ಬಾರ್ದೋಲಿ ಸತ್ಯಾಗ್ರಹ
ಬಾರ್ದೋಲಿ ಸತ್ಯಾಗ್ರಹ
ಬಾರ್ದೋಲಿ ಭಾರತದ ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಸೂರತ್ತಿನ ಪೂರ್ವಕ್ಕಿರುವ ಬಾರ್ದೋಲಿಗೆ ಭಾರತ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಗಮನಾರ್ಹ ಸ್ಥಾನವಿದೆ. ಇಲ್ಲಿ ನಡೆದ ರೈತರ ಕರನಿರಾಕರಣ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡ ವಲ್ಲಭಭಾಯಿ ಪಟೇಲರಿಗೆ “ಸರ್‍ದಾರ್” ಎಂಬ ಬಿರುದು ಬಂತು.
ಅತಿವೃಷ್ಟಿ ಅನಾವೃಷ್ಟಿಗಳಿಂದ ರೈತಾಪಿ ಜನರಿಗೆ ತೊಂದರೆಯಾಗಿದ್ದರೂ ಸರ್ಕಾರ ಕಂದಾಯವನ್ನು ಶೇಕಡಾ 25ರಷ್ಟು ಹೆಚ್ಚಿಸಿತು. ಈ ಬಗ್ಗೆ ನಿಷ್ಪಕ್ಷಪಾತ ಸಮಿತಿಯನ್ನು ರಚಿಸಬೇಕೆಂಬ ರೈತರ ಬೇಡಿಕೆಗೂ ಫಲ ಸಿಕ್ಕದೆ ಹೋದಾಗ ರೈತರು ಕರನಿರಾಕರಣ ಚಳವಳಿ ಘೋಷಿಸಿದರು. ಮೊದಲ ಹಂತಗಳಲ್ಲಿ ಕಾಂಗ್ರೆಸ್ ಇದರಲ್ಲಿ ಭಾಗಿಯಾಗಿರಲಿಲ್ಲ. ರೈತವರ್ಗ ತಮ್ಮ ಚಳವಳಿಯ ನೇತೃತ್ವ ವಹಿಸಬೇಕೆಂದು ವಲ್ಲಭಭಾಯಿ ಪಟೇಲರನ್ನು ಕೋರಿತು. ಅವರು ಚಳವಳಿಗೆ ವ್ಯವಸ್ಥಿತ ರೂಪಕೊಟ್ಟರು. 1928 ಏಪ್ರಿಲ್ 24ರಂದು ಸಹಸ್ರಾರು ರೈತರು ಕೊನೆಯತನಕ ಹೋರಾಡುವ ಸಂಕಲ್ಪ ಮಾಡಿದರು. ಮೇ 16 ರಂದು ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿ ತಮ್ಮ ಬೆಂಬಲ ಸೂಚಿಸಿದರು. ಗವರ್ನರ್ ಲೆಸ್ಲಿ ವಿಲ್ಸನ್ ರೈತರು ಭೂಕಂದಾಯ ಕಟ್ಟದಿದ್ದಲ್ಲಿ ಉಗ್ರಕ್ರಮ ಕೈಗೊಳ್ಳುವುದಾಗಿ ಸಾರಿದ. ಕಂದಾಯ ವಸೂಲಿಗೆ ಪಠಾಣ ಪೊಲೀಸರನ್ನು ಕರೆಸಿಕೊಳ್ಳಲಾಯಿತು. ಇದಕ್ಕೆ ಜನರಿಂದಲೂ ಪತ್ರಿಕೆಗಳಿಂದಲೂ ವಿರೋಧ ವ್ಯಕ್ತವಾಯಿತು. ಸರ್ಕಾರ ಕೋಮು ಸೌಹಾರ್ದ ಒಡೆಯಲೂ ಪ್ರಯತ್ನ ನಡೆಸಿ ವಿಫಲವಾಯಿತು.
ಸರ್ಕಾರ ತನ್ನ ಬಿಗಿ ಧೋರಣೆ ಸಡಿಲಿಸದಿದ್ದರೆ ತಾವು ಲೆಜಿಸ್ಲೇಟಿವ್ ಕೌನ್ಸಿಲ್ಲಿನ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕಾದೀತೆಂದು ವಲ್ಲಭಭಾಯಿ ಸರ್ಕಾರಕ್ಕೆ ಪತ್ರ ಬರೆದರು. ಆಗಸ್ಟ್ 2ರಂದು ಗಾಂಧೀಜಿ ಬಾರ್ದೋಲಿಗೆ ಭೇಟಿ ನೀಡಿದರು. ಕೊನೆಗೂ ಸರ್ಕಾರ ಆಗಸ್ಟ್ 6ರಂದು ಭೂಕಂದಾಯದ ಹೆಚ್ಚಳದ ಬಗೆಗೆ ಒಪ್ಪಂದಕ್ಕೆ ಬರಬೇಕಾಯಿತು.
ಸತ್ಯಾಗ್ರಹಿ ಸೆರೆಯಾಳುಗಳನ್ನು ಬಿಡುಗಡೆ ಮಾಡಬೇಕು, ಆಸ್ತಿಪಾಸ್ತಿಗಳನ್ನು ಆಯಾ ಭೂಮಾಲೀಕರಿಗೇ ಹಿಂದಿರುಗಿಸಬೇಕು ಹಾಗೂ ಚಳವಳಿಯನ್ನು ನಿಲ್ಲಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಯಿತು. ಸರ್ಕಾರ ನೇಮಿಸಿದ ವಿಶೇಷಪೀಠ ಕಂದಾಯದ ಹೆಚ್ಚಳ ಶೇಕಡಾ 6.25ರಷ್ಟು ಎಂದು ತೀರ್ಮಾನಿಸಿತು. ಮಾರಾಟವಾಗಿದ್ದ ಜಮೀನುಗಳೂ ಹಿಂದಿನ ಮಾಲೀಕರಿಗೆ ಹಿಂದಿರುಗಿಸಲ್ಪಟ್ಟವು. ಪಟೇಲ ತಳವಾರರು ಮತ್ತೆ ತಮ್ಮ ಹುದ್ದೆಗಳಿಗೆ ನೇಮಕಗೊಂಡರು. ಅಹಿಂಸಾ ಮಾರ್ಗ ಅದ್ಭುತ ಪವಾಡ ಮಾಡಿ ತೋರಿಸಿತು. ಸ್ವಾತಂತ್ರ್ಯ ಸಮರಕ್ಕೆ ಹೊಸ ಹುರುಪು ಬಂದಿತು. ವಿಚಾರಣಾ ಸಮಿತಿಯ ಮುಂದೆ ರೈತರ ಪರವಾಗಿ ಪಟೇಲ್, ಭುಲಾಭಾಯಿ ದೇಸಾಯಿ ಮತ್ತು ಕೆ. ಎಂ. ಮುನ್ಷಿ ವಾದಮಾಡಿದರು. ಅದೇ ವರ್ಷ ಆಗಸ್ಟ್ 13ರಂದು ಬಾರ್ದೋಲಿಯಲ್ಲಿ ವಿಜಯದಿನವನ್ನು ವೈಭವದಿಂದ ಆಚರಿಸಿ ಪಟೇಲರಿಗೆ ಅಭಿನಂದನ ಪತ್ರ ಒಪ್ಪಿಸಲಾಯಿತು.
ಬಾರ್ದೋಲಿಗೂ ಕಾಂಗ್ರೆಸ್ಸಿಗೂ ಮೊದಲಿನಿಂದಲೂ ನಂಟು. 1921 ನವೆಂಬರ್ 13ರಂದು ಅಹಮದಾಬಾದಿನ ಪ್ರಾಂತೀಯ ಕಾಂಗ್ರೆಸ್ ಸಮಿತಿ ಸಾಮೂಹಿಕ ಪೌರ ಅವಿಧೇಯತೆಯ ಚಳುವಳಿಯ ನಿರ್ಧಾರ ಕೈಗೊಂಡಿತು. ಗಾಂಧೀಜಿ ಆ ಬಗ್ಗೆ ಚಳವಳಿಯ ಒಂದು ಪ್ರಯೋಗ ನಡೆಸಲು ಅಪೇಕ್ಷಿಸಿದ್ದರು. ಖಾನ್ ಅಬ್ದುಲ್ ಗಫಾರ್‍ಖಾನ್ 1931 ಜೂನ್ 7ರಂದು ಬಾರ್ದೋಲಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು; ಕಸ್ತೂರ ಬಾ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1932 ಜನವರಿ 10ರಂದು ಬಾರ್ದೋಲಿ ಸಮೀಪದಲ್ಲಿ ಕಸ್ತೂರಬಾ ಮತ್ತಿತರರನ್ನು ದಸ್ತಗಿರಿ ಮಾಡಲಾಯಿತು. ಅಲ್ಲಿಯ ಮ್ಯಾಜಿಸ್ಟ್ರೇಟ್ ಮಾರ್ಚ್ 15ರಂದು ಕಸ್ತೂರಬಾ ಅವರಿಗೆ ಆರು ತಿಂಗಳ ಕಠಿಣ ಶಿಕ್ಷೆ ವಿಧಿಸಿದ. 1939 ಮತ್ತು 1941ರಲ್ಲಿ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆ ಬಾರ್ದೋಲಿಯಲ್ಲಿ ಸೇರಿತ್ತು.
On Remembrance Day of Bardoli Satyagraha

ಕಾಮೆಂಟ್‌ಗಳು