ಸುಮಾ ಸುಧಾಕಿರಣ್
ಸುಮಾ ಸುಧಾಕಿರಣ್
ಸುಮಾ ಸುಧಾಕಿರಣ್ ಅವರು ಪ್ರಕೃತಿಪ್ರೀತಿ ತುಂಬಿಕೊಂಡ ಅನುಪಮ ವೈಜ್ಞಾನಿಕ ಬರಹಗಾರ್ತಿ.
ಸೆಪ್ಟೆಂಬರ್ 8, ಸುಮಾ ಅವರ ಜನ್ಮದಿನ. ಇವರು ಮೂಲತಃ ಸಾಗರ ತಾಲ್ಲೂಕಿನ ಕಾನುಗೋಡು ಎಂಬ ಹಳ್ಳಿಯವರು. ಪ್ರಸ್ತುತ ಇವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಸಾಹಿತ್ಯ, ಸಂಸ್ಕೃತಿ ಮತ್ತು ಪರಿಸರ ಸುಮಾ ಅವರ ಪ್ರೀತಿಯ ವಿಷಯಗಳು. ಅವರ ಭೂರಮೆ ಬ್ಲಾಗ್, ಪರಿಸರದ ಕುರಿತಾದ ಕಾಳಜಿಯುಳ್ಳ ವೈಜ್ಞಾನಿಕ ವೈವಿಧ್ಯಗಳಿಗೆ ಹೆಸರಾದದ್ದು. ಸುಮಾ ಅವರ ಪತಿ ಸುಧಾ ಕಿರಣ್ ಕವಿ. 'ನಾಗಂದಿಗೆ' ಎಂಬುದು ಸುಧಾಕಿರಣ್ ಅವರ ಕವನಗಳ ಬಿಂದಿಗೆ. ಹೀಗೆ ಇವರದು ಸಾಹಿತ್ಯಪ್ರೇಮ ದಾಂಪತ್ಯ.
ಸುಮಾ ಅವರ 'ಭೂರಮೆ' ಬ್ಲಾಗಿನ ಈ ಪೀಠಿಕೆಯೂ ಗಮನಾರ್ಹ. "ಈ ವಿಶಾಲ ಜಗತ್ತಿನಲ್ಲಿ ಈಗ ನಮಗೆ ತಿಳಿದಿರುವಂತೆ ಜೀವಿಗಳು ವಾಸಿಸಬಲ್ಲ ಅನುಕೂಲವಿರುವುದು ನಮ್ಮ ಭೂಮಿಯಲ್ಲಿ ಮಾತ್ರ. ಸೂರ್ಯನಿಂದ ತುಂಬ ದೂರವು ಅಲ್ಲದ, ತೀರ ಹತ್ತಿರವು ಅಲ್ಲದೆ ಕಕ್ಷೆಯಲ್ಲಿ ಇರುವ ಭೂಮಿ ಅನೇಕ ಲಕ್ಷ ಜೀವಗಳ ತವರು. ಇಲ್ಲಿಯ ಸಕಲ ಚರಾಚರ ಜೀವಿಗಳು ನೆಮ್ಮದಿಯಿಂದ ಬಾಳಲು ಬೇಕಾದ ಎಲ್ಲ ಅನುಕೂಲತೆಗಳು ಈ ಭೂಮಿಯಲ್ಲಿದೆ. ಆದುದರಿಂದಲೆ ಈ ಭೂಮಿಗಿಂತ ಮಿಗಿಲಾದ ಸ್ವರ್ಗವಿಲ್ಲವೆಂದು ಹೇಳುತ್ತಾರಲ್ಲವೆ.(ಆದರೆ ಅತೀ ಬುದ್ಧಿವಂತ!! ಪ್ರಾಣಿಯೆಂದು ನಂಬಿರುವ ಮಾನವ ಉಳಿದ ಜೀವಿಗಳಿಗೆ ಭೂಮಿಯನ್ನು ನರಕಸದೃಶವಾಗಿಸಿದ್ದಾನೆಂಬುದು ಬೇರೆ ವಿಚಾರ.)"
“ಮಲೆನಾಡಿನ ಮಳೆಗಾಲದ ಅತಿಥಿಗಳು” ಸುಮಾ ಸುಧಾಕಿರಣ್ ಅವರ ಪ್ರಕಟಿತ ಪುಸ್ತಕ. ಕಥೆ, ಪ್ರವಾಸ ಲೇಖನಗಳು ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಅಂಕಣ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸುಂದರ ಕನ್ನಡದಲ್ಲಿ ಆಪ್ತವಾಗಿ ಪ್ರಕೃತಿಯ ಪ್ರೀತಿಯನ್ನು ಪಸರಿಸುವ ಸುಮಾ ಸುಧಾಕಿರಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Suma Sudhakiran 🌷🌷🌷
ಕಾಮೆಂಟ್‌ಗಳು