ಸೋಮೇಶ್ವರಶತಕ7
ಸೋಮೇಶ್ವರ ಶತಕ 7 ನೇ ದಿನ
ಪದ್ಯ 31
*ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಮಂ ಪಾಪದಾ, ನಿಚಯಕ್ಕಿಕ್ಕದೆ ತತ್ತ್ವ ಕೇಳಿ ಜಗವೆಲ್ಲಂ ಬ್ರಹ್ಮವೆಂದೆನ್ನದೇ , ಉಚಿತಾಲೋಚನೆಯಿಂದೆ ತನ್ನ ನಿಜಮಂ ತಾಂ ಕಾಣದೇ ವಾದಿಪಾ, ವಚನಬ್ರಹ್ಮದಿ ಮುಕ್ತಿಯೇ, ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಧರ್ಮ ಮತ್ತು ಕೀರ್ತಿಗಳನ್ನು ರಚಿಸದೇ, ಸದ್ಧರ್ಮವನ್ನು ಅನುಸರಿಸದೇ, ತತ್ವಸಾರವನ್ನು ಕೆಲಸಗಳಲ್ಲಿ ತೊಡಗಿಸದೇ, ಜಗತ್ತೆಲ್ಲವೂ ಬ್ರಹ್ಮವೆಂಬ ಭಾವವನ್ನು ಅರಿಯದೇ, ಉಚಿತವಾದ ಆಲೋಚನೆಗಳಿಂದ ತನ್ನ ಸ್ವರೂಪವನ್ನು ತಾನು ಕಾಣದೇ ಇರುವವರಿಗೆ ವಚನಬ್ರಹ್ಮದಿಂದ ಮುಕ್ತಿಯು ಹೇಗೆ ತಾನೇ ದೊರಕೀತು?
ಪದ್ಯ 32
*ಸುರೆಯಂ ಸೇವಿಸಿದಾತ ಬಲ್ಲನೆ ಮಹಾಯೋಗೀಂದ್ರರೆಂದೆಂಬುದಂ ? , ದೊರೆಯೊಲ್ತೇಜವನಾಂತವಂ ಬಡವರಂ ತಾಂ ನೋಳ್ಪನೇ ಕಂಗಳಿಂ ? , ಪಿರಿಯರ್ಮಾನ್ಯರುಯೆಂದು ಕಾಂಬನೆ ಮಹಾದುರ್ಮಾರ್ಗಿ ಎಂತಾದಡಂ ? , ದುರುಳಂ ಬಲ್ಲನೆ ಬಾಳ್ಪರಂ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮತ್ತು ತರಿಸುವ ಮದಿರೆಯನ್ನು ಸೇವಿಸಿದವನು ಮಹಾಯೋಗೀಂದ್ರರನ್ನು ಅರಿತು ಗುರುತಿಸುವನೆ? ಸಾಧ್ಯವಿಲ್ಲ. ಹಾಗೆಯೇ ರಾಜರಲ್ಲಿ ಸ್ನೇಹವನ್ನು, ಸಿರಿಯನ್ನು ಪಡೆದವನು ಬಡವರನ್ನು ಕಣ್ಣಿಂದಲೂ ನೋಡುವುದಿಲ್ಲ. ಮಹಾ ದುರ್ಮಾರ್ಗಿಯಾದವನು ಹಿರಿಯರನ್ನು, ಮಾನ್ಯರು ಎಂದು ಯಾವಾಗಲೂ ಪರಿಗಣಿಸುವುದಿಲ್ಲ. ಸತ್ಯವಾಗಿ ಬಾಳುವ ಜನರನ್ನು ದುರುಳರೇನು ಬಲ್ಲರು ?
ಪದ್ಯ 33
*ಚಿಗುರೆಂದುಂ ಮೆಲೆ ಬೇವು ಸ್ವಾದಮಹುದೇ ? ಚೇಳುಂ ಮಹಾಸಣ್ಣದೆಂ_ , ದಗೆಯಲ್ಕಚ್ಚದೆ ? ಪಾಲ ನೂಡಿ ಪುಲಿಯಂ ಸಾಕಲ್ಕೆ ವಿಶ್ವಾಸಿಯೇ ? , ಖಗ ಸಾಕಲ್ಬಹುದೆಂದು ಗೂಗೆ ಮರಿಯಾ ಶಬ್ದಕ್ಕೆ ತಂದಿಪ್ಪರೇ ? , ಪಗೆಯಂ ಬಾಲಕನೆಂಬರೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸೊಗಸಾದ ಚಿಗುರು ಎಂದು ಬೇವಿನೆಸಳನ್ನು ತಿಂದರೆ ಸ್ವಾದವಾಗಿರುವುದೆ? ಸಣ್ಣ ಮರಿಯೆಂದು ಹಿಡಿದರೆ ಚೇಳು ಕಚ್ಚದಿರುವುದೆ? ಹಾಲನ್ನು ಕುಡಿಸಿ ಹುಲಿಯನ್ನು ಸಾಕಿದರೂ ಅದು ತನ್ನ ಸ್ವಭಾವವನ್ನು ಬದಲಾಯಿಸುವುದೆ? ಪಕ್ಷಿಗಳನ್ನು ಸಾಕಬಹುದೆಂದು ಯಾರಾದರೂ ಅಪಶಬ್ದದ ಗೂಗೆ ಮರಿಯನ್ನು ತಂದು ಸಾಕುವರೇ ? ಚಿಕ್ಕವನಾಗಿದ್ದರೇನು? ಶತ್ರು ಶತ್ರುವೇ ಸರಿ. ಸಹಜ ಸ್ವಭಾವ ಬದಲಾಗುವುದಿಲ್ಲ.
ಪದ್ಯ 34
*ಖಳ ವೇದಂಗಳನೊಯ್ದವಂ ಧರೆಯನೆಲ್ಲಂ ಚಾಪೆವೋಲ್ಸುತ್ತಿದಂ , ಬಲದಿಂ ಪೋರಿದನೆಲ್ಲರಂ ಗೆಲಿದು ಬಂದಾ ಪೆಣ್ಣ ಕೊಂಡೋಡಿದಂ , ತಲೆಯೊಳ್ಕಾದಿದ ನೂರುಗಳ್ಪಡೆದವನೆಲ್ಲರ್ಗೆಲ್ದು ತಾವಾಳ್ದರೇ ? ಬಲುಗರ್ವಂ ಕೊಲದಿರ್ಪುದೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸೋಮಕಾಸುರನೆಂಬ ರಾಕ್ಷಸನು ವೇದಗಳನ್ನು ಕದ್ದು ಒಯ್ದನು. ಹಿರಣ್ಯಾಕ್ಷನು ಭೂಮಿಯನ್ನು ಚಾಪೆಯಂತೆ ಮಡಿಸಿಕೊಂಡು ಪಾತಾಳಕ್ಕೆ ಹೋದನು. ರಾಮನ ಹೆಂಡತಿ ಸೀತೆಯನ್ನು ರಾವಣನು ಕದ್ದು ಒಯ್ದನು. ನೂರಾರು ಊರುಗಳನ್ನು ಯುದ್ಧದಲ್ಲಿ ಗೆಲಿದವರೂ ಇದ್ದರು. ಆದರೆ ಯಾರೂ ಬದುಕಲಿಲ್ಲ. ಬಹಳವಾದ ಗರ್ವವೇ ಅವರ ಮೃತ್ಯುವಾಯಿತು.
ಪದ್ಯ 35
*ಪಿಡಿಯಲ್ ಪೊಮ್ಮಿಗವೆಂದು ಪೋಗೆ ರಘುಜಂ ಭೂಪುತ್ರಿ ಸಂನ್ಯಾಸಿಯೇಂ_ , ದಡಿಯಿಟ್ಟಳ್ ದಶಕಂಠನುಯ್ದಿವಳನಂದಾಯುಷ್ಯಮಂ ನೀಗಿದಂ , ಕೊಡಬೇಡೆಂದನೆ ಶುಕ್ರರಾಜ್ಯವನಿತಂ ಪೋಗಾಡಿದಂ ರಾಕ್ಷಸಂ , ಕಡು ಮೋಸಂ ಕೆಡುಕುಂದಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮಾಯಾಮೃಗವನ್ನು ಚಿನ್ನದ ಬಣ್ಣದ ಜಿಂಕೆಯೆಂದು ಭ್ರಮಿಸಿ ರಾಮನು ಅದನ್ನು ಹಿಡಿಯಲು ಹೋದ ಸಮಯದಲ್ಲಿ ಸೀತೆಯು ರಾವಣನನ್ನು ಸಂನ್ಯಾಸಿಯೆಂದು ಬಗೆದು ಪರ್ಣಕುಟಿಯಿಂದ ಹೊರಬಂದಳು. ಅವಳನ್ನು ಹೊತ್ತೊಯ್ದ ರಾವಣನ ಆಯುಷ್ಯ ತೀರಿತು. ವಾಮನನು ಬಲಿಯ ಬಳಿ ಬಂದಾಗ ಶುಕ್ರಾಚಾರ್ಯರು ಎಷ್ಟು ಬೇಡವೆಂದರೂ ಕೇಳದೆ ಬಲಿಯು ರಾಜ್ಯವನ್ನು ಅಲ್ಲದೆ ತನ್ನ ಪ್ರಾಣವನ್ನೂ ಕಳೆದುಕೊಂಡನು. ಹೀಗೆ ವಿಪರೀತವಾದ ಮೋಸವು ಕೆಡುಕನ್ನುಂಟುಮಾಡುತ್ತದೆ
ವಿವರಣೆ:. ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು