ಗೌರಿ ಕುಪ್ಪುಸ್ವಾಮಿ
ಗೌರಿ ಕುಪ್ಪುಸ್ವಾಮಿ
ಮೈಸೂರಿನ ಡಾ. ಗೌರಿ ಕುಪ್ಪುಸ್ವಾಮಿ ಅವರು ಗಾಯಕಿ, ದಕ್ಷ ಬೋಧಕಿ ಹಾಗೂ ಪಾಂಡಿತ್ಯಪೂರ್ಣ ಬರೆಹಗಾರ್ತಿಯಾಗಿ ಗೌರವಾನ್ವಿತರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಗೌರಿ ಅವರು 1931ರ ಆಗಸ್ಟ್ 3ರಂದು ಪುದುಕೋಟ್ಟೈ ಎಂಬಲ್ಲಿ ಜನಿಸಿದರು. ತಂದೆ ನಟೇಶನ್. ತಾಯಿ ಬಾಲಕುಜಮ್. ಅವರ ತಾಯಿ, ಸೋದರಮಾವ ಎಲ್ಲರೂ ಸಂಗೀತ ಸಾಧಕರಾಗಿದ್ದರು. ಮಹಾನ್ ಸಂಗೀತಕಾರ ಜಿ.ಎನ್. ಬಾಲಸುಬ್ರಮಣ್ಯಮ್ ಇವರ ಕುಟುಂಬದ ಆಪ್ತರಾಗಿದ್ದರು. ಡಾ. ಎಸ್. ರಾಮನಾಥನ್, ಕಲ್ಕತ್ತಾ ಕೃಷ್ಣಮೂರ್ತಿ, ವೆಂಕಟರಾಮ ಅಯ್ಯರ್ ಅಂತಹ ಮಹಾನ್ ಸಂಗೀತಕಾರರಿಂದ ಇವರಿಗೆ ಚಿಕ್ಕಂದಿನಲ್ಲಿ ಮನೆಯಲ್ಲಿಯೇ ಸಂಗೀತ ಪಾಠ ದೊರೆಯಿತು. ಹದಿನಾಲ್ಕನೇ ವಯಸ್ಸಿನಲ್ಲಿ ಕುಪ್ಪುಸ್ವಾಮಿ ಅವರೊಂದಿಗೆ ವಿವಾಹವಾಗಿ ಬೆಂಗಳೂರಿಗೆ ಬಂದರು. ಮನೆಯಲ್ಲಿ ಅತ್ತೆಯ ಕಾಟವಿದ್ದರೂ ಆಗಾಗ ಪತಿಯ ಪ್ರೋತ್ಸಾಹದಿಂದ ಚೆನ್ನೈಗೆ ಹೋಗಿ ಕಲ್ಕತ್ತಾ ಕೃಷ್ಣಮೂರ್ತಿ, ಜಿ ಎನ್ ಬಿ, ಕಲ್ಯಾಣ ರಾಮನ್ ಅವರ ಮಾರ್ಗದರ್ಶನದಲ್ಲಿ ಸಂಗೀತವನ್ನು ಪೋಷಿಸಿಕೊಳ್ಳುತ್ತ ಸಾಗಿದರು. ಎಂ. ಎಲ್. ವಸಂತಕುಮಾರಿ, ಎಂ. ಎಸ್. ಸುಬ್ಬುಲಕ್ಷ್ಮಿ, ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರ ಮಾರ್ಗದರ್ಶನವೂ ದೊರಕಿತು.
ಗೌರಿ ಅವರ ಪತಿ ಕುಪ್ಪುಸ್ವಾಮಿ ಅವರು ವಿಜ್ಞಾನಿಗಳಾದರೂ ಸಂಗೀತಾಭಿರುಚಿ ಉಳ್ಳವರಾಗಿದ್ದು ಪತ್ನಿಗೆ ಅಪಾರ ಬೆಂಬಲ ಪ್ರೋತ್ಸಾಹ ನೀಡಿದರು. ಮೈಸೂರಿಗೆ ಬಂದಾಗ ಗೌರಿ ಅವರು ಆರ್. ಕೆ. ಶ್ರೀಕಂಠನ್ ಅವರಿಂದ ಸಂಗೀತ ಕಲಿಯಲಾರಂಭಿಸಿದರು. ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದಿಂದ 'A Comparative study of the scales of Karnatic and Western Music’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನನಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರೊಫೆಸರ್ ಹಾಗೂ ಗಾಯನ ವಿಭಾಗದ ಮುಖ್ಯಸ್ಥರಾಗಿ 1992ರಲ್ಲಿ ನಿವೃತ್ತರಾದರು. ಪಿಎಚ್.ಡಿ ಮಾರ್ಗದರ್ಶಕರಾಗಿ ಮೈಸೂರು ಮತ್ತು ಕೇರಳ ವಿಶ್ವವಿದ್ಯಾಲಯದ ಅನೇಕ ಮಂದಿಗೆ ಸಂಶೋಧನೆಗೆ ಮಾರ್ಗದರ್ಶಕರಾದರು. ಹಣಕ್ಕಾಗಿ ಸಂಗೀತ ಕಲಿಸದಿದ್ದ ಅವರು ಆಸಕ್ತ ಯೋಗ್ಯ ಅಭ್ಯರ್ಥಿಗಳಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಸಂಗೀತ ಪಾಠ ಮಾಡುತ್ತಿದ್ದರು.
ಗೌರಿ ಕುಪ್ಪುಸ್ವಾಮಿ ಅವರು 6 ದಶಕಗಳಿಗೂ ಹೆಚ್ಚು ಕಾಲ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಮೈಸೂರು, ಧಾರವಾಡ, ಮದ್ರಾಸ್ ಮತ್ತು ಪುದುಚೇರಿ ಆಕಾಶವಾಣಿ ಕೇಂದ್ರಗಳಿಂದ ಅವರ ಸಂಗೀತ ಸುಧೆ ನಿರಂತರವಾಗಿ ಮೂಡಿಬಂದಿತ್ತು. ಓಹಿಯೊ ಯೂನಿವರ್ಸಿಟಿ, ಲಾಸ್ ಏಂಜಲೀಸ್ ಯೂನಿವರ್ಸಿಟಿ, ವಾಷಿಂಗ್ಟನ್ ಯೂನಿವರ್ಸಿಟಿ, ಮ್ಯೂಸಿಕ್ ಅಕಾಡೆಮಿ, ಕರ್ನಾಟಕ ಗಾನಕಲಾ ಪರಿಷತ್ ಮುಂತಾದ ಸಂಸ್ಥೆಗಳಲ್ಲಿ ಸಂಗೀತದ ವಿವಿಧ ವಿಷಯಗಳ ಮೇಲೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿ, ಹೋದೆಡೆಯಲ್ಲೆಲ್ಲಾ ಭಾರತೀಯ ಸಂಗೀತದ ಬಗೆಗೆ ತಿಳಿವಳಿಕೆ ಹೆಚ್ಚಿಸಿದ್ದರು. ಅನೇಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟೊರೇಟ್ ನೀಡಿದ್ದವು.
ಗೌರಿ ಕುಪ್ಪುಸ್ವಾಮಿ ಅವರು ತಮ್ಮ ಪುತ್ರ ಡಾ.ಎಂ.ಹರಿಹರನ್ ಅವರ ಜೊತೆಗೂಡಿ ಸುಮಾರು 50ಕ್ಕೂ ಹೆಚ್ಚು ವಿದ್ವತ್ಪೂರ್ಣ ಪುಸ್ತಕಗಳನ್ನು ಕನ್ನಡ, ಇಂಗ್ಲಿಷ್, ತಮಿಳು ಭಾಷೆಗಳಲ್ಲಿ ಮೂಡಿಸಿದ್ದರು.
ಗೌರಿ ಕುಪ್ಪುಸ್ವಾಮಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟಕ ಆಕಾಡೆಮಿಯ ಸಂಗೀತ ಕಲಾಶ್ರೀ, ಗಾಯನ ಸಮಾಜದ ಕಲಾರತ್ನ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಮ್ಯೂಸಿಕಾಲಜಿಸ್ಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ಡಾ. ಗೌರಿ ಕುಪ್ಪುಸ್ವಾಮಿ ಅವರು 2023ರ ಜೂನ್ 6ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ.
Portrait Photo and Information Credits: T S Venu Gopal 🌷🙏🌷
On Rememberance Day of Great musician and musicologist Dr. Gouri Kuppuswsmy
ಕಾಮೆಂಟ್ಗಳು