ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೆಸಿಲ್‍ ಜಾನ್ ರೋಡ್ಸ್


 ಸೆಸಿಲ್‍ ಜಾನ್ ರೋಡ್ಸ್


ಸೆಸಿಲ್‍ ಜಾನ್ ರೋಡ್ಸ್, ದಕ್ಷಿಣ ಆಫ್ರಿಕವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ದುಡಿದ ಬ್ರಿಟಿಷ್ ರಾಜಕೀಯ ಮುತ್ಸದ್ಧಿ, ಆಡಳಿತಗಾರ ಮತ್ತು ಬಂಡವಾಳಗಾರ

ರೋಡ್ಸ್ 1853ರ ಜುಲೈ 5ರಂದು
ಹರ್ಟ್‍ಫರ್ಡ್‍ಶೈರ್‍ನಲ್ಲಿ ಜನಿಸಿದ. ಇವನ ತಂದೆ ಕ್ರೈಸ್ತಪಾದ್ರಿ. ಹುಟ್ಟೂರಿನ ಗ್ರಾಮರ್ ಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, 1873ರಲ್ಲಿ ಆಕ್ಸ್‍ಫರ್ಡ್‍ಗೆ ತೆರಳಿದ. ಆದರೆ ವ್ಯಾಪಾರದ ಕಾರಣಗಳಿಂದ ದಕ್ಷಿಣ ಆಫ್ರಿಕಕ್ಕೆ ಹಿಂತಿರುಗಿದರೂ ಕೆಲವಾರು ವರ್ಷಗಳಲ್ಲಿ ಮತ್ತೆ ಆಕ್ಸ್‍ಫರ್ಡ್‍ನಲ್ಲಿ ವ್ಯಾಸಂಗ ಮುಂದುವರೆಸಿದ. ಅನಾರೋಗ್ಯದ ಕಾರಣ ವಿದ್ಯಾಭ್ಯಾಸ ಕುಂಠಿತಗೊಂಡರೂ 1881ರಲ್ಲಿ ಪದವೀಧರನಾದ. ದಕ್ಷಿಣ ಆಫ್ರಿಕದ ವಜ್ರದ ಗಣಿಗಳಲ್ಲಿ ಕೆಲಸ ಮಾಡುತ್ತಲೇ ಅವಕಾಶ ದೊರೆತಾಗ ತನ್ನ ನೆಚ್ಚಿನ ಲೇಖಕರ ಕೃತಿಗಳನ್ನು ಓದುತ್ತಿದ್ದ. ಆರೇಂಜ್‍ಫ್ರೀ ಸ್ಟೇಟ್ ಭಾಗದಲ್ಲಿ ವಜ್ರದ ಗಣಿಗಳಿವೆಯೆಂದು ತಿಳಿದ ಮೇಲೆ ಅಲ್ಲಿಗೆ ಧಾವಿಸಿದ ಈತ ತನ್ನ ಅಣ್ಣತಮ್ಮಂದಿರೊಂದಿಗೆ ಕಷ್ಟಪಟ್ಟು ದುಡಿದು ಅಪಾರ ಸಂಪತ್ತುಗಳಿಸಿದ. ಪಕ್ಕದ ಕಿಂಬರ್ಲಿ ಗಣಿಗಳಲ್ಲಿ ದ್ರವ್ಯರಾಶಿಯನ್ನೇ ಕಂಡ. ವಿವಿಧ ವಜ್ರದ ಕಂಪನಿಗಳನ್ನು ಒಟ್ಟುಗೂಡಿಸಬಲ್ಲ ಸಮರ್ಥ ಬಂಡಾವಾಳಗಾರನೆಂದು ಹೆಸರಾದ. 1888ರಲ್ಲಿ ಡಿ ಬೀರ್ಸ್ ಕನ್‍ಸಾಲಿಡೇಟೆಡ್ ಮೈನ್ಸ್ ಕಂಪನಿಯನ್ನು ಸ್ಥಾಪಿಸಿದ. ಮೊದಲು ವಜ್ರದ, ಅನಂತರ ಚಿನ್ನದ ವ್ಯಾಪಾರದಲ್ಲಿ ಅಪಾರ ಸಂಪತ್ತು ಗಳಿಸಿದ.

ರೋಡ್ಸನಿಗೆ ವಸಾಹತುವಾದದಲ್ಲಿ ದೃಢವಿಶ್ವಾಸವಿತ್ತು. ಬ್ರಿಟಿಷ್ ಧ್ವಜದಡಿಯಲ್ಲಿ ದಕ್ಷಿಣ ಆಫ್ರಿಕದ ಸಂಯುಕ್ತ ಆಧಿಪತ್ಯ ನಿರ್ಮಿಸುವುದು ಇವನ ಧ್ಯೇಯವಾಗಿತ್ತು. ಬ್ರಿಟಿಷ್ ಹಾಗೂ ಡಚ್ಚರಲ್ಲಿ ವಸಾಹತುಗಳ ಬಗ್ಗೆ ತಿಕ್ಕಾಟ ಕಡಿಮೆ ಮಾಡಲು, ಮಧುರಬಾಂಧವ್ಯ ಬೆಳೆಸಲು ಈತ ಕಳಕಳಿಯಿಂದ ಪ್ರಯತ್ನಿಸಿದ. ಬೆಚುವಾಲಾ ವಸಾಹತನ್ನು ತಾಯ್ನಾಡಿಗೆ ಸೇರಿಸಿ, ಇದರ ಉತ್ತರದ ಪ್ರದೇಶವನ್ನು ವಶಪಡಿಸಿಕೊಂಡು, ಅದಕ್ಕೆ ರೊಡೀಷಿಯ ಎಂದು ಹೆಸರಿಟ್ಟ. 1896ರಲ್ಲಿ ಮಾಟಬೆಲೆ ಬಂಡಾಯವನ್ನು ಇತ್ಯರ್ಥ ಪಡಿಸಿದ. ಈ ಪ್ರದೇಶದ ಅಧಿಕಾರ ಕಂಪನಿಯದಿದ್ದಾಗ ಈತ ತನ್ನ ಕಂಪನಿಯ ಏಕಮೇವ ವ್ಯವಸ್ಥಾಪಕನಾದ (1888). ಕೇಪ್ ಆಫ್ ಗುಡ್‍ಹೋಪ್‍ದಿಂದ ಕೈರೊವರೆಗೆ ರೈಲ್ವೆ ನಿರ್ಮಾಣ ಹಾಗೂ ಟಿಲಿಗ್ರಾಫ್ ಸಂಪರ್ಕ ಏರ್ಪಡಿಸುವ ಯೋಜನೆಯನ್ನು ದೃಢೀಕರಿಸಿದ.

ರೋಡ್ಸ್ 1880ರಲ್ಲಿ ರಾಜಕೀಯ ರಂಗ ಪ್ರವೇಶಿಸಿ ಕೇಪ್ ಆಫ್ ಗುಡ್ ಹೋಪ್‍ನ ಪ್ರಧಾನಮಂತ್ರಿಯಾದ (1880-99). ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಈತ ವಿರೋಧ ಪಕ್ಷಗಳ ಅಸಾಮಾನ್ಯ ಸಹಕಾರಗಳಸಿ ಹಾಫ್‍ಮೆಯರ್‍ನೊಂದಿಗೆ ಗೆಳೆತನ ಬೆಳೆಸಿದ. ಗ್ಲೆನ್-ಗ್ರೇ-ಆಕ್ಟ್ ಎಂಬುದು ರೋಡ್ಸ್-ಹಾಫ್‍ಮೆಯರ್ ಬಾಂಧವ್ಯದ ಅಪೂರ್ವಸಾಧನೆ. ರೋಡ್ಸ್ ಇದನ್ನು ಬಿಲ್ ಫಾರ್ ಆಫ್ರಿಕ ಎಂದು ಪರಿಗಣಿಸಿದ್ದ. ಕುಶಾಗ್ರಮತಿ ಇವನೊಬ್ಬ ಪಳಗಿದ ರಾಜಕಾರಣಿ ಎಂಬುದನ್ನು ಸಾಬೀತುಗೊಳಿಸುತ್ತದೆ. ಯಾವ ಇಂಗ್ಲಿಷ್ ಅಲ್ಪಸಂಖ್ಯಾತರೂ ದೇಶವನ್ನು ಅನಿಶ್ಚಿತ ಕಾಲ ಆಳಲಾರರೆಂದು ಭಾವಿಸಿ, ಈತ ಜನಾಂಗಿಕ ಸೌಹಾರ್ದಕ್ಕಾಗಿ ದುಡಿದ. ಆದರೆ ರಾಜಕೀಯ ಒತ್ತಡಕ್ಕೊಳಗಾಗಿ ಪ್ರಧಾನಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಈತ 1902 ಮಾರ್ಚ್ 26ರಂದು ಹೃದಯಾಘಾತಕ್ಕೊಳಗಾಗಿ ನಿಧನನಾದ. 

ರೋಡ್ಸ್ ಕೆಲವೊಮ್ಮೆ ಜಿಪುಣನಂತೆ ಕಂಡರೂ ದೊಡ್ಡ ದಾನಿಯೂ ಆಗಿದ್ದ. ಮರಣಾನಂತರ ತನ್ನ ಹೆಸರಿನಲ್ಲಿ ಪುದುವಟ್ಟನ್ನು ಸ್ಥಾಪಿಸಿ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಬೇಕೆಂದೂ ಬ್ರಿಟನ್, ಅಮೆರಿಕ ಮತ್ತು ಜರ್ಮನಿಯ ವಿದ್ಯಾರ್ಥಿಗಳಿಗೆ ಆಕ್ಸ್‍ಫರ್ಡಿನಲ್ಲಿ ಕಲಿಯಲು ಶಿಷ್ಯವೇತನಗಳನ್ನು ಕೊಡಬೇಕೆಂದೂ ತನ್ನ ಮೃತ್ಯುಪತ್ರದಲ್ಲಿ ದಾಖಲಿಸಿದ್ದಾನೆ.

Cecil John Rhodes a British mining magnate and politician in Southern Africa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ