ಈಶ್ವರ ದೈತೋಟ
ಈಶ್ವರ ದೈತೋಟ
ಈಶ್ವರ ದೈತೋಟ ಅವರು ಪತ್ರಿಕಾಲೋಕದ ವರದಿಗಾರರಾಗಿ, ಅಂಕಣಕಾರರಾಗಿ, ಸಂಪಾದಕರಾಗಿ; ಕಿರುತೆರೆಯ ವಾರ್ತಾವಾಚಕರಾಗಿ, ಕಾರ್ಯಕ್ರಮ ನಿರ್ಮಾಪಕರಾಗಿ; ಬರಹಗಾರರಾಗಿ ಹೀಗೆ ಬಹುಮುಖಿ ಸಾಧನೆಗಳಿಂದ ಪ್ರಸಿದ್ಧರಾದವರು.
ಡಿಸೆಂಬರ್ 31, ಈಶ್ವರ ದೈತೋಟ ಅವರ ಜನ್ಮದಿನ. ಬಿ.ಎ. ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸಿದ ಇವರು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎ.(1973), ಫಿಲಿಪ್ಪೀನ್ಸ್‍ನ ಪ್ರೆಸ್ ಫೌಂಡೇಶನ್ ಆಫ್ ಏಶಿಯಾದಲ್ಲಿ ಸ್ನಾತಕೋತ್ತರ ಅಭ್ಯುದಯ ಪತ್ರಿಕೋದ್ಯಮ ಶಿಕ್ಷಣ-ತರಬೇತಿ (1979-80) ಪದವಿಗಳನ್ನು ಪಡೆದಿದ್ದಾರೆ. 2021ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅವರ ಪ್ರೌಢ ಪ್ರಬಂಧ- “ಅಭಿವೃದ್ಧಿ ಸಂವಹನ ನೆಲೆಯಲ್ಲಿ ಅಭ್ಯುದಯ ಪತ್ರಿಕೋದ್ಯಮದ ಸವಾಲು-ಸಾಧ್ಯತೆಗಳು” ಎಂಬ ಸಂಶೋಧನೆಗೆ ಡಿ.ಲಿಟ್ ಪದವಿ ನೀಡಿದೆ.
ಜನಸಾಮಾನ್ಯರಾದ ನಮಗೆ ಈಶ್ವರ ದೈತೋಟ ಅವರು ಮೊದಲು ಕಂಡದ್ದು ದೂರದರ್ಶನದಲ್ಲಿ. ಅವರು 1984-92 ದೂರದರ್ಶನದಲ್ಲಿ ಕನ್ನಡ ಸುದ್ದಿ ನಿರೂಪಕರಾಗಿ ಸೇವೆ ಸಲ್ಲಿಸಿದರು. ಆಕಾಶವಾಣಿ, ಉದಯ ಟಿ.ವಿ. ಉದಯ ನ್ಯೂಸ್ ಚಾನೆಲ್ ಹಾಗೂ ರೇಡಿಯೋಗಳಲ್ಲಿ ಸಂದರ್ಶನ, ಪ್ರಚಲಿತ ವಿಷಯಗಳ ಕುರಿತು 2000 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ ಇತ್ಯಾದಿಗಳು ಮನೆ ಮನೆ ಮಾತಾಗಿವೆ. ಸಮಯ ಟಿ.ವಿ.ಯಲ್ಲಿ ಪ್ರೈಮ್ ಟೈಮ್ ನ್ಯೂಸ್ ಬುಲೆಟಿನ್ ಅತಿಥಿ ನಿರೂಪಕರಾಗಿದ್ದುದಲ್ಲದೆ, ಪ್ರಜಾ ಟಿವಿಯಲ್ಲಿ ಚದುರಂಗ ಎಂಬ ಚರ್ಚಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಪಂಚಾಯ್ತಿ ಕಟ್ಟೆ ಡೆವಲಪ್ಮೆಂಟ್ ಡಿಬೇಟ್ ಅನ್ನು ಉದಯ ನ್ಯೂಸ್ ಚಾನೆಲ್‍ನಲ್ಲಿ 5 ವರ್ಷಗಳ ಕಾಲ ನಡೆಸಿಕೊಟ್ಟರು. ಸಂವೇದನೆ-ಶೇರಿಂಗ್ ವಿದ್ ಕನ್ಸರ್ನ್ ಎಂಬ ವಾರಕ್ಕೆ 5 ದಿನಗಳ ಮುಂಜಾನೆ ಕಾರ್ಯಕ್ರಮದಲ್ಲಿ ಉದಯ ಟಿವಿಗೆ 750ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ವಾಯ್ಸ್ ಆಫ್ ಅಮೇರಿಕಾ ಹಾಗು ಕೆನೆಡಿಯನ್ ರೇಡಿಯೋಗಳಲ್ಲಿ ಸಹಾ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ.
ಅಂಕಣಪ್ರೇಮಿಯಾದ ಈಶ್ವರ ದೈತೋಟ
ಅವರ ಮೊದಲ ಅಂಕಣ ಉದಯವಾಣಿಯಲ್ಲಿ 'ಅಂತರದೃಷ್ಟಿ'. ಮುಂದೆ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ ಅವೃತ್ತಿ)ಗಳಲ್ಲಿ ಸಂಪಾದಕ ಹೊಣೆ ಹೊತ್ತಾಗ ಅಂಕಣ ಬರೆಯುವುದನ್ನು ಮುಂದುವರಿಸಿದರು. ಬಳಿಕ ಸ್ವತಂತ್ರ ಪತ್ರಿಕೋದ್ಯಮಿಯಾಗಿ ವಿಜಯವಾಣಿ, ಸುದ್ದಿಮೂಲ ಇತ್ಯಾದಿ ಪತ್ರಿಕೆಗಳಲ್ಲಿ ಬಹುಮುಖಿ ಅಂಕಣಗಳನ್ನು ಬರೆದರು.
ಈಶ್ವರ ದೈತೋಟ ಅವರು ವಿಜಯ ಕರ್ನಾಟಕದ ಮುಖ್ಯ ಸಂಪಾದಕರಾಗಿದ್ದರು. ಉದಯವಾಣಿ ಬೆಂಗಳೂರು ಆವೃತ್ತಿ ಸಂಪಾದಕರಾಗಿ 7 ವರ್ಷಗಳ ಕಾಲ ಮುನ್ನಡೆಸಿದರು. ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದಲ್ಲದೆ, ಹೊಸತಾಗಿ ಪ್ರಾರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ ಕನ್ನಡ ಆವೃತ್ತಿ ಸಂಪಾಕರಾಗಿಯೂ 3 ವರ್ಷಗಳಷ್ಟು ಮುನ್ನಡೆಸಿದ್ದರು.
ಈಶ್ವರ ದೈತೋಟ ಹಲವು ಅಂತಾರಾಷ್ಟ್ರೀಯ ಸಂಚಿಕೆಗಳಿಗೂ ಲೇಖನಗಳನ್ನು ಬರೆದಿದ್ದಾರೆ. ಜಗತ್ತಿನ 5 ಭೂಖಂಡಗಳಿಗೆ ಭೇಟಿ ನೀಡಿದ್ದಾರೆ. ದೈತೋಟ ಅವರು ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ, ವಿ.ಪಿ. ಸಿಂಗ್ ಮತ್ತು ಪಿ.ವಿ. ನರಸಿಂಹ ರಾವ್ ಜೊತೆಗೆ ಸ್ವೀಡನ್, ರಶಿಯಾ, ಉಸ್ಬೇಕಿಸ್ತಾನ್, ದಕ್ಷಿಣ ಅಮೇರಿಕಾ ಪ್ರವಾಸ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷಿಣಿ ಚಂದ್ರಿಕಾ ಕುಮಾರ ತುಂಗೆ, ಫ್ರಾನ್ಸಿನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟ್ ಕೋಲ್, ರಶಿಯಾದ ಕೊಸಗಿನ್, ಸ್ವೀಡನ್‍ನ ಒಲೋಫ್ ಪಾಮೆ ಮುಂತಾಗಿ ಅಂತಾರಾಷ್ರೀಯ ಪ್ರಮುಖರನ್ನು ಭೇಟಿಯಾಗಿದ್ದಾರೆ. ರಿಯೋ ಭೂಶೃಂಗದಲ್ಲಿ ಅಮೇರಿಕಾದ ಪ್ರಧಾನಿ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್ ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದುದು ಅವರ ವಿಶೇಷ ಅನುಭವ. ಡೈಲಿ ಜರ್ನಲಿಸಂನಲ್ಲಿ ದಿನಕ್ಕೊಂದು ವಿಶೇಷ ಪುರವಣಿ ಎಂದು ವಾರಕ್ಕೆ 7 ಪುರವಣಿಗಳನ್ನು ವಿಜಯ ಕರ್ನಾಟಕದಲ್ಲಿ (1999ರಿಂದ) ಪುಟಾಣಿ ವಿಜಯ, ಮಹಿಳಾ ವಿಜಯ, ಯುವ ವಿಜಯ, ಧರ್ಮ ವಿಜಯ, ಕೃಷಿ ವಿಜಯ ಎಂದು ಸ್ಥಾಪನಾ ವರ್ಷದಿಂದಲೇ ಅಳವಡಿಸಿಕೊಂಡಿದ್ದು ದೈನಿಕ ಪತ್ರಿಕೋದ್ಯಮದ ಪ್ರಥಮ ಪ್ರಯತ್ನವೆಂದು ಗುರುತಿಸಲ್ಪಟ್ಟಿದೆ. ಹಾಗೆಯೇ, ತಾವು ಸಂಪಾದಕತ್ವ ನಿರ್ವಹಿಸಿದ ಟೈಮ್ಸ್ ಆಫ್ ಇಂಡಿಯಾ (2007-2010 - ಕನ್ನಡ ಅವತರಣಿಕೆಯಲ್ಲಿ) “ಮನೆಗೆ ಬಂದ ಅತಿಥಿ” ಎಂದು ಪ್ರತಿ ಸೋಮವಾರ ಬದುಕಿನ ವಿವಿಧ ರಂಗಗಳ ಪ್ರಸಿದ್ಧನಾಮರನ್ನು ಆಹ್ವಾನಿಸಿ ಇನ್ ಹೌಸ್ ಪತ್ರಕರ್ತರುಗಳು ಸಂವಾದ ನಡೆಸುವ ಕಾರ್ಯಕ್ರಮ ನಡೆಸಿದ್ದರು. ಭಾರತೀಯ ಪತ್ರಿಕೋದ್ಯಮದಲ್ಲಿ “ಕುಗ್ರಾಮ ಗುರುತಿಸಿ” (ಐಡೆಂಟಿಫೈ ಬಾಕ್ವರ್ಡ್ ವಿಲೇಜ್- 1981-87) ಮತ್ತು ಸುಗ್ರಾಮ ಗುರುತಿಸಿ ಎಂಬಿತ್ಯಾದಿ ಅಧ್ಯಯನ ಪ್ರಯೋಗಗಳನ್ನು ಮುದ್ರಣ ಮಾಧ್ಯಮದಲ್ಲಿ ಮಾಡಿದ್ದರು.
ಈಶ್ವರ ದೈತೋಟ ವಿಶ್ವದ ಅನೇಕ ದೇಶಗಳ ಪತ್ರಿಕೆಗಳಿಗೆ ಅತಿಥಿ ವರದಿಗಾರರಾಗಿ ಅನುಭವ ಹೊಂದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಇಂಡಿಯನ್ ಜರ್ನಲಿಸಂ ಬಗ್ಗೆ ಭಾಷಣ ಮತ್ತು ಸಮಾಲೋಚನೆಗಳಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅನೇಕ ದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಆಹ್ವಾನಿತರಾಗಿ ವಿಷಯ ಮಂಡಿಸಿದ್ದಾರೆ. ಅನೇಕ ವಿದ್ಯಾಸಂಸ್ಥೆಗಳಲ್ಲಿ ಪತ್ರಿಕೋದ್ಯಮ ತರಗತಿಗಳಿಗೆ ಪಾಠ ಮಾಡಿದ್ದಾರೆ.
ಈಶ್ವರ ದೈತೋಟ ಅವರ ಬರಹಗಳಲ್ಲಿ ಅಂತರದೃಷ್ಟಿ, ಅನುಭಾವ, ಮಾಧ್ಯಮ ಬ್ರಹ್ಮಾಂಡ, ಮಾಧ್ಯಮ ಭ್ರಮರಿ, ಚಿಣ್ಣ ಚಿಣ್ಣ ಪಾಠ, ಕಷಾಯ, ಕೂಕಿಲು ಎಂಬಂತಹ ವಿವಿಧ ಅಂಕಣ ಸಂಕಲನಗಳು, ಪತ್ರಿಕೋದ್ಯಮ ಮತ್ತಿತರ ವಿಷಯಗಳಿಗೆ ಬರೆದಿರುವ ಪುಸ್ತಕಗಳು ಮತ್ತು ಭಾಷಾಂತರ ಕೃತಿಗಳು ಸೇರಿ 75ಕ್ಕೂ ಹೆಚ್ಚು ಪ್ರಕಟಿತ ಕೃತಿಗಳಿವೆ. ಇವರ ಪ್ರಥಮ ಪುಸ್ತಕ ವಿದ್ಯಾರ್ಥಿಯಾಗಿದ್ದಾಗ ಬರೆದದ್ದು ಇಂಗ್ಲೀಷಿನಲ್ಲಿದ್ದು 1976 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟಗೊಂಡು ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕೋದ್ಯಮ ಚರಿತ್ರೆಯ ಸಂಶೋಧನಾ ಪ್ರಬಂಧವಾಗಿ ಸಲ್ಲಿಸಿದ್ದಾಗಿತ್ತು. ದಿ ಎಯ್ಟೀಂತ್ ಎಲಿಫೆಂಟ್ ಅಭ್ಯುದಯ ಪತ್ರಿಕೋದ್ಯಮ ಪ್ರಯೋಗ ದಾಖಲೆಯಾಗಿ ಮಣಿಪಾಲ ಉದಯವಾಣಿ ವತಿಯಿಂದ 1990 ರಲ್ಲಿ ಪ್ರಕಾಶಿತಗೊಂಡಿತು. ವಿಧಾನಮಂಡಲ ವರದಿಗಾರಿಕೆ (ಪತ್ರಿಕಾ ಅಕಾಡೆಮಿ ಪ್ರಕಟಿತ), ಮುಖ್ಯಮಂತ್ರಿ ಗುಂಡೂರಾಯರ ಸಾಧನೆ ( ಕರ್ನಾಟಕ ವಿಧಾನಮಂಡಲ ಪ್ರಕಟಿತ) ಪುಸ್ತಕ ರೂಪದಲ್ಲಿ ಬಂದಿವೆ. ಹಲವಾರು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಎ ಮ್ಯಾನಿಪೆಸ್ಟೋ ಪಾರ್ ಚೇಂಜ್, ಉಪ ರಾಷ್ಟ್ರಪತಿ ಝಕೀರ್ ಹುಸೇನ್‌ರ ಪುಸ್ತಕಗಳನ್ನಲ್ಲದೆ, ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ? ಸಬ್‌ಮೆರೀನ್ ಎಂಬಿತ್ಯಾದಿ ಪುಸ್ತಕಗಳಾಗಿ ಕನ್ನಡೀಕರಣಗೊಂಡು ಪ್ರಕಟಗೊಂಡಿವೆ. ಕರ್ನಾಟಕದ ಜಾನಪದ ಕ್ರೀಡೆ ಕಂಬಳದ ಬಗ್ಗೆ 1982 ರಲ್ಲಿ ಮೊದಲ ಸಾಕ್ಷ್ಯಚಿತ್ರವೂ ಸೇರಿದಂತೆ ಹಲವು ಯೋಜನೆಗಳಲ್ಲಿ ಸಕ್ರಿಯ ಭಾಗವಹಿಕೆ ನೀಡಿದ್ದಾರೆ.
ಈಶ್ವರ ದೈತೋಟ ಅವರಿಗೆ 2016 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2015 ರಲ್ಲಿ ಪ್ರತಿಷ್ಟಿತ ಟಿ.ಎಸ್. ಆರ್ ಪತ್ರಿಕೋದ್ಯಮ ಪ್ರಶಸ್ತಿ, 2015 ರಲ್ಲಿ ಮೂಡಬಿದ್ರೆಯ ಪ್ರತಿಷ್ಠಿತ ನುಡಿಸಿರಿ ಪ್ರಶಸ್ತಿ, 2012 ರಲ್ಲಿ ಮುಂಬಯಿನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪತ್ರಿಕೋದ್ಯಮ-ಸಾಹಿತ್ಯ ಪ್ರಶಸ್ತಿ, 2008 ರಲ್ಲಿ ಅಭ್ಯುದಯ ಪತ್ರಿಕೋದ್ಯಮದ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ, 2008 ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್ ವತಿಯಿಂದ ಜನಪ್ರಿಯ ಮೀಡಿಯಾ ವ್ಯಕ್ತಿ ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸಾಧಕರಾದ ಈಶ್ವರ ದೈತೋಟ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ನಮಸ್ಕಾರ.
Happy birthday Ishwar Daitota Sir 🌷🙏🌷
ಕಾಮೆಂಟ್‌ಗಳು