ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ4


 ತಿರುಪ್ಪಾವೈ: ಗೋದಾದೇವಿ ಕೋರಿದ ವರುಣ ಕೃಪೆ

Thiruppavai 4

ಆಳಿಮಳೈಕಣ್ಣಾ ಒನ್ರರುನೀ ಕೈಕರವೇಲ್ ಆಳಿಯುಳ್ಪುಕ್ಕು ಮುಹಂದು ಕೋರ್ಡಾರ್ತ್ತೇರಿ
 ಊಳಿಮುದಲ್ವನ್ ಉರುವಂ ಪೋಲ್ ಮೆಯ್ಕರುತ್ತು ಪಾಳಿಯನ್ನೊಳುಡೈ ಪರ್ಬನಾಭನ್ ಕೈಯಿಲ್ ಆಳಿಪೋಲ್‌ಮಿನ್ನಿ ವಲಂಬುರಿಪೋಲ್ ನಿನ್ನದಿರ್‌ನ್ದು ತಾಳನ್ದೇ ಶಾರ್ಜ್ಞಮುದೈತ್ತ ಶರಮಳೈಪೋಲ್ ವಾಳ್ವುಲಗಿನಿಲ್ ಪೇಯ್ದಿಡಾಯ್ ನಾಂಗಳುಂ ಮಾರ್ಗಳಿಲ್ ನೀರಾಡ ಮುಕಿಳಿಂದೇಲೋರೆಂಬಾವಾಯ್

ಭಾವಾನುವಾದ 

ಕೇಳುಕೇಳಯ್ಯ ಓ ವರುಣ ಒಲವ ಕೋರಿಕೆಯ ನಡೆಸಿ ನೆರವಾಗು ನೀ ಜೀವ ಜೀವಕಾಧಾರಿ ಕೃಷ್ಣನೊಲುಮೆಯ ಪಡೆಯೆ ಸಹಕಾರಿ ನೀನಾಗು
||ಪ|

ಓ ವರುಣ ಓ ವರುಣ ಬೆಳೆಬೆಳೆದು ನಿಲ್ಲು ಬಾನಿನೆತ್ತರಕೆ ಪವಮಾನ
ಸುತನಂತೆ ಪಾಂಚಜನ್ಯಶಾರ್ಜ್ಞಚಕ್ರಗಳಂತೆ ಮಿಂಚುತಭಯ ಧ್ವನಿಗೈದು ಮಿಂದೆದ್ದು ಸಾಗರದಿ ಹರಿಸುನೀ ವರ್ಷಧಾರೆ ಧಾರೆ ಈ ಧರೆಗೆ ತಪ್ಪಿದೊಡೆ ತಲ್ಲಣಿಸಿ ಸೃಷ್ಟಿ ಬಸವಳಿಯೆ ಖೇದಗೊಳ್ಳುವ ಭರದಿ ಹೇಮಪುರಿ ನಿಲಯ ಸೃಷ್ಟಿಸ್ಥಿತಿಗೊಡೆಯ ಮಹೋತ್ಸಾಹ ಧರ್ಮ ರಕ್ಷಣೆಗೆಂದು ಬಂದಿಹನು ಅನಂತಾನಂತ ನಂದನಂದನನಾಗಿ ಸಿಂಧುಗಂಗೆ ಕಪಿಲೆಕಾವೇರಿ ಯಮುನೆ ಭೀಮ ಭದ್ರೇಯರೆಲ್ಲ
ತುಂಬಿಬರಲೀ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು

ಸಂಕ್ಷಿಪ್ತ ಭಾವಾರ್ಥ

ದೇಶ ಸುಭಿಕ್ಷವಾಗಿರಬೇಕಾದರೇ, ತನ್ನ ಮಕ್ಕಳು ಆನಂದದಿಂದ ಇರಬೇರಾದರೆ ಏನಾಗಬೇಕು ?ಜಗನ್ಮಾತೆಯಾದ ಗೋದಾದೇವಿ ಇಲ್ಲಿ ವರುಣ ದೇವನನ್ನು ಪ್ರಾರ್ಥಿಸಿ ಎಚ್ಚರಿಸುತ್ತಿದ್ದಾಳೆ. ಓ ವರುಣದೇವ, ಸಾಕಷ್ಟು ಮಳೆಯನ್ನು ಸುರಿಸು. ಭುವಿಯಿಂದ ಬಾನಿನೆತ್ತರಕ್ಕೆ ಬೆಳೆದು ನಿಂತು, ಹನುಮಂತನಂದು ಬಾನಿನೆತ್ತರಕ್ಕೆ ಬೆಳೆದು ಮಾತೆ ಸೀತೆಯ ಹೃದಯಕ್ಕೆ ಶ್ರೀರಾಮ ವೃತ್ತಾಂತಸುಧೆಯನ್ನು ಸುರಿಸಿದಂತೆ ನೀನೂ ಸಹ ಮಳೆಯನ್ನು ಸುರಿಸಬೇಕು. ಕಾರುಣ್ಯಧಾರೆಯಂತೆ ಮಳೆಯು ಇಳೆಗಿಳಿದು ಬರಲಿ. ಕೇಳು ಮಕ್ಕಳು ಪ್ರಾರ್ಥಿಸುತ್ತಿದ್ದಾರೆ. ಅವರ ಪ್ರಾರ್ಥನೆಯನ್ನು ಮನ್ನಿಸಿ ವರ್ಷಧಾರೆಯನ್ನು ಸುರಿಸು. ಕಡಲಾಳದಿಂದ ಮುಗಿಲೆತ್ತರಕ್ಕೆ ಕಡಲ ನೀರನ್ನೆ ಬಸಿದು ನೀಲವರ್ಣವಾಗಿಸಿ ಪಾರ್ಥಸಾರಥಿಯ ಪಾಂಚಜನ್ಯದಂತೆ ಶತ್ರುಗಳಿಗೆ ಭಯವನ್ನು, ಭಕ್ತರಿಗೆ ಅಭಯವನ್ನು ಉಂಟುಮಾಡಿ ಮತ್ತೆ ಭೋರ್ಗರೆದು ಆರ್ಭಟಿಸಿ, ಸುದರ್ಶನ ಚಕ್ರದಂತೆ ಮಿಂಚಿ ವಿಶ್ವಕ್ಕೆ ಅಚ್ಚರಿಯನ್ನುಂಟುಮಾಡುವಂತೆ ನೀಲವರ್ಣನ ಕೈಗಳಿಂದ ಚಿಮ್ಮುವ ಶರವರ್ಷದಂತೆ ವರ್ಷಧಾರೆ ಧಾರೆಯನ್ನೇ ಸುರಿಸು. ಒಂದು ವೇಳೆ ನೀನು ಮಳೆಯನ್ನು ಸುರಿಸದಿದ್ದರೆ, ಮರೆತರೆ, ಜೀವರಾಶಿ ತಲ್ಲಣಿಸಿ ಹೋಗುತ್ತದೆ. ಸೃಷಿಸ್ಥಿತಿಗೊಡೆಯನಾದ ಹೇಮಪುರಿ ನಿಲಯ ಕೋಪಿಸಿಕೊಳ್ಳುತ್ತಾನೆ. ಮರೆಯದಿರು. ಏಕೆಂದರೆ ಧರ್ಮರಕ್ಷಣೆಗಾಗಿ ನಂದನಂದನಗಾಗಿ ಭುವಿಗಿಳಿದು ಬಂದಿದ್ದಾನೆ. ಲೀಲಾವಿನೋದಿಯಾಗಿ. 

ಬನ್ನಿ ಗೆಳತಿಯರೇ, ಉಷಃಕಾಲದಲ್ಲಿ ಎದ್ದು ಭಕ್ತಿ ಜಲಧಿಯಲ್ಲಿ ಮಿಂದು ಜಗನ್ನಾಥನನ್ನು ಪ್ರಾರ್ಥಿಸೋಣ. ಭುವಿಯಲ್ಲಿ ವರ್ಷದಲ್ಲಿ ಮೂರು ಮೂರು ಬೆಳೆಗಳು ಬೆಳೆದು ದೇಶವು ಸುಭಿಕ್ಷವಾಗಲಿ. ಇದರಿಂದೆಮ್ಮ ವ್ರತವೂ ಈಡೇರಿ ಸಮಸ್ತ ಲೋಕಕ್ಕೂ ಮಂಗಳಉಂಟಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Art credits: Keshav (©KrishnaforToday)

(ನಮ್ಮ ಕನ್ನಡ ಸಂಪದ  Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ