ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ವೈ.ನಾರಾಯಣಸ್ವಾಮಿ


 ಕೆ.ವೈ.ನಾರಾಯಣಸ್ವಾಮಿ  

ಪ್ರೊ. ಕೆ.ವೈ.ನಾರಾಯಣಸ್ವಾಮಿ  ಅವರು ಶಿಕ್ಷಣ ತಜ್ಞರಾಗಿ, ನಾಟಕಕಾರರಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಹೀಗೆ ಬಹುಮುಖಿಯಾಗಿ ಹೆಸರಾಗಿದ್ದಾರೆ.

ಕೆ.ವೈ.ಎನ್. ಎಂದು ಆಪ್ತರಾಗಿರುವ ನಾರಾಯಣಸ್ವಾಮಿ ಅವರು 1965ರ ಜೂನ್ 5 ರಂದು ಜನಿಸಿದರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೂಕಿನ ಕುಪ್ಪೂರು ಇವರ ಊರು.  ತಂದೆ ಯಾಲಪ್ಪ.  ತಾಯಿ ಮುನಿಯಮ್ಮ.  ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಪೂರೈಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಪಡೆದರು.   ಇವರ ಪಿಎಚ್.ಡಿ ಪ್ರಬಂಧವಾದ 'ನೀರ ದೀವಿಗೆ’ ಎಂಬುದು ‘ಅಗ್ನಿ’ ಮತ್ತು ‘ಜಲ’ದ ಮೂಲಕ  ರೂಪುಗೊಂಡಿರುವ ಸಾಂಸ್ಕೃತಿಕ ವ್ಯಾಖ್ಯಾನವೆಂದು ಖ್ಯಾತಿಗೊಂಡಿದೆ.

ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಹೆಸರಾಗಿರುವ ನಾರಾಯಣಸ್ವಾಮಿ ಅವರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

'ಪಂಪ ಭಾರತ',  ‘ಕಳವು’,  ‘ಅನಭಿಜ್ಞ ಶಾಕುಂತಲ’,  ‘ಚಕ್ರರತ್ನ’, ‘ಹುಲಿಸೀರೆ’ ಮತ್ತು ‘ವಿನುರ ವೇಮ’ ಮುಂತಾದವು ಕೆವೈಎನ್ ಅವರ ಪ್ರಸಿದ್ದ ನಾಟಕಗಳಲ್ಲಿ
ಸೇರಿವೆ.  ಇವರು ‘ಕುವೆಂಪು’ರವರ ‘ಶೂದ್ರತಪಸ್ವಿ’ ನಾಟಕವನ್ನು ತೆಲುಗು ಭಾಷೆಗೆ ಭಾಷಾಂತರಿಸಿದ್ದಾರೆ.  ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನು ಒಂಬತ್ತು ಗಂಟೆಗಳ ‘ರಂಗ ರೂಪ’ಕ್ಕೆ ಅಣಿಗೊಳಿಸಿದ ಮಹತ್ವದ ಸಾಧನೆ ಮಾಡಿದ್ದಾರೆ. ಇಂತಹುದೇ 9 ಗಂಟೆಯ 'ವಚನ ಕಲ್ಯಾಣ'  ಎಂಬ 12 ನೇ ಶತಮಾನದ ಶರಣ ಚಳವಳಿಯ ವಸ್ತುವನ್ನು ರಂಗ ಪ್ರಯೋಗಕ್ಕಾಗಿ ಅಣಿಗೊಳಿಸಿದ್ದಾರೆ.  ‘ಕಳವು’ ಮತ್ತು ‘ಸೂರ್ಯಕಾಂತಿ’ ಎಂಬ ಕನ್ನಡ ಚಲನಚಿತ್ರಗಳಿಗೆ ಚಿತ್ರಕತೆ ಬರೆದಿದ್ದಾರೆ.  ‘ಲಾಸ್ಟ್ ಬಸ್’ ಮತ್ತು ‘ಭಾಗೀರಥಿ ಕಾಡು' ಚಿತ್ರಗಳಿಗೆ ಇವರ ಗೀತಸಾಹಿತ್ಯವಿದೆ. ಆದಿಕವಿ ಪಂಪನ ಕುರಿತಾದ ಸಾಕ್ಷ್ಯಚಿತ್ರಕ್ಕೂ ಇವರ ಚಿತ್ರಸಾಹಿತ್ಯವಿದೆ.

ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ತರಂಗಗಳನ್ನು ಮೂಡಿಸಿದ ಇವರ ‘ಪಂಪ ಭಾರತ’  ನಾಟಕ, 'ಅನಭಿಜ್ಞ ಶಾಕುಂತಲ’ ನಾಟಕ ಹಾಗೂ ‘mನೆನೆವ ಪರಿ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಗಳು ಸಂದಿವೆ.  ಕರ್ನಾಟಕ ಇಂಟರ್ನ್ಯಾಷನಲ್ ಸಂಗೀತ ಪ್ರಶಸ್ತಿ 2013 ಮತ್ತು 2014 (ಅನಭಿಜ್ಞ ಶಾಕುಂತಲ ಮತ್ತು ಮಳೆ ಮಾಂತ್ರಿಕ ನಾಟಕಕ್ಕೆ), ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2014 ಅತ್ಯುತ್ತಮ ಚಿತ್ರಕಥೆ (ಕಳವು ಚಿತ್ರಕ್ಕೆ), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಕಸಾಪದ ಕುವೆಂಪು  ಸಿರಿಗಂಧ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಇವರಿಗೆ ಸಂದಿವೆ.

ಸಾಂಸ್ಕೃತಿಕ ಸಂಘಟಕರಾಗಿ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್, ಕುವೆಂಪು ಓದು, ಉಪನ್ಯಾಸಕರ ಜೊತೆ ವಿದ್ಯಾರ್ಥಿಗಳ ಒಂದು ಊಟ ಮುಂತಾದ ಅನೇಕ ನವ ನವೀನ ಸಂಘಟನಾ ಚಟುವಟಿಕೆಗಳಲ್ಲಿ ಕೆವೈಎನ್ ನಿರಂತರ ಸಕ್ರಿಯರು.

ಕನ್ನಡ ನಾಡಿನ ಹೆಮ್ಮೆಯ ಸಾಧಕರಾದ ಪ್ರೊ. ಕೆ.ವೈ.ನಾರಾಯಣಸ್ವಾಮಿ  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of our Great Playwright, lyricist, Scholar and Vice Chancellor Prof. Narayana Swamy Kuppur Yalappa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ