ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಿನಾಥ ಮೊಹಂತಿ


 ಗೋಪಿನಾಥ ಮೊಹಂತಿ


ಗೋಪಿನಾಥ ಮೊಹಂತಿ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಒರಿಯಾ ಸಾಹಿತಿ. ಅವರು ಕಾದಂಬರಿಕಾರ, ಸಣ್ಣಕತೆಗಾರ, ನಾಟಕಕಾರ, ಪ್ರಬಂಧಕಾರ ಹಾಗೂ ಸಂಶೋಧಕರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಥಮ ಪ್ರಶಸ್ತಿ ಪುರಸ್ಕೃತರು. ಅವರು ಸರ್ಕಾರಿ ಅಧಿಕಾರಿಯಾಗಿ ಜನಸೇವೆಗೂ ಹೆಸರಾಗಿದ್ದರು. 

ಗೋಪಿನಾಥ ಮೊಹಂತಿ ಅವರು 1914ರ ಏಪ್ರಿಲ್ 20ರಂದು ಕಟಕ್ ಜಿಲ್ಲೆಯ ನಾಗ್ಬಲಿಯಲ್ಲಿ ಜನಿಸಿದರು. ಪಟಣ ವಿಶ್ವವಿದ್ಯಾಲಯದಿಂದ 1936ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಮನಶಾಸ್ತ್ರದಲ್ಲಿ ಇವರಿಗೆ ಅಪಾರ ಆಸಕ್ತಿಯಿತ್ತು. 

ಗೋಪಿನಾಥ ಮೊಹಂತಿ ಅವರು 1938ರಿಂದ 64ರವರೆಗೆ ಒರಿಸ್ಸದ ಆಡಳಿತ ಸೇವೆಯಲ್ಲಿದ್ದರು. ನ್ಯಾಯಾಧೀಶರಾಗಿ, ಕಂದಾಯ ಅಧಿಕಾರಿಯಾಗಿ, ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ, ಬುಡಕಟ್ಟು ಅಭಿವೃದ್ಧಿ ಯೋಜನೆಯ ವಿಶೇಷ ಅಧಿಕಾರಿಯಾಗಿ, ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸಿದ್ದರು.

ಗೋಪಿನಾಥ ಮೊಹಂತಿ ಅವರು ಸೃಜನಶೀಲ ಲೇಖಕರಾಗಿ ಒರಿಯಾ ಭಾಷೆಯ ಶಕ್ತಿಯುತವಾದ ಹೊಸಶೈಲಿಯೊಂದನ್ನು ರೂಪಿಸಿದರು. ಇವರ ಇಪ್ಪತ್ತೈದು ಕಾದಂಬರಿ, ಎಂಟು ಸಣ್ಣ ಕಥಾಸಂಕಲನ (ಸುಮಾರು 200 ಸಣ್ಣಕಥೆಗಳು), ಎರಡು ಜೀವನಚರಿತ್ರೆ, ಮೂರು ನಾಟಕ, ಎರಡು ವಿಮರ್ಶೆ ಸಂಕಲನ, ಐದು ಬುಡಕಟ್ಟು ಜನರ ಸಂಸ್ಕೃತಿ ಬಗೆಗಿನ ಕೃತಿಗಳು, ಏಳು ಅನುವಾದ ಕೃತಿಗಳು ಪ್ರಕಟಗೊಂಡವು.

'ಮನಗಾಹಿರಭಾಸ' (1940) ಗೋಪಿನಾಥ ಮೊಹಂತಿ ಅವರ ಮೊದಲ ಕಾದಂಬರಿ; ಮನೋವೈಜ್ಞಾನಿಕ ನೆಲೆಯಲ್ಲಿ ಮೂಡಿಬಂದ ಕೃತಿಯಿದು. ಸುಪ್ತಮನಸ್ಸಿನ ಪದರಗಳನ್ನು ಬಿಡಿಸಿ, ಅಲ್ಲಿ ಹುದುಗಿರುವ ವಿಚಾರಗಳನ್ನು ಹೆಕ್ಕಿ ತೆಗೆದಿರುವುದು ಈ ಕೃತಿಯ ವಿಶಿಷ್ಟತೆ.  'ಪಾರಜ' (1945) ಬುಡಕಟ್ಟು ಜನರ ಕುಟುಂಬವೊಂದು ಜಮೀನ್ದಾರರ ಹಾಗೂ ಸರ್ಕಾರಿ ಅಧಿಕಾರಿಗಳ ಶೋಷಣೆಗೆ ಗುರಿಯಾಗುವುದನ್ನು ವಸ್ತುವಾಗುಳ್ಳ ಕಾದಂಬರಿ. ಇದು ಇಂಗ್ಲಿಷಿಗೆ ಅನುವಾದಗೊಂಡಿದೆ. ಬುಡಕಟ್ಟು ಜೀವನವನ್ನೇ ಆಧರಿಸಿದ ಇನ್ನೊಂದು ಕಾದಂಬರಿ 'ಅಮೃತರ ಸಂತಾನ` (1947). ಇದರಲ್ಲಿ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟಿನವರ ಜೀವನವನ್ನು ಚಿತ್ರಿಸಲಾಗಿದೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿದೆ. ಇದು ಹಿಂದಿ, ಬಂಗಾಳಿ, ತೆಲುಗು, ಪಂಜಾಬಿ, ಮತ್ತು ಅಸ್ಸಾಮಿ ಭಾಷೆಗಳಿಗೆ ಅನುವಾದಗೊಂಡಿದೆ. 'ಹರಿಜನ' (1948) ಜಾಡಮಾಲಿಗಳ ಬದುಕಿನ ಏಳುಬೀಳುಗಳ ಚಿತ್ರಣ ನೀಡುವಂಥದ್ದು.  ‘ದಾನ್‍ಪನಿ’ (1955) ಕೆಳಮಧ್ಯವರ್ಗದವರ ಜೀವನ ಸಂಕಷ್ಟವನ್ನು ಚಿತ್ರಿಸುತ್ತದೆ.  ‘ಲಯ ಬಿಲಯ’ (1961) ಮನೋವಿಶ್ಲೇಷಣಾತ್ಮಕವಾಗಿ ಮೂಡಿಬಂದ ಮತ್ತೊಂದು ಕಾದಂಬರಿ. ‘ಮತಿಮತಲ್’ (1964) 970 ಪುಟಗಳ ಬೃಹತ್ ಕಾದಂಬರಿ. ಈ ಕೃತಿ ವಿಭಿನ್ನ ಸಂಸ್ಕೃತಿಗಳ ನಡುವಣ ವೈರುಧ್ಯವನ್ನೂ ಹಳೆಯ ಮತ್ತು ಹೊಸ ತಲೆಮಾರಿನ ಬದುಕಿನ ಸಂಘರ್ಷವನ್ನೂ ಪ್ರತಿಬಿಂಬಿಸಿದೆ.ದಾದಿಬುಧ, ಸಿಬಭಯಿ, ಅಪಹಂಚ - ಇವು ಬುಡಕಟ್ಟುಗಳ ಬಗೆಗೆ ಬರೆದಿರುವ ಇನ್ನಿತರ ಕಾದಂಬರಿಗಳು. ಪ್ರಾಕೃತಿಕ ವಿಕೋಪಕ್ಕೆ ಒಳಗಾದರೂ ಬುಡಕಟ್ಟು ಜನರು ಜೀವನದಲ್ಲಿ ಇಟ್ಟಿರುವ ಅಪಾರನಂಬಿಕೆ, ಅವರ ಮುಗ್ಧಜೀವನವಿಧಾನ ಲೇಖಕರಿಗೆ ಸ್ಫೂರ್ತಿ ನೀಡಿವೆ. ತಂತ್ರಿಕರ, ಆಕಾಶ ಸುಂದರಿ, ಅನಲನಲ, ದಿಗದಿಹುದಿ, ಪಹಂತ, ಸಪನಮತಿ - ಇವು ಇವರ ಇತರ ಕಾದಂಬರಿಗಳು. 

ಅಧಿಕಾರಿಯಾಗಿ, ಸೃಜನಶೀಲ ಲೇಖಕರಾಗಿ ಒರಿಸ್ಸಾದ ಬುಡಕಟ್ಟುಗಳ ವಿಷಯದಲ್ಲಿ ಮೊಹಂತಿ ಅಪಾರ ಕಳಕಳಿ ಹೊಂದಿದ್ದರು. ಅವರು ಬುಡಕಟ್ಟು ಜನರ ಗೀತೆಗಳನ್ನೂ ಲಾವಣಿಗಳನ್ನೂ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಘಾಸರಫುಲ, ಗುಪ್ತಗಂಗ, ನಬಬಧು, ರಣಧಂದೊಲ, ಉದಂತಖಾಯ್ - ಇವು ಸಣ್ಣಕಥಾಸಂಕಲನಗಳು. ಕೆಲವು ಸಣ್ಣಕತೆಗಳು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ದೀನ, ಪಹರೆ, ಮಹಾಪುರುಷ, ಮುಕ್ತಿಪಥೆ -ಇವರ ನಾಟಕಗಳು. ಕಲಾಶಕ್ತಿ, ಪ್ರೆಮರ ನಿಯತಿ-ಇವು ಪ್ರಬಂಧ ಸಂಕಲನಗಳು. ಗದಬಭಾಷಾ ಪರಿಚಯ, ಕೊಂಡ್ ಪರಜ ಸ್ತ್ರೋತ್ರ ಓ ಸಂಗೀತ, ಕುಭಿಕೊಂಡ್ ಭಾಷಾತತ್ತ್ವ- ಇವು ಬುಡಕಟ್ಟುಗಳ ಬಗ್ಗೆ ರಚಿತವಾದ ಕೃತಿಗಳು. ಕುವಿ ಭಾಷೆಗೆ ಸಂಬಂಧಿಸಿದ ವ್ಯಾಕರಣ ಕೃತಿಯೊಂದನ್ನು ಇವರು ಸಿದ್ಧಪಡಿಸಿದ್ದಾರೆ. ಬಂಕಿಮಚಂದ್ರ ಚಟರ್ಜಿ, ಭಾರತ್ ಅಜಿ ಈಕಲಿ, ಬುಝಮನ, ಜಾಗಜಾಗ್ ಕಥಾಭಾರತಿ, ಮೈ ಯೂನಿವರ್ಸಿಟೀಸ್, ಯುದ್ಧ ಓ ಶಾಂತಿ-ಇವು ಅನುವಾದಿತ ಕೃತಿಗಳು. ಮೈ ಯುನಿವರ್ಸಿಟೀಸ್ ಎಂಬ ಅನುವಾದಕ್ಕೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ದೊರೆತಿದೆ. ಈ ಕೆಲಸಗಳ ಜೊತೆಗೆ ಓಲೆಗರಿಗಳನ್ನು ಸಂಗ್ರಹಿಸಿ ಸಂಪಾದನೆ ಕಾರ್ಯದಲ್ಲೂ ಇವರು ತೊಡಗಿದ್ದರು. ಒರಿಯಾ ಮಹಾಭಾರತದ ಕರ್ತೃ ಸರಳಾದಾಸನ ಕಾಲ ಮತ್ತು ಸ್ಥಳದ ವಿಚಾರಗಳ ಮೇಲೆ ಇವರು ಹೊಸ ಬೆಳಕು ಚೆಲ್ಲಿದರು.

ಗೋಪಿನಾಥ ಮೊಹಂತಿ ಅವರಿಗೆ ಅನೇಕ ಗೌರವಗಳು, ಪ್ರಶಸ್ತಿಗಳು ಸಂದಿವೆ. 1955ರಲ್ಲಿ ಸ್ಥಾಪನೆಗೊಂಡ ಕೇಂದ್ರ ಸಾಹಿತ್ಯ ಅಕಡೆಮಿಯ ಪ್ರಥಮ ಪ್ರಶಸ್ತಿ, 1970ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, 1973ರಲ್ಲಿ (ದ.ರಾ. ಬೇಂದ್ರೆ ಅವರೊಂದಿಗೆ) ಜ್ಞಾನಪೀಠ ಪ್ರಶಸ್ತಿ ಸಂದವು. 1975ರಲ್ಲಿ ಕರ್ನಾಟಕದ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾನಿಸಿತು. 1976ರಲ್ಲಿ ಸಂಬಲ್‍ಪುರ್ ವಿಶ್ವವಿದ್ಯಾಲಯ ಡಿ.ಲಿಟ್. ಪದವಿ ನೀಡಿ ಗೌರವಿಸಿತು.  1981ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿತು. ಇವರ ಸೇವೆಯನ್ನು ಗುರುತಿಸಿ ಅಮೆರಿಕದ ಸ್ಯಾನ್‍ಜೋಸ್ ವಿಶ್ವಿವಿದ್ಯಾಲಯ ಇವರನ್ನು ಸಾಮಾಜಿಕ ವಿಜ್ಞಾನಗಳ ಪ್ರಾಧ್ಯಾಪಕರನ್ನಾಗಿ 1986ರಲ್ಲಿ ನೇಮಿಸಿಕೊಂಡಿತು. 

ಗೋಪಿನಾಥ ಮೊಹಂತಿ  ಅವರು 1991ರ ಆಗಸ್ಟ್  20ರಂದು ನಿಧನರಾದರು.

On the birth Anniversary of Odia writer Gopinath Mohanty winner of the Jnanpith award, and the first winner of the National Sahitya Akademi Award in 1955 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ