ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಮೌಳಿ ಬಿ.ಕೆ.


 ಬಿ.ಕೆ. ಚಂದ್ರಮೌಳಿ


ವಿದ್ವಾನ್ ಬಿ.ಕೆ.ಚಂದ್ರಮೌಳಿ ಕರ್ನಾಟಕದ ಹೆಮ್ಮೆಯ ‌ಮೃದಂಗ ಹಾಗೂ‌ ಕೊನ್ನಕ್ಕೋಲ್ ವಾದಕರೆನಿಸಿದ್ದವರು.  ಇಂದು ಅವರ ಸಂಸ್ಮರಣೆ ದಿನ 

ಕಲಾವಿದರ ಪರಂಪರೆಯಲ್ಲಿ ಜನಿಸಿದ ಚಂದ್ರಮೌಳಿ ಅವರು ಮೃದಂಗವಾದನದಲ್ಲಿ‌ ನಿಪುಣತೆ ಹೊಂದಿದ್ದರಲ್ಲದೆ ಕಲಾಸೇವೆಗೆ ತಮ್ಮ ಜೀವನವನ್ನು ‌ಮುಡಿಪಾಗಿಟ್ಟಿದ್ದವರು. ತಾಯಿ ವಿದುಷಿ ರಾಜಮ್ಮ ಕೇಶವಮೂರ್ತಿ ಮಹಾನ್ ಸಂಗೀತಗಾರ್ತಿ. ಎಡಗೈಯಲ್ಲಿ ‌ನುಡಿಸುವ ಕೆಲವೇ ಮೃದಂಗ ವಾದಕರಲ್ಲಿ ಇವರೂ ಒಬ್ಬರಾಗಿದ್ದರು. ಕೊನ್ನಕ್ಕೋಲ್ ಬಾಯಲ್ಲಿ ನುಡಿಯುವ ತಾಳವಾದ್ಯ‌ವಿದ್ದಂತೆ. ಹಿಂದೆ ಆ ಕಲೆ ಬಹಳ ಪ್ರಚಲಿತದ್ದಲ್ಲಿತ್ತು. ಕಾಲಕ್ರಮೇಣ ‌ಅದರ‌ ಜನಪ್ರಿಯತೆ ಕುಗ್ಗಿ ಅದು ತಾಳವಾದ್ಯದ ಅಂಗವಾಗಿ ‌ಹೋಗಿತ್ತು. ಶ್ರೀಯುತರು ಈ ವಿಶಿಷ್ಟ ಕಲೆ ಕಲಿಸುವುದಕ್ಕೆ ರೂಪರೇಶೆ ಹಾಕಿ ಇದರ ಬಗ್ಗೆ ಅನೇಕ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದರು.  ಸ್ಪಷ್ಟ ಉಚ್ಛಾರಣೆ, ಉಸಿರಿನ ನಿಯಂತ್ರಣ, ‌ಧ್ವನಿಯ ಏರಿಳಿತಗಳನ್ನು ಬೇಡುವ‌‌ ಕೊನ್ನಕ್ಕೋಲನ್ನು  ಇವರ ಕಚೇರಿಗಳಲ್ಲಿ‌ ಕೇಳುವುದು ಸಂತಸದ‌ ವಿಷಯವಾಗಿತ್ತು. 

ಭರತನಾಟ್ಯ ಮತ್ತು ಕರ್ನಾಟಕ ಸಂಗೀತದ ಕಚೇರಿಗಳೆರಡಕ್ಕೂ ಮೃದಂಗ ನುಡಿಸುವುದು ಬೇರೆ‌ ಬೇರೆ. ನೃತ್ಯಕ್ಕೆ  ನೇಪಥ್ಯದಲ್ಲಿ ಅತ್ಯಂತ ಸೃಜನಶೀಲತೆ ತೋರುತ್ತಿದ್ದ ಇವರು ಸಂಗೀತ ಕಚೇರಿಯ ವೇದಿಕೆಯಲ್ಲಿ ತಮ್ಮ ನಗುಮುಖದಿಂದ ರಸಿಕರನ್ನು ತನಿಗಾಗಿ ಕಾಯುವಂತೆ ಮಾಡುತ್ತಿದ್ದರು. ಅತ್ಯಂತ ಸಮರ್ಥವಾಗಿ ಎರಡಕ್ಕೂ ನುಡಿಸಬಲ್ಲ ಕಲಾವಿದರಾಗಿದ್ದ ಇವರು ಬಹು ಬೇಡಿಕೆಯ ‌ವಾದ್ಯಗಾರರಾಗಿದ್ದರು. ತಾಯಿ ವಿದುಷಿ ರಾಜಮ್ಮ ಕೇಶವಮೂರ್ತಿ ಅವರ  ಪ್ರಭಾವದಿಂದ ಹೊರಗೆ ಬಂದು ಸಂಗೀತ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

ಸಂಗೀತಗಾರರಲ್ಲದೆ, ತಾಳವಾದ್ಯಗಳ  ಇತಿಹಾಸ ,  ಅದರ  ಐತಿಹಾಸಿಕ ‌ಬೆಳವಣಿಗೆಗಳ‌ ಬಗ್ಗೆ‌ ಸಮಗ್ರವಾಗಿ ತಿಳಿದುಕೊಂಡಿದ್ದ‌ ಚಂದ್ರಮೌಳಿ ಅವರು, ಅದನ್ನು ತಮ್ಮ ಸಂಗೀತ ಶಾಲೆಯಲ್ಲಿ ಹೇಳಿಕೊಡುತ್ತಿದ್ದುದಲ್ಲದೆ, ಒಳ್ಳೆಯ ಸಂಗೀತ‌ ಕಚೇರಿಗಳ  ಆಯೋಜಕರೂ ಆಗಿ ಅನೇಕ ಹಿರಿಯ ಕಿರಿಯ ಕಲಾವಿದರನ್ನು ಉತ್ತೇಜಿಸುತ್ತಿದ್ದರು. ಸದಾ ನಗುಮುಖದ ವಿದ್ವತ್ಪೂರ್ಣ ‌ಮಾತುಗಾರರಾಗಿದ್ದ  ಚಂದ್ರಮೌಳಿಯವರು ಬಹಳ ಜನಪ್ರಿಯತೆ ಗಳಿಸಿದ್ದರು. ಇವರ‌‌ ಪುತ್ರರಾದ ಬಿ.ಸಿ. ಮಂಜುನಾಥ್ ಕೂಡ ಅತ್ಯುತ್ತಮ ‌ಮೃದಂಗ ವಾದಕರು. ಜೊತೆಗೆ ಕೊನ್ನಕ್ಕೋಲ್‌ನ್ನು ದೇಶವಿದೇಶಗಳಲ್ಲಿಯೂ ‌ಪ್ರಸರಿಸುತ್ತಿದ್ದಾರೆ. ಅನೇಕ‌ ವೀದೇಶಿ ಕಲಾವಿದರೊಂದಿಗೆ  ಫ್ಯೂಷನ್‌ ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ. ಇವರ ಸುಪುತ್ರಿ ಹರಿಣಿ ಭರತನಾಟ್ಯ ಕಲಾವಿದೆ ಹಾಗೂ ಜನಪ್ರಿಯ ಕಿರುತೆರೆ ನಟಿ.

‌ಮಹಾನ್ ಕಲಾವಿದರಾಗಿದ್ದ ವಿದ್ವಾನ್ ಬಿ.ಕೆ. ಚಂದ್ರಮೌಳಿಯವರು 2018ರ ಜುಲೈ 20ರಂದು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು.‍

ಲೇಖನ ಕೃಪೆ: Janaki Murali 🌷🙏🌷

On Remembrance Day of great mridangam artiste Vidwan B. K. Chandramouli 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ