ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಂಗಲಾ


ಸುಮಂಗಲಾ ಎಸ್. ಮುಮ್ಮಿಗಟ್ಟಿ

ಸುಮಂಗಲಾ ಎಸ್. ಮುಮ್ಮಿಗಟ್ಟಿ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು. 

ಸುಮಂಗಲಾ ಅವರು 1964ರ ನವೆಂಬರ್ 4ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ಶೈಕ್ಷಣಿಕ ವಿಜ್ಞಾನ ಅಧ್ಯಯನ ನಡೆಯಿತು.

ಸುಮಂಗಲಾ ಅವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.  ದೂರದರ್ಶನಕ್ಕೂಅವರ ಸೇವೆ ಸಂದಿತ್ತು. ಅನೇಕ ವಿಜ್ಞಾನ ಸಂವಹನಕಾರರನ್ನು ಪ್ರೋತ್ಸಾಹಿಸಿ ಬೆಳೆಸಿದ ಕೀರ್ತಿಯೂ ಅವರದಾಗಿತ್ತು.‍

ಸುಮಂಗಲಾ ಅವರ ವಿಜ್ಞಾನ ಸಂವಹನ ಕಾರ್ಯಕ್ರಮಗಳು ದೇಶದೆಲ್ಲೆಡೆ ಸಂಚಲನ ಉಂಟುಮಾಡಿದ್ದಲ್ಲದೆ ಅಂಂತರರಾಷ್ಟ್ರೀಯ ಮನ್ನಣೆಗಳನ್ನು ಗಳಿಸಿತ್ತು.  ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಸಂದಿತ್ತು.   ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಲಭಿಸಿತ್ತು.  ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಸಂದಿತ್ತು. ಇರಾನಿನಲ್ಲಿ ನಡೆದ ಅಂತಾರಾಷ್ಟ್ರೀಯ ರೇಡಿಯೋ ಉತ್ಸವದ ಪ್ರಶಸ್ತಿಯೂ ಅವರಿಗೆ ಸಂದಿತ್ತು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಲೇಖನಗಳನ್ನೂ ಹಾಗೂ 40ಕ್ಕೂ  ಹೆಚ್ಚು ಕೃತಿಗಳನ್ನೂ ರಚಿಸಿದ್ದ ಅವರಿಗೆ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳೂ ಸಂದಿದ್ದವು.

ನಮ್ಮ ಭೂಮಿ ನಮ್ಮ ಪರಿಸರ, ಚಂದ್ರ ಶೋಧನೆ, ಬಯಲ ಬೆರಗು,  ಪ್ರಾಣಿಗಳು, ಸಸ್ಯಗಳು, ಕಿರಿಯರ ಸಚಿತ್ರ ವಿಶ್ವಕೋಶ, ಪಂಕಜ್ ಸೇಖ್ ಸರಿಯಾ ಅವರ ಮೂಲಕೃತಿ ಅನುವಾದ 'ಕೊನೆಯ ಅಲೆ' ದ್ವೀಪವೊಂದರ ಕಥೆ; ಅದ್ಭುತ ಜೀವಾವಾಸ 'ಅಂಡಮಾನ್' ಪ್ರಕೃತಿ ಪ್ರೇಮಿಯ ಪ್ರವಾಸ ಕಥನ; ವಿಶ್ವಮಾನ್ಯರು ಮಾಲಿಕೆಯಲ್ಲಿನ ಪೈಥಾಗೊರಸ್, ಬೆಂಜಮಿನ್ ಫ್ರಾಂಕ್ಲಿನ್, ನಿಕೊಲಸ್ ಕೊಪರ್ನಿಕಸ್, ಜೊಹಾನಸ್ ಕೆಪ್ಲರ್, ಕ್ಲಾಡಿಯಸ್ ಟಾಲೆಮಿ, ಆರ್ಕಿಮಿಡೀಸ್; ಉದಯಭಾನು ಪುಸ್ತಕ ಮಾಲೆಗಾಗಿ ಅರ್. ಎಲ್. ನರಸಿಂಹಯ್ಯ ಸೇರಿದಂತೆ ಅನೇಕ ಕೃತಿಗಳು ಸುಮಂಗಲಾ ಅವರ ಬರಹ ವೈವಿಧ್ಯಗಳಲ್ಲಿ ಸೇರಿದ್ದವು.

ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರು 2023ರ ಮಾರ್ಚ್ 12ರಂದು ಈ ಲೋಕವನ್ನಗಲಿದರು. ಅಂಥ ಪ್ರತಿಭಾವಂತರು ಅಷ್ಟು ಬೇಗ ಹೊರಟುಹೋಗಬಾರದಿತ್ತು ಎಂಬುದು ಕನ್ನಡಿಗರೆಲ್ಲರ ಅಳಲು.

science writer Sumangala Mummigatti 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ