ಶ್ರೀಲಕ್ಷ್ಮಿ ಆದ್ಯಪಾಡಿ
ಶ್ರೀಲಕ್ಷ್ಮಿ ಆದ್ಯಪಾಡಿ
ಶ್ರೀಲಕ್ಷ್ಮೀ ಆದ್ಯಪಾಡಿ ಅವರಲ್ಲಿ ಬರಹ, ಚಿತ್ರಕಲೆ, ಛಾಯಾಗ್ರಹಣ, ಪ್ರಕೃತಿ ಪ್ರೀತಿ, ಫ್ಯಾಷನ್ ಡಿಸೈನಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಪುಸ್ತಕ ಪ್ರೀತಿ, ಕೈತೋಟದ ಕೆಲಸದ ಪ್ರೀತಿ ಹೀಗೆ ಬಹುಮುಖಿ ಪ್ರೀತಿಗಳು ನೆಲೆಗೊಂಡಿವೆ. ಒಂದು ರೀತಿಯಲ್ಲಿ ಜೀವನ ಪ್ರೀತಿಯ ಎಲ್ಲ ನೆಲೆಗಳೂ ಒಂದೆಡೆ ತುಂಬಿದಂತಹ ಉತ್ಸಾಹ ಇವರಲ್ಲಿದೆ.
ಜೂನ್ 20 ಶ್ರೀಲಕ್ಷ್ಮೀ ಆದ್ಯಪಾಡಿ ಅವರ ಜನ್ಮದಿನ. ಅವರು ಹುಟ್ಟಿದ್ದು ಉಡುಪಿ ಬಳಿಯ ಶಂಕಪುರದಲ್ಲಿ. ಬಿ.ಎಸ್ಸಿ, ಎಂ.ಎಸ್ಸಿ ಪದವಿಗಳನ್ನು ವಸ್ತ್ರ ವಿನ್ಯಾಸದ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಗಳಿಸಿರುವ ಇವರು ಕಂಪ್ಯೂಟರ್ ತಂತ್ರಜ್ಞಾನದಲ್ಲಿಯೂ ಡಿಪ್ಲೋಮಾ ಗಳಿಸಿದ್ದಾರೆ.
ಒಮ್ಮೆ ಪೂರ್ಣಾವಧಿ ಅಧ್ಯಾಪನದಲ್ಲಿ ತೊಡಗಿದ್ದ ಶ್ರೀಲಕ್ಷ್ಮೀ ಆದ್ಯಪಾಡಿ ಅವರು ವೈಯಕ್ತಿಕ ಕಾರಣಗಳಿಂದ ಅರೆಕಾಲಿಕ ಅಧ್ಯಾಪನ ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ.
ಶ್ರೀಲಕ್ಷ್ಮಿ ಅವರಿಗೆ ಬಾಲ್ಯದಿಂದಲೂ ಓದು, ಚಿತ್ರಕಲೆ, ರಂಗೋಲಿ, ಕರಕುಶಲ ಕಲೆಗಳ ಬಗ್ಗೆ ಅಪಾರ ಆಸಕ್ತಿ. ಇವೆಲ್ಲ ಇವರ ಅಮ್ಮನ ಇಷ್ಟದ ಹವ್ಯಾಸಗಳಾಗಿದ್ದು, ಇವರಿಗೂ ಬಾಲ್ಯದಿಂದ ಜೊತೆಗೂಡಿ ಬಂದಿದೆ.
ಶ್ರೀಲಕ್ಷ್ಮೀ ಆದ್ಯಪಾಡಿ ಅವರ ಬರಹಗಳು ಕವಿತೆ ರಚನೆ, ಗಜಲ್ ರಚನೆ, ಪ್ರಬಂಧ, ಓದಿದ ಪುಸ್ತಕಗಳ ಕುರಿತ ವಿಶ್ಲೇಷಣೆ, ಕಥೆ, ಬದುಕಿನ ಕುರಿತಾದ ಪ್ರೀತಿ ಹೀಗೆ ಹಲವು ನೆಲೆಗಳಲ್ಲಿ ವ್ಯಾಪಿಸಿದೆ. ಅಪಾರ ಓದುವ ಹವ್ಯಾಸವುಳ್ಳ ಇವರ ಬಳಿ ಪುಟ್ಟ ಗಂಥಾಲಯವೇ ಇದೆ.
ಶ್ರಿಲಕ್ಷ್ಮೀ ಅವರ ವರ್ಣ ರೇಖೆಗಳಲ್ಲಿ ಉತ್ಸಾಹ ತುಂಬಿದ ಬದುಕಿನ ಎಳೆಗಳಿವೆ. ಅವರು ಛಾಯಾಗ್ರಹಣದಲ್ಲೂ ಪರಿಣಿತರು. ಪ್ರಕೃತಿಯ ಸುಂದರ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಇವರಲ್ಲಿ ಜಾಣ್ಮೆ ಉತ್ಸುಕತೆಗಳಿವೆ. ಈ ಎರಡು ಹವ್ಯಾಸಗಳಿಗೆ ಪೂರಕವಾಗಿ ಸುತ್ತ ಮುತ್ತ ಕಾಡು ಮೇಡುಗಳಲ್ಲಿ ಅಲೆಯುವ ಚೈತನ್ಯ ಮತ್ತು ಪ್ರೀತಿಯೂ ಇದೆ. ಪೋಟೊಗ್ರಫಿ ಗುಂಪಿನ ಸಂಪಾದಕಿಯಾಗಿಯೂ ಕೆಲಸ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಅಂತರಜಾಲ ಪತ್ರಿಕೆಗಳಲ್ಲಿ ಇವರ ಪ್ರತಿಭೆಗಳ ಅಭಿವ್ಯಕ್ತಿ ಒಂದಿಲ್ಲೊಂದು ರೀತಿ ಅರಳಿ ಹೊರಹೊಮ್ಮುತ್ತಲೇ ಇವೆ. ಜೊತೆಗೆ ತಮ್ಮ ಮನೆಯಂಗಳದಿ ಹೂ ಮತ್ತು ಹಸುರನ್ನೂ ಅರಳಿಸುತ್ತಿದ್ದಾರೆ. ಇವುಗಳಿಗೆ ಪೂರಕವಾದ ಕಂಪ್ಯೂಟರ್ ತಂತ್ರಜ್ಞಾನ ಬಳಕೆಯ ಕೌಶಲ್ಯವೂ ಜೊತೆಗಿದೆ.
ಹೀಗೆ ಮನೆಯಂಗಳ, ಮನದಂಗಳ ಅರಳಿಸಿಕೊಂಡು ಜಗದಂಗಳದಲಿ ಸಾಂಸ್ಕೃತಿಕ ಮತ್ತು ಕಲಾಸೌಂದರ್ಯ ಅಭಿವ್ಯಕ್ತಿಸುತ್ತಾ ಸಾಗಿರುವ ಶ್ರೀಲಕ್ಷ್ಮಿ ಆದ್ಯಪಾಡಿ ಅವರ ಬದುಕು ನಿತ್ಯಸುಂದರವಾಗಿರಲಿ.
ಒಳ್ಳೆಯ ಪ್ಯಾಶನ್ ಡಿಸೈನರ್ ಆಗಬೇಕು. ತಮ್ಮದೇ ಒಂದು ಫ್ಯಾಷನ್ ಔಟ್ಲೆಟ್ ಮಾಡಬೇಕು. ಚಿತ್ರ ಕಲೆಯಲ್ಲಿ ಒಳ್ಳೆಯ ಸಾಧನೆ ಮಾಡ್ಬೇಕು ಇತ್ಯಾದಿ ಹಲವು ಕನಸುಗಳು ಶ್ರೀಲಕ್ಷ್ಮಿ ಆದ್ಯಪಾಡಿ ಅವರ ಕಣ್ಣಂಚಲಿ ಮಿನುಗುತ್ತಿದೆ. ಅವರ ಆಶಯಗಳೆಲ್ಲ ಕೈಗೂಡಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
Happy birthday Shreelakshmi Adyapady
ಕಾಮೆಂಟ್ಗಳು