ಸೋಮೇಶ್ವರಶತಕ10
ಸೋಮೇಶ್ವರ ಶತಕ 10ನೇ ದಿನ
ಪದ್ಯ 46
*ಧುರ ಧೀರರ್ಗರೆಗಂಜಿ ಹೇಡಿಗಳಿಗಂ ಮೃಷ್ಟಾನ್ನ ಸತ್ಕೀರ್ತಿಯಂ , ಧರೆಯೊಳ್ ಬಿತ್ತುವಗಡ್ಡ ದುಡ್ಡು ಜರೆವರ್ಗಿಷ್ಟಾರ್ಥ ದಾನಂಗಳುಂ , ಅರೆಮೆಯ್ಪಣ್ಗರೆ ಭೋಗ ವೇಶಿಯರ ಪಾಲಾಗಿರ್ಪರೆಂದೆಂದು ಮಾ , ದೊರೆಗಳ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಯುದ್ಧದಲ್ಲಿ ವೀರರಾದವರಿಗೆ ಅರೆಗಂಜಿಯನ್ನೂ, ಹೇಡಿಗಳಿಗೆ ಮೃಷ್ಟಾನ್ನ ಭೋಜನವನ್ನೂ ಕೊಡುವಂತವನು, ತನ್ನ ಕೀರ್ತಿಯನ್ನು ಹರಡುವವರಿಗೆ ಕಡಿಮೆ ಧನವನ್ನೂ ತನ್ನನ್ನು ನಿಂದಿಸುವವರಿಗೆ ಹೆಚ್ಚಿನ ಧನವನ್ನು ಕೊಡುವಂತವನು, ತನ್ನ ಕೈ ಹಿಡಿದ ಹೆಂಡತಿಗೆ ಅಲ್ಪ ಸುಖವನ್ನೂ ವೇಶ್ಯೆಯರಿಗೆ ಹೆಚ್ಚಿನ ಸುಖವನ್ನೂ ಕೊಡುವಂತವನು, ಇಂತಹಾ ರಾಜರಾದರೆ ಅವರಿಗೆ ನೀತಿಯೆಲ್ಲಿಯದು?
ಪದ್ಯ 47
*ಬರೆದಾರಿದ್ರ್ಯದಿ ದ್ರೋಣನಂ ದ್ರುಪದ ಪೂರ್ವಸ್ನೇಹದಿಂ ಕಂಡನೇ ? , ಕುರು ಭೂಪಾಲನು ಪಾಂಡುಪುತ್ರರು ಮಹಾಧರ್ಮಾತ್ಮರೆಂದಿತ್ತನೇ ? , ಹರಿಯಂ ತಂಗಿಯ ಬಾಲನೆಂದು ದಯೆಯಿಂ ಕಂಸಾಸುರಂ ಕಂಡನೇ ? , ದೊರೆಗಳ್ಗೆತ್ತಣ ನಂಟರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಬಡತನದಲ್ಲಿ ಬಂದ ದ್ರೋಣನನ್ನು ರಾಜನಾದ ದ್ರುಪದನು ಹಿಂದಿನ ಸ್ನೇಹದಿಂದ ಕಾಣಲಿಲ್ಲ. ಪಾಂಡುಪುತ್ರರು ಮಹಾ ಧರ್ಮಾತ್ಮರೆಂದು ಕುರು ಭೂಪತಿಯು ರಾಜ್ಯವನ್ನು ಕೊಡಲಿಲ್ಲ. ತಂಗಿಯ ಮಗನೆಂದು ಹರಿಯನ್ನು ಕೊಲ್ಲುವ ಯತ್ನವನ್ನು ಕಂಸನು ಬಿಡಲಿಲ್ಲ. ಹೀಗಿರಲು ದೊರೆಗಳಿಗೆಲ್ಲಿಯ ನಂಟರು ?
ಪದ್ಯ 48
*ಚಪಳರ್ಚೋರರು ಜೂಜುಗಾರರು ವಿಟರ್ ತಾವ್ ಶ್ರೇಷ್ಠರೆಂದುಬ್ಬುವರ್, ಕಪಟೋಪಾಯದ ಕೂಟಸಾಕ್ಷಿಯ ಜನರ್ಕೊಂಡಾಡುವರ್ಕೊಂಡೆಯರ್ , ಅಪನಿಂದಾನ್ವಿತರಾತ್ಮಬೋಧಕುಹಕರ್ ಸಾಮೀಪ್ಯಮಾತ್ರೇಷ್ಟರುಂ , ನೃಪರೊಳಾನ್ಯರೆನಿಪ್ಪರೈ ಹರಹರಾ ಶ್ರೀಚೆನ್ನಸೋಮೇಶ್ವರಾ.*
ಚಪಲರು, ಕಳ್ಳರು, ಜೂಜುಕೋರರು, ವಿಟರು, ತಾವೇ ಶ್ರೇಷ್ಠರೆಂದು ಸ್ವಪ್ರಶಂಸೆ ಮಾಡಿಕೊಳ್ಳುವವರು, ಕುಟಿಲೋಪಾಯದಲ್ಲಿ ತೊಡಗಿದವರು, ಸುಳ್ಳುಸಾಕ್ಷಿ ಹೇಳುವವರು, ಜನರಿಂದ ಹೊಗಳಿಸಿಕೊಳ್ಳಬಯಸುವವರು, ಆತ್ಮವಿಚಾರವನ್ನು ತಿಳಿದವರಂತೆ ನಟಿಸುವವರು, ರಾಜರ ಆಸ್ಥಾನದಲ್ಲಿ ಸ್ಥಾನ ಬಯಸುವವರು ಇಂತಹವರೇ ರಾಜರುಗಳಿಗೆ ಸಮೀಪದಲ್ಲಿರುತ್ತಾರೆ.
ಪದ್ಯ 49
*ಅಣುಮಾತ್ರಂ ನಜರಿಲ್ಲದಾಣ್ಮನೆಡೆಗಂ ಲಂಚಕ್ಕೊಡಂಬಟ್ಟು ವಾ , ಪಣಮಂ ಕೊಂಡತಿ ದ್ರವ್ಯಮಂ ಕೆಡಿಸಿ ಛಾಡಂಗೇಳಿ ದ್ರೋಹಂಗಳಾ , ಯೆಣಿಸುತ್ತೆಲ್ಲರ ಬಾಳ್ಗೆ ನೀರನೆರೆದುಂ ತಾಂ ಮಾಣದೇ ಭಕ್ಷಿಪಾ , ಗಣಿಕಂ ಹೆಗ್ಗಣಕಂ ಸಮಂ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಒಡೆಯನ ಬಳಿ ಸ್ವಲ್ಪವೂ ಅನುಮಾನಕ್ಕೆ ಎಡೆಯಿಲ್ಲದಂತೆ ಇದ್ದು ಹೊರಗಿನವರಿಂದ ಲಂಚವನ್ನು ತೆಗೆದುಕೊಂಡು ಕೆಲಸ ಮಾಡಿಕೊಡುತ್ತ ಒಡೆಯನಿಗೆ ಬರಬೇಕಾದ ಹಣವನ್ನು ತಪ್ಪಿಸಿ, ಚಾಡಿಮಾತುಗಳನ್ನು ಹೇಳುತ್ತಾ ಇತರರ ಬಾಳಿಗೆ ನೀರೆರೆದು ಹಾಳು ಮಾಡಿ ದ್ರೋಹದಿಂದ ತಾನೇ ಎಲ್ಲವನ್ನೂ ಭಕ್ಷಿಸುವಂತಹ ಕರಣಿಕನು ಹೆಗ್ಗಣಕ್ಕೆ ಸಮ.
ಪದ್ಯ 50
*ಇಳೆಯಾಣ್ಮ ತನಗಿಂತ ವೆಗ್ಗಳನೆನುತ್ತಂ ಪಾರುಪತ್ಯಂಗಳಂ , ಖಳಗೀಯಲ್ಗುಲಿತಿಂದು ರಾಜ್ಯವನಿತಂ ನೀನ್ಯಾಕೆ ತಾನ್ಯಾತೆಕೆಂ , ದುಳಿದರ್ಗೀಯದೆ ಜೀತಮಂ ಕಪಿಯ ಮುಷ್ಟಿಂ ಮಾಡಿ ಕೂಗುತ್ತಿಹಾ , ದಳವಾಯೇ ಬಳಿಮಾರಿಯೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ರಾಜನು ತನಗಿಂತ ಸಮರ್ಥನಾದವನು ಎಂದು ಭಾವಿಸಿ ಖಳನಿಗೆ ಎಲ್ಲ ಪಾರುಪತ್ಯಗಳನ್ನು ನೀಡಿದರೆ ಅವನು ಉಳಿದವರಿಗೆ ಏನೂ ಸಹಾಯ ಮಾಡದೆ ಬದಲಿಗೆ ತಾನೇ ಎಲ್ಲವನ್ನೂ ಕಬಳಿಸುತ್ತಿರುವನು. ಇಂತಹವನು ದಳವಾಯಿಯಲ್ಲ. ಬಳಿಯಲ್ಲಿರುವ ಮಹಾಮಾರಿಯೇ ಸರಿ.
ವಿವರಣೆ:. ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು