ತಿರುಪ್ಪಾವೈ16
ಶ್ರೀಕೃಷ್ಣ ದರ್ಶನಕ್ಕೆ ಬಾಗಿಲ ತೆರೆಯಿರಣ್ಣ
Thiruppavai 16
ನಾಯಗನಾಯ್ ನಿನ್ರ ನಂದಗೋಪನುಡೈಯ
ಕೋಯಿಲ್ ಕಾಪ್ಪಾನೇ ಕೊಡಿತ್ತೋನ್ರುಂ ತೋರಣ
ವಾಶಲ್‍ಕಾಪ್ಪಾನೇ ಮಣಿಕ್ಕದವಂ ತಾಳ್ ತಿರುವಾಯ್
ಆಯರ್ ಶಿರುಮಿಯರೋ ಎಮಕ್ಕು ಅರೈಪರೈ
ಮಾಯನ್ ಮಣಿವಣ್ಣನ್ ನೆನ್ನೆಲೇ ವಾಯ್ನೇರ್‌ನ್ದಾನ್
ತೂಯೋಮಾಯ್ ವನ್ದೋಂ ತುಯಿಲೆಳಪಾಡುವಾನ್
ವಾಯಾಲ್ ಮುನ್ನ ಮುನ್ನಂ ಮಾಟ್ರಾದೇ ಅಮ್ಮಾ ನೀ ನೇಶನಿಲೈಕ್ಕದವಂ ನೀಕ್ಕೇಲೋರೆಂಬಾವಾಯ್
ಭಾವಾನುವಾದ 16
ನಂದಗೋಪನರಮನೆಯ ದ್ವಾರಪಾಲಕನೆ ಜಯನೆ ವಿಜಯನೇ ರತ್ನಮಣಿ ಖಚಿತ ಬಾಗಿಲನು ತೆರೆಯಣ್ಣ ಬಂದಿಹೆವು ಗೋಪಬಾಲೆಯರು
ಸುರರು ನಾವ್ ಸುವ್ರತನ ಗೆಳತಿಯರು
ನೆರವಾಗು ಕೃಷ್ಣನದರ್ಶನಕೆ
ಜಗನ್ನಾಥನಾ ದರ್ಶನಕೈದಿಹುದು ಮುನಿವೃಂದ ತಾಳದಂಡಿಗೆ ಪಿಡಿದು ನೀಡಿಹನಭಯವನು ಬದರಿನಾಥನೆಂದೈದಿಹವು ನೋಂಪಿಯನಾಚರಿಸಿ
ನುಡಿದಿಹನು ಮುನ್ನವೇ ಇಷ್ಟಾರ್ಥಗಳ ಸಲಿಸುವೆನೆಂದತಿಶಯದಿ ಪ್ರೇಮಮೂರುತಿ ಕೃಷ್ಣೆಯಣ್ಣನ ದರ್ಶನಕೆ ಬಾಗಿಲನು ತೆರೆಯಣ್ಣ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ಸಂಕ್ಷಿಪ್ತ ಭಾವಾರ್ಥ
ಇದುವರೆವಿಗೂ ಒಬ್ಬೊಬ್ಬರನ್ನಾಗಿ ತನ್ನೆಲ್ಲ ಸಖಿಯರನ್ನೂ ಎಚ್ಚರಿಸಿದ್ದಾಯ್ತು. ಇನ್ನು ಶ್ರೀಕೃಷ್ಣನಿಗೆ ರಕ್ಷಕರಾಗಿರುವ ಎಲ್ಲರನ್ನೂ ಪ್ರಾರ್ಥಿಸಿ ಅವರ ಅನುಜ್ಞೆಯನ್ನು ಪಡೆದುಕೊಂಡೇ ಹೋಗಬೇಕಲ್ಲವೇ? ಈ 16ರಿಂದ 20ರ ವರೆಗಿನ ಪದ್ಯಗಳು ಈ ಸಾಲಿಗೆ ಸೇರಿದವುಗಳು.
ಮೊದಲಿಗೆ ನಂದಗೋಪನ ಅರಮನೆಯ ದ್ವಾರಪಾಲಕರನ್ನು ಹೊಗಳಿ ಅರಮನೆಗೆ ಪ್ರವೇಶವನ್ನು ಬಯಸಿದ್ದಾಳೆ ಗೋದಾದೇವಿ.
ಚಿನ್ನದ ಕುಸುರಿ ಕೆಲಸಗಳಿಂದ ಅಲಂಕೃತವಾದ ಬಾಗಿಲುಗಳ ಬಳಿ ಕೈಯಲ್ಲಿ ಗದೆಯನ್ನು ಹಿಡಿದು ಕಾಯುತ್ತಿರುವ ಜಯವಿಜಯರೇ ಬಾಗಿಲನ್ನು ತೆರೆಯಿರಿ. ನಮಗೆ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಮಾಡಿಕೊಡಿ. ನಾವು ಕೇವಲ ಗೋಪಾಲಕರೆಂದು ತಿಳಿಯಬೇಡಿರಿ. ನಾವುಗಳು ಸುರರು. ಶ್ರೀಕೃಷ್ಣನ ಲೋಕ ರಕ್ಷಣಾ ಕಾರ್ಯದಲ್ಲಿ ಆತನೊಡನೆ ಸಹಕರಿಸಲು ಬಂದವರು. ಜೊತೆಗೆ ಮುನಿವೃಂದವೂ ಸಹ ತಾಳದಂಡಿಗೆ ಪಿಡಿದು ಹಾಡುತ್ತಾ ಜಗನ್ನಾಥನ ದರ್ಶನಕಾಂಕ್ಷಿಗಳಾಗಿ ಬಂದಿದ್ದಾರೆ.
ಆಸೇತು ಹಿಮಾಲಯದಿಂದ ಕನ್ಯಾಕುಮಾರಿಯವರೆವಿಗೂ ಬೆಳಗಿರುವ ಈ ಭವ್ಯಭಾರತದ ಎಲ್ಲ ದಿವ್ಯಕ್ಕೇತ್ರಗಳಲ್ಲೂ ವಿರಾಜಮಾನವಾಗಿ ಭಕ್ತ ರಕ್ಷಕನಾಗಿರುವವನೇ ಈ ನಂದನಂದನನು ಎಂದು ಹೇಳಿ ಪರಿಚಯಿಸಿಕೊಂಡು ಬಾಗಿಲನ್ನು ತೆರೆಯಿರೆಂದು ಪ್ರಾರ್ಥಿಸಿದ್ದಾಳೆ.
ಮುಂದುವರಿಯುತ್ತಾ, ನೋಡಿ ದ್ವಾರಪಾಲಕರೇ ಮಧುರಾನಾಥನು ಈ ಮೊದಲೇ ನಮಗೆ ಮಂಗಳಕರವಾದ ಈ ಮಾರ್ಗಶಿರ ಮಾಸದ ವ್ರತವನ್ನು ಆಚರಿಸಿ ಬನ್ನಿ, ನಾನು ನಿಮಗೆ ಕೋರಿದ ವರಗಳನ್ನು ಕೊಟ್ಟು ಸಲಹುತ್ತೇನೆ ಎಂದು ತಿಳಿಸಿದ್ದಾನೆ. ಆದ್ದರಿಂದ ನಾವು ವ್ರತಧಾರಿಗಳಾಗಿ ಆತನ ಇಚ್ಛೆಯಂತೆ ಬಂದಿದ್ದೇವೆ. ಆದ್ದರಿಂದ ಬೇಗ ಅರಮನೆಯ ಬಾಗಿಲನ್ನು ತೆರೆಯಿರಣ್ಣ. ಶ್ರೀಕೃಷ್ಣನ ದರ್ಶನದಿಂದ ನಮ್ಮವ್ರತವು ಈಡೇರಿ ಸಮಸ್ತ ಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)
ಕಾಮೆಂಟ್‌ಗಳು