ಎಚ್. ಆರ್. ಶ್ರೀಶಾ
ಎಚ್. ಆರ್. ಶ್ರೀಶಾ
ಎಚ್. ಆರ್. ಶ್ರೀಶಾ ಅವರು ಪತ್ರಿಕೋದ್ಯಮದಲ್ಲಿ ಪ್ರಸಿದ್ಧ ಹೆಸರು.
ಶ್ರೀಶಾ ಅವರು 1951ರ ಮಾರ್ಚ್ 8ರಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಪದವಿ ಪಡೆದರು.
ಪತ್ರಿಕೋದ್ಯಮದಲ್ಲಿ ಶ್ರೀಶಾ ಅವರದು ನಾಲ್ಕು ದಶಕಗಳಿಗೂ ಮೀರಿದ ಸಾಧನೆ. 'ಕರೆಂಟ್ ಮಾತು’ ಎಂಬ ತಮ್ಮ ಪ್ರಸಿದ್ಧ ಅಂಕಣಕ್ಕೆ ಹೆಸರಾದ ಇವರು ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು. ಖಾದ್ರಿ ಶಾಮಣ್ಣ ಅವರ ಗರಡಿಯಲ್ಲಿ ಪಳಗಿದ ಇವರು ಹಾಸನದ ಜನಮಿತ್ರ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು. ವಿದ್ಯುತ್ ಕ್ಷೇತ್ರದ ಬಗ್ಗೆ ತಳಸ್ಪರ್ಶಿ ಅಧ್ಯಯನ ನಡೆಸಿದ ಇವರು ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳ ಬಗ್ಗೆ ಬರೆದ ಲೇಖನಗಳು ಅಪಾರ. "ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೂ ಸರಳ, ಪದಗಳಂತೆ ಮಾತು ಮೃದು" ಮುಂತಾದವು ಇವರನ್ನು ಆಪ್ತವಾಗಿ ಬಲ್ಲವರ ಮಾತು.
ಶ್ರೀಶಾ ಅವರು ಕೆಇಆರ್‌ಸಿ, ಕೆಪಿಸಿಎಲ್ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್‌ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು.
ಯಾವುದೇ ವಾದ-ವಿವಾದಗಳಿಲ್ಲದೆ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಶ್ರೀಶಾ ಅವರಿಗೆ ಮಾಧ್ಯಮ ಲೋಕದ ಗೌರವಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಹಿರಿಯರಾದ ಎಚ್. ಆರ್. ಶ್ರೀಶಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday to Srisha Hr Sir 🌷🙏🌷
ಕಾಮೆಂಟ್‌ಗಳು