ಬಿ. ಪ್ರೇಮಲತ
ಬಿ. ಪ್ರೇಮಲತ
ಡಾ. ಬಿ. ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯರಾಗಿದ್ದು ಊತ್ಸಾಹಿ ಬರಗಾರ್ತಿಯಾಗಿಯೂ ಗಮನ ಸೆಳೆದಿದ್ದಾರೆ.
ಜೂನ್ 15 ಪ್ರೇಮಲತ ಅವರ ಜನ್ಮದಿನ. ಅವರ ಊರು ತುಮಕೂರು. ಇವರ ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಿಂದ ಪದವಿ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾನಿಲಯದಿಂದ ಇಂಪ್ಲಾಂಟಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಪ್ರೇಮಲತ ಇಂಗ್ಲೆಂಡಿನ ಹಲವು ಚಿಕಿತ್ಸಾಲಯಗಳಲ್ಲಿ ಪರಿಣಿತ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವುಳ್ಳ ಪ್ರೇಮಲತ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯುತ್ತ ಬಂದಿದ್ದಾರೆ.
ಅವರ ಕಥೆ, ಕವನ, ಪ್ರಬಂಧ, ಅಂಕಣ, ಪ್ರವಾಸ ಮುಂತಾದ ವೈವಿಧ್ಯ ಬರಹಗಳು ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಮೂಡುತ್ತ ಬಂದಿವೆ.
ಐದು ಬೆರಳುಗಳು (2022) ಮತ್ತು ತಿರುವುಗಳು(2022) ಪ್ರೇಮಲತ ಅವರ ಮೊದಲ ಎರಡು ಪ್ರಕಟಿತ ಕಥಾ ಸಂಕಲನಗಳು. ಈ ಎರಡೂ ಕಥಾಸಂಕಲನಗಳು ಛಂದ ಹಸ್ತಪ್ರತಿ ಸ್ಪರ್ಧೆಯ ಅಂತಿಮ ಹಂತಗಳನ್ನು ತಲುಪಿದ್ದವು. ಇವರ ಅಂಕಣ ಬರಹಗಳ ಪುಸ್ತಕ ’ಕೋವಿಡ್ ಡೈರಿ’(2020) ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು, ’ಬಾಯೆಂಬ ಬ್ರಂಹಾಂಡ’ (2018) ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಕನ್ನಡ ಸಂಸ್ಕೃತಿ ಇಲಾಖೆ ಜನಸಾಮಾನ್ಯರಿಗಾಗಿ ಪ್ರಕಟಿಸಿದೆ. 2023 ರಲ್ಲಿ ‘ನಂಬಿಕೆಯೆಂಬ ಗಾಳಿಕೊಡೆ ' ಎಂಬ ಇವರ ಮೂರನೇ ಕಥಾಸಂಕಲನ ವೀರಲೋಕ ಪ್ರತಿಷ್ಠಾನದ ಮೂಲಕ ಲೋಕಾರ್ಪಣೆಗೊಂಡಿದೆ.
ಪ್ರೇಮಲತ ಅವರಿಗೆ ಸಮಾಜಮುಖಿ ಕಥಾಸ್ಪರ್ಧೆಯ ಬಹುಮಾನ (2023), ಲೇಖಿಕಾ ಸಂಘದ ತ್ರಿವೇಣಿ ಸ್ಮೃತಿ ಮನೋ ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021), 3K ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ(2021), ಯು.ಎ.ಇ.ಯ ಧ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2021), ಕಹಳೆ ಕಥಾ ಸ್ಪರ್ಧೆಯ ಅತ್ಯುತ್ತಮ ಕಥೆ (2021 ಮತ್ತು 202೦), ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯಲ್ಲಿ ನಿರ್ಮಲ ಎಲಿಗಾರ್ ದತ್ತಿ ಪ್ರಥಮ ಬಹುಮಾನ (2019), ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ (2019), ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2017), ಸಿಂಗಾಪುರಿನ ಸಿಂಚನ ಕಥಾ ಸ್ಪರ್ಧೆಯಲ್ಲಿ ಪ್ರಥಮ (2016) ಮತ್ತು ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2017), ತುಷಾರ ಚಿತ್ರಕವನ ಸ್ಪರ್ಧೆಯ ಸಮಾಧಾನಕರ ಬಹುಮಾನ (1997), 'ಸುಧಾ' ಯುಗಾದಿ ಸ್ಪರ್ಧೆ (2024) ಮುಂತಾದ ಬಹುಮಾನಗಳು ಸಂದಿವೆ . ಇವರು ತಿರುವುಗಳು (2022) ಕಥಾ ಸಂಕಲನಕ್ಕೆ ಧಾರವಾಡದ ವಿದ್ಯಾಧರ ಮುತಾಲಿಕ ದೇಸಾಯಿ ಹಸ್ತಪ್ರತಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬಂದಿದೆ.
ಪ್ರೇಮಲತ ಅವರಿಗೆ ಹುಟ್ಟುಹಬ್ಬ ಹಾರ್ದಿಕ ಶುಭಹಾರೈಕೆಗಳು.
Happy birthday Premalatha Basavarajaiah 🌷🌷🌷
ಕಾಮೆಂಟ್‌ಗಳು