ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ಚಾಮುಂಡೇಶ್ವರಿ ಜಯಂತಿ


 ಶ್ರೀ ಚಾಮುಂಡೇಶ್ವರಿ ಜಯಂತಿ

Sri Chamundeshwari Paalaya maam 🌷🙏🌷

ಇಂದು  ಚಾಮುಂಡೇಶ್ವರಿ ಜಯಂತಿ ಎಂದು ಮೈಸೂರು ಪ್ರದೇಶಗಳಲ್ಲಿ ಜನ ಭಕ್ತಿ  ಸಂಭ್ರಮಗಳಿಂದ  ದೇವಿ ಚಾಮುಂಡೇಶ್ವರಿ ದೇವಿಯ ಆರಾಧನೆಯನ್ನು ನೆರವೇರಿಸುತ್ತಾರೆ.

ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಅಥವಾ ಚಾಮುಂಡಿ ದೇವತೆಯು  ರಕ್ಕಸ ಸಂಹಾರದ  ದೇವಿಯ ಭಯಾನಕ ರೂಪ.  ಏಳು ಮಾತೃಕೆಯರ ಪೈಕಿ ಓರ್ವ ಮಾತೆ. ಈ ದೇವತೆ, ಯೋಧೆ ದುರ್ಗಾದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಕೂಡ ಒಂದು ಪರಮಶಕ್ತಿ. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡ ಮತ್ತು ಮುಂಡರ ಸಂಯೋಗವಾಗಿದೆ.   ಕಾಳಿ ಮಾತೆಯ ಬಣ್ಣನೆಗೆ ಚಾಮುಂಡೇಶ್ವರಿ ದೇವಿಯ ಸ್ವರೂಪವು ಸಮೀಪದ್ದಾಗಿದೆ.  ಪಾರ್ವತಿ, ಚಂಡಿ, ದುರ್ಗಾ ಮಾತೆಗೂ ಈ ದೇವತೆಯನ್ನು ಅನ್ವರ್ಥವೆಂಬಂತೆ ಭಕ್ತಾದಿಗಳು ಸ್ಮರಿಸುವುದುಂಟು.

ಹಲವು ಶತಮಾನಗಳಿಂದ ಮೈಸೂರನ್ನು ಆಳಿದ ರಾಜಮನೆತನಗಳ ಅಧಿದೇವತೆ ಎಂದು ಚಾಮುಂಡೇಶ್ವರಿ ದೇವತೆಯ  ಪ್ರಖ್ಯಾತಿ ಇದೆ.  ಮೈಸೂರು ಎಂಬ ಹೆಸರೇ ಚಾಮುಂಡೇಶ್ವರಿ ದೇವಿಯ ಪ್ರಖ್ಯಾತಿಯೊಂದಿಗೆ ಹೊಂದಿಕೊಂಡಿದೆ.  ಪುರಾಣಗಳ ಕಾಲದ ಮಾಹಿಷ್ಮಾವತಿ ಎಂಬ ನಗರವೇ ಮೈಸೂರು ಎಂಬ ನಂಬಿಕೆಯೂ ಹಲವು ವಿದ್ವಾಂಸರಲ್ಲಿದೆ.  ಚಾಮುಂಡೇಶ್ವರಿ ದೇವಿಯು ಮಹಿಷಾಸುರ ಮರ್ಧಿನಿ ಎನಿಸಿರುವ  ಹಿನ್ನೆಲೆಯಲ್ಲಿ ಮೈಸೂರು ಎಂಬುದು ಆ ಚಿಂತನೆಗೆ ಮತ್ತಷ್ಟು ಹತ್ತಿರವಾದ ಸಂಬಂಧವಿರುವಂತಹ ಕಥಾನಕಕ್ಕೆ ಬೆಸೆದುಕೊಂಡಿದೆ .  ಈ ಪ್ರಕಾರದ ನಂಬಿಕೆಯುಳ್ಳ ಜನರಲ್ಲಿ ಮೈಸೂರು ಎಂಬುದು ಮಹಿಷಾಸುರನ ಪಟ್ಟಣವಾದ ಮಹಿಷೂರು ಎಂಬುದರ ಅಪಭ್ರಂಶವಾಗಿ ಮೈತಾಳಿರುವಂತದ್ದು. ಈ ರಕ್ಕಸ ಮಹಿಷನನ್ನು ದೇವತೆಗಳ ಪ್ರಾರ್ಥನೆಯ ಮೇರೆಗೆ ಸಂಹರಿಸಿದ ಮಾತೆ ಪಾರ್ವತಿ ದೇವಿಯು ಮಹಿಷಮರ್ಧಿನಿ ಚಾಮುಂಡೇಶ್ವರಿ ಎನಿಸಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಂಗೊಳಿಸಿದ್ದಾಳೆ.   

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟವೇ ಚಾಮುಂಡಿ ಬೆಟ್ಟ. ಇದು ಸಮುದ್ರಮಟ್ಟದಿಂದ 1063 ಮೀ. ಎತ್ತರದಲ್ಲಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹು ದೂರದವರೆಗೂ ಗೋಚರಿಸುವುದಲ್ಲದೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿ ಕಾಣಿಸುತ್ತದೆ. ಮೈಸೂರಿಗೆ ಬರುವ ಪ್ರವಾಸಿಗಳ ಆಕರ್ಷಣೆಗಳಲ್ಲಿ ಇದೂ ಒಂದು ಮುಖ್ಯವಾದದ್ದು. ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಡಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ 1028ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.  ಸ್ವರ್ಣ ವರ್ಣದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ವಿಗ್ರಹ ಶೋಭಾಯಮಾನವಾದ ದೈವೀಕಳೆಯನ್ನು ಪ್ರತಿಬಿಂಬಿಸುವಂತಿದ್ದು, ದೇಶವಿದೇಶಗಳೆಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸುತ್ತಿದೆ.  

ಹದಿನೇಳನೆಯ ಶತಮಾನದಲ್ಲಿ ವಿಜಯನಗರದ ಅರಸರು ಇಲ್ಲಿನ ದೇಗುಲಕ್ಕೆ ಈಗಿರುವ ಸುಂದರವಾದ ಗೋಪುರವನ್ನು ನಿರ್ಮಿಸಿದರಂತೆ.  ಕ್ರಿಸ್ತ ಶಕ 1659ರಲ್ಲಿ ‘ಸಾವಿರ ಮೆಟ್ಟಲುಗಳು’ ಎಂದು ಪ್ರಖ್ಯಾತವಾಗಿರುವ ಒಂದು ಸಾವಿರಕ್ಕೂ ಸ್ವಲ್ಪ ಹೆಚ್ಚಿರುವ  ಮೆಟ್ಟಲುಗಳನ್ನು 3000ದ ಅಡಿಯವರೆಗಿನ ಈ ಬೆಟ್ಟಕ್ಕೆ ನಿರ್ಮಿಸಲಾಯಿತು.  ಎಂಟುನೂರನೆಯ ಮೆಟ್ಟಿಲಿನ ಬಳಿ ಇರುವ ಬಸವ ವಿಗ್ರಹವಂತೂ ಅತ್ಯಂತ ಮೋಹಕವಾದದ್ದಾಗಿದ್ದು 15 ಅಡಿ ಎತ್ತರ ಮತ್ತು 24 ಅಡಿ ಅಗಲದ ಬೃಹದಾಕಾರದಿಂದ  ನಿತ್ಯ ಶೋಭಿಸುತ್ತಿದೆ.  ಈ ಬಸವಣ್ಣನ ವಿಗ್ರಹದ ಕಂಠದಲ್ಲಿರುವ ಗಂಟೆಗಳ ಕೆತ್ತನೆಯಂತೂ  ಈ ವಿಗ್ರಹದ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿವೆ.  

ಚಾಮುಂಡೇಶ್ವರಿ ದೇವಿಯನ್ನು ಅನಾದಿಕಾಲದಿಂದ ಋಷಿ ಮುನಿಗಳು ಮಂತ್ರಗಳಿಂದ, ಸುಂದರವಾದ ಗೀತೆಗಳಿಂದ ಸ್ತುತಿಸಿ ಹಾಡಿದ್ದಾರೆ.  ಮೈಸೂರು ವಾಸುದೇವಾಚಾರ್ಯರ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃತಿಯಂತೂ ಅತ್ಯಂತ ಜನಪ್ರಿಯವೆನಿಸಿದೆ.  ಈ ಗೀತೆಯ ಸ್ಮರಣೆ ಇಂತಿದೆ:  

ಶ್ರೀಚಾಮುಂಡೇಶ್ವರಿ ಪಾಲಯ ಮಾಂ 
ಕೃಪಾಕರಿ ಶಂಕರಿ
ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ 
ಮಹಿಷಾಸುರ ಮರ್ದಿನಿ.

ವಾಚಾಮಗೋಚರ-ಮಹಿಮವಿರಾಜಿತೇ 
ವರಗುಣಭರಿತೇ 
ವಾಕ್ಪತಿಮುಖಸುರವಂದಿತೇ 
ವಾಸುದೇವ–ಸಹಜಾತೇ.

ರಾಕಾ-ನಿಶಾಕರ-ಸನ್ನಿಭವದನೇ
ರಾಜೀವಲೋಚನೇ. ರಮಣೀಯ-
ಕುಂದರದನೇ. ರಕ್ಷಿತಭುವನೇ 
ಮಣಿರಸನೇ.

ಮೂಕವಾಕ್ಪ್ರದಾನವಿಖ್ಯಾತೇ 
ಮುನಿಜನನುತ-ಸುಪ್ರೀತೇ.
ಶ್ರೀಕರ-ತಾರಕ-ಮಂತ್ರಪೋಷಿತ-ಚಿತ್ತೇ 
ಸದಾ ನಮಸ್ತೇ.

ತಾಯಿ ಚಾಮುಂಡೇಶ್ವರಿ, ಈ ಪ್ರಪಂಚದಲ್ಲಿರುವ ಎಲ್ಲ ದುಷ್ಟಶಕ್ತಿಗಳನ್ನು ಸಂಹರಿಸಿ ಶ್ರೇಷ್ಠತೆ ಇಲ್ಲಿ ನಿತ್ಯ ನೆಲೆಸುವಂತೆ ಮಾಡು ಎಂಬುದು ನಿನ್ನ ಮಕ್ಕಳಾದ ನಮ್ಮ ಪ್ರಾರ್ಥನೆ.

ಚಿತ್ರ: 27.07.2024 ಶ್ರೀಚಾಮುಂಡೇಶ್ವರಿ ಜಯಂತಿಯ ಪ್ರಯುಕ್ತ ಅಲಂಕಾರ
ಚಿತ್ರಕೃಪೆ: Nagamani As

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ