ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ6


 ಸೋಮೇಶ್ವರ ಶತಕ 6ನೇ ದಿನ


ಪದ್ಯ 26
*ಮಳೆಯೇ ಸರ್ವ ಜನಾಶ್ರಯಂ, ಶಿವನೇ ದೇವರ್ಕಳ್ಗೆ ತಾನಾಶ್ರಯಂ ,  ಬೆಳೆಯೇ ಸರ್ವರ ಜೀವನಂ, ಬಡವನೇ ಸರ್ವರ್ಗೆ ಸಾಧಾರಣಂ,  ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ, ಪುತ್ರೋತ್ಸವಂ ಸೂತ್ಸವಂ ,  ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಮಳೆಯು ಸರ್ವಜನರಿಗೂ ಆಶ್ರಯವಾಗಿದೆ. ದೇವತೆಗಳಿಗೆ ಶಿವನು ಆಶ್ರಯನಾಗಿದ್ದಾನೆ. ಬೆಳೆಯಿದ್ದರೇ ಎಲ್ಲರ ಜೀವನಕ್ಕೆ ಆಸರೆ. ಬಡವನು ಸರ್ವರಿಗೂ ಸಾಧಾರಣವಾಗಿ ನೆರವಿಗೆ ಬರುವನು. ಆಭರಣಗಳಲ್ಲಿ ಕೈಗಳಿಗೆ ಹಾಕುವ ಬಳೆಗಳೇ ಮೊದಲು. ಉತ್ಸವಗಳಲ್ಲೆಲ್ಲ ಪುತ್ರೋತ್ಸವವು ಹೆಚ್ಚು ಸಂತಸದಾಯಕವು ಆಗಿದ್ದು ಗೆಳೆತನವೇ ಎಲ್ಲಕ್ಕಿಂತ ಉತ್ತಮವಾದುದಾಗಿದೆ.

ಪದ್ಯ 27
*ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ? ಕಾಮಧೇನಿರ್ದರೂ_ , ಟಕೆ ಗೊಡ್ಡಾಕಳನಾಳ್ವರೇ? ಗುಣಯುತರ್ ಪಾಲುಂಡು ಮೇಲುಂಬರೇ? ,  ಶುಕನೋದಿಗತಿ ಚಲ್ವ ಕಾಕರವ, ರಂಭಾನೃತ್ಯರೊಳ್ದೊಂಬರೇ? ,  ಸಖರಿಂದುನ್ನತ ವಸ್ತುವೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕೈಯಲ್ಲಿ ಕನ್ನಡಿಯೇ ಇರುವಾಗ ಪ್ರತಿಬಿಂಬ ನೋಡಿಕೊಳ್ಳಲು ನೀರು ಏಕೆ? ಕಾಮಧೇನುವನ್ನೇ ಹೊಂದಿರುವವರು ನಿತ್ಯದ ಊಟಕ್ಕೆ ಗೊಡ್ಡು ಆಕಳನ್ನು ನಂಬುವರೇ? ಗುಣವಂತರು ಹಾಲನ್ನು ತೃಪ್ತಿಯಾಗಿ ಕುಡಿದವರು ಮತ್ತೇನನ್ನಾದರೂ ಬಯಸುವರೆ? ಗಿಣಿಯ ಓದಿನ ಚೆಲ್ವಿನ ಮುಂದೆ ಕಾಗೆಯ ಸದ್ದು  ಹಿತವೆ? ರಂಭೆಯ ನೃತ್ಯದೆದುರು ದೊಂಬರ ಕುಣಿತಕ್ಕೆ ಸ್ಥಳವೇ? ಇರುವುದಿಲ್ಲ. ಹಾಗೆ ಗೆಳೆಯರಿಗಿಂತ ಉತ್ತಮರು ಯಾರೂ ಇರುವುದಿಲ್ಲ. ಸ್ನೇಹದ ಮಹತ್ವ ಹೇಳಿದ್ದಾರೆ.

ಪದ್ಯ 28
*ಸಚರ ಸ್ಥಾವರಕೆಲ್ಲ ಸರ್ವ ಸುಖ ದುಃಖಂಗಳ್ ಸಮಾನಂಗಳೇಂ ,  ದಚಲಾನಂದದಿ ತನ್ನ ನನ್ಯರೆಣಿಸಲ್ ಸುಜ್ಞಾನಿಗಳ್ ನೀರಿನೊಳ್ ,  ಶುಚಿಯೊಳ್ಪಾದವನಿಟ್ಟು ತೋರ್ಪ ತೆರದೊಳ್ ತಾನಾಗದೇ ವಾದಿಪಾ , ವಚನಬ್ರಹ್ಮದಿ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಸಕಲ ರೀತಿಯ ಸ್ಥಾವರ ಜಂಗಮಗಳಿಗೆಲ್ಲಕ್ಕೂ ಸುಖ ದುಃಖಗಳು ಸಮಾನವೆಂದು ಸುಜ್ಞಾನಿಗಳು ಭಾವಿಸುತ್ತಾರೆ. ತಮ್ಮನ್ನೂ ಇತರರನ್ನೂ ಒಂದೇ ಎಂದು ಭಾವಿಸುತ್ತಾರೆ. ಇದಕ್ಕೆ ಅಗ್ನಿಯಲ್ಲಿಯೂ ನೀರಿನಲ್ಲಿಯೂ ಪಾದವನ್ನಿಟ್ಟು ಎರಡನ್ನೂ ಒಂದಾಗಿಯೇ ಭಾವಿಸುವ ಅವರು ಜ್ಞಾನಿಗಳು. ಅಲ್ಲದೆ ಬರಿದೇ ತರ್ಕ, ವಾದಗಳಿಂದ ವ್ಯರ್ಥವಾಗಿ ಮಾತನಾಡುವವರಿಗೆ ಮುಕ್ತಿ ದೊರೆಯುವುದೇ? ಇಲ್ಲಿ ಶುಚಿ ಎಂದು ಅಗ್ನಿಗೆ ಹೇಳಲಾಗಿದೆ.

ಪದ್ಯ 29
*ಶುಚಿ ತಾನಾಗದೆ ಸರ್ವಶಾಸ್ತ್ರ ನಿಪುಣಂ ತಾನಾಗದೇ ಕಾಮಮಂ,  ರಚನಂಗೆಯ್ಯದೆ ಕ್ರೋಧಮಂ ಬಿಡದೆ ಲೋಭಚ್ಛೇದಮಂ ಮಾಡದೇ,  ರಚನಾಮೋಹವ ಮುಗ್ಗಿ ನೆಗ್ಗಿ ಮದಮಾತ್ಸರ್ಯಂಗಳಂ ನೀಗದೇ ,  ವಚನಬ್ರಹ್ಮದಿ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ.*

ವಚನಬ್ರಹ್ಮದಲ್ಲಿ  ಅಂದರೆ ಹೆಚ್ಚಿನ ಅಧ್ಯಾತ್ಮ ಸಾಧನೆಯಲ್ಲಿ ಮುಕ್ತಿಯು ಸಿಗಬೇಕಾದರೆ ಮೊದಲಿಗೆ ಶುಚಿಯಾಗಿರಬೇಕು. ಸರ್ವಶಾಸ್ತ್ರಗಳಲ್ಲಿಯೂ ನಿಪುಣನಾಗಿರಬೇಕು. ಮುಖ್ಯವಾಗಿ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಕಳೆದುಕೊಳ್ಳಬೇಕು. ಇವುಗಳಿಗೆ ಸೋಲದೇ ಗೆಲುವನ್ನು ಸಾಧಿಸಬೇಕು.

ಪದ್ಯ 30
*ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧಮೇನಪ್ಪುದೇ ,  ಕಡು ಪಾಪಿಷ್ಠನು ಮೀಯಲೇನು ಶುಚಿಯೇ ಕಾಕಾಳಿ ಮೀಯವೇ, ಗುಡಪಾನಂಗಳೊಳಿರ್ದ ಬೇವಿನ ಫಲಂ ಸ್ವಾದಪ್ಪುದೇ ಬಾಹ್ಯದೊಳ್ ,  ಮಡಿಯೇಂ? ನಿರ್ಮಲಚಿತ್ತವೇ ಮಡಿ ಹರಹರಾ ಶ್ರೀ ಚೆನ್ನಸೋಮೇಶ್ವರಾ.* 

ಹೊಟ್ಟೆಯಲ್ಲಿ ಮತ್ಸರವೆಂಬ ಕೆಸರು ತುಂಬಿದ್ದಾಗ ಮೇಲೆ ತೊಳೆಯುವುದರಿಂದೇನು ಪ್ರಯೋಜನ? ಶುದ್ದವಾಗುವುದೆ? ಇಲ್ಲ. ಕಾಗೆಗಳು ಕೂಡಾ ನೀರಿನಲ್ಲಿ ಮುಳುಗುವಂತೆ ಕಡು ಪಾಪಿಯು ಮಿಂದರೆ ಶುಚಿಯಾಗುವನೆ? ಬೆಲ್ಲದ ನೀರಿನಲ್ಲಿಟ್ಟ ಮಾತ್ರಕ್ಕೆ ಬೇವು ಸಿಹಿಯಾಗುವುದೆ? ಮಡಿಯೆಂದರೇನು? ಬಾಹ್ಯ ತೋರಿಕೆಯದಲ್ಲ. ನಿರ್ಮಲವಾದ ಮನಸ್ಸೇ ಮಡಿಯೆಂದು ಹೇಳಲಾಗಿದೆ.

ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ