ಮತ್ತಿಹಳ್ಳಿ ಮದನ ಮೋಹನ
ಮತ್ತಿಹಳ್ಳಿ ಮದನ ಮೋಹನ
ಮತ್ತಿಹಳ್ಳಿ ಮದನ ಮೋಹನ ಅವರು ಪತ್ರಿಕಾಲೋಕದಲ್ಲಿ ಹೆಸರಾಗಿದ್ದವರು.
ಮತ್ತಿಹಳ್ಳಿ ಮದನ ಮೋಹನ ಅವರು 1940ರ ವರ್ಷ ಹರಪ್ಪನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಮತ್ತಿಹಳ್ಳಿ ರಾಘವೇಂದ್ರ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರದು ಪತ್ರಕರ್ತ ಕುಟುಂಬವಾಗಿದ್ದು, ಮಗ ಕೂಡ ಪತ್ರಕರ್ತರಾಗಿದ್ದಾರೆ.
ವೈದ್ಯರಾಗುವ ಕನಸು ಕಂಡಿದ್ದ ಮತ್ತಿಹಳ್ಳಿ ಮದನ ಮೋಹನ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮ ಪ್ರವೇಶಿಸಿದರು. 1958ರಲ್ಲಿ ವೃತ್ತಿ ಆರಂಭಿಸಿದ ಇವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾರರಾಗಿ ಬೆಳಗಾವಿಯಲ್ಲಿ ಕೆಲಸ ಆರಂಭಿಸಿದರು.
ಬೆಳಗಾವಿಯು 'ಗೋವಾ ಸ್ವಾತಂತ್ರ್ಯ ಹೋರಾಟ'ದ ಕೇಂದ್ರ ಬಿಂದು ಆಗಿದ್ದರಿಂದ ಆ ಕುರಿತು ಮಹತ್ವದ ವರದಿಗಳನ್ನು ಬರೆದ ಮದನ ಮೋಹನರು ‘ಮದನ ಮೋಹನ ಗೋವಾ’ ಎಂದೇ ಪ್ರಸಿದ್ಧರಾದರು. ನಂತರ ಗೋವಾಕ್ಕೆ ತೆರಳಿ ರಾಜ್ಯ ಪತ್ರಕರ್ತರಾದರು. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಲೇ ಎಲ್‌ಎಲ್‌ಬಿ ಮುಗಿಸಿಕೊಂಡರು.
ಆಂಗ್ಲಭಾಷಾ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮತ್ತಿಹಳ್ಳಿ ಮದನ ಮೋಹನ ಅವರನ್ನು ‘ದಿ ಹಿಂದೂ’ ಪತ್ರಿಕೆ ತನ್ನ ಕಾಯಂ ನೌಕರನ್ನಾಗಿ ನೇಮಿಸಿಕೊಂಡು, ಉತ್ತರ ಕರ್ನಾಟಕದ ಸುದ್ದಿ ಸಂಪಾದಕರನ್ನಾಗಿ ನೇಮಿಸಿತು. ಅವರು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಒಳಗೊಂಡ ಮಹತ್ವದ ವರದಿ ಮತ್ತು ಸುದ್ದಿಲೇಖನಗಳನ್ನು ಬರೆದರು. ದಿ ಹಿಂದು ಪತ್ರಿಕೆಯಲ್ಲಿ ಸುಮಾರು 47 ವರ್ಷ ಸೇವೆ ಸಲ್ಲಿಸಿದ್ದ ಮತ್ತಿಹಳ್ಳಿ ಮದನ ಮೋಹನ ಅವರು ಉತ್ತರ ಕರ್ನಾಟಕದ ಮಾಹಿತಿ ಕಣಜ ಎಂದೇ ಹೆಸರುವಾಸಿಯಾಗಿದ್ದರು. ಎಂ. ಮದನ ಮೋಹನ ಅವರು ದಿ ಹಿಂದು ಪತ್ರಿಕೆಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದರಲ್ಲದೆ, ಕರ್ನಾಟಕ-ಮಹಾರಾಷ್ಟ್ರ ಗಡಿ ತಂಟೆಯ 1986ರ ಗಲಭೆಗಳಲ್ಲಿ, ಹುಬ್ಬಳ್ಳಿಯ ಈದ್ಗಾ ಗಲಭೆಗಳ ಸಂದರ್ಭದಲ್ಲಿ ಮೂಡಿದ ಅವರ ವರದಿಗಳು ಸರ್ಕಾರಗಳ ಎದುರು ವಾಸ್ತವಾಂಶವನ್ನು ತೆರೆದಿಟ್ಟಿದ್ದವು. ಅವರು 2005ರಲ್ಲಿ ನಿವೃತ್ತರಾದರು.
ಮದನ ಮೋಹನ ಅವರು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 1976 ರಲ್ಲಿ ಸ್ಥಾಪನೆಗೊಂಡ ಸಮಯದಲ್ಲಿ ಸಂಘದ ಪ್ರಪ್ರಥಮ ಖಜಾಂಚಿಗಳಾಗಿ ಕಾರ್ಯ ನಿರ್ವಹಿಸಿದ್ದರು. 1979 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧಿವೇಶನ ಯಶಸ್ವಿಯಾಗುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಆ ಸಮ್ಮೇಳನವನ್ನು ಅಂದಿನ ಕೇಂದ್ರ ಸರ್ಕಾರದ ವಾರ್ತಾ ಸಚಿವರಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರು ಉದ್ಘಾಟನೆ ಮಾಡಿದ್ದರು. ಸಮ್ಮೇಳನದಲ್ಲಿ ಉಳಿಸಿದ ಹಣದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಜೀವ ನೀಡಲಾಗಿತ್ತು. ಪ್ರಸ್ತುತ ಇರುವ ಕಟ್ಟಡ ಅದರ ಮುಂದುವರಿದ ಭಾಗವಾಗಿದೆ.
ಮದನ ಮೋಹನ ಅವರು ನಿವೃತ್ತಿ ನಂತರವೂ ಅಪಾರ ಬರವಣಿಗೆ ಕೆಲಸ ಮಾಡಿದರು. ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದರು. ಸಂಯುಕ್ತ ಕರ್ನಾಟಕದಲ್ಲಿ ಕೆಲ ಕಾಲ ಕೆಲಸ ಮಾಡಿದರು. ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದರು.
ವ್ಯಕ್ತಿನಿಷ್ಠೆಗಿಂತ ವಸ್ತುನಿಷ್ಠೆಗೆ ಒತ್ತು ನೀಡುತ್ತಿದ್ದ ಮಹಾನ್ ಪತ್ರಕರ್ತರಾಗಿದ್ದ ಮತ್ತಿಹಳ್ಳಿ ಮದನ ಮೋಹನ ಅವರಿಗೆ ರಾಜ್ಯೋತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಸಂದವು. ನಾನಾ ಸಂಘ-ಸಂಸ್ಥಗಳು ಪ್ರಶಸ್ತಿ ನೀಡಿ ಗೌರವಿಸಿದವು.
ಮತ್ತಿಹಳ್ಳಿ ಮದನ ಮೋಹನ ಅವರು 2024ರ ಜೂನ್ 15ರಂದು ನಿಧನರಾದರು.
Mattihalli Madan Mohan

ಕಾಮೆಂಟ್‌ಗಳು