ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ8


 ಸೋಮೇಶ್ವರ ಶತಕ 8ನೇ ದಿನ


ಪದ್ಯ  36
*ಹಿಡಿಯಲ್ ಸಿಂಗವ ಮತ್ಸರಂ ಕವಿಯದೇ ? ದುರ್ಗಂಧಮಂ ಘಾಳಿಯೊ_ ,  ಳ್ತಡೆಯಲ್ನಾರದೆ ? ನಾಯಿಬಾಲ ಶಡೆಯಂ ಕಟ್ಟಲ್ಕೆ ಚನ್ನಪ್ಪುದೆ ?, ಸುಡು ಚೇಳಂ ತೆಗೆಯಲ್ಕೆ ಸುಮನಿಹುದೇ ? ಏನಂದಡೆಷ್ಟಾದಡಂ , ಬಿಡ ತನ್ನಂಗವ ನೀಚ ತಾಂ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಸಿಂಹವನ್ನು ಹಿಡಿದ ಮಾತ್ರಕ್ಕೆ ಅದು ತನ್ನ ಸ್ವಭಾವವನ್ನು ಬಿಡುವುದೆ? ದುರ್ಗಂಧವನ್ನು ತಡೆಯಲು ಏಲಕ್ಕಿ ಮೊದಲಾದ ಪದಾರ್ಥಗಳನ್ನು ಸೇರಿಸಿದ ಮಾತ್ರಕ್ಕೆ ಹೋಗುವುದೆ? ನಾಯಿಯ ಬಾಲಕ್ಕೆ ಕೋಲು ಬಿಗಿದರೆ ನೆಟ್ಟಗಾಗುವುದೆ? ಚೇಳನ್ನು ಬೆಂಕಿಯಿಂದ  ರಕ್ಷಿಸಿದ ಮಾತ್ರಕ್ಕೆ ಕುಟುಕದಿರುವುದೆ? ಏನೇ ಮಾಡಿದರೂ ನೀಚರು ತಮ್ಮ ಸ್ವಭಾವವನ್ನು ಬಿಡುವುದಿಲ್ಲ.

ಪದ್ಯ  37
*ಬಡಗೋಲಂ ಸಮಮಾಡಲಕ್ಕರೆಯೊಳುಂ ಕೂಪಂಗಳಂ ತೋಡಲ_ , ಕ್ಕಿಡಿದುಕ್ಕಂ ಮೃದು ಮಾಡಲಕ್ಕುಂ ಮಳಲೊಳ್ ತೈಲಂಗಳಂ ತೋರಲ_ ,  ಕ್ಕಡವೀ ಸಿಂಗನ ತಿದ್ದಲಕ್ಕು; ಕರೆಯಲ್ವಕ್ಕುಗ್ರ ವ್ಯಾಘ್ರಂಗಳಂ ,  ಕಡು ಮೂರ್ಖಂ ಮತಿಗೇಳನೈ ; ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಧಾನ್ಯವನ್ನು ಬಡಿಯುವ ಕೋಲನ್ನು ನೇರ ಮಾಡಬಹುದು. ಬಂಡೆಯಲ್ಲಿ ಬಾವಿಯನ್ನು ತೋಡಬಹುದು. ಕಠಿಣವಾದ ಉಕ್ಕನ್ನು ಮೃದು ಮಾಡಬಹುದು. ಮರಳಿನಲ್ಲಿ ಎಣ್ಣೆಯನ್ನು ತೆಗೆಯಬಹುದು. ಅಡವಿಯ ಸಿಂಹವನ್ನು ಹಿಡಿದು ಪಳಗಿಸಬಹುದು. ಕ್ರೂರಮೃಗಗಳನ್ನು ಕರೆಯಬಹುದು. ಇಷ್ಟೆಲ್ಲ ಕಷ್ಟವಾದವುಗಳನ್ನು ಮಾಡಿದರೂ ಮಾಡಬಹುದು. ಆದರೆ ಕಡು ಮೂರ್ಖನು ಮಾತು ಕೇಳುವಂತೆ ಮಾಡಲು ಆಗದು.

ಪದ್ಯ  38
*ತೊನೆವಾ ಮಾತಿಗೆ ಸೋಲ್ತು ತನ್ನ ತಲೆಯೊಳ್ ಕೈಯಿಟ್ಟು ಬೊಬ್ಬಿಟ್ಟು ಕೈ _ , ಯನು ಬಿಟ್ಟೆಲ್ಲರ ಮುಂದೆ ತೋಳನಗಹುತ್ತಂ ಕೋತಿಯಂತೇಡಿಸು _ ,  ತ್ತಿನಿಸುಂ ಹೇಸದೆ ಲಜ್ಜೆಯಿಲ್ಲದನಿಬರ್ತಾಂ ಮಾನ್ಯರೆಂದೆನ್ನದೇ ,  ಘನ ಮಾರ್ಗಂಗತಿಗಾಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ತನ್ನ ಮಾತುಗಳನ್ನು ಮೆಚ್ಚಿ ತಲೆದೂಗುವವರನ್ನು ಕಂಡು ಉಬ್ಬಿ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡು ಬೊಬ್ನೆ ಹಾಕುತ್ತಾ ಎಲ್ಲರ ಮುಂದೆ ತೋಳುಗಳನ್ನು ತೂಗುತ್ತಾ ಕೋತಿಯಂತೆ ಅಂಗಚೇಷ್ಟೆ ಮಾಡುವವನು ಲಜ್ಜಾಹೀನನು. ಯಾರನ್ನೂ ಮಾನ್ಯರೆಂದು ಗೌರವಿಸದೇ ಇರುವವನಿಗೆ ಸದ್ಗತಿಯು ದೊರಕುವುದಿಲ್ಲ.

ಪದ್ಯ  39
*ಘನ ದೈನ್ಯಂ ಬಡವರ್ಗುರುತ್ವಗೆಡುವರ್ ಗ್ರಾಸಕ್ಕೆ; ಕುಗ್ರಾಮವಾ_ , ಗನು ಗಟ್ಟಿರ್ಪರು; ಯಾಕ್ಷಣಕ್ಕೆ ಕೆಲವರ್ಮಾತಾಡರುಂ; ಬೀಗಿ ಬಿ_,  ರ್ರನೆ ಬಾಗರ್ತಲೆಗೇರಿ ಸೊಕ್ಕು ತೊನೆವರ್ತಾವೆಲ್ಲರಂ ನಿಂದಿಪಾ ,  ಮನುಜರ್ಗೆತ್ತಣ ನೀತಿಯೈ ?  ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕಡು ಬಡವರಾದವರು ಅತ್ಯಂತ ದೈನ್ಯಸ್ಥಿತಿಯಲ್ಲಿರುವರು. ಆಹಾರಕ್ಕಾಗಿ ಎಂತೆಂತಹ ಕುಗ್ರಾಮಗಳನ್ನಾದರೂ ಅಲೆಯುವರು. ಅವರಿಗೆ ಮಾತುಗಳೂ ಬೇಕಿಲ್ಲ. ಗರ್ವಪಡರು. ಆದರೆ ಸಿರಿಯ ಸೊಕ್ಕು ತಲೆಗೇರಿದವರು ಎದುರಿಗೆ ಬಂದು ಆಡುವ ಯಾರ ಮಾತನ್ನೂ ಕೇಳದೆ ಕೋಪಿಸಿಕೊಳ್ಳುವರು. ಹೀಗಿರುವಲ್ಲಿ ಮನುಷ್ಯರಿಗೆ ನೀತಿಯೆಂಬುದು ಎಲ್ಲಿದೆ?

ಪದ್ಯ  40
*ಸುಳಿದಾ ಹೊಮ್ಮಿಗವೆಯ್ದೆ ಸೀತೆಯ ಖಳಂ ಕೊಂಡೊಯ್ದು ತಾಂ  ಬಾಳ್ದನೇ? / ಸುಳಿದಂಬೋಧಿಯ ಬಾಳ್ದನೇ ತಮಸನಂದಾಮ್ನಾಯವಂ ಕದ್ದು ತಾಂ,  ತಲೆಯಂ ಕಟ್ಟರೆ ಕಂಚಿವಾಳ ಮರದೊಳ್ ಶೂದ್ರೀಕ ಮೀರಾಖ್ಯನಂ, ಕಳವೇ ಕೊಲ್ಲದೆ ಕಾಯ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ*.

ಚಿನ್ನದ ಬಣ್ಣದ ಜಿಂಕೆಯನ್ನು ಸುಳಿದಾಡುವಂತೆ ಮಾಡಿ ಸೀತೆಯನ್ನು ಕದ್ದು ಒಯ್ದ ರಾವಣನು ಬದುಕಿದನೆ? ವೇದಗಳನ್ನು ಕದ್ದು ಒಯ್ದ ತಮಸನೆಂಬ ರಾಕ್ಷಸನು ಸಮುದ್ರದೊಳಗೆ ಬಚ್ಚಿಟ್ಟುಕೊಂಡರೂ ಸಾವು ತಪ್ಪಲಿಲ್ಲ. ಶೂದ್ರೀಕನೆಂಬ ಶೂರನಿಗೆ ಕಳ್ಳತನದ ಅಪವಾದ ಬರಲು ಅವನನ್ನು ಕಂಚಿವಾಳದ ಮರಕ್ಕೆ ಬಿಗಿದು ಸಾಯಿಸಲಿಲ್ಲವೆ ? ಕಳ್ಳತನ ಕೊಲ್ಲುವುದಲ್ಲದೆ ಎಂದಿಗೂ ಕಾಯದು.

ವಿವರಣೆ:. ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ