ಪೂರ್ಣಿಮಾ ಸುರೇಶ್
ಪೂರ್ಣಿಮಾ ಸುರೇಶ್
ಪೂರ್ಣಿಮಾ ಸುರೇಶ್ ಬಹುಮುಖಿ ಬರಹಗಾರ್ತಿ, ರಂಗ ಕಲಾವಿದೆ ಮತ್ತು ಸಾಂಸ್ಕೃತಿಕವಾಗಿ ಸಕ್ರಿಯರು.
ಜೂನ್ 11, ಪೂರ್ಣಿಮಾ ಅವರ ಜನ್ಮದಿನ. ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಇವರು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ.
ಪೂರ್ಣಿಮಾ ಸುರೇಶ್ ಅವರು ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿದ್ದಾರೆ. ಅವರು ಮಂಗಳೂರು ಆಕಾಶವಾಣಿಯಲ್ಲಿ ಗ್ರೇಡೆಡ್ ಕಲಾವಿದೆ. ಅವರೋರ್ವ ಸಂಘಟಕರು ಹಾಗೂ ನಿರೂಪಕಿ ಕೂಡ.
ಪೂರ್ಣಿಮಾ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ ಅನೇಕ ನಾಟಕಗಳ ನೂರಾರು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನದ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಅನೇಕ ಜನಪ್ರಿಯ ಪ್ರದರ್ಶನಗಳನ್ನು ಕಂಡಿದೆ.
ಪೂರ್ಣಿಮಾ ಅವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಅವರ ಬರಹಗಳು ಮಧ್ಯಮಾವತಿ, ನನ್ನೊಳಗಿನ ಭಾವ, ಶಬ್ದ ಸೀಮೆಯ ಆಚೆ, ಅಕ್ಕನಂತೊಬ್ಬಳು ಅನುರಕ್ತೆ, ರಂಗ ರಂಗೋಲಿ, ಸುಭಾಷಿತ ಮಧುಸಂಚಯ ಶಬ್ದಕೋಶ (ಕನ್ನಡ- ಕೊಂಕಣಿ), ಶಿವರಾತ್ರ್ (ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕದ ಕೊಂಕಣಿ ಅನುವಾದ) ಮುಂತಾದ ಕೃತಿಗಳಾಗಿಯೂ ಜನಪ್ರಿಯಗೊಂಡಿವೆ. ಡಾ. ಪಾರ್ವತಿ ಜಿ ಐತಾಳ್ ಅವರು ಪೂರ್ಣಿಮಾ ಅವರ 40 ವಿಶಿಷ್ಟ ಕವಿತೆಗಳನ್ನು ‘The Aquarium’ ಎಂಬ ಇಂಗ್ಲಿಷ್ ಕವನ ಸಂಕಲನವಾಗಿ ಭಾಷಾಂತರ ಮಾಡಿದ್ದಾರೆ.
ಪೂರ್ಣಿಮಾ ಸುರೇಶ್ ಅವರಿಗೆ 'ಸಂತೆಯೊಳಗಿನ ಏಕಾಂತ' ಕೃತಿಗೆ 2024ರ ಮುದ್ದಣ ಕಾವ್ಯ ಪ್ರಶಸ್ತಿ, ‘ರಂಗ ರಂಗೋಲಿ' ಅಂಕಣ ಬರಹಗಳ ಕೃತಿಗೆ 2023ರ ಶ್ರೀಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗೆಡೆ ಮಹಿಳಾ ಗ್ರಂಥ ಬಹುಮಾನ, ಕೊಂಕಣಿ ಸಿನಿಮಾ 'ಅಂತು' ದಲ್ಲಿನ ಅಭಿನಯಕ್ಕೆ ಗ್ಲೋಬಲ್ ಸಿನಿ ಅತ್ಯುತ್ತಮ ಪೋಷಕ ಕಲಾವಿದೆ ಪ್ರಶಸ್ತಿ, ಡಿ. ಎಸ್. ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ, 'ಅಕ್ಕನಂತೊಬ್ಬಳು ಅನುರಕ್ತೆ’ ಕವನ ಸಂಕಲನಕ್ಕೆ ಶಿವಮೊಗ್ಗದ ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದಿ. ಗೌರಮ್ಮ ಹಾರ್ನಹಳ್ಳಿ ಮಂಜಪ್ಪ ದತ್ತಿ ಪ್ರಶಸ್ತಿ ಮುಂತಾದ ಅನೇಕ ಕಲಾಗೌರವಗಳೂ, ಸಾಹಿತ್ಯ ಪ್ರಶಸ್ತಿಗಳೂ ಸಂದಿವೆ. ಅನೇಕ ಕವಿಗೋಷ್ಠಿ ಮತ್ತು ಸಂಕಿರಣಗಳಲ್ಲಿ ಭಾಗಿಯಾಗಿದ್ದಾರೆ. ರಂಗಶಿಬಿರಗಳಲ್ಲಿ ಮತ್ತು ಸಾಹಿತ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ನಿತ್ಯಹಸನ್ಮುಖಿ ಸದಾ ಸಕ್ರಿಯರಾಗಿರುವ ಆತ್ಮೀಯರಾದ ಪೂರ್ಣಿಮಾ ಸುರೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ🌷🙏🌷
Happy birthday Poornima Suresh 🌷🙏🌷
ಕಾಮೆಂಟ್‌ಗಳು