ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಆರ್. ಶಾಮಭಟ್ಟ


 ಟಿ. ಆರ್. ಶಾಮಭಟ್ಟ


ಟಿ. ಆರ್. ಶಾಮಭಟ್ಟ ಅವರು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬರಹಗಾರರಾಗಿ, ಛಾಯಾಗ್ರಾಹಕರಾಗಿ, ಗಾಂಧೀ ವಾದಿಗಳಾಗಿ, ಸಂಗೀತ ಪ್ರಿಯರಾಗಿ, ಸಾಹಿತ್ಯ ಪ್ರಿಯರಾಗಿ; ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಜೀವನದ ಎಲ್ಲ ಸ್ತರಗಳನ್ನೂ ಕಲಿಕೆಯ ಕ್ಷೇತ್ರವಾಗಿ ಬದಲಿಸಿಕೊಂಡ ಉತ್ಸಾಹಿಯಾಗಿ ಎದ್ದು ಕಾಣುತ್ತಾರೆ. 

ಶಾಮಭಟ್ಟರು ಜನಿಸಿದ್ದು 1936ರ ಮಾರ್ಚ್ 17ರಂದು. ಉಡುಪಿ ಜಿಲ್ಲೆಯ ಇನ್ನಂಜೆಯಲ್ಲಿ ಸೋದೆ ಮಠ ನಡೆಸುತ್ತಿದ್ದ ಶಾಲೆಯಲ್ಲಿ 1953ರಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದರು.  ಆರ್ಥಿಕ ಸೌಲಭ್ಯಗಳು ಇಲ್ಲದ ಕಾರಣ ಓದು ಅಲ್ಲಿಗೇ ನಿಂತಿತು. ಸರ್ಕಾರಿ ಸೇವೆಯಲ್ಲಿನ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗುಮಾಸ್ತರಾಗಿ ಸೇವೆ ಆರಂಭಿಸಿದರು. ಮುಂದೆ ಭೋಪಾಲದಲ್ಲಿ ಕೆಲಸದ ನಡುವೆ ಖಾಸಗಿಯಾಗಿ ಇಂಟರ್ಮೀಡಿಯೆಟ್ ಓದಿದರು. ಬಿ. ಎ. ಓದಬೇಕೆಂಬ ಆಸೆ ಇದ್ದರೂ, ಕೆಲಸ ಮಾಡುವ ಅನಿವಾರ್ಯತೆ ಇದ್ದು, ಇದ್ದ ಜಾಗಗಳಲ್ಲಿ ಕೆಲಸ ಮಾಡುತ್ತ ಓದುವ ಅವಕಾಶಗಳು ಇಲ್ಲದ ಕಾರಣ,  ಬಹುಕಾಲ  ಆ ಆಸೆ ನೆರವೇರಲಿಲ್ಲ.  ಬೆಂಗಳೂರಿನಲ್ಲಿ ಆಚಾರ್ಯ ಪಾಠಶಾಲೆಯಲ್ಲಿ ಬೆಳಗಿನ ತರಗತಿಗಳ ಸಾಧ್ಯತೆ ಇದೆ ಎಂದು ತಿಳಿದು, ಬೆಂಗಳೂರಿಗೆ ಬಂದು ಬೆಳಗಿನಲ್ಲಿ ಕಾಲೇಜಿಗೆ ಹೋಗಿ ಮಧ್ಯಾಹ್ನ ವಿಧಾನ ಸೌಧದಲ್ಲಿ ಕೆಲಸ ಮಾಡತೊಡಗಿದರು.  ಹೆಚ್ಚಿನ ವಯಸ್ಸಾದ ನಂತರ ಓದಿಗೆ ಬಂದದ್ದರಿಂದ ಇವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಇವರಿಗೆ ಗುರುಗಳಾಗಿದ್ದರು.  ಬಿ.ಎ. ಪದವಿಯಲ್ಲಿ ಎರಡನೇ ಭಾಷಾ ಓದು ಕನ್ನಡದಲ್ಲಿ ಅತ್ಯಂತ ಹೆಚ್ಚಿನ ಅಂಕ ಗಳಿಸಿದ ಕೀರ್ತಿ ಇವರದಾಯಿತು. ಎಂ. ಎ. ಓದಿದರಲ್ಲದೆ  ಮಹಾನ್ ಸಮಾಜಶಾಸ್ತ್ರಜ್ಞರಾದ ಪ್ರೊ. ಎಂ. ಎನ್. ಶ್ರೀನಿವಾಸ್ ಅವರ ಶಿಫಾರಸ್ಸಿನಿಂದ ದೆಹಲಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ‍ನಲ್ಲಿ ಎಂ. ಫಿಲ್.  ವ್ಯಾಸಂಗ ಕೈಗೊಂಡರು. 'Some aspects of artisan and servicing castes in India’ ಎಂಬುದು ಇವರು ಅಲ್ಲಿ ಸಲ್ಲಿಸಿದ ಪ್ರಬಂಧವಾಗಿತ್ತು.  ಹೀಗೆ ಅವರು ಆಚಾರ್ಯ ಪಾಠಶಾಲೆಯಲ್ಲಿ ಪ್ರೊಫೆಸರ್ ಆಗಿ, ಸಂಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಶಾಮಭಟ್ಟರು ಅಂದಿನ ದಿನಗಳಲ್ಲಿ ಹೊಸ ಸಂಚಲನ ಮೂಡಿಸಿದ 'ಗೆಳೆಯರ ಬಳಗ'ದಲ್ಲಿ ಒಬ್ಬರು. ಬಾಕಿನ, ಸುಬ್ರಾಯ ಚೊಕ್ಕಾಡಿ Subraya Chokkady, ನಾ. ರಾಮಾನುಜ Ramanuja Narayanaswamy, ಪರಂಜ್ಯೋತಿ, ಕಿರಣ ಮುಂತಾದವರು ಈ ಬಳಗದಲ್ಲಿದ್ದರು.  ಈ  'ಗೆಳೆಯರ ಬಳಗ'ದ ಮೂಲಕ 'ಕವಿತಾ' ಎಂಬ ಹೆಸರಿನ ಕಾವ್ಯ ಮತ್ತು ಕಾವ್ಯವಿಮರ್ಶೆಗೆಂದೇ ಮೀಸಲಾದ ಋತು ಪತ್ರಿಕೆ ಮೂಡಿಬರುತ್ತಿತ್ತು.  ಅದರ ಘೋಷವಾಕ್ಯ “ಕಾವ್ಯಂ ನ ಮಮಾರ ನ ಜೀರ್ಯತಿ” (ಅಥರ್ವ ವೇದ X.8.೩೨) ಅಂದರೆ ‘ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ’.  ಈ ಚಿಂತನೆಯೇ ರೋಮಾಂಚನ ಮೂಡಿಸುವಂತದ್ದು. ಶಾಮಭಟ್ಟರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಲವು ರೀತಿಯ ಬರಹಗಳನ್ನು ಮಾಡಿದ್ದರು. 'ಘನಶ್ಯಾಮ' ಅವರ ಕಾವ್ಯನಾಮವಾಗಿತ್ತು. 

ಶಾಮಭಟ್ಟರಿಗೆ ಮಹಾನ್ ಸಮಾಜಶಾಸ್ತ್ರಜ್ಞರಾದ ಪ್ರೊ. ಎಂ. ಎನ್. ಶ್ರೀನಿವಾಸ್ ಅವರೊಂದಿಗೆ ಅವರ ಸಮಾಜಶಾಸ್ತ್ರ ಅಧ್ಯಯನಾ ಯೋಜನೆಯಲ್ಲಿ ಭಾಗಿ ಆಗುವ ಅವಕಾಶ ಒದಗಿಬಂತು.  ಪ್ರೊ. ಎಂ.ಎನ್. ಶ್ರೀನಿವಾಸ್ ಅವರು ಭಾರತೀಯ ಸಮಾಜವಿಜ್ಞಾನದಲ್ಲಿ ಒಬ್ಬ ವರಿಷ್ಠ ವ್ಯಕ್ತಿ. ನಮ್ಮ ಸಮಾಜ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳ್ಳುವ ದಿಸೆಯಲ್ಲಿ ಅವರು 'ಕ್ಷೇತ್ರಾಧಾರಿತ ದೃಷ್ಟಿಕೋನ' ಎಂಬ ಅಧ್ಯಯನ ಮಾರ್ಗವನ್ನು ಬಳಸಿ ಜನಪ್ರಿಯಗೊಳಿಸಿದರು.  ಶ್ರೀನಿವಾಸ್ ಅವರು ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ದಂಗೆಕೋರರು ಹಚ್ಚಿದ ಬೆಂಕಿಗೆ ತುತ್ತಾಗಿ ತಮ್ಮೆಲ್ಲ ಕ್ಷೇತ್ರಕಾರ್ಯ ಟಿಪ್ಪಣಿಗಳನ್ನು ಕಳೆದುಕೊಂಡ ವಿಷಾದಕರ ದುರಂತದ ನಂತರ ಅವರು ಬರೆದ 'ದಿ ರಿಮೆಂಬರ್ಡ್ ವಿಲೇಜ್' ಎಂಬ ಗ್ರಂಥವು ಮಾನವವಿಜ್ಞಾನ ಮತ್ತು ಸಮಾಜವಿಜ್ಞಾನಗಳಲ್ಲಿ ಒಂದು ಸಾರ್ವಕಾಲಿಕ ಶ್ರೇಷ್ಠ ಕೃತಿ ಎನಿಸಿತು. 1976ರಲ್ಲಿ ಮೊದಲು ಪ್ರಕಟವಾದ ಈ ಕೃತಿಯು, ಅನೇಕ ಮರುಮುದ್ರಣಗಳನ್ನು ಕಂಡಿದೆಯಲ್ಲದೆ, ಕಳೆದ ಅನೇಕ ದಶಕಗಳ ಉದ್ದಕ್ಕೂ ಅದು ತನ್ನ ತಾಜಾತನವನ್ನು ಉಳಿಸಿಕೊಂಡು ಬಂದಿದೆ. ಪ್ರೊ. ಶ್ರೀನಿವಾಸರು ಇಂಗ್ಲಿಷ್ ಬರವಣಿಗೆಯ ಒಬ್ಬ ಶ್ರೇಷ್ಠ ಪಟುವಾಗಿದ್ದರು. ಅವರು ತನ್ನ ವಿದ್ವತ್ತೂರ್ಣ ಬರವಣಿಗೆಗಳಲ್ಲಿ ಪ್ರಚುರಪಡಿಸಿದ ಅಂಶಗಳು ನಿಸ್ಸಂದೇಹವಾಗಿ ಮುಖ್ಯವಾದವುಗಳೇ ಆದರೂ, ಅವುಗಳನ್ನು ಅವರು ಹೇಗೆ ಅಭಿವ್ಯಕ್ತಗೊಳಿಸಿದರು ಎಂಬುದು ಇನ್ನೂ ಹೆಚ್ಚು ಆಕರ್ಷಕವಾದುದಾಗಿದೆ. 
ಅವರ ಬರವಣಿಗೆಯ ಈ ಕೌಶಲ್ಯವು ಅತ್ಯಂತ ಉತ್ಕೃಷ್ಟವಾಗಿ ಮೂಡಿ ಬಂದಿದ್ದೇ 'ದಿ ರಿಮೆಂಬರ್ಡ್ ವಿಲೇಜ್' ಕೃತಿಯಲ್ಲಿ. ಈ ಕೃತಿಯ ಸಮೃದ್ಧ ಅಂಶಗಳನ್ನು ಮತ್ತು ಅನುಪಮ ಶೈಲಿಯನ್ನು ಕನ್ನಡಿಗರು ಆಸ್ವಾದಿಸಲಿ ಎಂಬ ಉದ್ದೇಶದಿಂದ ಪ್ರೊ. ಶಾಮಭಟ್ಟರು ಕನ್ನಡಕ್ಕೆ 'ನೆನಪಿನ ಹಳ್ಳಿ' ಎಂಬ ಹೆಸರಿನಿಂದ ಅನುವಾದ ಮಾಡಿದರು.  ಶಾಸ್ತ್ರೀಯ ಕೃತಿ ಎನ್ನಬಹುದಾದ ಇದನ್ನು ಅನುವಾದಿಸುವುದು ಒಂದು ಸವಾಲಿನ ಕೆಲಸವಾಗಿದ್ದು, ಶಾಮಭಟ್ಟರ ಈ ಸಾಹಸವನ್ನು ನಾಡಿನ ಎಲ್ಲ ವಿದ್ವಾಂಸರು ಪ್ರಶಂಸಿಸಿದ್ದಾರೆ.  ಈ ಕೃತಿ ಸಾಮಾಜಿಕ, ಐತಿಹಾಸಿಕ ಕಾದಂಬರಿಯಂತೆಯೂ, ಸಂಶೋಧನಾ ಕೃತಿಯಾಗಿಯೂ ಭಾರತದ ಗ್ರಾಮೀಣ ಪರಿಸರವನ್ನು ಕಟ್ಟಿಕೊಡುತ್ತದೆ. 

ಶಾಮಭಟ್ಟರು ಅಮೆರಿಕ ಮತ್ತು ಸೋವಿಯತ್ ಯೂನಿಯನ್ ರಾಯಭಾರಿ ಕಚೇರಿಗಳಿಗೆ ತರ್ಜುಮೆದಾರರಾಗಿಯೂ ಕೆಲಸ ನಿರ್ವಹಿಸಿದ್ದರು. ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಇವರ ಬರಹಗಳು ಮೂಡಿದ್ದವು. ಡಾ. ಜಿ. ಎಸ್. ಶಿವರುದ್ರಪ್ಪನವರ ಸಂಪಾದನೆಯಲ್ಲಿ ಮೂಡಿಬಂದ 'ಕರ್ನಾಟಕ ವೈಭವ'ಕ್ಕಾಗಿ ಎರಡು ಲೇಖನಗಳನ್ನು  ಭಾಷಾಂತರಿಸಿದ್ದರು. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ‘ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯ’ ವಿಚಾರ ಸಂಕಿರಣದಲ್ಲಿ ಶಾಮಭಟ್ಟರು 1947-1968 ಕಾಲದ ಕನ್ನಡ ಕಾದಂಬರಿಗಳ ಬಗ್ಗೆ ಒಂದು ಪ್ರಬಂಧ ಮಂಡಿಸಿದ್ದರು.  ಅದನ್ನು 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಿಸಿದೆ.

ಶಾಮಭಟ್ಟರ ಹವ್ಯಾಸಗಳಲ್ಲಿ ಛಾಯಾಗ್ರಹಣ ಮನಸೆಳೆಯುವಂತದ್ದು.  ವ್ಯಾಪಕವಾಗಿ ಪ್ರವಾಸ ಮಾಡಿರುವ ಅವರ ಛಾಯಾ ಚಿತ್ರಗಳು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ವೈಭವಗಳನ್ನು ಅಮೂಲ್ಯ ರೀತಿಯಲ್ಲಿ ದಾಖಲಿಸಿವೆ.  ಫಿಲಂರೋಲ್ ಬಳಸಿ ಛಾಯಾಗ್ರಹಣ ನಡೆಸಬೇಕಿದ್ದ ಅಂದಿನ ದಿನಗಳಲ್ಲಿ ತಮ್ಮ ಚಿತ್ರಗಳ ಸಂಸ್ಕರಣವನ್ನೂ ತಮ್ಮ ಮನೆಯಲ್ಲಿ ಶ್ರದ್ಧೆಯಿಂದ ಕೈಗೊಳ್ಳುತ್ತಿದ್ದರು. 

ಶಾಮಭಟ್ಟರು ಈ ಹಿಂದೆ ವಾಸಿಸುತ್ತಿದ್ದ 'ನೆಲೆ' ಎಂಬ ತಮ್ಮ ಮನೆಯನ್ನು ಕಲಾತ್ಮಕ ವಿನ್ಯಾಸದಿಂದ ಮಾಡಿದ್ದಲ್ಲದೆ, ತಮ್ಮ ಮನೆಯಲ್ಲಿಯೇ ಯುವ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನೂ ನಡೆಸಿ, ಸದಭಿರುಚಿಯ ಆಸ್ವಾದನೆಗಳ ಜೊತೆಗೆ ಹಲವು ಯುವಪ್ರತಿಭೆಗಳಿಗೆ ಉತ್ತೇಜನವನ್ನೂ ನೀಡುತ್ತಿದ್ದರು. 

ಹಿರಿಯರೂ ಮಹತ್ವದ ಸಾಧಕರೂ ಆದ ಪ್ರೊ. ಶಾಮಭಟ್ಟರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of great scholar Prof. Shama Bhat Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ