ವೀಣೆ ಸುಬ್ಬಣ್ಣ
ವೀಣೆ ಸುಬ್ಬಣ್ಣ
ವೀಣೆ ಸುಬ್ಬಣ್ಣ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಾಗಿ, ವೈಣಿಕರಾಗಿ ಮತ್ತು ಕಲಾಪೋಷಕರಾಗಿ ಹೆಸರಾಗಿದ್ದರು.
ಸುಬ್ಬಣ್ಣನವರು 1854ರಲ್ಲಿ ವೈಣಿಕರ ವಂಶದಲ್ಲಿ ಜನಿಸಿದರು. ಈ ವಂಶದ ಕುಪ್ಪಯ್ಯ ಮತ್ತು ಅಪ್ಪಯ್ಯ ಎಂಬುವರು 18ನೇ ಶತಮಾನದ ಪ್ರಾರಂಭದಲ್ಲಿ ಹೆಸರಾಂತ ಸಂಗೀತಗಾರರಾಗಿದ್ದನ್ನು ಇತಿಹಾಸ ಗುರುತಿಸಿದೆ. ಈ ಸಹೋದರರು ಅಂದಿನ ದಿನಗಳಲ್ಲಿ ತಂಜಾವೂರಿಗೆ ಹೋಗಿ ಅಪಾರ ಸಂಗೀತ ಸಾಧನೆ ಮಾಡಿ ಅನೇಕ ರಾಜವಂಶಗಳ ಮತ್ತು ಸಂಗೀತ ವಿದ್ವಾಂಸರಿಂದ ಗೌರವ ಸ್ವೀಕರಿಸಿದ್ದರಂತೆ. ಕುಪ್ಪಯ್ಯನವರ ಮೊಮ್ಮಗ ವೆಂಕಟಸುಬ್ಬಯ್ಯ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ದೊಡ್ಡ ಹೆಸರಾಗಿದ್ದರು. ವೆಂಕಟಸುಬ್ಬಯ್ಯನವರ ಮೊಮ್ಮಗ ವೀಣಾ ಭಕ್ಷಿ ಸುಬ್ಬಣ್ಣ. ವೆಂಕಟಸುಬ್ಬಯ್ಯನವರು ನಿಧನರಾದಾಗ ಅವರ ಎರಡನೇ ಪತ್ನಿ ಶೇಷಪ್ಪ ಎಂಬ ಹುಡುಗನನ್ನು ದತ್ತು ಪಡೆದರಂತೆ. ಆತನೇ ದೊಡ್ಡ ಶೇಷಣ್ಣ ಎಂದು ಪ್ರಸಿದ್ಧರಾದರು.
ಅವರೇ ವೀಣಾ ಸುಬ್ಬಣ್ಣನವರ ತಂದೆ. ವೀಣೆ ವೆಂಕಟಸುಬ್ಬಯ್ಯನವರ ಬಂಧುವಾದ ಚಿಕ್ಕರಾಮಣ್ಣ ಎಂಬುವರು ತಂಜಾವೂರಿನಿಂದ ಬಂದು ಮೈಸೂರಿನ ರಾಜಾಸ್ಥಾನದಲ್ಲಿ ಆಶ್ರಯಪಡೆದರು. ಅವರ ಸುಪುತ್ರರೇ ವೀಣೆ ಶೇಷಣ್ಣನವರು. ದೊಡ್ಡ ಶೇಷಣ್ಣನವರೇ ವೀಣೆ ಸುಬ್ಬಣ್ಣ ಮತ್ತು ವೀಣೆ ಶೇಷಣ್ಣನವರ ಸಂಗೀತ ಗುರುಗಳು.
ಸುಬ್ಬಣ್ಣನವರು ವೀಣಾ ತರಬೇತಿಯನ್ನು ತಮ್ಮ ತಂದೆಯವರಾದ ದೊಡ್ಡ ಶೇಷಣ್ಣನವರಲ್ಲಿ ಮೈಸೂರು ಸಂಸ್ಥಾನದ ಇನ್ನೊಬ್ಬ ಶ್ರೇಷ್ಟ ವೈಣಿಕರಾದ ವೀಣೆ ಶೇಷಣ್ಣನವರ ಜೊತೆಯಲ್ಲಿ ಪಡೆದರು. ಸುಬ್ಬಣ್ಣ ಮೈಸೂರಿನ ಪ್ರಸಿದ್ದ ವಾಗ್ಗೇಯಕಾರರಾದ ಸದಾಶಿವರಾಯರ ಬಳಿ ಹಾಡುಗಾರಿಕೆಯಲ್ಲಿ ಕೂಡ ಶಿಕ್ಷಣ ಪಡೆದರು. ಜೊತೆಗೆ ಸುಬ್ಬಣ್ಣನವರು ಮುಂದೆ ರಾಜರಾದ ಚಾಮರಾಜೇಂದ್ರ ಒಡೆಯರ್ ಅವರ ಸಹಪಾಠಿಯಾಗಿ ಬ್ರಿಟಿಷ್ (ರಾಯಲ್ ಸ್ಕೂಲ್) ಶೈಕ್ಷಣಿಕ ವಿದ್ಯಾಭಾಸವನ್ನೂ ಪಡೆದರು.
ವೀಣೆ ಹಾಗೂ ಹಾಡುಗಾರಿಕೆಗಳಲ್ಲಿ ನಿಷ್ಣಾತರಾದ ಸುಬ್ಬಣ್ಣನವರನ್ನು ಮೈಸೂರಿನ ಅರಸರಾದ ಚಾಮರಾಜ ಒಡೆಯರು ತಮ್ಮ ಆಸ್ಥಾನದ ವಿದ್ವಾಂಸರನ್ನಾಗಿ ನೇಮಿಸಿದರು. ಅನೇಕ ರಾಜ್ಯಗಳು ಹಾಗು ಸಂಸ್ಥಾನಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ತೋರಿ ಸುಬ್ಬಣ್ಣನವರು ವೈಣಿಕ ಕೇಸರಿ, ವೈಣಿಕ ವರಚೂಡಾಮಣಿ, ವೈಣಿಕ ಪ್ರವೀಣ ಇತ್ಯಾದಿ ಬಿರುದುಗಳನ್ನು ಪಡೆದರು. ಅನೇಕ ವಿಶಿಷ್ಟ ಸಂಗೀತಗಳ ಸಂಯೋಜನೆಗೆ ಹೆಸರಾದ ಅವರು ತಾವೇ ವಿಶಿಷ್ಟ ಕೃತಿಕಾರರೂ ಆಗಿದ್ದರು.
ಸುಬ್ಬಣ್ಣನವರು 1930ರಲ್ಲಿ ನಂಜನಗೂಡಿನಲ್ಲಿ ನಡೆದ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಗೌರವಕ್ಕೆ ಪಾತ್ರರಾದರು.
ಸುಬ್ಬಣ್ಣನವರು ಕೊಡುಗೈ ದಾನಿ ಹಾಗು ಸಂಗೀತ ಕಲಾಪೋಷಕರಾಗಿದ್ದರು. ಅವರು ತಮ್ಮ ಮನೆಯಲ್ಲಿಯೇ ಹಲವಾರು ಸಂಗೀತಗಾರರ ಕಛೇರಿಗಳನ್ನು ಏರ್ಪಡಿಸಿ, ಸಂಗೀತಗಾರರಿಗೆ ಸನ್ಮಾನಗಳನ್ನು ಕೂಡ ಮಾಡುತಿದ್ದರು. ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ ಮತ್ತು ಬಿಡಾರಂ ಕೃಷ್ಣಪ್ಪ ಈ ಮೂವರೂ ಪ್ರತಿದಿನ ಅರಮನೆಗೆ ಬಂದು ಯುವ ಸಂಗೀತಗಾರರ ಪ್ರಗತಿಯನ್ನು ಅವಲೋಕಿಸುವುದು ಪ್ರತಿದಿನದ ಅಘೋಷಿತ ಪದ್ಧತಿಯೇ ಆಗಿತ್ತು. ಸುಬ್ಬಣ್ಣನವರು ಯುವಕಲಾವಿದರನ್ನು ಬೆಳೆಸಲೋಸುಗವೇ ತಮ್ಮ ಮನೆಯಲ್ಲಿ ಅವರ ಕಛೇರಿಗಳನ್ನು ನಡೆಸಿ ಗೌರವಿಸಿ ಪ್ರೋತ್ಸಾಹಿಸುತ್ತಿದ್ದರು. ಸುಬ್ಬಣ್ಣನವರ ಶಿಷ್ಯರಲ್ಲಿ ಚಿಕ್ಕರಾಮರಾವ್, ಸ್ವರಮೂರ್ತಿ ವಿ. ಎನ್. ರಾವ್, ವಿ. ಶ್ರೀಕಾಂತ ಅಯ್ಯರ್, ಸುಬ್ಬಮ್ಮ (ಅಕ್ಕಮ್ಮಣ್ಣಿ), ಆಂಡಾಳ್ ಸಹೋದರಿಯರು ಮುಂತಾದವರು ಸೇರಿದ್ದಾರೆ. ಡಾ. ಪಿ. ಎಸ್. ಕೃಷ್ಣಮಾಚಾರ್ಯ ಎಂಬ ಮಹಾನ್ ಶಿಲ್ಪಿಗಳೂ ಇವರ ಶಿಷ್ಯವರ್ಗದಲ್ಲಿದ್ದರು.
85 ವರ್ಷಗಳ ತುಂಬು ಜೀವನ ನೆಡಸಿದ ಸುಬ್ಬಣ್ಣನವರು 1939ರ ಜುಲೈ 13ರಂದು ನಿಧನರಾದರು.
On Remembrance Day of Great Musician, Vainik and Patron Veena Subbanna 🌷🙏🌷
ಕಾಮೆಂಟ್‌ಗಳು