ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುರುಲಿಂಗ ಕಾಪಸೆ


ಗುರುಲಿಂಗ ಕಾಪಸೆ 

ಹಿರಿಯ ಸಾಹಿತಿ, ಪ್ರಾಧ್ಯಾಪಕ  ಮತ್ತು ಕನ್ನಡ ಸಂಘಟನೆಗೆ ಹೆಸರಾಗಿದ್ದ ಗುರುಲಿಂಗ ಕಾಪಸೆ ನಿಧನರಾಗಿದ್ದಾರೆ.

ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭ ಮಾಡಿದ ಕಾಪಸೆ ಅವರು

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 

ಡಾ.‍ಗುರುಲಿಂಗ ಕಾಪಸೆ ಅವರು 'ಮಧುರಚೆನ್ನರ ಜೀವನ ಹಾಗೂ ಕೃತಿಗಳು' ಕುರಿತು ಮಹಾಪ್ರಬಂಧ ಮೂಡಿಸಿದ್ದರು. ‘ಹಲಸಂಗಿ ಗೆಳೆಯರು’ ಎಂಬ ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ,  ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದು ಕನ್ನಡ ವಿಶ್ವವಿದ್ಯಾಲಯದ ಮೂಲಕ ಕಾಪಸೆ ಅವರು  “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. 

ಗುರುಲಿಂಗ ಕಾಪಸೆ ಅವರ ಕೃತಿಗಳಲ್ಲಿ ಅಕ್ಕಮಹಾದೇವಿ, ಮಧುರಚೆನ್ನ, ಶ್ರೀಅರವಿಂದರು, ಬಸವೇಶ್ವರರು, ಹಲಸಂಗಿ ಗೆಳೆಯರು ಸೇರಿವೆ. ಶಾಲ್ಮಲೆಯಿಂದ ಗೋದಾವರಿಯವರೆಗೆ ಇವರ ಪ್ರವಾಸಕಥನ. ಮಕ್ಕಳಿಗಾಗಿ ಕವಿ ರವಿಂದ್ರರು,  ಶಿ.ಶಿ.ಬಸವನಾಳ ಕೃತಿ ರಚಿಸಿದ್ದರು. ಸಾಹಿತ್ಯ ವಿಮರ್ಶೆಯಲ್ಲಿ ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ ಮುಂತಾದವು ಸೇರಿವೆ. ಇವರ ಸಂಪಾದಿತ ಕೃತಿಗಳಲ್ಲಿ ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ಪ್ರವಚನ,  ಹರಿಹರನ ಐದು ರಗಳೆಗಳು,  ಅರವಿಂದ ಪರಿಮಳ, ಹೈಮವತಿ ಶೈಶವಲೀಲೆ (ಗಿರಿಜಾ ಕಲ್ಯಾಣ ಸಂಗ್ರಹ), ಚೆಂಬೆಳಕು (ಕಣವಿ ಅಭಿನಂದನ ಗ್ರಂಥ), ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ), ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ, ಭವ್ಯ ಮಾನವ ಕಾವ್ಯ ದರ್ಶನ,  ಜ್ಞಾನಸಿಂಧು, ಪಿ.ಧೂಲಾಸಾಹೇಬ, ಮಧುರಚೆನ್ನರ ಲೇಖನಗಳು, ಕನ್ನಡ ಕಾವಲು,  ಚಾಮರಸ,  ಮುಗಿಯದ ಹಾಡು, ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ) ಮುಂತಾದ ವೈವಿಧ್ಯಗಳಿವೆ.  ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ), ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ) ಪ್ರಕಟವಾಗಿವೆ.

ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ,  ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್,  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.

96 ವರ್ಷದ ತುಂಬು ಜೀವನ ನಡೆಸಿ, ತಮ್ಮ ನಡೆ, ನುಡಿ, ಸರಳ ಆದರ್ಶಗಳಿಂದ ಸದಾಕಾಲ ಇತರರಿಗೆ ಮಾದರಿಯಾಗಿದ್ದ ಗುರುಲಿಂಗ ಕಾಪಸೆ ಅವರು 2024ರ ಮಾರ್ಚ್ 26ರಂದು ನಿಧನರಾದರು.  ಅವರ ಇಚ್ಛೆಯಂತೆ ಅವರ  ದೇಹವನ್ನು ವೈದ್ಯಕೀಯ ಉದ್ದೇಶಗಳಿಗೆ ದಾನ ಮಾಡಲಾಗಿದೆ.

Respects to departed soul great scholar  Prof. Gurulinga Kaapase 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ