ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ವಸಂತ


ಗೀತಾ ವಸಂತ


ಡಾ. ಗೀತಾ ವಸಂತ ಅವರು ಬಹುಮುಖಿ ಪ್ರತಿಭಾವಂತ ಬರೆಹಗಾರ್ತಿ.

ಏಪ್ರಿಲ್ 20 ಗೀತಾ ಅವರ ಹುಟ್ಟಿದ ಹಬ್ಬ.  ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಓದಿದ ಅವರು ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಡಾ. ಶಾಲಿನಿ ರಘುನಾಥ್ ಅವರ ಮಾರ್ಗದರ್ಶನದಲ್ಲಿ "ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು" ಮಹಾಪ್ರಬಂಧ ಮಂಡಿಸಿ ಧಾರವಾಡ ವಿಶ್ವವಿದ್ಯಾಲಯದಿಂದ  ಪಿಎಚ್.ಡಿ ಗಳಿಸಿದರು.  "ಬೇಂದ್ರೆ ಕಾವ್ಯದ ವಿರಾಟ ಸ್ವರೂಪ" ಮಹಾಪ್ರಬಂಧಕ್ಕೆ ಇವರಿಗೆ ತುಮಕೂರು ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ ಸಂದಿದೆ.

ಗೀತಾ ವಸಂತ ಅವರು ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು ಜಯನಗರದ ಜೆಎಸ್‍ಎಸ್ ಮಹಿಳಾ ಕಾಲೇಜು, ಧಾರವಾಡದ ಕರ್ನಾಟಕ ಕಲಾ ಕಾಲೇಜು ಮುಂತಾದೆಡೆ ಬೋಧನೆ ನಡೆಸಿ 2010ರ ವರ್ಷದಿಂದ ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ.

ಗೀತಾ ವಸಂತ ಅವರ ಬರಹಗಳು, ವಿಶಾಲ ಮತ್ತು ವಿಭಿನ್ನ ಅಧ್ಯಯನಗಳ ಪಾಕದಿಂದ ಮೂಡಿಬಂದಿವೆ. ಪ್ರಾಚೀನ ಪಠ್ಯಗಳು, ಜನಪದ, ಕತೆ, ಕೀರ್ತನೆ, ತತ್ವಪದ, ಬೇಂದ್ರೆ ಕಾವ್ಯ, ಶಿವಪ್ರಕಾಶರ ಕವಿತೆ, ಬರಗೂರರ ಕಾದಂಬರಿ, ದಲಿತ ಸಂಸ್ಕೃತಿ, ಸವದತ್ತಿ ಎಲ್ಲಮ್ಮ, ಅವಧೂತ ಪರಂಪರೆ ಹೀಗೆ ಕನ್ನಡ ಸಾಹಿತ್ಯ ಸಂಸ್ಕೃತಿಯ ವಿಭಿನ್ನ ಬಾಗಿಲುಗಳನ್ನು ಅವರ ಅನ್ವೇಷಕ ಚಿಂತನೆಗಳು ತಟ್ಟಿವೆ. 

ಗೀತಾ ವಸಂತ ಅವರ ಕಥೆ, ಕವಿತೆ, ಚಿಂತನೆ, ವಿಮರ್ಶೆಗಳು ನಿರಂತರವಾಗಿ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ.  ಅವರ 'ವಿಶ್ಲೇಷಣೆ', 'ಅರಿವಿನ ತೇರು' ಮುಂತಾದ ಅಂಕಣಗಳೂ ಹೆಸರಾಗಿವೆ.  ಕನ್ನಡದ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರ ಕವಿತೆ ಮತ್ತು ವಿಚಾರ ಪ್ರಸ್ತುತಿಗಳು ಮೂಡಿವೆ.  ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿಯಲ್ಲಿ ಅವರು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿದ್ದಾರೆ. 

‘ಚೌಕಟ್ಟಿನಾಚೆಯವರು’ ಗೀತಾ ವಸಂತ ಅವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು', 'ಪರಿಮಳದ ಬೀಜ’ ಮುಂತಾದವು ಅವರ ಅವರ ಕವನ ಸಂಕಲನಗಳಲ್ಲಿವೆ.  ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಬೀಜದೊಳಗಣ ವೃಕ್ಷ, ಹೊಸ ದಿಗಂತದ ಹೊಸದಾರಿ ಮುಂತಾದವು ಇವರ ವಿಮರ್ಶಾ ಕೃತಿಗಳಲ್ಲಿವೆ. 'ಅವಳ ಅರಿವು' ಎಂಬುದು ಅವರ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳಾಗಿ ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಬೆಂದ್ರೆ ಕುರಿತಾದ 'ಕಂಡವರಿಗಷ್ಟೇ' (ರಾಜಕುಮಾರ ಮಡಿವಾಳರ ಅವರೊಂದಿಗೆ), ತುಮಕೂರು ಜಿಲ್ಲೆಯ 'ಮಹಿಳಾ ಲೇಖಲೋಕ' ಮುಂತಾದವು ಅವರ ಸಂಪಾದನೆಗಳಲ್ಲಿವೆ.  

'ತತ್ವಶಾಸ್ತ್ರ' ಗೀತಾ ವಸಂತ ವಿಶೇಷ ಆಸಕ್ತಿಗಳಲ್ಲಿ ಮುಖ್ಯವಾದುದು. ಅವರ "ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಅವಧೂತ ಪ್ರಜ್ಞೆಯ ಪ್ರಭಾವ” ಎಂಬ ಸಂಶೋಧನಾ ಗ್ರಂಥ ಸಿದ್ಧವಾಗಿದೆ.

ಡಾ.  ಗೀತಾ ವಸಂತ ಅವರ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರತ್ನಮ್ಮ ಹೆಗಡೆ ಪ್ರಶಸ್ತಿ, ಕುದ್ಮುಲ್ ರಂಗರಾವ್ ಪ್ರಶಸ್ತಿ, ಡಾ. ಲತಾ ರಾಜಶೇಖರ್ ಕಾವ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಹಸನ್ಮುಖಿ ಸಾಧಕಿ ಗೀತಾ ವಸಂತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr Geeta Vasant 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ