ಸೋಮೇಶ್ವರಶತಕ9
ಪದ್ಯ 41
*ಕೃತ ಶಾಪಾನ್ವಿತನಾ ಹಿಮಾಂಶು ಗುರುವಿಂ, ಗೋತ್ರಾದಿ ಭಂಗಾಂಗ ದ್ರೌ , ಪದಿಯಂ ಕೀಚಕನಂ ಬಕಾರಿ ಮುರಿದಂ ಸುಗ್ರೀವನಿಂ ವಾಲಿ ತಾಂ , ಹತನಾದಂ ದಶಕಂಠನಾ ಹರಿಶರಕ್ಕೀಡಾದನೇ ವೇಳ್ಪೆನಾ / ನತಿಕಾಮರ್ಗತಿ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಪರಸ್ತ್ರೀಯನ್ನು ಬಯಸಿದ್ದರಿಂದ ಚಂದ್ರನು ಗುರು ಬೃಹಸ್ಪತಿಯ ಶಾಪಕ್ಕೆ ಒಳಗಾದನು. ಇಂದ್ರನು ಅನ್ಯ ಸ್ತ್ರೀಯನ್ನು ಬಯಸಿ ಶಾಪಕ್ಕೆ ಒಳಗಾದನು. ಹಾಗೆಯೇ ಕೀಚಕನು ಭೀಮನಿಂದಲೂ, ರಾವಣನು ರಾಮನಿಂದಲೂ ಹತರಾದರು ಆದುದರಿಂದ ಪರಸ್ತ್ರೀಯರ ಮೇಲೆ ಕಾಮವು ಸಲ್ಲದು.
ಪದ್ಯ 42
*ಬಲವಂತರ್ ಬಲವಾಗಲಿಕ್ಕೆಲದವರ್ ಮಿತ್ರತ್ತ್ವಮಂ ಮಾಡಲು , ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ , ಕೊಳದೆಲ್ಲರ್ ಸುಖರಾಗೆ ನಂಬುಗೆಪೋಹಂ ಬಾರದಾಳಲ್ನಿಜಂ , ಬಲುಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಒಬ್ಬ ರಾಜನಿಗೆ ಎಲ್ಲ ಕಡೆಗಳಲ್ಲಿಯೂ ಬಲವಂತರ ಸಹಾಯವಿದ್ದು, ಅಕ್ಕಪಕ್ಕದ ರಾಜರುಗಳು ಸ್ನೇಹದಿಂದಿದ್ದು, ಸಮೃದ್ಧವಾಗಿ ಬೆಳೆಯಾಗಿ ಸುಭಿಕ್ಷವಾಗಿದ್ದು, ಪ್ರಜೆಗಳಿಗೆ ಹೆಚ್ಚಿನ ದಂಡವನ್ನು ಹಾಕದೆ ಅವರು ಸುಖವಾಗಿರುವಂತೆ ನೋಡಿಕೊಂಡಿದ್ದು, ನಂಬಿಕೆಯುಳ್ಳ ಚಾರರನ್ನು ಹೊಂದಿದ್ದರೆ ಅವನು ಭಾಗ್ಯಶಾಲಿಯೆನಿಸಿಕೊಳ್ಳುವನು.
ಪದ್ಯ 43
*ಧುರದೊಳ್ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದ್ಯರೊಳ್ ಭೃತ್ಯರೊಳ್ , ಪುರದೊಳ್ ಬಂಧುಗಳೊಳ್ ಸ್ವಜನರೊಳ್ ವೈದ್ಯಾಳಿಯೊಳ್ ಮಂತ್ರಿಯೊಳ್ , ಅರಿಯೊಳ್ ಜ್ಯೋತಿಷ ಮಂತ್ರವಾದಿ ಕುಹನಾ ವಿದ್ವಾಂಸರೊಳ್ ಸ್ತ್ರೀಯರೊಳ್ , ಅರಸಿಂಗೆಚ್ಚರು ಬೇಕೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಯುದ್ಧಗಳಲ್ಲಿ, ತನ್ನ ಸೈನ್ಯದ ವೀರರಲ್ಲಿ, ಪ್ರಜೆಗಳಲ್ಲಿ, ದಾಯಾದಿಗಳಲ್ಲಿ, ಸೇವಕರಲ್ಲಿ, ಪಟ್ಟಣದಲ್ಲಿ, ಬಂಧುಗಳಲ್ಲಿ, ಸ್ವಜನರಲ್ಲಿ, ವೈದ್ಯರಲ್ಲಿ, ಮಂತ್ರಿಗಳಲ್ಲಿ, ಶತ್ರುಗಳಲ್ಲಿ, ಜ್ಯೋತಿಷಿ, ಮಂತ್ರವಾದಿಗಳಲ್ಲಿ, ಕುಹಕರಲ್ಲಿ ವಿದ್ವಾಂಸರಲ್ಲಿ, ಸ್ತ್ರೀಯರಲ್ಲಿ ಅರಸನಾದವನಿಗೆ ಸದಾ ಎಚ್ಚರಿಕೆ, ಜಾಗರೂಕತೆ ಇರಬೇಕು.
ಪದ್ಯ 44
*ವರವಿದ್ವಾಂಸ ಕವೀಂದ್ರ ಗಾಯಕ ಪುರಾಣಿಕರ್ ಮಹಾಪಾಠಕರ್, ಪರಿಹಾಸರ್ ಸ್ವರ ಶಾಸ್ತ್ರಮಂತ್ರ ಶಕುನಜ್ಞರ್ಕೋವಿದರ್ ವೇಶ್ಯೆಯರ್ , ಸ್ಮರಶಸ್ತ್ರಾದಿ ಸಮಸ್ತ ವಿದ್ಯೆಯರಿತರ್ ಕಾಲಾಳು ಮೇಲಾಳಿರಲ್ ದೊರೆಯೊಡ್ಡೋಲಗ ಚೆಲ್ವರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ದೊರೆಯ ಒಡ್ಡೋಲಗವು ಚೆಲುವೆನಿಸಬೇಕಾದರೆ ಈ ಎಲ್ಲರೂ ಅಲ್ಲಿ ಇರಬೇಕು ಎಂದು ಒಂದು ಪಟ್ಟಿ ಕೊಡಲಾಗಿದೆ. ವಿದ್ವಾಂಸರು, ಕವಿಗಳು, ಗಾಯಕರು, ಪುರಾಣಿಕರು, ಮಹಾಪಾಠಕರು, ವಿದೂಷಕರು, ಸ್ವರ, ಶಾಸ್ತ್ರ, ಮಂತ್ರ, ಶಕುನಗಳನ್ನು ಬಲ್ಲ ಪಂಡಿತರು, ವೇಶ್ಯೆಯರು, ಸಮಸ್ತ ವಿದ್ಯೆಗಳನ್ನು ಬಲ್ಲವರು, ಕಾಲಾಳು ಮೇಲಾಳುಗಳು ಇವರೆಲ್ಲರೂ ಅಲ್ಲಿದ್ದರೆ ಚಂದ.
ಪದ್ಯ 45
*ಪುರದುರ್ಗಂಗಳ ಬಲ್ಮೆಮಾಡದೆ ಪ್ರಜಾಕ್ಷೋಭಂಗಳಂ ನೋಡನೆ_ , ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ , ತುರದಿಂದುಂಡತಿ ನಿದ್ರೆಗೆಯ್ದು ಮದನಂಗಾಳಾಗಿಹಂ ಲೋಕದೊಳ್ , ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ತನ್ನ ಪುರ, ಕೋಟೆಗಳನ್ನು ಗಮನಿಸದೆ, ಪ್ರಜೆಗಳ ಕಷ್ಟಗಳನ್ನು ನೋಡದೆ, ಎಲ್ಲರನ್ನೂ ವಿಶ್ವಾಸಿಗಳೆಂದು ನಂಬಿ ಆಯವ್ಯಯಗಳನ್ನು ಗಮನಿಸದೆ, ಆತುರದಲ್ಲಿ ತಿಂದು ಅತಿಯಾದ ನಿದ್ರೆ ಮಾಡುತ್ತ ಕಾಮಾತುರನಾಗಿರುವ ರಾಜನು ಸೊಕ್ಕಿದ ಕೋಣವೇ ಸರಿ.
ವಿವರಣೆ:. ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು