ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯಾ ಎಸ್. ಕುಮಾರ್


 ಸಂಧ್ಯಾ ಎಸ್. ಕುಮಾರ್


ಸಂಧ್ಯಾ ಎಸ್. ಕುಮಾರ್ ದೂರದರ್ಶನದಲ್ಲಿ ಕನ್ನಡ ಪ್ರಸಾರ ಆರಂಭವಾದಾಗ, ಕಾರ್ಯಕ್ರಮ ನಿರೂಪಕರಾಗಿ ಕನ್ನಡಿಗರ ಮನೆ-ಮನಗಳಲ್ಲಿ ಹೆಸರಾಗಿದ್ದ ಪ್ರಮುಖ ಕಾರ್ಯಕ್ರಮ ನಿರೂಪಕರಲ್ಲಿ ಒಬ್ಬರು.  ಅವರ ಮಂದಹಾಸಯುಕ್ತ,  ಸುಮಧುರ, ಪ್ರಶಾಂತ ಭಾವದ ನಿರೂಪಣೆಗಳು, ಇಂದೂ ನಮ್ಮ ಮನಗಳಲ್ಲಿ ಹಸುರಾಗಿವೆ

ಮೇ 23, ಸಂಧ್ಯಾ ಅವರ ಜನ್ಮದಿನ.  ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ.  ತಂದೆ  ವೇಣುಗೋಪಾಲ್ ಅವರು ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದರು.  ತಾಯಿ ಶಾಂತಾ. ಈ ದಂಪತಿಗಳ ನಾಲ್ಕು ಮಕ್ಕಳಲ್ಲಿ ಸಂಧ್ಯಾ ಒಬ್ಬರು. ಸಂಧ್ಯಾ ಅವರು ಬಿ.ಕಾಂ ಓದಿದರು.  ಅಪಾರ ಸಂಗೀತಾಸಕ್ತಿಗಳು ಮನೆ ಮಾಡಿದ್ದ ಈ ಕುಟುಂಬದಲ್ಲಿ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ ಮತ್ತು ಶ್ಲೋಕಗಳ  ವಾತಾವರಣ ನಿರಂತರವಾಗಿತ್ತು. 

ಸಂಧ್ಯಾ ಅವರ ತಂದೆ ವೇಣುಗೋಪಾಲ್ ಅವರು ಅಪಾರ ಹಿಂದೀ ಚಲನಚಿತ್ರಗೀತೆಗಳ ಅಮೂಲ್ಯ ಎಲ್ ಪಿ ಸಂಗ್ರಹವನ್ನು ಹೊಂದಿದ್ದರು.  ತಾಯಿ ನುರಿತ ಸಂಗೀತಗಾರ್ತಿಯಾಗಿದ್ದರು.  ಸಂಧ್ಯಾ ಅವರಿಗೆ ತಮ್ಮ ತಂದೆಯವರಂತೆಯೇ ಸಿನಿಮಾ ಹಾಡುಗಳನ್ನು ವಿಶ್ಲೇಷಣಾತ್ಮಕವಾಗಿ ಅನುಭಾವಿಸುವ ಹವ್ಯಾಸ ಜೊತೆಗೂಡಿತು.

1983 ವರ್ಷದಲ್ಲಿ ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳು ಪ್ರಸಾರ ಆರಂಭಗೊಂಡಾಗ, ಕಾರ್ಯಕ್ರಮ ನಿರೂಪಕರಾಗಿ ಆಯ್ಕೆಗೊಂಡ ಪ್ರಥಮ ಸಾಲಿನ ಅಭ್ಯರ್ಥಿಗಳಲ್ಲಿ  ಸಂಧ್ಯಾ ಒಬ್ಬರು. 
ವಿಷಯ ನಿರೂಪಣೆಗೆ ನೆನಪಿನ ಶಕ್ತಿಯನ್ನೇ ಅವಲಂಭಿಸಬೇಕಿದ್ದ (ಟೆಲಿ ಪ್ರಾಮ್ಟರ್ಸ್ ಬಳಕೆ ಇಲ್ಲದಿದ್ದ) ಆ  ದಿನಗಳಲ್ಲಿ ಸಂಧ್ಯಾ ಅವರು ನೇರ ಪ್ರಸಾರ ಕಾರ್ಯಕ್ರಮಗಳನ್ನೂ ಸಮರ್ಥವಾಗಿ ನಿರೂಪಿಸಿ ಹೆಸರಾಗಿದ್ದರು.

1991ರಲ್ಲಿ ಇನ್ನೂ 60ರ ವಯಸ್ಸಿನಲ್ಲಿದ್ದ ಸಂಧ್ಯಾ ಅವರ ತಂದೆಯವರು ನಿಧನರಾದರು.  ಮನೆ ಮಂದಿಗೆಲ್ಲ ಗಾಯನದ ನಶೆ ಮೂಡಿಸಿದ್ದ ಅವರ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಬೇಕು ಎಂಬುದು ಸಂಧ್ಯಾ ಮತ್ತು ಅವರ ಕುಟುಂಬದ ಆಶಯವಾಗಿತ್ತು. 2000 ದ ವರ್ಷದಿಂದ  ಮನ್ನಾಡೆ ಅವರು ಬೆಂಗಳೂರಿನಲ್ಲಿ ನೆಲೆಸಲು ಆರಂಭಿಸಿದಾಗ, ಸಂಧ್ಯಾ ಅವರು ತಾವು ಆಗ ತಾನೇ ಆರಂಭಿಸಿದ್ದ ತಮ್ಮ  'ಸರಸ್ ಕಮ್ಯೂನಿಕೇಷನ್ಸ್' ಸಂಸ್ಥೆಯ ಮೂಲಕ ಅವರನ್ನು ಸಂಪರ್ಕಿಸಿ, 2001ರಲ್ಲಿ ಪ್ರಥಮ 'ಸುರ್ ಸಂಧ್ಯಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಕಾರ್ಯಕ್ರಮದಿಂದ ಬಂದ ಸಮಸ್ತ ಹಣವನ್ನು, ಸಂಧ್ಯಾ ಅವರು ಕಿದ್ವಾಯಿ ಮೆಮೊರಿಯಲ್ ಆಸ್ಪತ್ರೆಗೆ ಕೊಡುಗೆ ನೀಡಿದ್ದು, ಮನ್ನಾಡೆ ಅವರಿಗೆ ಅಪಾರ ಸಂತೋಷ ತಂದಿತ್ತು.  ಮುಂದೆ ತಮ್ಮ 'ಸುರ್ ಸಂಧ್ಯಾ' ಕಾರ್ಯಕ್ರಮ ಸಂಯೋಜನೆಗಳ ಮೂಲಕ ಸಂಧ್ಯಾ ಅವರು ನಾಡಿನ ಬಹಳಷ್ಟು ಪ್ರಸಿದ್ಧರ ಗಾನ ಮಾಧುರ್ಯವನ್ನು ಬೆಂಗಳೂರಿಗರಿಗೆ ನೀಡುತ್ತ ಬಂದಿದ್ದಾರೆ.  ಆ ಮೂಲಕ ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಕೊಡುಗೆಯನ್ನೂ ನೀಡುತ್ತಿದ್ದಾರೆ. ಇದರಲ್ಲಿ ಸಂಧ್ಯಾ ಅವರ ಪತಿ ರಮೇಶ್, ಒಡಹುಟ್ಟಿದವರು ಮತ್ತು ಅವರ ಕುಟುಂಬದ ಹೊಸ ತಲೆಮಾರಿನವರ ಸಕ್ರಿಯ ಭಾಗವಹಿಕೆಯಿದ್ದು, ಸಂಗೀತದ ಮುಖೇನ ಸಮಾಜಕ್ಕೆ ವಿವಿಧ ರೀತಿಯ ಕೊಡುಗೆಗಳು ಈ ಕುಟುಂಬದಿಂದ ಸಲ್ಲುತ್ತಿವೆ.

ಸಂಧ್ಯಾ ಎಸ್. ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Happy birthday Sandhya S Kumar🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ