ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ3


ಸೋಮೇಶ್ವರ ಶತಕ 3ನೇ ದಿನ

ಪದ್ಯ 11
*ಕೊಡಬಲ್ಲಂಗೆ ದರಿದ್ರಮಂ ಪ್ರವುಢಗಂ ಮೂಢಾಂಗನಾ ಲಾಭಮಂ , ಮಡೆಯಂಗುತ್ತಮ ಜಾತಿ ನಾಯಕಿಯ ಪಾಪಾತ್ಮಂಗೆ ನಿತ್ಯತ್ವವಂ , ಕಡುಲೋಭಂಗತಿ ದ್ರವ್ಯಮಂ ಸುಕೃತಿಗಲ್ಪಾಯುಷ್ಯಮಂ ನೀಡುವಂ , ಸುಡು ಪಾಪಿಷ್ಠನ ಬೊಮ್ಮನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಬ್ರಹ್ಮ ಮಾಡುವ ಕೆಲಸದ ಬಗ್ಗೆ ಇಲ್ಲಿ ಕೋಪ ವ್ಯಕ್ತವಾಗಿದೆ. ಏಕೆಂದರೆ ಅವನು ಜೋಡಿಸುವುದು ಹೆಚ್ಚು ಬಾರಿ ವಿರುದ್ಧವಾದುದೇ ಆಗಿರುತ್ತದೆ. ದಾನ ಮಾಡಬಲ್ಲ ಮನಸ್ಸು ಇರುವವನಿಗೆ ದಾರಿದ್ರ್ಯ, ಬುದ್ಧಿವಂತನಿಗೆ ಮೂಢಳಾದ ಹೆಂಡತಿ, ಗಂಡು ಹೆಣ್ಣು ಜೋಡಿಯಲ್ಲಿ ಅಸಮಂಜತೆ, ಪಾಪಿಗೆ ಹೆಚ್ಚಿನ ಆಯುಸ್ಸು, ಅತ್ಯಂತ ಜಿಪುಣನಿಗೆ ಅತಿಯಾದ ಶ್ರೀಮಂತಿಕೆ, ಪುಣ್ಯವಂತನಿಗೆ ಅಲ್ಪಾಯುಷ್ಯ...ಹೀಗೆ ಪರಸ್ಪರ ವಿರುದ್ಧವೇ ಮಾಡುವ ಬ್ರಹ್ಮನ ಬಗ್ಗೆ ಕೋಪವಿದೆ.

ಪದ್ಯ 12
*ಉಡುರಾಜಂ ಕಳೆಗುಂದಿ ಪೆರ್ಚದಿಹನೇ? ನ್ಯಗ್ರೋಧ ಬೀಜಂ ಕೆಲಂ,  ಸಿಡಿದು ಪೆರ್ಮರನಾಗದೇ? ಎಳೆಗರಂ ತಾಂ ದೊಡ್ಡೆತ್ತಾಗದೆ? , ಮಿಡಿ ಪಣ್ಣಾಗದೆ? ದೈವದೊಲ್ಮೆಯಿರಲುಂ, ಕಾಲಾನುಕಾಲಕ್ಕೆ ತಾ_  ಬಡವಂ ಬಲ್ಲಿದನಾಗನೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ದೈವಕೃಪೆಯೆನ್ನುವುದು ಮಹತ್ವದ ಸಂಗತಿ. ಇದು ಇದ್ದರೆ ಸಮಯ ಸಾಗಿದಂತೆ ಎಲ್ಲವೂ ಒಳಿತಾಗುತ್ತದೆ. ಚಂದ್ರನು ಕಳೆಗುಂದಿದ್ದರೂ ಮತ್ತೆ ದಿನದಿಂದ ದಿನಕ್ಕೆ ಹೆಚ್ಚು ಕಾಂತಿಯುಕ್ತನಾಗುವನಲ್ಲವೆ? ಆಲದ ಮರದ ಕೆಲವೇ ಸಣ್ಣ ಬೀಜಗಳು ಅಲ್ಲಲ್ಲಿ ಸಿಡಿದು ಮುಂದೆ ದೊಡ್ಡ ಮರವಾಗಿ ಬೆಳೆಯುವುದಿಲ್ಲವೆ? ಚಿಕ್ಕದಾಗಿದ್ದ ಕರು ಬೆಳೆದು ಬಲಿಷ್ಠವಾದ ಎತ್ತಾಗುವುದು ಸಹಜ. ಮಿಡಿಗಾಯಿ ಬಲಿತು ಹಣ್ಣಾಗುವಂತೆ ಕಾಲ ಒದಗಿಬಂದಂತೆ ಬಡವನೂ ಬಲ್ಲಿದನಾಗುವನು.

ಪದ್ಯ 13
*ಮರಗಳ್ಪುಟ್ಟವೆ? ತಾಣಮೊಂದೆ ಖಗಕಂ? ರಾಜ್ಯಂಗಳೇಂ ಪಾಳೆ? ಭೂ_, ವರರೊಳ್ತ್ಯಾಗಿಗಳಿಲ್ಲವೆ? ಕವಿಗೆ ವಿದ್ಯಾಮಾತೃವೇಂ ಬಂಜೆಯೇ?, ಪುರಮೊಂದೇನುಣಲಿಕ್ಕದೇ? ಜನನಿ ಗಂಡೆಂದೆನ್ನಳೇ? ಲೋಕದೊ_ ,ಳ್ನರನಂ ಪುಟ್ಟಿಸಿ ಹುಲ್ಲ ಮೇಯಿಸುವನೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಹಕ್ಕಿಗಳಿಗೇನು ಒಂದೇ ಮರವೆಂಬುದಿಲ್ಲ. ಒಂದಲ್ಲ ಒಂದು ಸಿಕ್ಕೇ ಸಿಗುತ್ತವೆ. ರಾಜರುಗಳಲ್ಲಿ ಕೆಲವರು ತ್ಯಾಗಿಗಳೂ ಇರುತ್ತಾರೆ. ಹಾಗೆಂದು ರಾಜ್ಯಗಳೇನೂ ಪಾಳುಬೀಳುವುದಿಲ್ಲ. ಕವಿಗಳಿಗೆ ವಿದ್ಯೆಯೆಂಬ ತಾಯಿಯಿದ್ದೇ ಇರುವಳು. ಅವಳೆಂದೂ ಬಂಜೆಯಲ್ಲ. ಅವನಿಗೆ ಎಲ್ಲಿ ಹೋದರೂ ಆಸರೆ ಸಿಗುತ್ತದೆ.  ಗೌರವವಿರುತ್ತದೆ. ತಾಯಿಯು ಎಂದಿಗೂ ತನ್ನ ಮಕ್ಕಳನ್ನು ಹೊಗಳದಿರುವುದಿಲ್ಲ. ಹೀಗೆ ಈ ಲೋಕದಲ್ಲಿ ಎಲ್ಲರಿಗೂ, ಎಲ್ಲಕ್ಕೂ ಒಂದಲ್ಲ ಒಂದು ಆಸರೆ ಇದ್ದೇ ಇರುತ್ತದೆ. ಪ್ರತಿಯೊಂದು ಜೀವಿಗೂ ಅದರದರ ಆಹಾರವಿದ್ದೇ ಇರುತ್ತದೆ.

ಪದ್ಯ 14
*ಚರಿಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್ ಫಲಂ ತೀವಿದಾ , ಮರಗಳ್ ಪುಟ್ಟವೆ? ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ? , ನಿರುತಂ ಸತ್ಕುಲವರ್ಗದಲ್ಲಿ ಮುನಿದೋರ್ವಂ ಲೋಭಿಯಾಗಿರ್ದೊಡಂ , ಧರೆಯೊಳ್ದಾತರು ಪುಟ್ಟರೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ದಟ್ಟವಾದ ಅರಣ್ಯದಲ್ಲಿ ಒಂದು ಮರವು ಒಣಗಿದರೆ ಅಲ್ಲಿ ಸಂಚರಿಸುವ ಪಕ್ಷಿಗಳಿಗೇನೂ ಕಷ್ಟವಿಲ್ಲ. ಹಣ್ಣುಗಳಿಂದ ತುಂಬಿದ ಇತರ ನೂರಾರು ಮರಗಳು ಇರುತ್ತವೆ. ಒಂದು ಹೂವು ಬಾಡಿಹೋದರೆ ದುಂಬಿಗೇನೂ ಕಷ್ಟವಿಲ್ಲ. ಬೇರೆ ಬೇಕಾದಷ್ಟು ಹೂಗಳಿರುತ್ತವೆ. ಅನುದಿನವೂ ಸತ್ಕಾರ್ಯದಲ್ಲಿ ತೊಡಗಿರುವವರ ನಡುವೆ ಒಬ್ಬ ಲೋಭಿಯಾಗಿದ್ದರೆ ಏನೂ ತೊಂದರೆಯಿಲ್ಲ. ಈ ಭೂಮಿಯಲ್ಲಿ ದಾತರು, ದಾನಿಗಳು ಹುಟ್ಟದಿರುತ್ತಾರೆಯೇ? ಇದ್ದೇ ಇರುತ್ತಾರೆ.

ಪದ್ಯ 15
*ಸ್ವಕುಲೋದ್ಧಾರಕನಾಗಿ ಭಾಗ್ಯಯುತನಾಗಾಯುಷ್ಯಮುಳ್ಳಾತನಾ ,  ಗಳಂಕಂ ಘನಮಾಗಿ ಬಾಳ್ಪ ಸತಿಯಿರ್ದಾನಂದಮಂ ಮಾಳ್ಪ ಬಾ , ಲಕನಾಗೀಶ್ವರ ಭಕ್ತನಾಗಿ ತನುದಾರ್ಢ್ಯಂ ಕೂಡಿದಾ ಮರ್ತ್ಯನಾ , ಸುಖಪೂರ್ವಾರ್ಜಿತ ಪುಣ್ಯವೈ, ಹರಹರಾ ಶ್ರೀ ಚೆನ್ನಸೋಮೇಶ್ವರಾ.

ಕುಲವನ್ನು ಉದ್ಧರಿಸುವಂತಹವನಾಗಿ, ಭಾಗ್ಯವಂತನಾಗಿ, ಆಯುಷ್ಯವುಳ್ಳವನಾಗಿ, ಅಕಳಂಕನಾಗಿ, ಚೆನ್ನಾಗಿ ಬಾಳ್ವೆ ನಡೆಸುವ ಸತಿಯುಳ್ಳವನಾಗಿ,  ಆನಂದದಿಂದ ಬಾಳುವವನಾಗಿ, ಈಶ್ವರನ ಭಕ್ತನಾಗಿ, ದೇಹದಲ್ಲಿ ಶಕ್ತಿವಂತನಾಗಿ ಇರುವುದೆಂದರೆ ಅದು ಪೂರ್ವಾರ್ಜಿತ ಪುಣ್ಯವೇ ಸರಿ.

ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ