ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ4


ಸೋಮೇಶ್ವರ ಶತಕ 4ನೇ ದಿನ 


ಪದ್ಯ 16

*ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ, ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ, ರವಿಯೆಲ್ಲಾ ಗ್ರಹಕಂ ವರಂ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್, ಶಿವನೇ ದೈವ ಜಗಂಗಳೊಳ್ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಲೋಕದಲ್ಲಿ ಯಾವುಯಾವುದು ಮಹತ್ವವಾದುದೆಂದು ಇಲ್ಲಿ ಹೇಳಲಾಗಿದೆ. ಸರ್ವರಲ್ಲಿ ಕವಿಯೇ ಉತ್ತಮ, ಲೋಹಗಳಲ್ಲಿ ಬಂಗಾರವೇ ಶ್ರೇಷ್ಠ, ತೀರ್ಥಗಳಲ್ಲಿ ಉನ್ನತವಾದುದೆಂದರೆ ಜಾಹ್ನವೀ ನದಿ. ಸ್ರ್ತೀಯರಲ್ಲಿ ಗರತಿಯು ಸರ್ವಶ್ರೇಷ್ಠ. ಎಲ್ಲ ಗ್ರಹಗಳಲ್ಲಿ ರವಿಯು ಮುಖ್ಯನು, ನವರಸಗಳಲ್ಲಿ ಶೃಂಗಾರವು ಹಿರಿದಾದುದು. ಹಾಗೆ ದೈವಗಳಲ್ಲೆಲ್ಲ ಶಿವನೇ ಶ್ರೇಷ್ಠ ಎಂದು ಶಿವನ ಹಿರಿಮೆಯನ್ನು ಹೊಗಳಲಾಗಿದೆ.

ಪದ್ಯ 17
*ಹರನಿಂದುರ್ವಿಗೆ ದೈವವೇ? ಮಧುರದಿಂದಂ ಬೇರೆ ಸ್ವಾದುಂಟೆ? ಪೆ_ , ತ್ತರಿಗಿಂ ಕೂರ್ಪರೇ? ಪೆಣ್ಣಿಗಿಂದಧಿಕ ಭೋಗದ್ರವ್ಯಮೇ? ವಿದ್ಯೆಗೇಂ,  ಸರಿಯೇ ಬಾಂದವರೇಂ? ಮನೋಜನಿದಿರೊಳ್ಬಿಲ್ಲಾಳೆ? ಮೂಲೋಕದೊಳ್, ಗುರುವಿಂದುನ್ನತ ಸೇವ್ಯನೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಭೂಮಿಯಲ್ಲಿ ಹರನಿಗಿಂತ ಹೆಚ್ಚಿನ ದೈವವಿಲ್ಲ. ಮಧುರವೆನ್ನುವುದರಲ್ಲಿರುವ ಸಿಹಿ ಮತ್ತೆ ಎಲ್ಲಿಯೂ ಇಲ್ಲ. ಹೆತ್ತ ಮಕ್ಕಳಿಗಿಂತ ಸುಂದರರಾದವರು ಮತ್ತೆ ಯಾರೂ ಇಲ್ಲ. ಹೆಣ್ಣಿಗಿಂತ ಅಧಿಕವಾದ ಭೋಗ ಸಂಪತ್ತಿಲ್ಲ. ವಿದ್ಯೆಗೆ ಸರಿಯಾಗುವ ಬಾಂಧವರೂ ಇಲ್ಲ. ಮನ್ಮಥನು ಹಿಡಿದ ಸುಮಶರಕ್ಕೆ ಮಿಗಿಲಾದ ಬಿಲ್ಲುಗಾರನಿಲ್ಲ. ಹೀಗೆ ಮೂರು ಲೋಕದಲ್ಲಿ ಎಲ್ಲಿ ನೋಡಿದರೂ ಗುರುವಿಗಿಂತ ಹೆಚ್ಚಿನ ಸೇವ್ಯರಾದವರು ಇಲ್ಲ. ಗುರುವೇ ಶ್ರೇಷ್ಠ.

ಪದ್ಯ ‌ 18
*ಪಳಿಯರ್ ಬಂಜೆಯೆನುತ್ತಪುತ್ರವತಿಯೆಂಬರ್ ದೇವ ಪಿತ್ರರ್ಚನಂ, ಗಳಿಗಂ ಸುವ್ರತಕಂ ವಿವಾಹಕೆ ಶುಭಕಂ ಯೋಗ್ಯಳನ್ನೋದಕಂ_‌, ಗಳ ನೀಡಲ್ ಕುಲಕೋಟಿ ಮುಕ್ತಿದಳೆಗುಂ ಸುಜ್ಞಾನದೊಳ್ ಕೂಡಿದಾ, ಕುಲವೆಣ್ಣಂಗೆಣೆಯಾವುದೈ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಉತ್ತಮ ಕುಲದಲ್ಲಿ ಹುಟ್ಟಿದ, ಸುಜ್ಞಾನದಿಂದ ಕೂಡಿದ ಹೆಣ್ಣು ಬಂಜೆಯಾಗಿದ್ದರೂ ಅವಳನ್ನು ಯಾರೂ ಹಳಿಯುವುದಿಲ್ಲ. ಮಕ್ಕಳನ್ನು ಹೊಂದಿದವಳಂತೆಯೇ ಕಾಣುವರು. ದೇವತಾ ಕಾರ್ಯಗಳಿಗೆ, ಪಿತೃಕಾರ್ಯಗಳಿಗೆ, ಒಳ್ಳೆಯ ವ್ರತಗಳಿಗೆ, ವಿವಾಹಕಾರ್ಯಗಳಿಗೆ ಅವಳನ್ನು ಯೋಗ್ಯಳೆಂದು ಪರಿಗಣಿಸುವರು. ಅವಳು ನೀಡುವ ಅನ್ನ, ನೀರುಗಳಿಂದ ಕುಲಕೋಟಿಯೇ ಉದ್ಧಾರವಾಗುವುದು. ಸುಜ್ಞಾನಿಯಾದ ಕುಲವತಿಗೆ ಸಮನಾದವರು ಯಾರೂ ಇಲ್ಲ.  ಯೋಗ್ಯಳಾದ ಹೆಣ್ಣಿಗೆ ಗೌರವ, ಆದರಗಳು ಇರುತ್ತವೆ.

ಪದ್ಯ 19
*ಹಿತವಂ ತೋರುವನಾತ್ಮಬಂಧು, ಪೊರೆವಾತಂ ತಂದೆ, ಸದ್ಧರ್ಮದಾ ,  ಸತಿಯೇ ಸರ್ವಕೆ ಸಾಧನಂ, ಕಲಿಸಿದಾತಂ ವರ್ಣಮಾತ್ರಂ ಗುರು , ಶ್ರುತಿ ಮಾರ್ಗಂ ಬಿಡದಾತ ಸುವ್ರತಿ, ಮಹಾಸದ್ವಿದ್ಯೆಯೇ ಪುಣ್ಯದಂ ,  ಸುತನೇ ಸದ್ಗತಿದಾತನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಯಾರು ನಮಗೆ ಹಿತವನ್ನು ಬಯಸುತ್ತಾರೆಯೋ ಅವರೇ ಆತ್ಮಬಂಧುಗಳು. ನಮ್ಮನ್ನು ಕಾಪಾಡುವವನೇ ತಂದೆಯು. ಸತಿಯೇ ಎಲ್ಲದಕ್ಕೂ ಸಾಧನಳು. ಅಕ್ಷರಮಾತ್ರವನ್ನು ಕಲಿಸಿದವನೂ ಗುರುವು. ಶ್ರುತಿಮಾರ್ಗವನ್ನು ಬಿಡದೆ ಪಾಲಿಸುವವನು ಒಳ್ಳೆಯ ಮುನಿಯು. ಮಹಾ ಸದ್ವಿದ್ಯೆಯೇ ಪುಣ್ಯವನ್ನು ತಂದುಕೊಡುವುದು. ಸುತನೇ ಸದ್ಗತಿಗೆ ಕಾರಣನೂ ಆಗಿದ್ದಾನೆ.

ಪದ್ಯ ‌20
*ಪ್ರಜೆಗಳ ಪಾಲಿಸಬಲ್ಲಡಾತನರಸಂ; ಕೈಯಾಸೆಯಂ ಮಾಡದಾ , ನಿಜ ಮಂತ್ರೇಶ್ವರ; ತಂದೆ_ತಾಯಿ ಸಲಹಲ್ಬಲ್ಲಾತನೇ ಧಾರ್ಮಿಕಂ ,  ಭಜಕಂ ದೈವಂ ಭಕ್ತಿಯುಳ್ಳಡೆ, ಭಟಂ ನಿರ್ಭೀತ  ತಾನಾದಡಂ , ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಯಾರು ಪ್ರಜೆಗಳನ್ನು ಪಾಲಿಸಲು ಬಲ್ಲವನೋ ಅವನೇ ನಿಜವಾದ ಅರಸ. ಆಮಿಷಗಳಿಗೆ ಒಳಗಾಗದವನೇ ನಿಜ ಅರ್ಥದಲ್ಲಿ ಮಂತ್ರಿಯು. ತಂದೆ ತಾಯಿಯರನ್ನು ಸಲಹುವವನೇ ಧಾರ್ಮಿಕನು. ದೈವದಲ್ಲಿ ಭಕ್ತಿಯುಳ್ಳವನೇ ಭಜಕನು. ಭಕ್ತನು. ನಿರ್ಭೀತನಾದವನು ಭಟನಾಗಿರುತ್ತಾನೆ. ಆಚಾರಗಳನ್ನು ಪಾಲಿಸುವವನು ದ್ವಿಜನು. ಹೀಗೆ ಅವರವರ ಗುಣಗಳನ್ನು ಹೇಳಲಾಗಿದೆ.

ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ