ್ಯ ಪ್ರೀತಿಯನ್ನು ಅವಳ ಸಖಿಯು ಮಾಧವನಿಗೆ ವಿವರಿಸುವ ಮನ ಮುಟ್ಟುವ ನುಡಿಗಳಿವೆ.
ರಾಧೆಯ ಸ್ಥಿತಿ ಹೇಗಿದೆಯೆಂದರೆ ಚಂದ್ರನ ತಂಪು ಸಹಾ ಅವಳನ್ನು ಸುಡುತ್ತಿದೆ. ಮಂದಾನಿಲವನ್ನು ಮತ್ತು ಬೆಳದಿಂಗಳನ್ನು ಅವಳು ನಿಂದಿಸುವಳು. ಏಕೆಂದರೆ ಅವು ಅವಳ ವಿರಹತಾಪವನ್ನು ಹೆಚ್ಚಿಸುತ್ತಿವೆ.
ಅವಳು ದೀನಳಾಗಿ ನಿನ್ನಲ್ಲಿಯೇ ಲೀನಳಾಗಿದ್ದಾಳೆ. ಅವಳನ್ನು ಸತತವಾಗಿ ಕಾಡುತ್ತಿರುವ ಮನ್ಮಥನನ್ನು ಕುರಿತು ಹೆದರಿದ್ದಾಳೆ. ತಾಪದಿಂದ ಹೊರಬರಲು ತಾವರೆಯ ಎಲೆಗಳನ್ನು ತೊಡುವಳಾದರೂ ಅದು ತಣಿಯುತ್ತಿಲ್ಲ.
ಹೂಬಿಲ್ಲಿನ ರಾಜನಾದ ಮನ್ಮಥನ ತೃಪ್ತಿಗಾಗಿ ನಿನ್ನನ್ನು ಕಾಯುತ್ತಿರುವಳು. ವಿಲಾಸಕ್ಕೆ ಯೋಗ್ಯವಾದ ಶಯನವನ್ನು ಅಣಿಗೊಳಿಸಿಹಳು. ತಡೆಯಿಲ್ಲದೆ ಮುತ್ತಿನ ಮಾಲೆಗಳಂತೆ ಇಳಿಯುತ್ತಿರುವ ಕಂಬನಿಯಿಂದ ಅವಳ ಮುಖವು ರಾಹುಗ್ರಸ್ತ ಚಂದ್ರನಂತೆ ಕಾಂತಿಹೀನವಾಗಿರುವುದು.
ಕಾಮನನ್ನು ಹೋಲುವ ನಿನ್ನ ಚಿತ್ರವನ್ನು ಕಸ್ತೂರಿಯಿಂದ ಏಕಾಂತದಲ್ಲಿ ಬರೆದು ನೋಡುತ್ತಿರುವಳು. ಮಾವಿನ ಚಿಗುರುಗಳನ್ನು ಮಕರಗಳನ್ನಾಗಿಸಿ ಮಣಿಯುತ್ತಿರುವಳು. ನಿನ್ನದೇ ಧ್ಯಾನದಲ್ಲಿ ಸಮಾಧಿಸ್ಥಿತಿಯಲ್ಲಿರುವಳು. ನೀನು ಅವಳ ಎದುರಿಗೆ ಇರುವಂತೆ ಕಲ್ಪಿಸಿಕೊಂಡು ನಗುವಳು, ಅಳುವಳು, ನರಳುವಳು, ದೂರ ಸರಿಯುವಳು. ಹೀಗೆ ನೆನೆನೆನೆದು ದುಃಖಿಸುವಳು.
ಮಾಧವನಿಗೆ ಅಡಿಗಡಿಗೆ ಎರಗುವೆನೆಂದು ನುಡಿಯುತ್ತ ನೀನು ಅವಳಿಂದ ಪರಾಙ್ಞುಖನಾದರೆ ಚಂದ್ರನು ತನ್ನನ್ನು ಉಗ್ರವಾದ ಉರಿಯಿಂದ ದಹಿಸುವನೆಂದು ಹೇಳಿರುವಳು.
ಜಯದೇವ ಕವಿಯ ಈ ಗೀತೆಯನ್ನು ಮನದಲ್ಲಿ ಆದರಿಸಿ ಕೇಳಿ ನಲಿಯುವುದು. ಹರಿಯ ವಿರಹದಿಂದ ರಾಧೆಯ ಸ್ಥಿತಿಯನ್ನು ಬಣ್ಣಿಸುವ ಸಖೀಜನದ ಈ ಮಾತುಗಳನ್ನು ಬಿಡದೆ ಓದುವುದು.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ನಾಲ್ಕನೆಯ ಸರ್ಗ
ಸ್ನಿಗ್ಧ ಮಧುಸೂದನ
ಪದ್ಯ ೧
ಅಲ್ಲಿ ಯಮುನಾತೀರದೆಡೆಯೊಳು ಬೆಳೆದ ಬೆತ್ತದ ಮೆಳೆಯೊಳು
ಕುಳಿತು ಹರಿ ಚಿಂತಿಸುತಲಿರುವನು ನೆನೆದು ಒಲವನು ಭಯದೊಳು
ರಾಧೆ ಕಳುಹಿದ ಸಖಿಯದೊರ್ವಳು ಮೆಲ್ಲಮೆಲ್ಲನೆ ಬರುವಳು
ಹರಿಗೆ ರಾಧೆಯ ಮನದ ದುಃಖದ ಪರಿಯನೆಲ್ಲವನೊರೆವಳು.
ಅಷ್ಟಪದಿ 8
ಚಂದನದಣ್ಪನು ಚಂದ್ರನ ಕದಿರನು ನಿಂದಿಪಳಾಕೆ ಆಧೀರಳು ಖೇದದೊಳು ಹಾವಿನ ಮನೆಯೊಡಗೂಡಿದುದೆ೦ದಾಮಲಯಜದೆಲರನು ನಂಜೆನೆ ಬಗೆದವಳು
ತವವಿರಹದೊಳಿಹ ದೀನಳು ಮಾಧವ ನಿನ್ನೊಳು ಲೀನಳು ನನೆಗಣೆಗಂಜುವೊಲು 1
ಸಂತತಮೆರಗುವನಂಗ ಶಿಲೀಮುಖದಂಜಿಕೆಯಿಂದಹ ರಕ್ಷಣೆಗೆನೆ ತಾನು
ಸಹೃದಯ ಮರ್ಮಕೆ ಮರ್ಮವಿದೆನುವೊಲು ತೊಡುವಳು ಅಂಬುಜದಳ ಜಲಜಾಲವನು. 2
ಪೂವಿಲ್ಲರಸನ ವರಶರತಲ್ಪದನಲ್ಪವಿಲಾಸ ಕಲಾಕಮನೀಯವನು
ತವಪರಿರಂಭದ ಸುಖಕೆನೆ ನೋಂಪಿವೊಲಣಿಗೈಯುತಲಿಹಳಲರಿನ ಶಯನವನು. 3
ಜಗುಳುತಲಿಳಿಯುವ ಕಂಬನಿಮಾಲೆಯನಾಂತಿರುವಾ ಕಮಲಾನನೆ ತಾನಿಹಳು ರಾಹುವಿಕಾರದ ಪಲ್ಗಳಿನಗಿದಿರಲಮೃತದ ಧಾರೆಗಳುಕ್ಕುವ ಚಂದ್ರನೊಲು. 4
ಕಾಮನ ಹೋಲುವ ನಿನ್ನನು ಕತ್ತುರಿಯಿಂದವಳೇಕಾಂತದ ಸಲೆ ಬರೆದವಳು
ಕರದೊಳು ಮಾಂದಳರಿನ ಕಣೆಗುಡುವಳು ಕೆಳಗಡೆ ಮಕರವನಿರಿಸುತೆ ಮಣಿದಪಳು. 5
ಧ್ಯಾನಸಮಾಧಿಯೊಳತಿದುರ್ಲಭನಹ ನಿನ್ನನು ತನ್ನೆದುರೊಳು ಪರಿಕಲ್ಪಿಪಳು ನಗುವಳು ನರಳುವಳಳುವಳು ದೂರಕೆ ನಡೆವಳು ಪೆರತೊಂದನು ತಾನೆಣ್ಣುವಳು. 6
ಅಡಿಗಡಿಗವಳಿಂತಿದನೆಯೆ ನುಡಿವಳು ಮಾಧವ ನಿನ್ನಡಿಯೊಳು ನಾನೆರಗಿಹೆನು ನೀನು ಪರಾಙ್ಞುಖನಾದರೆ ಚಂದ್ರನುಮೆನ್ನನು ಕಟ್ಟಳಲುರಿಯೊಳು ದಹಿಸುವನು. 7
ಶ್ರೀ ಜಯದೇವನ ಪದವನು ಮನದೊಳು ನಲಿಯುವುದಾದರೆ ನೀಮಾದರಿಸುವುದು
ಹರಿ ವಿರಹಾಕುಲ ಬಲ್ಲವ ಯುವತಿ ಸಖೀಜನವಚನವನಿರದಿದನೋದುವುದು.
*ಮೂಲಭಾಗ*
ಚತುರ್ಥ ಸರ್ಗಃ ಸ್ನಿಗ್ಧ ಮಧುಸೂದನಮ್
ಯಮುನಾತೀರವಾನೀರನಿಕುಂಜೇ ಮಂದಮಾಸ್ಥಿತಂ
ಪ್ರಾಹ ಪ್ರೇಮಭರೋದ್ಭ್ರಾಂತಂ ಮಾಧವಂ ರಾಧಿಕಾಸಖೀ ||೧||
ಗೀತಂ-ಅಷ್ಟಪದೀ-8-ಹರಿವಲ್ಲಭಶೋಕ ಪಲ್ಲವಮ್
ಕರ್ಣಾಟರಾಗ, ಏಕತಾಲೀತಾಲ
ನಿಂದತಿ ಚಂದನಮಿಂದುಕಿರಣಮನುವಿಂದತಿ ಖೇದಮಧೀರಂ ವ್ಯಾಲನಿಲಯಮಿಲನೇನ ಗರಲಮಿವ ಕಲಯತಿ ಮಲಯಸಮೀರಂ ||೨||
ಮಾಧವ ಮನಸಿಜವಿಶಿಖಭಯಾದಿವ ಭಾವನಯಾ ತ್ವಯಿ ಲೀನಾಸಾ ವಿರಹೇ ತವ ದೀನಾ ||ಧ್ರುವಮ್|| ||೩||
ಅವಿರಲನಿಪತಿತಮದನಶರಾದಿವ ಭವದವನಾಯ ವಿಶಾಲಂ
ಸ್ವಹೃದಯಮರ್ಮಣಿ ವರ್ಮಕರೋತಿ ಸಜಲನಲಿನೀದಲಜಾಲಂ ||೪||
ಕುಸುಮವಿಶಿಖರಶರತಲ್ಪಮನಲ್ಪವಿಲಾಸಕಲಾಕಮನೀಯಂ
ವ್ರತಮಿವ ತವ ಪರಿರಂಭಸುಖಾಯ ಕರೋತಿ ಕುಸುಮಶಯನೀಯಂ ||೫||
ರಹತಿ ಚ ಚಕಿತವಿಲೋಚನಜಲಧರಭಾನನಕಮಲಮುದಾರಂ
ವಿಧುಮಿವ ಏಕಟವಿಧುಂತುದದಂತದಲನಗಲಿತಾಮೃತಧಾರಂ ||೬||
ವಿಲಿಖತಿ ರಹಸಿ ಕುರಂಗಮದೇನ ಭವಂತಮಸಮಶರಭೂತಂ
ಪ್ರಣಮತಿ ಮಕರಮಧೋ ವಿವಿಧಾಯ ಕರೇ ಚ ಶರಂ ನವಚೂತಂ||೭||
ಪ್ರತಿಪದಮಿದಮಪಿ ನಿಗದತಿ ಮಾಧವ ತವ ಚರಣೇ ಪತಿತಾಹಂ
ತ್ವಯಿ ವಿಮುಖೇ ಮಯಿ ಸಪದಿ ಸುಧಾನಿಧಿರಪಿ ತನುತೇ ತನದಾಹಂ ||೮||
ಧ್ಯಾನಲಯೇನ ಪುರಃ ಪರಿಕಲ್ಪ್ಯ ಭವಂತಮತೀವ ದುರಾಪಂ
ವಿಲಪತಿ ಹಸತಿ ವಿಷೀದತಿ ರೋದಿತಿ ಚಂಚತಿ ಮುಂಚತಿ ತಾಪಂ ||೯||
ಶ್ರೀಜಯದೇವಭಣಿತಮಿದಮಧಿಕಂ ಯದಿ ಮನಸಾ ನಟನೀಯಂ ಹರಿವಿರಹಾಕುಲಬಲ್ಲವಯುವತಿಸಖೀವಚನಂ ಪಠನೀಯಂ ||೧೦||
ಆವಾಸೋ ವಿಪಿನಾಯತೇ ಪ್ರಿಯಸಖೀಮಾಲಾಪಿ ಜಾಲಾಯತೇ ತಾಪೋsಪಿ ಶ್ವಸಿತೇನ ದಾವದಹನಜ್ವಾಲಾಕಲಾಪಾಯತೇ ||೧೧||
ಸಾಪಿ ತ್ವದ್ವಿರಹೇಣ ಹಂತಹರಿಣೀರೂಪಾಯತೇ ಹಾ ಕಥಂ ಕಂದರ್ಪೊsಪಿ ಯಮಾಯತೇ ವಿರಚಯನ್ಶಾರ್ದೂಲವಿಕ್ರೀಡಿತಂ ||೧೨||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು