ನ. ರತ್ನ
ನ. ರತ್ನ
ನ. ರತ್ನ ಎಂತಲೇ ಪರಿಚಿತರಾಗಿದ್ದ ನಾಟಕಕಾರ ಡಾ. ನಟೇಶ ರತ್ನ ಅವರು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (All India Institute of Speech and Hearing) ಸ್ಥಾಪಕ ನಿರ್ದೇಶಕರಾಗಿ, ನಾಟಕಕಾರರಾಗಿ ಮತ್ತು ರಂಗಕಲಾವಿದರಾಗಿ ಪ್ರಸಿದ್ಧರಾಗಿದ್ದವರು. ರತ್ನ ಅವರು ಭಾರತೀಯ ಭಾಷಾಶಾಸ್ತ್ರ ಮತ್ತು ವಾಕ್ ಶ್ರವಣ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದವರು. ಇಂದು ಅವರ ಸಂಸ್ಮರಣೆ ದಿನ.
ರತ್ನ ಅವರು ಹುಟ್ಟಿದ್ದು ತಮಿಳುನಾಡಿನ ಚಿದಂಬರಂನಲ್ಲಿ. ಅವರು ವಿದ್ಯಾಭ್ಯಾಸ ನಡೆಸಿದ್ದು ಮೈಸೂರಿನಲ್ಲಿ. ರತ್ನ ಅವರಿಗೆ ಈ ವೃತ್ತಿಪ್ರವೃತ್ತಿಗಳೆರಡೂ ತಂದೆಯವರಿಂದಲೇ ಬಂದ ಬಳುವಳಿ. ತಂದೆ ಎಂ.ನಟೇಶನ್ ಅವರು, ಮೈಸೂರಿನಲ್ಲಿ ಎಂ.ವಿ. ಗೋಪಾಲಸ್ವಾಮಿಯವರು ಮೂಡಿಸಿದ ಆಕಾಶವಾಣಿಯನ್ನು ಸ್ವಾತಂತ್ರ್ಯಾನಂತರದಲ್ಲಿ ಬೆಂಗಳೂರು ಆಕಾಶವಾಣಿಯಾಗಿ ಅದ್ಭುತವಾಗಿ ಕಟ್ಟಿಬೆಳೆಸಿದವರು. ಆಕಾಶವಾಣಿ ಸೇರುವುದಕ್ಕೆ ಮುನ್ನ ನಟೇಶನ್ ಅವರು ಮೈಸೂರಿನ ಅಂಧ ಮತ್ತು ಕಿವುಡರ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಜೊತೆಗೆ ಮೈಸೂರಿನ ಹವ್ಯಾಸಿ ರಂಭೂಮಿಯಲ್ಲಿ ಅಭಿನಯಿಸುವ ಮೂಲಕ ಸಕ್ರಿಯರಾಗಿದ್ದರು.
ತಮ್ಮ ತಂದೆಯವರ ಹಾದಿಯಲ್ಲೆ ಕ್ರಮಿಸಿದ ನ. ರತ್ನ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಜೊತೆಗೆ ಬಿ.ಎಡ್. ಓದಿದರು. ನಂತರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದರು. ವಾಕ್ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಅಂಧರು ಮತ್ತು ಶ್ರವಣ ನ್ಯೂನತೆಯುಳ್ಳವರಿಗೆ ಶಿಕ್ಷಣ ನೀಡುವುದರಲ್ಲಿ ಪರಿಣತಿ ಪಡೆದರು. ಇಂಡಿಯಾನ ಸ್ಟೇಟ್ ಕಿವುಡರ ಶಾಲೆಯಲ್ಲಿ ಬೋಧಕರಾಗಿ ವೃತ್ತಿ ಜೀವನ ಆರಂಭಿಸಿದರು. ಸ್ವಲ್ಪಕಾಲ ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿ ವಾಕ್‌ಚಿಕಿತ್ಸಾ ತಜ್ಞರಾಗಿ (ಸ್ಪೀಚ್ ಥೆರಪಿಸ್ಟ್) ಸೇವೆಸಲ್ಲಿಸಿದರು. 1960ರಲ್ಲಿ ಮರಳಿ ಮೈಸೂರಿಗೆ ಬಂದು ಇನ್‌ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್ಸ್‌ನಲ್ಲಿ ಉದ್ಯೋಗ ಆರಂಭಿಸಿದರು. ಮುಂದೆ ಇದು, ರತ್ನ ಅವರ ಅವಿರತ ಹೋರಾಟದ ಫಲವಾಗಿ ವಾಕ್ ಶ್ರವಣ ಸಂಸ್ಥೆಯಾಯಿತು (ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್). ರತ್ನ ಇದರ ಸಂಸ್ಥಾಪಕ ನಿರ್ದೇಶಕರಾದರು. ರತ್ನ ವಾಕ್ ಶ್ರವಣ ಶಾಸ್ತ್ರಜ್ಞರಷ್ಟೇ ಅಲ್ಲ, ಅವರೊಬ್ಬ ಶಿಕ್ಷಣವೇತ್ತರೂ ಹೌದು. ವಾಕ್ ಶ್ರವಣ ನ್ಯೂನತೆಗಳನ್ನು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಆಧ್ಯಯನಕ್ಕೆ ಅಕಾಡೆಮಿಕ್ ಮಂದಿಯ ಅಂಗೀಕಾರ ಪಡೆಯುವುದರಲ್ಲಿ ರತ್ನರ ಪಾತ್ರ ಸ್ಮರಣೀಯವಾದದ್ದು. ರತ್ನ ಅವರು ಮೈಸೂರಿನಲ್ಲಿ ವಾಕ್‌ಶ್ರವಣ ಸಂಸ್ಥೆಯನ್ನು ಬೆಳೆಸುತ್ತಲೇ ರಾಜಸ್ತಾನ, ಈಶಾನ್ಯ ರಾಜ್ಯಗಳು ಮುಂತಾಡೆಗಳಲ್ಲೆಲ್ಲ ಸುತ್ತಿ ವಾಕ್ ಶ್ರವಣ ನ್ಯೂನತೆಯುಳ್ಳವರ ಶಿಕ್ಷಣಕ್ಕಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿಯೂ ಶ್ರಮಿಸಿದರು.
ರತ್ನ ಅವರಿಗೆ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ವಿಶೇಷ ಒಲವು. ಅವರು ಅಮೆರಿಕದಿಂದ ಮೈಸೂರಿಗೆ ಹಿಂದಿರುಗಿದಾಗ ಕನ್ನಡ ಸಾಹಿತ್ಯದಲ್ಲಿ ನವ್ಯದ ತಂಗಾಳಿಯ ಪ್ರಭಾವದಿಂದ ಹೊಸ ನಾಟಕಗಳ ರಂಗಪ್ರಯೋಗಗಳು ಬೆಂಗಳೂರಿನಲ್ಲಿ ಆರಂಭಗೊಂಡಿದ್ದವು. 1966ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಸಂದರ್ಭವು ಮೈಸೂರಿನ ರಂಗಹವ್ಯಾಸಿಗಳಲ್ಲೂ ನವ್ಯನಾಟಕಗಳ ಪ್ರಯೋಗಕ್ಕೆ ಪ್ರೇರಣೆ ಪ್ರಚೋದನೆಗಳನ್ನು ಒದಗಿಸಿತು. ‘ಸಮೆತೆಂತೋ’ (ಸರಸ್ವತೀಪುರಂನ ತೆಂಗಿನತೋಟದ) ಹವ್ಯಾಸಿ ರಂಗ ತಂಡವು ರತ್ನ, ಸಿಂಧುವಳ್ಳಿ ಅನಂತ ಮೂರ್ತಿ ಮತ್ತು ಎಚ್.ಎಂ. ಚನ್ನಯ್ಯನವರ ಅಧ್ವರ್ಯುತನದಲ್ಲಿ ಹುಟ್ಟಿತು. ಈ ತಂಡದ ಮೊದಲ ರಂಗಪ್ರಯೋಗ ಪೂರ್ಣಚಂದ್ರ ತೇಜಸ್ವಿಯವರ ‘ಯಮಳಪ್ರಶ್ನೆ’. ಸಮೆತೆಂತೋ ತಂಡದ ನಾವೀನ್ಯತೆ ಮತ್ತು ಪ್ರಯೋಗಶೀಲತೆಗಳು ‘ಯಮಳಪ್ರಶ್ನೆ’ಯಿಂದಲೇ ಪ್ರಾರಂಭಗೊಂಡಿತು. ಮುಂದೆ ‘ಎಲ್ಲಿಗೆ?’, ‘ಬೊಂತೆ’, ‘ಗೋಡೆ ಬೇಕೆ ಗೋಡೆ’, ‘ಇಲಿ ಬೋನು’, ‘ಕಾಡು ಪ್ರಾಣಿ’, 'ಆವಾಹನೆ’, ‘ಸತ್ತವರ ನೆರಳು’, ‘ಕದಡಿದ ನೀರು’, ‘ಘಾಶಿರಾಂ ಕೊತ್ವಾಲ್’, ‘ತಲೆ ದಂಡ’, ಮೊದಲಾದ ನಾಟಕಗಳ ಪ್ರಯೋಗಗಳಾದವು. ಹೀಗೆ, ಮೈಸೂರಿನ ಹವ್ಯಾಸಿ ರಂಗಭೂಮಿಗೆ ನವ್ಯದ ಆಯಾಮ ಸಮೆತೆಂತೋ ಮೂಲಕ ಸಂದಿತು. ಇದರಲ್ಲಿ ನಟರಾಗಿ, ನಾಟಕಕಾರರಾಗಿ ನ.ರತ್ನ ಅವರ ಕೊಡುಗೆ ಅಪಾರ. ನ. ರತ್ನ ಅವರು ಎಲ್ಲಿಗೆ, ಬೊಂತೆ, ಗೋಡೆ ಬೇಕೆ ಗೋಡೆ, ಮುಂತಾದ ನಾಟಕಗಳನ್ನು ಸ್ವಯಂ ರಚಿಸಿದ್ದರಲ್ಲದೆ, ಅನೇಕ ರೇಡಿಯೋ ನಾಟಕಗಳನ್ನೂ ರಚಿಸಿದರು.
ನ. ರತ್ನ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವೈದ್ಯಕೀಯ ಲೋಕದ ಎಂ.ಎನ್. ರಾಯ್ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್ ಪ್ರಶಸ್ತಿ, ದಸರಾ ರಂಗ ಗೌರವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ನ. ರತ್ನ ಅವರು 2024ರ ಜೂನ್ 19ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.
ರತ್ನ ಅವರಂತಹ ಮಹಾನ್ ಸಾಧಕ ಉದಯಿಸುವುದು ಅಪರೂಪ. "ನಾವು ಮತ್ತೊಮ್ಮೆ ಪ್ರೀತಿಸುವುದಕ್ಕೆ ಕಲಿಯಬೇಕು!" ಎಂಬುದನ್ನು ಒಂದು ಸಮಾರಂಭದಲ್ಲಿ ಅವರು ನುಡಿದಿದ್ದ ಮಾತು ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ. ಹೀಗೆ ನಮ್ಮನ್ನು ಹೀಗೆ ಎಚ್ಚರಿಸುವ ರತ್ನಗಳನ್ನು ನಾವು ತರುವುದಾದರೂ ಎಲ್ಲಿಂದ! ಮಹಾನ್ ರತ್ನ ಎಂಬ ಆ ಮಹಾನ್ ಚೇತನಕ್ಕೆ ಭಕ್ತಿಯ ನಮನ.
On Rememberance Day of Great Speech and Hearing Therapist, Playwright and Theatre activist Dr. N. Ratna Sir🌷🙏🌷

ಕಾಮೆಂಟ್‌ಗಳು