ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ ಉನ್ನಿಕೃಷ್ಣನ್

 


ಪಿ. ಉನ್ನಿಕೃಷ್ಣನ್

ಪರಕ್ಕಲ್ ಉನ್ನಿಕೃಷ್ಣನ್ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು  ಮತ್ತು ಚಲನಚಿತ್ರ ಹಿನ್ನೆಲೆ ಗಾಯಕರು.

ಉನ್ನಿಕೃಷ್ಣನ್ 1966ರ ಜುಲೈ 9ರಂದು ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದರು. ತಂದೆ ಕೆ. ರಾಧಾಕೃಷ್ಣನ್.  ತಾಯಿ ಡಾ. ಹರಿಣಿ. 
ಇವರ ಕುಟುಂಬದ ಮನೆಯಾದ  'ಕೇಸರಿ ಕುಟೀರಂ', ಚೆನ್ನೈ ನಗರದ ಪ್ರಸಿದ್ಧ ಹೆಗ್ಗುರುತಾಗಿತ್ತು, ಇವರ ಮುತ್ತಜ್ಜ ಡಾ. ಕೆ.ಎನ್. ಕೇಸರಿ ಆಯುರ್ವೇದ ವೈದ್ಯರಾಗಿ ಮತ್ತು ತೆಲುಗು ಮಹಿಳಾ ನಿಯತಕಾಲಿಕೆ 'ಗೃಹಲಕ್ಷ್ಮಿ'ಯ ಪ್ರಕಾಶಕರಾಗಿ ಹೆಸರಾಗಿದ್ದರು.

ಉನ್ನಿಕೃಷ್ಣನ್ ಅವರು ಚೆನ್ನೈನಲ್ಲಿ ಅಧ್ಯಯನ ಮಾಡಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದರು. ಮುಂದೆ  ಕಾನೂನು  ಸಿಬ್ಬಂದಿ ನಿರ್ವಹಣೆ ಹಾಗೂ ಕೈಗಾರಿಕಾ ಬಾಂಧವ್ಯಗಳ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಗಳಿಸಿದರು.  1987 ರಿಂದ 1994 ರವರೆಗೆ ಪ್ಯಾರಿಸ್ ಕನ್ಫೆಕ್ಷನರಿ ಲಿಮಿಟೆಡ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ ವೃತ್ತಿನಿರ್ವಹಿಸುತ್ತಿದ್ದ ಇವರು, ವೃತ್ತಿಪರ ಗಾಯಕರಾಗಲು ತಮ್ಮ ಕೆಲಸವನ್ನು ತೊರೆದರು.

ಉನ್ನಿಕೃಷ್ಣನ್ ತಮ್ಮ 12 ನೇ ವಯಸ್ಸಿನಲ್ಲಿ ವಿದ್ವಾನ್ ವಿ. ಎಲ್. ಶೇಷಾದ್ರಿಯವರಿಂದ  ಕರ್ನಾಟಕ ಸಂಗೀತದ ಕಲಿಕೆಯನ್ನು ಪ್ರಾರಂಭಿಸಿದರು. ಉನ್ನಿಕೃಷ್ಣನ್ ಅವರಿಗೆ ಸಂಗೀತ ಕಲಾನಿಧಿ ಡಾ.ಎಸ್.ರಾಮನಾಥನ್ ಅವರ ಸಂಗೀತವೆಂದರೆ ಪ್ರಾಣ.  ಎಸ್.ರಾಮನಾಥನ್ ಅವರ ನೇರ ವಿದ್ಯಾರ್ಥಿಯಾಗಿದ್ದ ವಿದುಷಿ ಸಾವಿತ್ರಿ ಸತ್ಯಮೂರ್ತಿ ಅವರ ಮಾರ್ಗದರ್ಶನದಲ್ಲಿ ಉನ್ನಿಕೃಷ್ಣನ್ ಮೇರು ಕಲಾವಿದರಾಗಿ ರೂಪುಗೊಂಡರು. ಅವರು ಸಂಗೀತ ಕಲಾನಿಧಿ ಟಿ.ಬೃಂದಾ ಉನ್ನಿಕೃಷ್ಣನ್ ಹಾಗೂ ಸಂಗೀತ ಕಲಾನಿಧಿ ಡಾ.ಟಿ.ವಿಶ್ವನಾಥನ್ ನೇತೃತ್ವದಲ್ಲಿನ "ವೀಣಾ ಧನಮ್ಮಾಳ್ ಭಾನಿ" ಕುರಿತ ಆರು ತಿಂಗಳ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಉನ್ನಿಕೃಷ್ಣನ್ ಅವರು ತಮ್ಮ ಚೊಚ್ಚಲ ಚಲನಚಿತ್ರ ಹಾಡುಗಳಾದ "ಎನ್ನವಳೇ ಅಡಿ ಎನ್ನವಳೆ" ಮತ್ತು "ಉಯಿರುಂ ನೀಯೇ" ಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದರು. ಈ ಹಾಡುಗಳನ್ನು ಸಂಯೋಜಿಸಿದ ಎ. ಆರ್. ರೆಹಮಾನ್ ಅವರೊಂದಿಗೆ ಉನ್ನಿಕೃಷ್ಣನ್ ಅನೇಕ ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಉನ್ನಿಕೃಷ್ಣನ್ ಅವರು ವಿಜಯ್ ಟಿವಿಯಲ್ಲಿನ ಏರ್‍ಟೆಲ್ ಸೂಪರ್ ಸಿಂಗರ್
‌ರಿಯಾಲಿಟಿ ಶೋನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಖಾಯಂ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಹೆಸರಾಗಿರುವ ಉನ್ನಿಕೃಷ್ಣನ್ ತಮ್ಮ ಪ್ರಯೋಗಾತ್ಮಕ ಕೆಲಸಗಳಿಗೂ ಹೆಸರಾಗಿದ್ದಾರೆ. 2008ರಲ್ಲಿ, ಅವರು ಎಲಿ ಯಾಮಿನ್ ಜಾಝ್ ಕ್ವಾರ್ಟೆಟ್ ಮತ್ತು ಪಿಯಾನೋ ವಾದಕ ಅನಿಲ್ ಶ್ರೀನಿವಾಸನ್ ಅವರೊಂದಿಗೆ ತಿರುವನಂತಪುರದಲ್ಲಿ ನಾವೆಲ್ ಜಾಝ್ ಸಂಗೀತ ಕಚೇರಿಯನ್ನು ಪ್ರಸ್ತುತಪಡಿಸಿದ್ದರು.

ಉನ್ನಿಕೃಷ್ಣನ್ ಅವರ ಪತ್ನಿ ಪ್ರಿಯಾ ಅವರು ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ನೃತ್ಯಕಲಾವಿದೆ. ಈ ದಂಪತಿಗಳ ಪುತ್ರ  ವಾಸುದೇವ್ ಕೃಷ್ಣ ಅವರು ಆಟೋಮೊಬೈಲ್ ಇಂಜಿನಿಯರ್ ಆಗಿದ್ದು ಗಾಯನದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಬಗ್ಗೆಯೂ ಒಲವು ಹೊಂದಿದ್ದು ಮದ್ರಾಸ್ ಕ್ರಿಕೆಟ್ ಕ್ಲಬ್‌ನ ಸದಸ್ಯರಾಗಿದ್ದಾರೆ ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯನ್ನಿನ  ಆಜೀವ ಸದಸ್ಯರಾಗಿದ್ದಾರೆ.  ಉನ್ನಿಕೃಷ್ಣನ್ ಅವರ ಪುತ್ರಿ ಉತ್ತರಾ ಚಿಕ್ಕಂದಿನಿಂದಲೇ ಪ್ರಖ್ಯಾತ ಗಾಯಕಿಯಾಗಿದ್ದಾರೆ.  ಉತ್ತರಾ "ಸೈವಂ" ಚಿತ್ರದಲ್ಲಿನ "ಅಳಗು" ಎಂಬ ಚೊಚ್ಚಲ ಗೀತೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಉನ್ನಿಕೃಷ್ಣನ್ ಮತ್ತು ಉತ್ತರಾ ಇಬ್ಬರೂ ತಮ್ಮ ಚೊಚ್ಚಲ ಹಾಡುಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದು ವಿಶೇಷ.  ಈ ಅಪ್ಪ-ಮಗಳ ಸುಶ್ರಾವ್ಯ ಗಾಯನವನ್ನು ನೋಡಿ ಕೇಳುವುದೇ ಸಂತೋಷ ಎನಿಸುತ್ತದೆ. 

ಉನ್ನಿಕೃಷ್ಣನ್ ಅವರಿಗೆ ತಮಿಳುನಾಡಿನ ಕಲೈಮಾಮಣಿ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

On the birthday of Great singer P. Unnikrishnan 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ