ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ5


 ಸೋಮೇಶ್ವರ ಶತಕ 5ನೆಯ ದಿನ


ಪದ್ಯ 21

*ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳಗಳನ್ನಕ್ಷತ್ರಮೆಷ್ಟಿರ್ದಡೇ ,  ನೊರೆಯೇ ಚಂದ್ರಂಗೆ? ಜೀವರತ್ನಕೆಡೆಯೇ ಮಿಕ್ಕಾದ ಪಾಷಾಣವೇ_, ನುರುಗೇಂದ್ರಂಗೆ ಸಮಾನ ನೀರುಳಿ? ಸುಪರ್ಣಂಗೀಡೆ ಕಾಕಾಳಿ? ಸ_, ಕ್ಕರಿಗುಪ್ಪಂ ಸರಿ ಮಾಳ್ಪರೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ಕೋಟಿ ಮಿಂಚುಹುಳುಗಳಿದ್ದರೇನು ಸೂರ್ಯನಿಗೆ ಸಮಾನವಾಗವು. ನಕ್ಷತ್ರಗಳು ಎಷ್ಟಿದ್ದರೇನು ಚಂದ್ರನ ಕಾಂತಿಯ ಮುಂದೆ ಅವು ನಿಲ್ಲಲಾರವು. ಜೀವ ಸಂಜೀವಿನಿಯ ಎದುರು ಯಾವ ಪಾಷಾಣಗಳೂ ಸಮವಲ್ಲ. ನಾಗರಾಜನ ಮುಂದೆ ನೀರುಹಾವು ಸಮವೆ? ಇಲ್ಲ. ಗರುಡನೆದುರು ಕಾಗೆಗಳು ಸಮವಲ್ಲ. ಸಕ್ಕರೆಗೆ ಉಪ್ಪು ಎಂದೂ ಸಾಟಿಯಲ್ಲವೆಂದು ಆಯಾ ವಿಷಯಗಳ ಹಿರಿಮೆಯನ್ನು ಹೇಳಿದ್ದಾರೆ. ಒಳ್ಳೆಯ ಅಂಶಗಳ ಮುಂದೆ ಉಳಿದವು ಎಂದೂ ಸಮಾನವಾಗಲಾರವು.


ಪದ್ಯ  22

*ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ, ಇಚ್ಛಾದಿ ಭೋ_,  ಜನಕಂ, ಪಣ್ಪಲ ಚಂದನಾದಿಯನುಲೇಪಂಗಳ್ಗೆ, ಕಣ್ಗಿಂಪವಾ_, ದೊನಿತಾ ಸಂಗಕೆ, ರಾಜ್ಯ ಭೋಗಕೆ ಸುವಿದ್ಯಂಗಳ್ಗೆ ಯಾರಾದಡಂ ,  ಮನದೊಳ್ಕಾಮಿಸಿ ನೋಡರೆ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ಧನಕ್ಕೆ, ಧಾನ್ಯಕ್ಕೆ, ಉಡುಗೆತೊಡುಗೆಗಳಿಗೆ, ಸುಂದರವಾದ ಹೂಗಳಿಗೆ, ಮನದಾಸೆಯ ಭೋಜನಕ್ಕೆ, ಫಲ, ಚಂದನ ಅನುಲೇಪಗಳಿಗೆ, ಕಣ್ಣಿಗೆ ಅನುರೂಪಳಾದ ಹೆಣ್ಣಿನ ಸಂಗಕೆ, ರಾಜ್ಯದ ಭೋಗಗಳಿಗೆ, ಒಳ್ಳೆಯ ವಿದ್ಯೆಗಳಿಗೆ ಯಾರೇ ಆಗಿರಲಿ ಮನದಲ್ಲಿ ಆಸೆಪಡದೆ ಇರುವರೆ? ಒಂದಲ್ಲ ಒಂದು ಬಾರಿಯಾದರೂ ಆಸೆಪಡುವರು. ಬೇಡವೆನ್ನುವುದಿಲ್ಲ.


ಪದ್ಯ 23

*ಧರಣೀಶಂ ಧುರ ಧೀರನಾಗೆ, ಧನಮುಳ್ಳಂ ತ್ಯಾಗಿಯಾಗಲ್ ಕವೀ_ , ಶ್ವರ ಸಂಗೀತದಿ ಜಾಣನಾಗೆ, ಸುಕಲಾ ಪ್ರೌಢಂಗಿರಲ್ ಪ್ರೌಢೆವೆಣ್,  ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಗಳಂ ಬಲ್ಲೊಡಂ ,  ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ಆಳುವ ರಾಜನು ಪರಾಕ್ರಮಿಯೂ, ಧನವಿದ್ದೂ ತ್ಯಾಗಿಯಾದವನೂ, ಕವಿಯು ಸಂಗೀತಗಾರನೂ ಆಗಿಯೂ, ಸಕಲಕಲಾವಲ್ಲಭನಿಗೆ ಅದೇ ರೀತಿಯ ಹೆಣ್ಣು ದೊರಕಿದರೆ ಚಂದವಲ್ಲವೆ? ಹಾಗೆ ಕರಣಿಕನು ಧಾರ್ಮಿಕನಾಗಿದ್ದು ಮಂತ್ರಿಯು ಚತುರೋಪಾಯಗಳನ್ನು ಅರಿತಿದ್ದರಂತೂ ಚಿನ್ನಕ್ಕೆ ಸೌಗಂಧವೂ ಸೇರಿದಂತೆ ಹೆಚ್ಚಿನ ಸಂತಸ ಉಂಟಾಗುವುದು.


ಪದ್ಯಡ 24

*ಸವಿವಣ್ಣಲ್ಲಿ ಇನಿಮಾವು, ಸರ್ವರಸದೊಳ್ ಶೃಂಗಾರ, ಸಂಭಾರದೊಳ್ / ಲವಣಂ, ಕೇಳಲು ಬಾಲಭಾಷೆ, ಸಿರಿಯಲ್ಲಾರೋಗ್ಯ, ದೈವಂಗಳೊಳ್/  ಶಿವ, ಬಿಲ್ಲಾಳ್ಗಳೊಳಂಗಜಂ, ಜನಿಸುವಾ ಜನ್ಮಂಗಳೊಳ್ ಮಾನುಷಂ / ಕವಿತಾ ವಿದ್ಯೆ ಸುವಿದ್ಯೆಯೊಳ್, ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ರುಚಿಯಾದ ಹಣ್ಣುಗಳಲ್ಲಿ ಮಾವು, ಸರ್ವರಸಗಳಲ್ಲಿ ಶೃಂಗಾರ, ಸಂಭಾರವಸ್ತುಗಳಲ್ಲಿ ಉಪ್ಪು, ಆಲಿಸಲು ಮಕ್ಕಳ ತೊದಲ್ನುಡಿ, ಸಂಪತ್ತುಗಳಲ್ಲಿ ಆರೋಗ್ಯ, ದೈವಗಳಲ್ಲಿ ಶಿವನು, ಬಿಲ್ಲು ಹಿಡಿದವರಲ್ಲಿ ಮನ್ಮಥನು, ಜನ್ಮಗಳಲ್ಲಿ ಮಾನವಜನ್ಮವು ಹೆಚ್ಚಿನದಾದರೆ ವಿದ್ಯೆಗಳಲ್ಲಿ ಕವಿತಾ ರಚನೆಯು ದೊಡ್ಡದು. ಮಹತ್ವದ್ದು.


ಪದ್ಯ 25

*ರವಿಯಾಕಾಶಕೆ ಭೂಷಣಂ, ರಜನಿಗಾ ಚಂದ್ರಂ ಮಹಾಭೂಷಣಂ , ಕುವರರ್ವಂಶಕೆ ಭೂಷಣಂ, ಸರಸಿಗಂಭೋಜಾತಗಳ್ಭೂಷಣಂ ,  ಹವಿ ಯಜ್ಞಾಳಿಗೆ ಭೂಷಣಂ, ಸತಿಗೆ ಪಾತಿವ್ರತ್ಯವೇ ಭೂಷಣಂ , ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*


ಸೂರ್ಯನಿದ್ದರೆ ಆಕಾಶಕ್ಕೆ ಶೋಭೆಯು. ರಾತ್ರಿಯಲ್ಲಿ ಚಂದ್ರನೇ ಹೆಚ್ಚಿನ ಶೋಭೆಯು. ಕುವರರಿದ್ದರೆ ವಂಶಕ್ಕೆ ಹಿರಿಮೆಯು ಬರುವುದು. ಸರೋವರದಲ್ಲಿ ಕಮಲಗಳಿದ್ದರೆ ಶೋಭೆಯು. ಯಜ್ಞಗಳಿಗೆ ಹವಿಸ್ಸಿನಿಂದ ಶೋಭೆಯಾದರೆ ಸತಿಗೆ ಪಾತಿವ್ರತ್ಯವೇ ಹೆಚ್ಚಿನ ಶೋಭೆಯನ್ನು ತರುತ್ತದೆ. ಹಾಗೆ ರಾಜನ ಆಸ್ಥಾನದಲ್ಲಿ ಕವಿಯಿದ್ದರೆ ಇಡೀ ಆಸ್ಥಾನಕ್ಕೇ ಶೋಭೆಯುಂಟಾಗುವುದು


ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ