ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾತಾ ಅಮೃತಮಯಿ


 ಮಾತಾ ಅಮೃತಮಯಿ ನಮನ

ಪೂಜ್ಯ ಮಾತಾ ಅಮೃತಮಯಿಯವರ ಭೌತಿಕ ನಿರ್ಗಮನಕ್ಕೆ ಭಕ್ತಿ, ಪ್ರೀತಿ ಹಾಗೂ ಗೌರವಪೂರ್ವಕ ಅಕ್ಷರನಮನ
ಲೇಖಕಿ: ರಶ್ಮಿ ಗೋಖಲೆ

ಸಂನ್ಯಾಸ ಧರ್ಮದ  ಪರಂಪರೆಯ ಕರ್ಮಠ ನಿಯಮ ಪಾಲನೆಯ ಜೊತೆಗೆ ಸಮಾಜಕ್ಕೆ ತಾಯಿಯಾಗಿ, ಅಕ್ಕನಾಗಿ.. ಗುರುವಾಗಿ.. ದಾರಿದೀಪವಾಗಿದ್ದಂತಹ ಚೇತನ ನಮ್ಮ ಮಾತಾಜಿಯವರು. 

ಕೇವಲ ಒಂದು ವರ್ಷ ಎಂಟು ತಿಂಗಳ ಹಿಂದೆ ಪ್ರಕಟವಾದ ನನ್ನ ಗುರುಗಳು ಮಾತಾಜಿಯವರು. ಇಷ್ಟು ಸ್ವಲ್ಪ ಸಮಯದ ಒಡನಾಟದಲ್ಲಿ ಅವರು ಮೊಗೆ ಮೊಗೆದು ಕೊಟ್ಟ ಪ್ರೀತಿ ನನ್ನ ಜೀವನದುದ್ದಕ್ಕೂ ಸವಿಯಬಹುದಾದಂತಹ ಬುತ್ತಿ. 

ಮಾತಾಜಿಯವರು ಮೂಲತಃ ಬೆಂಗಳೂರಿನ ತ್ಯಾಗರಾಜನಗರದವರು. ಸಹಜಾನಂದ ಧ್ಯಾನ ಗಂಗಾ ಆಶ್ರಮ ಅಂತ ಕನಕಪುರದ ಬಳಿಯ ದೊಡ್ಡಮುದುವಾಡಿಯಲ್ಲಿದೆ. ಅಲ್ಲಿರ್ತಿದ್ರು. ಹನ್ನೆರಡು ವರ್ಷಗಳ ಕಾಲ ಹಿಮಾಲಯಕ್ಕೆ ಹೋಗಿ ಬಂದಿದ್ದರು. ಬಹಳ ಒಳ್ಳೆಯ ಸಂಗೀತಗಾರ್ತಿಯಾಗಿದ್ದರು.

ನೂರಾರು ಸಾವಿರಾರು ಸಂಖ್ಯೆಯ ಭಕ್ತರ ನಡುವೆ ಎಲ್ಲರಿಗೂ ಸಮಾನವಾದ ಪ್ರೀತಿ ಆದರಗಳನ್ನು ತೋರಿದ ಮಾತೆ. ನನ್ನನ್ನು ಮಗಳಂತೆ ಕಾಣುತ್ತಿದ್ದ ಅವರ ಹೃದಯ ವೈಶಾಲ್ಯತೆಯ ಮುಂದೆ ನನ್ನ ಬರಹ ಸಪ್ಪೆ. 

ಹಿಮಾಲಯದಷ್ಟೇ ಅಗಾಧವಾದ ಅವರ ಜ್ಞಾನದ ವಿಸ್ತಾರ ಹಾಗೂ ಕಠಿಣ ಅನುಷ್ಠಾನಗಳನ್ನು ಅಷ್ಟೇ ಸಲೀಸಾಗಿ ಮಾಡುತ್ತಿದ್ದ ಪರಿ ಬೆರಗು ಹುಟ್ಟಿಸುವಂತಹದು. ಅವರ ಆಯೋಜನೆಯ ಕಾರ್ಯಕ್ರಮಗಳು ಕೂಡಾ ಅಷ್ಟೇ ಅಚ್ಚುಕಟ್ಟು. ನೈರ್ಮಲ್ಯಕ್ಕೆ ಪ್ರಧಾನತೆ. ಮಾತಾಜಿಯವರ ಬಗ್ಗೆ ಬರೆಯುತ್ತಾ ಹೋದರೆ ಬಹಳಷ್ಟು ವಿಚಾರಗಳು ನಾ ಮುಂದು ತಾ ಮುಂದು ಎಂದು ಬಂದು ಬಿಡುತ್ತವೆ. 

ಮಾತಾಜಿಯವರ ಮಾತೆಂದರೆ ಅದು ಅಧ್ಯಾತ್ಮ, ಪ್ರಚಲಿತ ವಿದ್ಯಮಾನ, ಕಲೆ, ಸಾಹಿತ್ಯ, ಸಂಗೀತ ಜೊತೆಗೆ ಒಂದಷ್ಟು ವಿನೋದದ ಹೂರಣ. ಹಾಗಾಗಿ ಯುವಪೀಳಿಗೆ ಕೂಡ ಇವರೆಡೆಗೆ ಆಕರ್ಷಿತರಾಗುತ್ತಿದ್ದರು. ಕಳೆದ ಐದಾರು ತಿಂಗಳ ಅವಧಿಯನ್ನು ಕಾಯಿಲೆಯಲ್ಲೇ ಕಳೆಯಬೇಕಾದ ದುಸ್ಥಿತಿ ಮಾತಾಜಿಯವರಿಗೆ ಬಂದಿದ್ದು ಬಹಳ ಬೇಸರದ ಸಂಗತಿ. ಭಕ್ತರಿಗೆಲ್ಲ ಮಾತಾಜಿಯವರು ಎಂದಿಗೂ ನೋಡುತ್ತಿರಬೇಕೆಂಬ ಆಸೆ ಇದ್ದಾಗ್ಯೂ ಅವರು ಅನುಭವಿಸುತ್ತಿದ್ದ ನೋವುಗಳನ್ನು ಬಲ್ಲವರಿಗೆ ಮಾತಾಜಿಯವರನ್ನು ಈ ನೋವಿನಿಂದ ಮುಕ್ತರಾಗಿಸು ಎಂದು ಬೇಡಿಕೊಂಡವರೇ ಹೆಚ್ಚು. 
ಅವರನ್ನು ನೋಡಲು ಹೋದಾಗೆಲ್ಲ ನನಗೋಸ್ಕರ ವಿಷ್ಣು ಸಹಸ್ರನಾಮ ಹೇಳು,‌ಲಲಿತಾ ಸಹಸ್ರನಾಮ ಹೇಳು,ಬೇಗ ದೇವರು ನನ್ನನ್ನು ಕರೆಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡು ಅನ್ನುತ್ತಿದ್ದರು. ಇಂತಹ ಮಾತನ್ನು ಕೇಳಿದಾಗ ನನಗಾಗುತ್ತಿದ್ದ ಸಂಕಟವನ್ನು ನಾನಿಲ್ಲಿ ಬಿಡಿಸಿ ಹೇಳಲಾರೆ. 

ಸೆಪ್ಟೆಂಬರ್ 3, ೨೦೨೪ ರಂದು ಮಾತಾಜಿಯವರು ಬೌತಿಕ‌ಶರೀರವನ್ನು ಬಿಟ್ಟು ಹೊರಟೇ ಬಿಟ್ಟರು. ಶ್ರಾವಣ ಅಮಾವಾಸ್ಯಾ ಉಪರಿ ಭಾದ್ರಪದ ಶುದ್ಧ ಪಾಡ್ಯದಂದು. ಪ್ರಾಣತ್ಯಾಗ ಮಾಡಿದ ಆಸ್ಪತ್ರೆಯ ಆವರಣದಲ್ಲಿ ಭಕ್ತರ ಗುಂಪು ಅಂತಿಮ ದರ್ಶನಕ್ಕೆ  ಹರಿದು ಬರುತ್ತಿದ್ದರೂ ಒಂದು ತರಹದ ನೀರವ ಮೌನ ಆವರಿಸಿತ್ತು. ಆಸ್ಪತ್ರೆಯ ಸಿಬ್ಬಂದಿಯಿಂದ ಮೊದಲುಗೊಂಡು ಎಲ್ಲರ ಮನಸ್ಸಲ್ಲೂ ದುಃಖ ಮಡುಗಟ್ಟಿದ್ದರೂ ಸಾಧ್ವಿ ಯ ಸಾವಿಗೆ ಯಾರೂ ಗೋಳಾಡುವಂತಿಲ್ಲ ಎಂಬ ನಿಯಮವನ್ನು ಎಲ್ಲರೂ ಪಾಲಿಸಿದ್ದರು. ಮುಂದಿನ ವಿಧಿವಿಧಾನಗಳಿಗೆ ಅವರನ್ನು ರವಾನಿಸಲು ಆಂಬುಲೆನ್ಸ್ ಆಸ್ಪತ್ರೆಯ ಆವರಣಕ್ಕೆ ಬರುತ್ತಿದ್ದಂತೆ ಹಾಗೂ ಮಾತಾಜಿಯವರ ಕಳೇಬರವನ್ನು ಆಂಬುಲೆನ್ಸ್ ಗೆ ವರ್ಗಾಯಿಸಿ ಹೊರಡುವ ವೇಳೆಗೆ ವರುಣ ದೇವ ಸುರಿಸಿದ ವೃಷ್ಟಿ ಸಮಾಧಾನದ ಭಾವವನ್ನು ತರಿಸಿತ್ತು.‌ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ ಆ ಹೊತ್ತಿಗೆ ಸರಿಯಾಗಿ ಸುರಿದ ಮಳೆ ಆ ದಿವ್ಯಾತ್ಮಕ್ಕೆ ಶಾಂತಿಯನ್ನು ಕೋರುವ ದ್ಯೋತಕವೆಂದೇ ತಿಳಿದುಕೊಂಡೆವು.

ಸಹಜಾನಂದ ಧ್ಯಾನ ಗಂಗಾ ಆಶ್ರಮದಲ್ಲಿ ಪುರೋಹಿತರ ಸಮಕ್ಷಮದಲ್ಲಿ ರಾಮಕೃಷ್ಣ ಆಶ್ರಮದ ವಿವಿಧ ಶಾಖೆಗಳಿಂದ ಆಗಮಿಸಿದ ಮಾತಾಜಿಯವರ ಭಜನೆ ಹಾಗೂ ಶಾಂತಿಮಂತ್ರಗಳಿಂದ ವಾಸುದೇವ ರಾವ್ ಅವರ ಕರ್ತೃತ್ವದಲ್ಲಿ ವೇದಮಂತ್ರಗಳೊಂದಿಗೆ ಶಿವಸಾಯುಜ್ಯವನ್ನು ಪಡೆದಂತಹ ಮಾತಾಜಿಯವರ ಭೌತಿಕ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಶರಣರನ್ನು ಮರಣದಲ್ಲಿ ಕಾಣು ಎನ್ನುವ ಮಾತಿನಂತೆ ಮಾತಾಜಿಯವರನ್ನು ರಕ್ತ ಮಾಂಸಗಳಿಂದ ತುಂಬಿಕೊಂಡು ಭಾವಜೀವಿಯಾಗಿದ್ದಾಗಲೂ, ಮರಣದಲ್ಲೂ ಕಂಡಂತಹ ಪುಣ್ಯ ನನ್ನದು  ದಿವ್ಯಚಕ್ಷುವಿದ್ದರೆ ಮುಂದೆಯೂ ಕಾಣುವೆ ಎಂಬ ಅಚಲ ವಿಶ್ವಾಸ ನನಗಿದೆ. 

ದಹನದ ನಂತರ ಪುರೋಹಿತರ ಆಣತಿಯಂತೆ ಅಂತ್ಯಕ್ರಿಯೆಯಲ್ಲಿ‌ ಪಾಲ್ಗೊಂಡ ಎಲ್ಲ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅವರು ಸೂಚಿಸಿದಂತೆ ಮಾತಾಜಿಯವರಂತಹ ಸನ್ಯಾಸಿನಿ ಅಥವಾ ಸಾಧ್ವಿಯರ ದಹನದ ನಂತರ ಅಶೌಚವಿರುವುದಿಲ್ಲ. ಸ್ನಾನಾದಿಗಳ ಅವಶ್ಯಕತೆಯಿರುವುದಿಲ್ಲ ಅದೊಂದು ಶುಭ ಕಾರ್ಯದ ರೀತಿಯ ಸಂಸ್ಕಾರ ಆಗಿರುವುದರಿಂದ ಬಂದವರೆಲ್ಲರೂ ಪ್ರಸಾದದ ರೂಪದಲ್ಲಿ ಅಲ್ಲಿ ಒದಗಿಸಿದಂತಹ ಊಟವನ್ನೋ, ತಿಂಡಿಯನ್ನೋ ಸ್ವೀಕರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು. 

ಪ್ರಸಾದವನ್ನು ಸ್ವೀಕರಿಸುವಾಗ ಮಾತಾಜಿ ಮೇಲಿನಿಂದ ನೋಡಿ ಎಲ್ಲರೂ ಸಾವಕಾಶವಾಗಿ ತಗೊಳ್ಳಿ ಅನ್ನುವ ಅವರ ಎಂದಿನ ಉಪಚಾರದ ಮಾತು ನೆನಪಾಗುತ್ತಿತ್ತು. ಇನ್ನು ಮುಂದೆಂದಾರು ಆಶ್ರಮಕ್ಕೆ ಹೋಗುವ  ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಾತಾಜಿಯವರ ಮಾತು , ಪದೇ ಪದೇ ಕರೆದು ಏನಾದರು ಸೂಚನೆಗಳನ್ನು ಕೊಡುತ್ತಿದ್ದುದು, ಕಾಣದಾಗುವವರೆಗೆ ನಿಂತು  ಬೀಳ್ಕೊಡುತ್ತಿದ್ದ  ದೃಶ್ಯ ಎಂದಿಗೂ ಮರೆಯಲಾಗದ ಮರೆಯಬಾರದ ಮಧುರನೆನಪುಗಳು. ಫೋನ್ ಮಾಡಿದಾಗ ಅರ್ಧ ಘಂಟೆಗೆ ಕಡಿಮೆಯಿಲ್ಲದ ಮಾತುಕತೆ, ಕಳೆದ ಮಾರ್ಚ್ ತಿಂಗಳಲ್ಲಿ ತಿರುವಣ್ಣಾಮಲೈ ಪ್ರವಾಸ ಮಾಡೋಣವೆಂದಿದ್ದರು, ಆಶ್ರಮದಲ್ಲಿ ಒಂದೆರಡು ದಿನ ನನ್ನನ್ನು ಉಳಿಸಿಕೊಂಡು ಬಹಳಷ್ಟು ಹೇಳುವುದಿತ್ತು ಅವರಿಗೆ. ಇಂತಹ ಕೆಲವು ಕರ್ತವ್ಯಲೋಪಗಳು ನನ್ನಿಂದಾಗಿವೆ. ಕ್ಷಮಿಸಿಬಿಡಿ ಮಾತಾಜಿ😭

ನನ್ನನ್ನು ಬಹಳ ಸಲ ಅವರ ಮಗಳಂತೆ ಅಂತ ಹೇಳಿದ್ದರು, ನನಗೂ ಅಷ್ಟೇ ಪ್ರೀತಿ , ಅಕ್ಕರೆ ಸಲಿಗೆ ಅವರ ಮೇಲೆ. ಹಾಗಾಗಿ ಈ ಅಕ್ಷರನಮನವನ್ನು ಧಾರಾಕಾರವಾಗಿ ಕಣ್ಣೀರು ಸುರಿಸುತ್ತಲೇ ಅವರ ಪಾದಪದ್ಮಗಳಿಗೆ ಸಲ್ಲಿಸುತ್ತೇನೆ. 🙏
ರಶ್ಮಿ ಗೋಖಲೆ

ಚಿತ್ರ: ಮಾತಾಜಿ ಅವರೊಂದಿಗೆ ಲೇಖಕಿ ರಶ್ಮಿ ಗೋಖಲೆ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ